ಮಕ್ಕಳು ನೋಡಬಾರದ ಚಾನಲ್ !

ಮಕ್ಕಳು ನೋಡಬಾರದ ಚಾನಲ್ !

ಬರಹ

ಒಂಬತ್ತು ಘಂಟೆಗೆ ಮಲಗಿಕೊಂಡೆ. ಚೆನ್ನಾಗಿ ನಿದ್ದೆ ಬಂದಿತ್ತು. ಏನು ಮಾಡಲಿ, ಟಾಯ್ಲೆಟ್ಟಿಗೆ ಅರ್ಜಂಟ್ ಆಗಿ ಎಚ್ಚರಿಕೆ ಆಯ್ತು. ನನಗೆ ಹೆದರಿಕೆ ಆಗದಿರಲಿ ಅಂತ ಅಮ್ಮ ಹಾಕಿದ್ದ ಸಣ್ಣ ದೀಪ ಉರಿಯುತ್ತಿತ್ತು. ಆದರೂ ಒಬ್ಬನಿಗೇ ಹೋಗಲು ಭಯ. ಮೆಲ್ಲಗೆ ಎದ್ದು ಬಂದು ’ಅಮ್ಮಾ’ ಎಂದು ಕೂಗುತ್ತ ಮಹಡಿ ಮೆಟ್ಟಿಲು ಇಳಿದೆ.

ಅಪ್ಪ ಸೋಫಾದ ಮೇಲೆ ಕುಳಿತು Tom and Jerry ನೋಡುತ್ತಿದ್ದರು. ಅಮ್ಮ ’ಏನಾಯ್ತು’ ಎಂದು ಧಾವಿಸಿ ಬರುತ್ತ ಕೇಳಿದರು. ’ಟಾಯ್ಲೆಟ್’ಗೆ ಹೋಗಬೇಕು’ ಎಂದೆ. ’ನಡಿ’ ಎಂದು ಕರೆದುಕೊಂಡು ಮೆಟ್ಟಿಲನ್ನು ಹತ್ತುವಾಗಲೇ ಟೀವಿ ಇಂದ ಬರುತ್ತಿದ್ದ ಕಾರ್ಟೂನ್ ಚಾನೆಲ್’ನ ದನಿಯೇ ಬದಲಾಗಿತ್ತು. ಮನಸ್ಸಿನಲ್ಲೇ ನಕ್ಕೆ.

ಎಲ್ಲ ಆದ ಮೇಲೆ ನನ್ನನ್ನು ಮಲಗಿಸಿ ಅಮ್ಮ ಮತ್ತೆ ಕೆಳಗೆ ಹೋದರು. ಕಣ್ಣು ಮುಚ್ಚಿದ್ದರೂ ಸ್ವಲ್ಪ ಹೊತ್ತು ನಿದ್ದೆ ಬರಲಿಲ್ಲ. ನನಗೆ ಚೆನ್ನಾಗಿ ಗೊತ್ತು. ನಾನು ಎದ್ದು ಕೆಳಗೆ ಹೋಗುವ ಮೊದಲು ಅಪ್ಪ-ಅಮ್ಮ ಕಾರ್ಟೂನ್ ಚಾನಲ್ ನೋಡುತ್ತಿರಲಿಲ್ಲ. ಅವರು ನೋಡುತ್ತಿದ್ದ ಚಾನಲ್ ಬೇರೇನೋ. ನನಗೇನೂ ಗೊತ್ತಾಗೋಲ್ಲಾ ಅಂತ ಅಂದುಕೊಂಡಿದ್ದಾರೆ. ಅಲ್ರೀ, ನಾನೂ ದೊಡ್ಡವನಾಗಿದ್ದೀನಿ ಗೊತ್ತಾ. ಲಾಸ್ಟ್ ವೀಕ್ ನಂದು ಹುಟ್ಟುಹಬ್ಬದ ಪಾರ್ಟಿ ಇತ್ತು. ನನಗೆ ಈಗ ನಾಲ್ಕು ವರ್ಷ ಗೊತ್ತಾ !!!

ನಾವು ಚಿಕ್ಕ ಮಕ್ಕಳು, ನಮಗೆ ಏನೂ ಅರ್ಥ ಆಗಲ್ಲ ಅಂತ ದೊಡ್ಡವರು ತಪ್ಪು ತಿಳಿದುಕೊಂಡಿದ್ದಾರೆ. ನಾವೂ ಕಿಲಾಡಿಗಳು. ನಮಗೇನೂ ಗೊತ್ತಾಗೋಲ್ಲ ಅನ್ನೋ ತರಹ ನಾಟಕ ಆಡ್ತೀವಿ. ನಾವೇನಾದ್ರೂ ತಪ್ಪು ಮಾಡಿದ್ರೆ ಮೊದಲು ನಾವೇ ಅತ್ತು ಬಿಡ್ತೀವಿ ಗೊತ್ತಾ. ಆಗ ದೊಡ್ಡವರು ಬಯ್ಯೋದಿಲ್ಲ. ಅವತ್ತು ಯಾರದೋ ಮನೆಗೆ ಹೋಗಿದ್ವಿ. ಅವರ ಮನೆಯ ದೊಡ್ಡ ಆಂಟಿ ’ಐಸ್ ಕ್ರೀಮ್ ತಿಂತೀಯೇನೋ ಮರೀ’ ಅಂದರು. ಅದಕ್ಕೆ ಅಮ್ಮ ಹೇಳಿದ್ರು ’ಅವನು ಐಸ್ ಕ್ರೀಮ್ ತಿನ್ನೋಲ್ಲ’ ಅಂತ. ನಾನು ಸ್ವಲ್ಪ ಮಜಾ ತೊಗೊಳ್ಳೋಣಾ ಅಂತ ಬೇಕು ಅಂತ ಹೇಳಿ ಮೂರು ಸ್ಕೂಪ್ ಐಸ್ ಕ್ರೀಮ್ ತಿಂದೆ ! ಬೆಳ್ಳಗೆ ಇರೋ ಅಮ್ಮ ಇಂತಹ ಟೈಮಿನಲ್ಲಿ ಕೆಂಪಾದಾಗ ನೋಡೋಕೆ ಒಳ್ಳೇ ಮಜಾ ಗೊತ್ತಾ ! ಕೊನೇ ಸ್ಪೂನ್ ಬಾಯಿಗಿಟ್ಟುಕೊಳ್ಳುವ ಮೊದಲು ’ಅಮ್ಮ, ನಿನಗೆ ಬೇಕಾ’ ಅಂತ ಕೇಳಿದೆ. ಅದಕ್ಕೇ ಇರಬೇಕು ಅಮ್ಮ ನನ್ನನ್ನು ’ಕಳ್ಳ ಕೃಷ್ಣ’ ಅಂತ ಕರೆಯೋದು.

ಹೋಗ್ಲಿ ಬಿಡಿ.. ನಾನು ಏನು ಹೇಳ್ತಿದ್ದೆ ? ಹಾ! ಚಾನಲ್ ವಿಷಯ! ನನ್ನನ್ನು ಬೇಗ ಮಲಗಿಸಿ ಇವರಿಬ್ಬರೂ ಯಾವ ಚಾನಲ್ ನೋಡ್ತಾರೆ ಅಂತ ತಿಳಿದುಕೊಳ್ಳಬೇಕು. ನನಗೋ ತಿಳಿದುಕೊಳ್ಳೋ ತನಕ ಸುಮ್ಮನಿರೋಕ್ಕೆ ಆಗಲ್ಲ. ಅದೇನೋ ಜಾತಕ, ನಕ್ಷತ್ರ ಅಂತೆ. ಕೆಲವರು ಯಾವುದು ಏನೇ ಆಗಲಿ, ನನಗೇನು ಅನ್ನೋ ಹಾಗೆ ಇರ್ತಾರಂತೆ. ಮತ್ತೆ ಕೆಲವರು ನನ್ನ ಹಾಗೆ. ತಿಳಿದುಕೊಳ್ಳೋ ತನಕ ಸಮಾಧಾನ ಇಲ್ಲ. ನೋಡಿ ಈಗ ಆಗುತ್ತಿರೋದೂ ಅದೇನೇ. ನಿದ್ದೇನೇ ಬರ್ತಿಲ್ಲ.

ಮೊದಲೇ ಒಂದು ಸಾರಿ ಎದ್ದಾಗಿದೆ. ಮತ್ತೆ ಎದ್ದರೆ ಡೌಟ್ ಬರುತ್ತೆ. ಇರಲಿ, ನಾಳೆ ಮೆಲ್ಲಗೆ ಇಬ್ಬರಿಗೂ ತಿಳಿಯದ ಹಾಗೆ ಎದ್ದು ನೋಡಿಕೊಂಡು ಬರ್ತೀನಿ. ಮನಸ್ಸಿಗೆ ಸ್ವಲ್ಪ ಹಾಯೆನಿಸಿತು. ನಿದ್ದೆ ಬಂತು.

ಮಾಮೂಲಿನಂತೆ ರಾತ್ರಿ ಒಂಬತ್ತು ಘಂಟೆಗೆ ನನ್ನನ್ನು ಮಲಗಿಸಿ ಒಂದು ಕಥೆ ಹೇಳಿದರು. ನಾನು ಕಣ್ಣು ಮುಚ್ಚಿದ್ದೆ. ಅಮ್ಮ ನನ್ನನ್ನು ಸ್ವಲ್ಪ ಹೊತ್ತು ತಟ್ಟಿ, ಬೆಡ್ ಲೈಟ್ ಹಾಕಿ ಶಬ್ದವಾಗದಂತೆ ಎದ್ದು ಹೋದರು. ನನಗೆ ಸಿಕ್ಕಾಪಟ್ಟೆ ನಗು. ನನಗೆ ನಿದ್ದೇನೇ ಬಂದಿರಲಿಲ್ಲ! ಸಂಜೇನೇ ನನ್ನ ರೂಮಿನ ಆಟ ಸಾಮಾನನ್ನು ಕ್ಲೀನ್ ಅಪ್ ಮಾಡಿಬಿಟ್ಟಿದ್ದೆ. ಕತ್ತಲಲ್ಲಿ ಕಾಣ್ದೆ ಕಾಲಿಟ್ಟು ಶಬ್ದ ಆದರೇ ? ಅದಕ್ಕೆ. ಕಿವಿಗೊಟ್ಟು ಕೇಳಿದೆ. ಟೀವಿ’ಯ ಶಬ್ದ ಕೇಳುತ್ತಿತ್ತು. ಖಂಡಿತ ಕಾರ್ಟೂನ್ ಅಲ್ಲ.

ಮೆಲ್ಲಗೆ ಎದ್ದು ಕುಳಿತು ಹೊದಿಕೆಯನ್ನು ಸರಿಸಿದೆ. ಸುಮ್ಮನೆ ಕುಳಿತೆ. ಟೀವಿ’ಯ ಶಬ್ದ ಇನ್ನೂ ಅದೇ ಇತ್ತು. ಅಂದರೆ ನಾನು ಎದ್ದಿದ್ದು ಇಬ್ಬರಿಗೂ ಗೊತ್ತಾಗಲಿಲ್ಲ. ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ ಮುಂದೆ ಹೋದೆ. ಅಮ್ಮ ಬಾಗಿಲನ್ನು ಸ್ವಲ್ಪವೇ ಮುಚ್ಚಿದ್ದರು. ಮೆಲ್ಲಗೆ ತೆರೆದೆ. ಕೊನೆಯಲ್ಲಿ ಸಣ್ಣಗೆ ಕಿರ್ ಎಂದು ಸದ್ದು ಬಂದಿತು. ಥತ್ ! ಪ್ಲಾನ್ ಕೆಟ್ಟಿತು !! ಸ್ವಲ್ಪ ಹಾಗೇ ನಿಂತೆ. ಇಲ್ಲ, ಯಾರೂ ಬರಲಿಲ್ಲ. ಗುಡ್ !

ಮೆಟ್ಟಿಲನ್ನು ಮೆಲ್ಲಗೆ ಇಳಿದು ಹೋದೆ. ಮೆಟ್ಟಿಲು ಇಳಿಯುತ್ತಿದ್ದ ಹಾಗೇ ಕಾಣುವ ದೊಡ್ಡ ಟೀವಿ. ಸೀರಿಯಸ್ಸಾಗಿ ನೋಡುತ್ತಿದ್ದ ಅಪ್ಪ-ಅಮ್ಮ. ಮೆಟ್ಟಿಲಿಗೆ ಬೆನ್ನು ಹಾಕಿ ಕುಳಿತುಕೊಳ್ಳೋ ಹಾಗೆ ಸೋಫಾ ಹಾಕಿರೋದ್ರಿಂದ ಅವರಿಗೆ ನಾನು ಬಂದಿರೋದು ತಿಳಿಯಲಿಲ್ಲ.

ಬಿಟ್ಟ ಕಣ್ಣು ಬಿಟ್ಟ ಹಾಗೇ ಟೀವಿ ನೋಡುತ್ತಿದ್ದೆ. ಏನೇನೋ ಬರುತ್ತಿತ್ತು. ಏನೂ ಅರ್ಥ ಆಗಲಿಲ್ಲ ಬದಲಿಗೆ ಭಯವಾಯ್ತು ... ಭದ್ರವಾಗಿ ಕಣ್ಣು ಮುಚ್ಚಿ, ’ಅಮ್ಮಾ’ ಎಂದು ಮೆಲ್ಲಗೆ ಚೀರಿ ಮೆಟ್ಟಿಲು ಇಳಿದೆ, ಅಷ್ಟೇ... ಕಾಲು ಜಾರಿತು ... ಧುಡುಂ ಅಂತ ಬಿದ್ದೆ... ಇಬ್ಬರೂ ಸೋಫಾದಿಂದ ಧಡಕ್ಕನೆ ಎದ್ದರು. ಚಾನಲ್ ಬದಲಿಸಲು ರಿಮೋಟ್ ಹುಡುಕಿದರೆ ಸಿಕ್ಕುತ್ತಿಲ್ಲ ಅಂತ ಕಾಣುತ್ತೆ... "ಟೀವಿ ಪಕ್ಕಾನಾ ರಿಮೋಟ್ ಇಡೋದು" ಅಂತ ಅಪ್ಪ ರೇಗಿದರು .... ಅಮ್ಮ "ನಮ್ಮ ಮನೆಯಲ್ಲಿ ಯಾವುದು ಎಲ್ಲಿರಬೇಕೋ ಅಲ್ಲಿರೋಲ್ಲ" ಎನ್ನುತ್ತ ನನ್ನ ಬಳಿ ಧಡ ಧಡ ಅಂತ ಬಂದರು ... ನನಗೆ ಕಾಲು ನೋಯುತ್ತಿತ್ತು. ಟೀವಿ’ಯಲ್ಲಿ ಮತ್ತೆ ಕಾರ್ಟೂನ್ ಚಾನಲ್ ಮೂಡಿ ಬಂತು.... ನಾನು ಬಂದಾಗ ಕಾರ್ಟೂನ್ ಹಾಕುತ್ತಾರೆ ಎನ್ನುವ ನನ್ನ ಅನುಮಾನ ನಿಜ ಆಯ್ತು. ಹಾಗಾಗಿ ನೋವಿನಲ್ಲೂ ನಗು ಬಂತು. ಆದರೆ ಅವರು ನೋಡುತ್ತಿದ್ದ ಆ ಚಾನಲ್ ... ದೊಡ್ಡವರಿಗೆ ಏನೂ ಅನ್ನಿಸೋದೇ ಇಲ್ವಾ ? ನೆನಪಿಸಿಕೊಂಡ ಕೂಡಲೆ ಹೆದರಿಕೆ ಆಯ್ತು.... ಮತ್ತೆ ಗಟ್ಟಿಯಾಗಿ ಕಣ್ಣು ಮುಚ್ಚಿ ’ಅಮ್ಮಾ’ ಎಂದೆ.

ಅಮ್ಮ ನನ್ನನ್ನು ಎತ್ತಿಕೊಂಡು ಕಣ್ಣೆರು ಒರೆಸಿದ್ದೇನು, ಕಾಲು ಒತ್ತಿದ್ದೇನು, ಅಳಬೇಡ ಅಂತ ಹೇಳಿದ್ದೇನು .... ಇಷ್ಟೆಲ್ಲ ಮುದ್ದು ಮಾಡುತ್ತಿದ್ದರೆ ದಿನಾ ಬೀಳೋಣಾ ಅಂತ ಅನ್ನಿಸುತ್ತದೆ .... ಮತ್ತೊಂದು ಕ್ಷಣ ... ಟೀವಿ ಯಲ್ಲಿ ಕಂಡಿದ್ದು ನೆನಪಿಸಿಕೊಂಡು ಮತ್ತೆ ಕಣ್ಣು ಭದ್ರವಾಗಿ ಮುಚ್ಚಿ ಅಳಹತ್ತಿದೆ...

******

ಎಲ್ಲ ಚೆಕಪ್ ಆದ ಮೇಲೆ ಡಾಕ್ಟರ್ ನನಗೆ ಒಂದು ಲಾಲಿಪಾಪ್ ಕೊಟ್ಟು, ಅಪ್ಪ-ಅಮ್ಮನನ್ನು ನೋಡುತ್ತ ನುಡಿದರು "ಈ ವಯಸ್ಸಿಗೆ ನೋಡಬಾರದ್ದನ್ನು ನೋಡಿದ್ದರಿಂದ ಮಗು ಹೆದರಿದೆ, ಅಷ್ಟೇ. ನೀವೇನೂ ಹೆದರಬೇಡಿ. ಇಷ್ಟಕ್ಕೂ ಏನಾದರೂ ಹಾರರ್ ಸಿನೆಮಾ ನೋಡಿದ್ನಾ ಏನು?". ಅಪ್ಪ ನುಡಿದರು "ಸಾಮಾನ್ಯವಾಗಿ ಅವನು ಇದ್ದಾಗ ಈ ಪ್ರೋಗ್ರಾಂ ನೋಡೋಲ್ಲ. ಅವನು ಮಲಗಿದ ಮೇಲೇ ನೋಡೋದು. ಇವತ್ತು ಅವನು ಇಳಿದು ಬಂದದ್ದೇ ಗೊತ್ತಾಗಲಿಲ್ಲ. ತಪ್ಪು ನಮ್ಮದೇ". ಡಾಕ್ಟರ್ ನುಡಿದರು "ನಾನು ಕೇಳಿದ್ದು ಯಾವ ಪ್ರೋಗ್ರಾಂ ನೋಡುತ್ತಿದ್ದಿರಿ ಅಂತ. I am just trying to understand what went wrong here. " ಎಂದು ಮತ್ತೆ ಕೇಳಿದರು.

ಅಮ್ಮ ನುಡಿದರು "ಏನಿಲ್ಲ ಡಾಕ್ಟರ್. ದಿನವೂ ಅವನು ಮಲಗಿದ ಮೇಲೆ ಹತ್ತು ಘಂಟೆಗೆ ನ್ಯೂಸ್ ಚಾನಲ್ ನೋಡೋ ಅಭ್ಯಾಸ ನಮಗೆ. ಅವನು ಇಳಿದು ಬಂದಾಗ "ಎಲೆಕ್ಷನ್ ಸ್ಪೆಶಲ್ ರಿಪೋರ್ಟ್" ತೋರಿಸುತ್ತಿದ್ದರು. ಚುನಾವಣ ಸಮಯದಲ್ಲಿ ನೆಡೆದ ಗಲಾಟೆ, ದೌರ್ಜನ್ಯ, ರಕ್ತಪಾತದ ವೀಡಿಯೋ ಮೂಡಿ ಬರುತ್ತಿತ್ತು. ಅದನ್ನು ನೋಡಿ ಹೆದರಿದ್ದಾನೆ ನಮ್ಮ ಕೃಷ್ಣ. ಅವನಿಗೆ ಯಾಕೆ ಇದೆಲ್ಲ ಅಂತ ಯಾವಾಗಲೂ ನಾವು ಎಚ್ಚರಿಕೆವಹಿಸುತ್ತೇವೆ. ಇವತ್ತು ಸ್ವಲ್ಪ ಎಡವಟ್ಟಾಯಿತು." ಎಂದು ಹೆಚ್ಚು ಕಮ್ಮಿ ಅತ್ತೇ ಬಿಟ್ಟರು ಅಮ್ಮ. ಡಾಕ್ಟರ್ ಅಮ್ಮನಿಗೆ ಸಮಾಧಾನ ಮಾಡುತ್ತ ಎನೇನೋ ಹೇಳುತ್ತಿದ್ದರು. ನನಗೇನೂ ಅರ್ಥ ಆಗಲಿಲ್ಲ.

ಇನ್ನು ಮುಂದೆ ಇಂತಹ ತಲೆಹರಟೆ ಮಾಡೋಲ್ಲ ಅಂತ 'Mother's Day' ಗೆ ನನ್ನ ’ಪ್ರಾಮಿಸ್’....ಓಕೇ ?