ಮಕ್ಕಳ ಮನೋವಿಕಾಸಕ್ಕಾಗಿ ಪುಸ್ತಕಗಳು

ಬಣ್ಣಬಣ್ಣದ ಚಿತ್ರಗಳಿರುವ ಕತೆಪುಸ್ತಕಗಳನ್ನು ಮಕ್ಕಳು ಖುಷಿಯಿಂದ ಓದುವುದನ್ನು ನಾವೆಲ್ಲರೂ ನೋಡಿದ್ದೇವೆ. ಮಕ್ಕಳಿಗೆ ಪಠ್ಯಪುಸ್ತಕಗಳ ಹೊರತಾದ ಪುಸ್ತಕಗಳು ಓದಲು ಲಭ್ಯವಿದ್ದರೆ ಅವರು ಚೆನ್ನಾಗಿ ಓದುತ್ತಾರೆಂದು ಅಧ್ಯಯನಗಳು ತೋರಿಸಿ ಕೊಟ್ಟಿವೆ. ಯಾವುದೇ ಸಮುದಾಯದಲ್ಲಿ, ಮೊದಲಾಗಿ ಶಾಲೆಗೆ ಹೋದ ಅಥವಾ ಮೊದಲಾಗಿ ಮನೆಯಲ್ಲೇ ಕಲಿಯಲು ಶುರು ಮಾಡಿದ ತಲೆಮಾರಿನ ಮಕ್ಕಳ ಮಟ್ಟಿಗಂತೂ ಇದು ನಿಜ.
ಮನಸೆಳೆಯುವ ಚಿತ್ರಗಳಿರುವ ಆಕರ್ಷಕ ಕತೆಪುಸ್ತಕಗಳಂತೂ ಮಕ್ಕಳು ಪುಸ್ತಕಗಳನ್ನು ಮತ್ತು ಓದುವುದನ್ನು ಪ್ರೀತಿಸುವಂತೆ ಮಾಡುತ್ತವೆ. ಇದರಿಂದಾಗಿ ಅವರು ಸುಲಭವಾಗಿ ಓದಲು ಕಲಿಯುತ್ತಾರೆ. ಓದುವುದು ಖುಷಿಯ ಚಟುವಟಿಕೆ ಎಂದು ಮಕ್ಕಳಿಗೆ ಅನಿಸಿದರೆ, ಇದರಿಂದಾಗಿ ಅವರು ಹೆಚ್ಚೆಚ್ಚು ಓದಿ, ಕಲಿಯಲು ಸಹಾಯ.
ಆದರೆ, ನಗರ ಪ್ರದೇಶದಲ್ಲಾಗಲೀ, ಗ್ರಾಮೀಣ ಪ್ರದೇಶದಲ್ಲಾಗಲೀ, ಮಕ್ಕಳಿಗೆ ಓದಲು ಆಕರ್ಷಕ ಪುಸ್ತಕಗಳು ಸುಲಭವಾಗಿ ಸಿಗುವುದಿಲ್ಲ ಎಂಬುದು ವಾಸ್ತವ. ಒಂದು ವೇಳೆ ಮಕ್ಕಳಿಗೆ ಮಕ್ಕಳ ಪುಸ್ತಕಗಳು ಓದಲು ಲಭ್ಯವಿದ್ದರೂ ಅವು ಮಕ್ಕಳ ಮಾತೃಭಾಷೆಯಲ್ಲಿ ಲಭ್ಯವಿರುವುದು ಅಪರೂಪ. ಅದಲ್ಲದೆ, ಆ ಪುಸ್ತಕಗಳಲ್ಲಿರುವ ಪಾತ್ರಗಳು ಮತ್ತು ಸನ್ನಿವೇಶಗಳು ಮಕ್ಕಳು ಸುಲಭವಾಗಿ ಗ್ರಹಿಸುವಂತೆ ಇರುವುದೂ ಅಪರೂಪ.
ಇಂತಹ ಪರಿಸ್ಥಿತಿಯಲ್ಲಿ, ಕೆಲವು ವ್ಯಕ್ತಿಗಳು, ಸಮುದಾಯ ಸಂಸ್ಥೆಗಳು ಮತ್ತು ಸರಕಾರೇತರ ಸಂಸ್ಥೆಗಳು ಮಕ್ಕಳಿಗೆ ಪುಸ್ತಕಗಳನ್ನು ಒದಗಿಸಲಿಕ್ಕಾಗಿ ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸಿದ್ದಾರೆ.
ಉದಾಹರಣೆಗೆ ಪ್ರಥಮ್ ಬುಕ್ಸ್ (https://prathambooks.org) “ಪ್ರತಿಯೊಂದು ಮಗುವಿನ ಕೈಯಲ್ಲೊಂದು ಪುಸ್ತಕ" ಎಂಬುದೇ ಈ ಸಂಸ್ಥೆಯ ಧ್ಯೇಯ. ಮಕ್ಕಳಿಗಾಗಿ ಅತ್ಯುತ್ತಮ ಪುಸ್ತಕಗಳನ್ನು ಪ್ರಕಟಿಸಿ, ಅವು ಮಕ್ಕಳಿಗೆ ಸಿಗಲಿಕ್ಕಾಗಿ ಗಮನಾರ್ಹ ಕೆಲಸ ಮಾಡಿದೆ. ಇವರ “ಸ್ಟೋರಿವೀವರ್" ಎಂಬ ವೆಬ್-ಸೈಟಿನಲ್ಲಿ ೨೩೫ ಭಾಷೆಗಳಲ್ಲಿ ೧೯,೫೦೦ ಮಕ್ಕಳ ಕತೆಪುಸ್ತಕಗಳು ಮುಕ್ತವಾಗಿ ಲಭ್ಯವಿವೆ. ಇವರ “ಲೈಬ್ರೆರಿ-ಇನ್-ಎ-ಕ್ಲಾಸ್‌ರೂಮ್” ಎಂಬ ಯೋಜನೆ ಉಲ್ಲೇಖಾರ್ಹ. ಇದರ ಪ್ರಕಾರ, ನಮ್ಮ ದೇಶದ ಯಾವುದೇ ಮೂಲೆಯ ಯಾವುದೇ ಶಾಲೆ ಸೂಕ್ತ ಬೆಲೆಗೆ ೧೦೦ ಪುಸ್ತಕಗಳನ್ನು ಖರೀದಿಸಲು ಸಾಧ್ಯ. ಹೀಗೆ ಶಾಲೆಯಲ್ಲಿ ಗ್ರಂಥಾಲಯದ ವಾತಾವರಣ ಮೂಡಿದರೆ ಮಕ್ಕಳು ಖಂಡಿತವಾಗಿ ಹೆಚ್ಚೆಚ್ಚು ಪುಸ್ತಕಗಳನ್ನು ಓದುತ್ತಾರೆ.
ಟಾಟಾ ಟ್ರಸ್ಟಿನ "ಪರಾಗ್" (https://paragreads.in) ಕೂಡ ಮಕ್ಕಳ ಸಾಹಿತ್ಯವನ್ನು ಎಲ್ಲ ಭಾಷೆಗಳಲ್ಲಿಯೂ ಮಕ್ಕಳಿಗೆ ಒದಗಿಸಲಿಕ್ಕಾಗಿ ಕೆಲಸ ಮಾಡುತ್ತಿದೆ. ಮಕ್ಕಳ ಪುಸ್ತಕಗಳ ರಚನೆ, ಮಕ್ಕಳ ಸಾಹಿತ್ಯ ಬರಹಗಾರರಿಗೆ, ಚಿತ್ರಕಾರರಿಗೆ ಮತ್ತು ಗ್ರಂಥಪಾಲರಿಗೆ ತರಬೇತಿ - ಇವುಗಳಿಗೆ "ಪರಾಗ್" ಬೆಂಬಲ ನೀಡುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಶಾಲೆಗಳಲ್ಲಿ ಮಕ್ಕಳ ಪುಸ್ತಕಗಳ ಗ್ರಂಥಾಲಯಗಳನ್ನು ತೆರೆದಿದೆ. ಪ್ರತಿ ವರುಷ "ಪರಾಗ್ ಗೌರವ ಪಟ್ಟಿ” ಪ್ರಕಟಿಸುತ್ತದೆ. ಇದು ಆಯಾ ವರುಷದ ಉತ್ತಮ ಮಕ್ಕಳ ಪುಸ್ತಕಗಳ ಪಟ್ಟಿ. ಅದಲ್ಲದೆ, ಪ್ರತಿ ವರುಷ ಒಬ್ಬ ಮಕ್ಕಳ ಪುಸ್ತಕ ಬರಹಗಾರನನ್ನೂ, ಮಕ್ಕಳ ಪುಸ್ತಕ ಚಿತ್ರಕಾರನನ್ನೂ “ಬಿಗ್ ಲಿಟಲ್ ಬುಕ್ ಎವಾರ್ಡ್” ನೀಡಿ ಪುರಸ್ಕರಿಸುತ್ತದೆ.
ಇಂತಹ ಪ್ರಯತ್ನಗಳು, ಯೋಜನೆಗಳು ಮತ್ತು ಚಟುವಟಿಕೆಗಳು ನಮ್ಮ ದೇಶದ ಮಕ್ಕಳಿಗೆ ಸಾವಿರಾರು ಮಕ್ಕಳ ಪುಸ್ತಕಗಳು ಖುಷಿಯಿಂದ ಓದಲು ಸಿಗುವುದರ ಬಗ್ಗೆ ನಮ್ಮೆಲ್ಲರಲ್ಲಿ ಭರವಸೆ ಮೂಡಿಸುತ್ತವೆ.
ಯಾಕೆಂದರೆ, ನಾನು ಪ್ರಾಥಮಿಕ ಶಾಲೆಯಲ್ಲಿ ಮತ್ತು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ನನ್ನ ತಂದೆ ದಿ. ಅಡ್ಡೂರು ಶಿವಶಂಕರ ರಾಯರು ಪ್ರತಿ ತಿಂಗಳೂ “ಚಂದಮಾಮ" ಮಕ್ಕಳ ಮಾಸಪತ್ರಿಕೆ ತಂದು ಕೊಡುತ್ತಿದ್ದರು. ಹಲವಾರು ಮಕ್ಕಳ ಪುಸ್ತಕಗಳನ್ನೂ ಅವರು ಓದಲು ನೀಡಿದ್ದರು. ಅವರೂ ದಿನದಿನವೂ ಪತ್ರಿಕೆಗಳು, ನಿಯತಕಾಲಿಕಗಳು ಮತ್ತು ಪುಸ್ತಕಗಳನ್ನು ಓದುತ್ತಿದ್ದರು. ಇವೆಲ್ಲದರಿಂದಾಗಿಯೇ ನನ್ನಲ್ಲಿ ಪುಸ್ತಕಪ್ರೀತಿ ಬೆಳೆಯಿತು; ನಾನೊಬ್ಬ ಬರಹಗಾರನಾಗಿ ಬೆಳೆಯಲು ಕಾರಣವಾಯಿತು.
ಅಂತರರಾಷ್ಟ್ರೀಯ ಸಾಕ್ಷರತಾ ದಿನವಾದ ಇವತ್ತು ಇದೆಲ್ಲ ನೆನಪಾಯಿತು. ಉಡುಗೊರೆ ಕೊಡುವಾಗೆಲ್ಲ ಪುಸ್ತಕಗಳನ್ನೇ ಕೊಡೋಣ. ಇದರಿಂದಲಾದರೂ ಮನೆಮನೆಯಲ್ಲಿ ಒಂದು ಪುಟ್ಟ ಗ್ರಂಥಾಲಯ ರೂಪುಗೊಳ್ಳಲಿ ಮತ್ತು ಮಕ್ಕಳು ಮನಸ್ಸು ಅರಳಿಸುವ ಪುಸ್ತಕಗಳನ್ನು ಓದುವಂತಾಗಲಿ.