ಮಗಳು ಮಂಕಾದಾಗ...
ಮಗಳು ಇತ್ತೀಚೆಗೆ ತೀರಾ ಮಂಕಾಗಿದ್ದಾಳೆ. ವರ್ತನೆಯೂ ಬಹಳಷ್ಟು ಭಿನ್ನವಾಗಿದೆ. ಮುಖದಲ್ಲಿ ಹಿಂದಿನ ಲವ ಲವಿಕೆ ತೀರಾ ಕುಂಠಿತವಾಗುತ್ತಿದೆ. ಮಗಳಲ್ಲಿ ಆಗುತ್ತಿರುವ ಬದಲಾವಣೆಯನ್ನು ಜಮೀಲಾ ಪ್ರತಿದಿನ ಗಮನಿಸುತ್ತಿದ್ದಾಳೆ. ಜಮೀಲಾಗೆ ಮಗಳಲ್ಲಿ ಆಗುತ್ತಿರುವ ಬದಲಾವಣೆ ಮನದೊಳಗೆ ಭಯ ಮೂಡಿಸುತ್ತಿದೆ. ಈ ಬಗ್ಗೆ ಗಂಡನಲ್ಲಿ ಒಂದೆರಡು ಬಾರಿ ಪ್ರಸ್ತಾಪಿಸಿದ್ದಾಳೆ. ಆತ "ಸರಿ ಹೋಗಬಹುದು. ಚಿಂತೆ ಮಾಡಬೇಡ" ಎಂದು ಸಮಾಧಾನ ಪಡಿಸಿದ್ದ. ಮಗಳ ಬಗ್ಗೆ ಆತನಿಗೂ ಕಳವಳ ಇಲ್ಲದಿರಲಿಲ್ಲ.
ಹಮ್ನಾ ಜಮೀಲಾಳ ಮಗಳು. ಪ್ರತಿಷ್ಠಿತ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿದ್ದಾಳೆ. ಎಲ್.ಕೆ.ಜಿ.ಯಿಂದಲೇ ಓದು ಮತ್ತು ಬರಹದಲ್ಲಿ ಬಹಳನೇ ಚುರುಕಿನ ಹುಡುಗಿ. ಅಪ್ಪ ಅಮ್ಮ ಅಂದರೆ ಆಕೆಗೆ ಬಹಳನೇ ಇಷ್ಟ. ಆಕೆ ಯು.ಕೆ.ಜಿ ಬರುವಷ್ಟರಲ್ಲೇ ದುಂಡಾಗಿ ಮುದ್ದು ಮದ್ದಾಗಿ ಬರೆಯುತ್ತಿದ್ದಳು. ಹಮ್ನಾಳ ಕಲಿಕೆಯ ವೇಗ ಕಂಡು ಅಪ್ಪ ಅಮ್ಮ ಇಬ್ಬರಿಗೂ ಅವಳ ಮೇಲೆ ತುಂಬಾ ಅಭಿಮಾನವಿತ್ತು. ಹಮ್ನಾ ಏನು ಕೇಳಿದರೂ ಅವರು ಇಲ್ಲವೆನ್ನುತ್ತಿರಲಿಲ್ಲ. ಅಪ್ಪ ಅಮ್ಮನ ಬಗ್ಗೆ ಯಾರಾದರೂ ತಮಾಷೆ ಮಾಡಿದರೂ ಆಕೆ ರೇಗುತ್ತಿದ್ದಳು.
ಹಮ್ನಾಳ ದುಂಡು ದುಂಡಾಗಿದ್ದ ಅಕ್ಷರಗಳು ವಕ್ರವಾಗ ತೊಡಗಿದ್ದವು. ಚಿತ್ತು ಚಿತ್ತಾಗಿ ಗೀಚ ಹತ್ತಿದಳು. ಓದಲೂ ಉದಾಸೀನತೆ. ಅಮ್ಮ ಪ್ರಶ್ನಿಸಿದರೆ ಕೋಪಗೊಳ್ಳುತ್ತಿದ್ದಳು. "ನೀನು ಹೀಗೆ ಮಾಡಿದರೆ, ನಾನು ಸಾಯುತ್ತೇನೆ" ಎಂದು ಆಕೆ ಹೇಳಿದರೆ "ಸಾಯಿ, ನೀನು ಸತ್ತರೆ ನನಗೇನು?" ಎಂದು ಉತ್ತರಿಸುತ್ತಿದ್ದಳು. ಇದು ಕೇಳಿದಾಗ ಜಮೀಲಾಳ ಜಂಘಾಬಲವೇ ಕುಸಿದು ಹೋಗಿತ್ತು. ಆಕೆ ಗಂಡನಲ್ಲಿ ವಿಷಯ ತಿಳಿಸಿ ಅಳುತ್ತಿದ್ದಳು.
ಹಮ್ನಾಳಲ್ಲಿ ನಡೆಯುತ್ತಿದ್ದ ಬದಲಾವಣೆಗೆ ಕಾರಣ ಗೋಚರವಾಗುತ್ತಿರಲಿಲ್ಲ. ಶಾಲೆಗೆ ತೆರಳಿ ವಿಚಾರಿಸಿದ್ದೂ ಆಯಿತು. "ಆಕೆ ಕಲಿಕೆಯಲ್ಲಿ ಆಸಕ್ತಿ ತೋರಿಸುತ್ತಿಲ್ಲ" ಎಂಬ ಉತ್ತರವಿತ್ತೇ ಹೊರತು ಕಾರಣ ತಿಳಿಯಲಿಲ್ಲ. ವಿಧಿಯಿಲ್ಲದೆ ಮಗಳನ್ನು ವೈದ್ಯರಲ್ಲಿ ತೋರಿಸಿದಾಗ, ಮನೋವೈದ್ಯರಿಗೆ ತೋರಿಸುವಂತೆ ಸಲಹೆ ನೀಡಿದರು. ಮನೋವೈದ್ಯರು ಪರೀಕ್ಷೆ ಮಾಡಿದಾಗಲೂ ಯಾವುದೇ ಕಾರಣ ತಿಳಿಯದಿದ್ದಾಗ ಜಮೀಲಾ ದಂಪತಿಗಳಿಬ್ಬರೂ ದಿಕ್ಕೇ ಕಾಣದಾದರು. ಕೆಲವರು ಮಂತ್ರವಾದಿಗೆ ತೋರಿಸಿ ಅಂದರೆ ಮತ್ತೆ ಕೆಲವರು ಜ್ಯೋತಿಷಿಗಳಿಗೆ ತೋರಿಸುವಂತೆ ಸಲಹೆ ನೀಡಿದರು. ಒಂದೆರಡು ತಾಯಿತ ತಂದು ಕಟ್ಟಿಯೂ ಆಯಿತು. ಹಲವು ಹರಕೆಗಳನ್ನು ಹೇಳಿಯೂ ಆಯಿತು. ಆದರೆ ಹಮ್ನಾಳಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.
ಜಮೀಲಾಳ ಗಂಡ ವೃತ್ತಿಯಲ್ಲಿ ಶಿಕ್ಷಕ. ಆತನಿಗೆ ಮಕ್ಕಳ ಮಾನಸಿಕತೆಯ ಬಗ್ಗೆ ಅರಿವಿತ್ತು. ಆತ ಏಕಾಂತದಲ್ಲಿ ಕುಳಿತು ಯೋಚಿಸತೊಡಗಿದ. ಮಗಳ ಬದಲಾವಣೆಗೆ ಕಾರಣವೇನು? ಎಂದು ನಿರಂತರ ಚಿಂತಿಸತೊಡಗಿದ. ಆತನಿಗೆ ಒಂದು ಒಂದು ಸಣ್ಣ ಸೆಳೆ ಸಿಕ್ಕಿದರೂ ಸಾಕಿತ್ತು. ಮಗಳು ಎಲ್.ಕೆ.ಜಿ. ಮತ್ತು ಯು.ಕೆ.ಜಿಯಲ್ಲಿ ಓದುತ್ತಿರುವಾಗ ಹೇಗಿದ್ದಳು ಎಂದು ನೆನಪಿಸಿಕೊಳ್ಳತೊಡಗಿದ.
ಆತನಿಗೆ ನಿಧಾನವಾಗಿ ಒಂದಂಶ ಸ್ಪಷ್ಟವಾಗತೊಡಗಿತು. ಹಿಂದಿನ ಎರಡು ವರ್ಷವೂ ಆಕೆ ಮನೆ ತಲುಪಿದೊಡನೆ ಶಾಲೆಯ ಬಗ್ಗೆ, ಶಿಕ್ಷಕಿಯ ಬಗ್ಗೆ ತುಂಬಾ ಮಾತನಾಡುತ್ತಿದ್ದಳು. ಆಕೆ ತರಗತಿಯಲ್ಲಿ ಚುರುಕು ಇದ್ದುದರಿಂದ ಶಿಕ್ಷಕಿಗೆ ಬಹಳನೇ ಇಷ್ಟವಾಗಿದ್ದಳು. ಹುಟ್ಟು ಹಬ್ಬಕ್ಕೆ ಹಟ ಹಿಡಿದು ಶಿಕ್ಷಕಿಯರಿಗೆ ಸಿಹಿ ಕೊಡಿಸಿ, ಪೆನ್ನು ಉಡುಗೊರೆ ಕೊಡಿಸಿದ್ದಳು. ಅದು ಕಳೆದ ಎರಡು ವರ್ಷವೂ ನಡೆದಿತ್ತು. ಆದರೆ ಈ ವರ್ಷ ಆಕೆ ಸಿಹಿ ಇಲ್ಲವೇ ಉಡುಗೊರೆ ಕೇಳಿರಲಿಲ್ಲ. ಅದಾಗಲೇ ಆತನಿಗೆ ಶಾಲೆಯಲ್ಲಿ ಅದೇನೋ ಸಂಭವಿಸಿದೆ ಎಂದು ಸ್ಪಷ್ಟವಾಯಿತು. ಅದೂ ಶಿಕ್ಷಕಿಯೇ ಕಾರಣವಾಗಿರಬಹುದೆಂದೂ ಮನದಟ್ಟಾಗಿತ್ತು.
ಆ ದಿನ ಒಂದು ಉತ್ತಮ ಪೆನ್ನು ತಂದು ಮಗಳ ಕೈಗಿತ್ತ. ಇದನ್ನು ನಿನ್ನ ತರಗತಿ ಶಿಕ್ಷಕಿಗೆ ಕೊಡುವಂತೆ ಹೇಳಿದ. ಆತನಿಗೆ ಆಕೆಯ ಪ್ರತಿಕ್ರಿಯೆ ಬೇಕಿತ್ತು. ಆದರೆ ಹಮ್ಮಾ ಅದನ್ನು ಶಿಕ್ಷಕಿಗೆ ಕೊಡಲು ಒಪ್ಪಲಿಲ್ಲ. ಕೊಡಬಾರದೆಂದು ಹಠತೊಟ್ಟಳು. ಅದಾಗಲೇ ಆತ ತನ್ನ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದ. ಒಬ್ಬ ಅಪ್ಪನಾಗಿ ಮಗಳ ನಾಡಿ ಮಿಡಿತ ಅರಿಯುವಲ್ಲಿ ಸಫಲನಾಗಿದ್ದ. ಅಲ್ಲಿಂದಲೇ ತರಗತಿ ಶಿಕ್ಷಕಿಯ ಸುತ್ತಾ ಪ್ರಶ್ನೆಗಳನ್ನು ಸುತ್ತತೊಡಗಿದ. ಅದಾಗಲೇ ಮಗಳ ಬದಲಾವಣೆಯ ಮರ್ಮ ಅರಿವಾದದ್ದು.
ಒಂದನೇ ತರಗತಿಗೆ ಮಧು ತರಗತಿ ಶಿಕ್ಷಕಿಯಾಗಿ ಬಂದಿದ್ದಳು. ಹಮ್ನಾ ಹಿಂದಿನ ಎರಡು ತರಗತಿಯಲ್ಲಿ ಶಿಕ್ಷಕಿಯಾಗಿದ್ದ ಸವಿತಾ ಈ ವರ್ಷ ಇವಳ ತರಗತಿಗೆ ಇರಲಿಲ್ಲ. ಸವಿತಾ ಹಮ್ನಾಳನ್ನು ತುಂಬಾ ಹಚ್ಚಿಕೊಂಡಿದ್ದರು. ಹಮ್ನಾಳ ಪ್ರತಿಭೆಗೆ ಸವಿತಾ ಮಾರುಹೋಗಿದ್ದರು. ಆದರೆ ಇದೀಗ ಮಧು ಹಮ್ನಾಳ ತರಗತಿ ಶಿಕ್ಷಕಿ. ಮಧುವಿಗೆ ಮಕ್ಕಳ ಬಗ್ಗೆ ಅಷ್ಟೊಂದು ಕಾಳಜಿ ಇರಲಿಲ್ಲ. ಮುಂದಿನ ಬೆಂಚಿನಲ್ಲಿ ಕುಳಿತಿದ್ದ ವಿದ್ಯಾರ್ಥಿಗಳ ಮೇಲೆಯೇ ಆಕೆಯ ಗಮನವಿರುತ್ತಿತ್ತು. ಆಕೆ ಹಮ್ನಾಳನ್ನು ಗುರುತಿಸದೆ ಹೋದಳು. ಸವಿತಾ ಮೇಡಂ ತೋರಿಸುತ್ತಿದ್ದ ಪ್ರೀತಿ ಆಕೆಗೆ ಮಧು ಮೇಡಂ ನಲ್ಲಿ ಸಿಗದೆ ಹೋಯಿತು. ಮಧು ಕೈಯಲ್ಲಿ ಕೋಲು ಇರುತಿತ್ತು. ಹೊಡೆಯದಿದ್ದರೂ ಮಕ್ಕಳನ್ನು ಹೆದರಿಸುತ್ತಿದ್ದರು. ಇದು ಹಮ್ನಾಳ ಮೇಲೆ ವಿಪರೀತ ಪರಿಣಾಮ ಬೀರಿತ್ತು.
ವಿಷಯ ಮನದಟ್ಟಾದಾಗ ಆತ, ಹೆಂಡತಿಯೊಂದಿಗೆ ಶಾಲೆಗೆ ತೆರಳಿ ಮುಖ್ಯಶಿಕ್ಷಕಿಗೆ ವಿಷಯ ಮನವರಿಕೆ ಮಾಡಿದ. ಈತನ ಕೋರಿಕೆಗೆ ಸ್ಪಂದಿಸಿದ ಮುಖ್ಯಶಿಕ್ಷಕಿ ಮರುದಿನವೇ ತರಗತಿ ಶಿಕ್ಷಕಿಯನ್ನು ಬದಲಾಯಿಸಿದರು. ಚೇತನಾ ಮಿಸ್ಸ್ ಇವರ ತರಗತಿ ಶಿಕ್ಷಕಿಯಾದರು. ಅವರು ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು. ಹಮ್ನಾಳ ಬಗ್ಗೆ ಮುಖ್ಯಶಿಕ್ಷಕಿ ಮೊದಲೇ ಸೂಚನೆ ನೀಡಿರಬಹುದು. ಆಕೆ ಹಮ್ನಾಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಳು. ಪರಿಣಾಮ ಅದ್ಭುತವಾಗಿತ್ತು.
ಮಗಳು ಮೊದಲಿನಂತೆ ಚುರುಕಾಗಿದ್ದು ಕಂಡು ಜಮೀಲಾ ದಂಪತಿಗಳು ನಿಟ್ಟುಸಿರು ಬಿಟ್ಟರು. ಶಿಕ್ಷಕಿಯೊಬ್ಬರ ನಿರ್ಲಕ್ಷ್ಯ ಮಕ್ಕಳ ಮೇಲೆ ಯಾವ ಬಗೆಯ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬುವುದಕ್ಕೆ ಇದೊಂದು ಉತ್ತಮ ನಿದರ್ಶನವಾಯಿತು. ಹಮ್ನಾಳಂತೆ ಅದೆಷ್ಟೋ ಮಕ್ಕಳು ಇಂತಹ ಪರಿಸ್ಥಿತಿಗೆ ಸಿಲುಕಿ ಒದ್ದಾಡಿರಬಹುದಲ್ಲವೇ? ಜಮೀಲಾಳಂತಹ ಅದೆಷ್ಟೋ ಅಮ್ಮಂದಿರು ಕಣ್ಣೀರು ಹರಿಸಿರಬಹುದಲ್ಲವೇ?... ಹಮ್ನಾ ಪರಿಸ್ಥಿತಿಯಿಂದ ಹೊರಬಂದು ಇಂದು ವೈದ್ಯಳಾಗಿದ್ದರೆ, ಪ್ರತಿಭೆ ಚಿವುಟಲ್ಪಟ್ಟು ನೊಂದ ಮಕ್ಕಳು ಸಾವಿರವಿರಬಹುದಲ್ಲವೇ?... ಹಮ್ನಾಳ ಪರಿಸ್ಥಿತಿ ನನ್ನಂತಹ ಶಿಕ್ಷಕರ ಕಣ್ಣು ತೆರೆಸಲಾರದೆ....?
-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ