ಮಠಗಳು ಮತ್ತು ಜಾತಿವ್ಯವಸ್ಥೆ

ಮಠಗಳು ಮತ್ತು ಜಾತಿವ್ಯವಸ್ಥೆ

ಬರಹ

ಮಠಗಳು ಮತ್ತು ಜಾತಿವ್ಯವಸ್ಥೆ

ಕರ್ನಾಟಕದಲ್ಲಿರುವ ಮಠಾಧೀಶರಲ್ಲೆಲ್ಲ ಬಹುಶಃ ಚಿತ್ರದುರ್ಗದ ಶ್ರೀ ಶಿವಮೂರ್ತಿ ಮುರಘರಾಜೇಂದ್ರ ಶರಣರು ವಿಶಿಷ್ಟರು. ಇವರು ಮಠದ ಸ್ವರೂಪ ಮತ್ತು ಕಾರ್ಯಶೈಲಿಯನ್ನು ಆದಷ್ಟೂ ಆಧುನೀಕರಿಸಿ, ತಮ್ಮ ಚಿಂತನೆಯಲ್ಲೂ ಸಮಕಾಲೀನತೆಯನ್ನು ರೂಢಿಸಿಕೊಂಡವರು. ಸಾಮಾಜಿಕ ಮತ್ತು ಧಾರ್ಮಿಕ ವಿವಾದಗಳೆದ್ದಾಗಲೆಲ್ಲ ಪ್ರಾಚೀನ ಶಾಸ್ತ್ರ - ಸಂಪ್ರದಾಯಗಳ ಚೌಕಟ್ಟಿನಲ್ಲಿ ಯೋಚಿಸದೆ, ಬದಲಾಗುತ್ತಿರುವ ಜನರ ಬದುಕಿನ ಆಶೋತ್ತರಗಳು ಮತ್ತು ನಂಬಿಕೆಗಳನ್ನು ಗಮನದಲ್ಲಿಟ್ಟುಕೊಂಡು ಇವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಇದಕ್ಕಾಗಿ ಅವರು ತಮ್ಮ ಸಹ - ಮಠಾಧೀಶರ ಟೀಕೆ - ವ್ಯಂಗ್ಯ ಕಟಕಿಗಳಿಗೆ ಒಳಗಾದದ್ದೂ ಉಂಟು. ಆದರೆ ಅವುಗಳಿಂದೇನೂ ಇವರು ವಿಚಲಿತರಾಗದೆ, ಮಠ ವ್ಯವಸ್ಥೆಯನ್ನೂ, ಅದರ ಚಿಂತನಾಕ್ರಮವನ್ನೂ ಆಧುನೀಕರಿಸುವ ತಮ್ಮ ಪ್ರಯತ್ನಗಳನ್ನು ಮುಂದುವರೆಸಿಯೇ ಇದ್ದಾರೆ. ಇದರಿಂದಾಗಿ ಇತರ ಮಠ ಮತ್ತು ಮಠಾಧೀಶರ ಮೇಲೂ ಒತ್ತಡಗಳು ಉಂಟಾಗುತ್ತಿದ್ದು, ಅವರೂ ಜಾತಿ, ಧರ್ಮ, ಸಮಾಜ ಕುರಿತ ತಮ್ಮ ನಿಲುವುಗಳನ್ನು ಉದಾರಗೊಳಿಸಿಕೊಳ್ಳಲು, ಆಧುನೀಕರಿಸಿಕೊಳ್ಳಲು ಒತ್ತಡಗಳು ಉಂಟಾಗುತ್ತಿವೆ.

ಅಂದ ಮಾತ್ರಕ್ಕೆ ಇತರೆ ಮಠಾಧೀಶರಿಗೆ ಹೋಲಿಸಿದರೆ, ಇವರು ಸರ್ವಶ್ರೇಷ್ಠರು ಎಂದಲ್ಲ. ಇವರಿಗಿಂತ ವಿದ್ಯಾವಂತರಾದವರು, ಪಂಡಿತರಾದವರು, ಜನಸೇವೆಯಲ್ಲಿ ತೊಡಗಿದ ಅನೇಕ ಮಠಾಧೀಶರು ಕರ್ನಾಟಕದಲ್ಲಿ ಉಂಟು. ಉದಾಹರಣೆಗೆ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮಿಗಳು ವಿದ್ಯಾ ಮತ್ತು ಪ್ರಸಾದ ಸೇವೆಯಿಂದಲೇ ಎಲ್ಲರಿಗಿಂತ ಶ್ರೇಷ್ಠರಾಗಿದ್ದಾರೆ. ಅವರ ಸಾಮಾಜಿಕ ಕಳಕಳಿ ಮತ್ತು ವಿದ್ವತ್ತುಗಳೂ ಶ್ರೇಷ್ಠವಾದುವೇ. ಆದರೆ ಸಾಮಾಜಿಕ ಬದಲಾವಣೆ ಕುರಿತ ಅವರ ತುಡಿತ ಅಷ್ಟೇನೂ ತೀವ್ರವಾದದ್ದಲ್ಲ. ಅವರ ಮಠ ಮತ್ತು ಜನಸೇವೆಯೂ ಜಾತಿ ಪದ್ಧತಿಯ ಬಂಧನದಿಂದ ಕಳಚಿಕೊಂಡಿದೆ ಎಂದೇನೂ ಹೇಳುವಂತಿಲ್ಲ. ಮುಖ್ಯವಾಗಿ, ಶಾಸ್ತ್ರ ಮತ್ತು ಧರ್ಮಗ್ರಂಥಗಳನ್ನು ಇಂದಿನ ಕಾಲದ ಅಗತ್ಯಗಳಿಗೆ ತಕ್ಕಂತೆ ಪುರ್ನವ್ಯಾಖ್ಯಾನಿಸಬೇಕಿದೆ ಎಂದು ಅವರಿಗೆ ಅನ್ನಿಸಿದ ಬಗ್ಗೆ ಯಾವ ಪುರಾವೆಗಳೂ ಇಲ್ಲ. ಅವರ ಮಠದ ನಾಲ್ಕಾರು ಜನ ವಿದ್ಯಾರ್ಥಿಗಳು ನನಗೆ ಶಾಲಾ ದಿನಗಳಲ್ಲಿ ಉಪಾಧ್ಯಾಯರಾಗಿ ದೊರೆತಿದ್ದರು. ಜಾತಿಪ್ರಜ್ಞೆಯೇ ಇಲ್ಲದೆ ಬದುಕುತ್ತಿದ್ದ ನನ್ನ ಬಾಲ್ಯದಲ್ಲಿ ಜಾತಿಪ್ರಜ್ಞೆಯನ್ನು ಕೆರಳಿಸಿದವರು ಇವರೇ. ರಚನಾತ್ಮಕ ಅರ್ಥದಲ್ಲಿ ಅಲ್ಲ. ಅವರ ಲಿಂಗಾಯ್ತ ಜಾತೀಯತೆಯ ಘಾಟು ನಮ್ಮ ಉಸಿರುಗಟ್ಟಿಸುವಂತಿತ್ತು. ಸಂಸ್ಕೃತ ಉಪಾಧ್ಯಾಯರೂ ಆಗಿದ್ದ, ದೊಡ್ಡಕಣ್ಣ ದೇವರು ಎಂಬ ಅಪ್ಪಟ ಕನ್ನಡ ಹೆಸರು ಪಡೆದಿದ್ದ ಒಬ್ಬ ಉಪಾಧ್ಯಾಯರಂತೂ, ನನ್ನ ದಲಿತ ಸಹಪಾಠಿಗಳನ್ನು ಎಷ್ಟು ದಾರುಣವಾಗಿ ಗೋಳು ಹೊಯ್ದುಕೊಳ್ಳುತ್ತಿದ್ದರೆಂದರೆ, ಹಲವು ಬಾರಿ ನನಗೇ ಕಣ್ಣೀರು ಬರುತ್ತಿತ್ತು. ಸಿದ್ಧಗಂಗೆ ಮಠಾಧೀಶರು ನಮ್ಮೂರಿಗೆ ಆಗಾಗ್ಗೆ ಭಿಕ್ಷಕ್ಕೆ ಬಂದು ಮಾಡುತ್ತಿದ್ದ ಸಾರ್ವಜನಿಕ ಭಾಷಣಗಳ ಎತ್ತರ ಮತ್ತು ಅಲ್ಲಿ ತಯಾರಾದ ಈ ಶಿಷ್ಯರು ಮುಟ್ಟುತ್ತಿದ್ದ ಈ ಪಾತಾಳಗಳ ಅಂತರ ಅರ್ಥವಾಗದ ನಾನು ಅನೇಕ ಸಲ ಗೊಂದಲಗಳಿಗೆ ಒಳಗಾಗುತ್ತಿದ್ದೆ.

ಇದು ಒಂದು ಮಠದ ಉದಾಹರಣೆ ಅಷ್ಟೆ. ಇನ್ನೂ ನಾಲ್ಕಾರು ಜಾತಿಗಳ ನಾಲ್ಕಾರು ಮಠಗಳಲ್ಲಿ ತಯಾರಾದ ವಿದ್ಯಾರ್ಥಿಗಳೂ ನನ್ನ ಸ್ನೇಹಿತರಾಗಿದ್ದಾರೆ. ಅವರಿಗೆ ತಮ್ಮನ್ನು `ತಯಾರು' ಮಾಡಿದ ಈ ಮಠಗಳ ಬಗ್ಗೆ ಸಾಕಷ್ಟು ಸಿಟ್ಟಿದೆ, ವಿಷಾದವಿದೆ. ಕೆಲವರಲ್ಲಿ ಭಯ ಕೂಡಾ ಇದೆ! ಹೀಗಿರುವಾಗ ನಾನು ಚಿತ್ರದುರ್ಗ ಆಕಾಶವಾಣಿಯಲ್ಲಿ ಐದು ವರ್ಷಗಳಿದ್ದ ಅವಧಿಯಲ್ಲಿ ಮುರುಘರಾಜೇಂದ್ರ ಮಠದೊಂದಿಗೆ ಸಂಪರ್ಕವೇರ್ಪಟ್ಟು, ನನಗೆ ಮಠಗಳ ಬಗ್ಗೆ ಇದ್ದ ಕಲ್ಪನೆಯೇ ಬದಲಾಯಿತೆಂದು ಹೇಳಬೇಕು. ನನ್ನ ಚಿತ್ರದುರ್ಗ ಸೇವಾವಧಿಯ ಕೊನೆಯಲ್ಲಿ ಸ್ವಾಮೀಜಿಯವರ ವೈಯಕ್ತಿಕ ಆಹ್ವಾನವನ್ನು ತಿರಸ್ಕರಿಸಲಾಗದೆ ಮಠಕ್ಕೊಮ್ಮೆ ಹೋಗಿ ಅವರ ಪ್ರೀತಿಯ `ಬೀಳ್ಕೊಡುಗೆ ಸತ್ಕಾರ'ವನ್ನು ಸ್ವೀಕರಿಸಿ ಬಂದಿದ್ದರ ಹೊರತಾಗಿ, ನಾನೆಂದೂ ಅವರ ಮಠದ ಆವರಣ ಪ್ರವೇಶಿಸಿದವನಲ್ಲ. ಅವರ ಯಾವ ಕಾರ್ಯಕ್ರಮಕ್ಕೂ - ಹಲವು ಬಾರಿ ಆಹ್ವಾನವಿದ್ದರೂ - ಅತಿಥಿಯಾಗಿ ಆಗಲಿ, ಸಭಿಕನಾಗಿಯಾಗಲಿ, ಹೋಗಿಬಂದವನಲ್ಲ. ಮಠ ಪ್ರತಿವರ್ಷ ಘೋಷಿಸುವ `ಬಸವಶ್ರೀ' ಪ್ರಶಸ್ತಿಗಾಗಿ ಅರ್ಹರನ್ನು ಮತ್ತು ನಡೆಸುವ ಶರಣ ಸಂಸ್ಕೃತಿ ಉತ್ಸವದ ಅತಿಥಿಗಳನ್ನು ನಿರ್ಣಯಿಸುವಲ್ಲಿ ಹಾಗೂ ಅವರನ್ನು ಕರೆಸುವಲ್ಲಿ ಸ್ವಾಮೀಜಿಯ ಆಪ್ತ ಬಳಗದವರು ನನ್ನ ಸಲಹೆಗಳನ್ನು, ಸಹಾಯವನ್ನು ಕೇಳುತ್ತಿದ್ದುದುಂಟು. ಮತ್ತು ಹಲವು ಬಾರಿ ನನ್ನ ಸಲಹೆಗಳನ್ನು ಅವರು ಮಾನ್ಯ ಮಾಡುತ್ತಿದ್ದುದೂ ಉಂಟು. ಹೀಗೆ ಬಸವಶ್ರೀ ಪ್ರಶಸ್ತಿ ಪಡೆದ ಮೇಧಾ ಪಾಟ್ಕರ್ ಮತ್ತು ಅಣ್ಣಾ ಹಜಾರೆ ನಮ್ಮ ಮನೆಗೂ ಬಂದು ನಮ್ಮ ಆತಿಥ್ಯ ಸ್ವೀಕರಿಸಿದ ಸೌಭಾಗ್ಯವೂ ನಮ್ಮ ಪಾಲಿನದಾಗಿತ್ತು.

ಆದರೆ ಒಂದು ಬಾರಿ ಬಸವಶ್ರೀ ಪ್ರಶಸ್ತಿಗೆ ನಿಜವಾಗಿ ಅರ್ಹರಾಗಿದ್ದ ಸಮಾಜವಾದಿ ಚಿಂತಕ ಹಾಗೂ ಹೋರಾಟಗಾರ ದಿವಂಗತ ಶ್ರೀ ಕಿಷನ್ ಪಟ್ನಾಯಕ್ ಅವರಿಗೆ, ಅವರು ಅಷ್ಟು ಪ್ರಸಿದ್ಧರಲ್ಲ ಎಂಬ ಕಾರಣದ ಮೇಲೆ ನನ್ನ ಸಲಹೆಯನ್ನು (ಇದರ ಹಿಂದೆ ದೇವನೂರು ಮಹಾದೇವರ ಶಿಫಾರಸೂ ಇತ್ತು) ತಿರಸ್ಕರಿಸಿ, ಇಂತಹ ಪ್ರಶಸ್ತಿಗಳೆಲ್ಲವನ್ನೂ ಮೀರಿ ಬೆಳೆದಿದ್ದ ದಲೈಲಾಮಾರಿಗೆ ಕೇವಲ ತಮ್ಮ ಪ್ರಸಿದ್ಧಿಗಾಗಿ ಮಠ ಬಸವಶ್ರೀ ಪ್ರಶಸ್ತಿ ನೀಡಿದಾಗ, ನನಗೆ ನಿಜವಾಗಿ ಜಿಗುಪ್ಸೆಯಾಯಿತು. ಇದು ನನ್ನನ್ನು ಎಷ್ಟು ಬೇಸರಗೊಳಿಸಿತೆಂದರೆ, ಒಂದು ವರ್ಷದ ಅವಧಿಯಲ್ಲಿ ನಾನೇ ನನ್ನ ಸಮಾಜವಾದಿ ಗೆಳೆಯರ ಸಹಕಾರದಿಂದ ಬಸವಶ್ರೀ ಪ್ರಶಸ್ತಿ ಮೊತ್ತವಾದ ಒಂದು ಲಕ್ಷ ರೂಪಾಯಿಗಳಿಗೂ ಮೀರಿ ಹಣ ಸಂಗ್ರಹಿಸಿ, ಶಿವಮೊಗ್ಗದಲ್ಲಿ ಕಿಷನ್ ಪಟ್ನಾಯಕ್ ಅಭಿನಂದನಾ ಸಮಾರಂಭ ಏರ್ಪಡಿಸಿ ಅವರಿಗೆ ಅರ್ಪಿಸಿದಾಗಲೇ ನನಗೆ ಸಮಾಧಾನವಾಗಿದ್ದು!

ಮುರುಘಾ ಮಠಾಧೀಶರಿಗೆ ಪ್ರಸಿದ್ಧಿಯ ಹಪಾಹಪಿ ಎನ್ನುತ್ತಾರೆ. ಆದರೆ ಇದು ಯಾವ ಮಠಾಧೀಶರಿಗಿಲ್ಲ? ಹೋದ ಕಡೆಗೆಲ್ಲ ತಾವು ಸಾಕಿದ ಪತ್ರಿಕಾ ಛಾಯಾಗ್ರಾಹಕರನ್ನೂ, ವರದಿಗಾರರನ್ನೂ ಕರೆದುಕೊಂಡು ಹೋಗುವ ಮಠಾಧೀಶರೆಷ್ಟಿಲ್ಲ? ಮುರುಘರಾಜೇಂದ್ರ ಶರಣರಿಗೆ ಪ್ರಸಿದ್ಧಿಯ ಹಂಬಲವಿದ್ದರೆ, ಅದಿರುವುದು ತಾವು ತುಳಿಯುತ್ತಿರುವ ವಿಭಿನ್ನ ಹಾದಿಗೆ ಜನಬೆಂಬಲ ಗಳಿಸಿಕೊಳ್ಳಬೇಕೆಂಬುದೇ ಕಾರಣ ಎಂದು ನಾನು ಭಾವಿಸಿದ್ದೇನೆ. ಆದರೂ ಇದಕ್ಕಾಗಿ ಒಮ್ಮೊಮ್ಮೆ ಅವರು ದುಡುಕಿನ ಹೆಜ್ಜೆಗಳನ್ನಿಡುವುದೂ ಉಂಟು ಎಂದು ನನಗನ್ನಿಸಿದೆ. ಅವರು ತಾವು ಏರ್ಪಡಿಸುವ ಸಮಾರಂಭಗಳನ್ನು, ದೀಪ ಬೆಳಗಿಸುವುದು ವೈದಿಕ ಸಂಪ್ರದಾಯವೆಂದು ಬೇರೆ ರೂಪಗಳಲ್ಲಿ - ಉದಾ: ಗಿಡಕ್ಕೆ ನೀರೆರೆಯುವುದು - ಉದ್ಘಾಟಿಸುವ ವ್ಯವಸ್ಥೆ ಮಾಡುವುದು, ಸಾರ್ವಜನಿಕ ಸ್ಥಳಗಳಲ್ಲಿನ ಮೂರ್ತಿಗಳಿಗೆ ಚಪ್ಪಲಿ ಹಾರ ಹಾಕುವ ಇತ್ತೀಚಿನ ಕಿಡಿಗೇಡಿ ಕಾರ್ಯಗಳನ್ನು, ಚಪ್ಪಲಿ ಹಾರವೂ ಶ್ರೇಷ್ಠ ಎಂದು ವಿವರಿಸಿ ಸಮನ್ವಯಗೊಳಿಸುವ ಪ್ರಯತ್ನ ಮಾಡುವುದು ಇತ್ಯಾದಿಗಳನ್ನು ಅತಿ ವೈಚಾರಿಕತೆಯ ವ್ಯಾಖ್ಯಾನಗಳೆಂದೇ ಕರೆಯಬೇಕಾಗುತ್ತದೆ.

ಮಠ ವ್ಯವಸ್ಥೆಯ ನಿಜವಾದ ದುರಂತವೆಂದರೆ ಅವು ಹುಟ್ಟಿನಿಂದಲೇ sectarian ಆಗಿರುವುದು. ಹಾಗೇ, ತಮ್ಮ ಜಾತಿ ಅಥವಾ ಜನಾಂಗದ `ತತ್ವಜ್ಞಾನ'ವನ್ನು ಆತ್ಯಂತಿಕ ಸತ್ಯವೆಂದು ನಂಬಿರುವ ಅವು, ತಮ್ಮ ಜಾತಿ - ಜನಾಂಗಗಳ `ತತ್ವಜ್ಞಾನ' ಉದಯಿಸಿದ ನಂತರ ತತ್ವಜ್ಞಾನ ಅಪಾರವಾಗಿ ಹಲವು ದಿಕ್ಕುಗಳಲ್ಲಿ ಬೆಳೆದಿದೆ, ಹಲವು ಹೊಸ ಸತ್ಯಗಳನ್ನು ಆವಿಷ್ಕರಿಸಿದೆ; ಅವುಗಳ ತಿಳುವಳಿಕೆ ಪಡೆದು ತಮ್ಮ ಮಠ ಅಥವಾ ಜಾತಿಯ ತತ್ವಜ್ಞಾನವನ್ನು ಪುನರೂಪಿಸಿಕೊಳ್ಳಬೇಕಿದೆ ಅಥವಾ ಪುರ್ನವ್ಯಾಖ್ಯಾನಗಳಿಗೆ ಒಳಪಡಿಸಬೇಕಿದೆ ಎಂಬ ಅರಿವೇ ಉಂಟಾಗದಂತೆ ಮಠದ ವ್ಯವಸ್ಥೆ ಮತ್ತು ಅದರ ಸುತ್ತಲಿನ ವಾತಾವರಣವನ್ನು ಕಟ್ಟಿಕೊಂಡಿರುವುದು. ಆಧುನಿಕತೆಯ ಎಲ್ಲ ಲೌಕಿಕ ಸೌಲಭ್ಯಗಳನ್ನು - ಭದ್ರವಾದ, ಸುಂದರವಾದ, ತಾಂತ್ರಿಕವಾಗಿ ಸುಸಜ್ಜಿತವಾದ ಕಟ್ಟಡಗಳು, ಹೈಟೆಕ್ ಕಾರುಗಳು ಇತ್ಯಾದಿ - ದೊರಕಿಸಿಕೊಳ್ಳಲು ಹಿಂಜರಿಯದ ಮಠಾಧೀಶರು ತಮ್ಮ ವಿಚಾರಗಳನ್ನು ಆಧುನೀಕರಿಸಿಕೊಳ್ಳಲು ಮಾತ್ರ ಏಕೋ ಹಿಂಜರಿಯುತ್ತಾರೆ!

ಮುರುಘ ರಾಜೇಂದ್ರ ಶರಣರಲ್ಲಿ ನಾನು ಕಂಡ ಒಂದು ದೊಡ್ಡ ಕೊರತೆಯೆಂದರೆ, ವಚನ ಸಾಹಿತ್ಯದಾಚೆಗೂ ಜ್ಞಾನ ದಿಗಂತಗಳಿವೆ ಎಂದು ನಂಬಲು ನಿರಾಕರಿಸಿರುವುದು ಮತ್ತು ಇತರ ಜ್ಞಾನ ಕ್ಷೇತ್ರಗಳ ಗ್ರಂಥಗಳನ್ನು ಓದದಿರುವುದು. ಇದರ ಬಗ್ಗೆ ಒಂದೆರಡು ಬಾರಿ, ಆಕಾಶವಾಣಿ ಕಾರ್ಯಕ್ರಮಗಳನ್ನು ನೀಡಲು ಬಂದಾಗ ಅವರ ಬಳಿಯೇ ಪ್ರಸ್ತಾಪಿಸಿ, ಕೆಲವು ಪುಸ್ತಕಗಳನ್ನು ಸ್ವತಃ ನಾನೇ ಕೊಂಡು ನೀಡಿದ್ದೇನೆ. ಆದರೆ ಅವರು ಓದಿದಂತಿಲ್ಲ. ಬದಲಿಗೆ, ಇತರ ದೃಷ್ಟಿಕೋನಗಳ ಪುಸ್ತಕಗಳನ್ನು ಓದಿದರೆ ತಮ್ಮ ದೃಷ್ಟಿಕೋನ ವಿಚಲಿತವಾಗಿಬಿಡಬಹುದೆಂಬ ಆತಂಕ ವ್ಯಕ್ತಪಡಿಸಿ ನನ್ನನ್ನು ದಂಗು ಬಡಿಸಿದರು.! ಆದರೆ, ಜ್ಞಾನದ ಹಸಿವೇ ದೊಡ್ಡ ಹಸಿವು. ಆ ಹಸಿವಿನ ಭಾಗವಾಗಿಯೇ ಪರಿವರ್ತನೆಯಾಗಬೇಕು ಎಂದು ಭಾವಿಸುವ ನಾವು, ಬಹಳ ಬಾರಿ ಪರಿವರ್ತನೆಯ ಕೆಲಸವನ್ನು ಮರೆತುಬಿಟ್ಟಿರುವುದೇ ಹೆಚ್ಚು! ಹಾಗಾಗಿ ನನ್ನ ದಂಗಿನ ಹೊರತಾಗಿಯೂ ಸಾಮಾಜಿಕ ಪರಿವರ್ತನೆಯ ಕೆಲಸಕ್ಕೆ ಆದ್ಯತೆ ನೀಡಿರುವ ಶರಣರ ಬಗ್ಗೆ ನನ್ನ ಪ್ರೀತಿ - ಗೌರವ ಹಾಗೇ ಉಳಿದಿದೆ.

ಈ ಪ್ರೀತಿ ಗೌರವಗಳ ಭಾಗವಾಗಿಯೇ, ಈ ವರ್ಷದ ಅಕ್ಟೋಬರ್ನಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದ ಭಾಗವಾಗಿ ನನ್ನನ್ನು ಮತ್ತು ನನ್ನ ಪತ್ನಿಯನ್ನು ಮುರುಘಾ ಮಠ `ಅಂತರ್ಜಾತೀಯ ಮದುವೆಗಳು ಮತ್ತು ಸಾಮಾಜಿಕ ಪರಿವರ್ತನೆ' ಎಂಬ ಸಂವಾದ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ನಾವು ಆಹ್ವಾನವನ್ನು ನಿರಾಕರಿಸದೆ ಹೋಗಬೇಕಾಯಿತು. ಜೊತೆಗೆ ಅಂದೇ ಮಠ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಗೆಳೆಯ ದೇವನೂರ ಮಹಾದೇವ ಅವರ ಮಗಳು ಮಿತಾಳ ವಿವಾಹವೂ ಸೇರ್ಪಡೆಯಾಗಿದ್ದುದು, ನಾವು ಆಹ್ವಾನವನ್ನು ಒಪ್ಪಲು ಕಾರಣವಾಗಿದ್ದಿರಬಹುದು. ಇದು ನಾನು ಭಾಗವಹಿಸಿದ ಮೊದಲ ಶರಣ ಸಂಸ್ಕೃತಿ ಉತ್ಸವ. ನಾನು ಈವರೆಗೆ ಇದರಲ್ಲಿ ಭಾಗವಹಿಸಿದಿದ್ದುದಕ್ಕೆ ಕಾರಣ, ಇದು ಸಂತೆಯ ರೀತಿಯಲ್ಲಿ ನಡೆಯುವುದೆಂದು; ಭಕ್ತರ ಹೆಸರಲ್ಲಿ ಕಳ್ಳ ಅಧಿಕಾರಿಗಳೂ, ಸುಳ್ಳ ರಾಜಕಾರಣಿಗಳೂ ಸೇರಿದಂತೆ ಎಲ್ಲ ರೀತಿಯ ಅಂಡ - ಭಂಡರು ಇದರಲ್ಲಿ ಸೇರಿಕೊಂಡು, ಶರಣರು ವರ್ಷಪೂರ್ತಿ ಪ್ರತಿಪಾದಿಸುವ ಜನಪರ ವಿಚಾರ ಪ್ರಣಾಲಿಯ ರುಚಿಯನ್ನೇ ಕೆಡಿಸುವರೆಂದು. ನಾನು ಈ ಹಿಂದೆ ಸೂಚಿಸಿದ ಮಠವ್ಯವಸ್ಥೆಯ ಮೂಲದಲ್ಲೇ ಇರುವ ದುರಂತವಿದು. ಆಳುವ ಪ್ರಭುಗಳನ್ನು - ಇವರಲ್ಲಿ ಬರೀ ರಾಜಕಾರಣಗಳೇ ಅಲ್ಲದೆ, ಅಧಿಕಾರಿಗಳು, ಉದ್ಯಮಿಗಳು, ಕಂತ್ರಾಟುದಾರರು, ಧರ್ಮಾಧಿಕಾರಿಗಳು, ಸಾಹಿತ್ಯ ಪುಢಾರಿಗಳೂ ಸೇರಿರುತ್ತಾರೆ - ದೂರವಿಟ್ಟು ಮಠ ಕೆಲಸ ಮಾಡಲಾರದು! ಕನಿಷ್ಠ ಆ ಶಕ್ತಿಯನ್ನು ಚಿತ್ರದುರ್ಗದ ಮುರುಘಾಮಠ ಇನ್ನೂ ಗಳಿಸಿಕೊಂಡಿಲ್ಲವೆಂದೇ ಹೇಳಬೇಕು. ಏಕೆಂದರೆ ಆ ಶಕ್ತಿ ಗಳಿಸಿಕೊಂಡೊಡನೆ ಅದು ಮಠವಾಗಿ ಉಳಿದಿರಲಾರದು!

ನಾನು ಅಂದು ಸಾಮೂಹಿಕ ವಿವಾಹ ಸಮಾರಂಭದ ಬಳಿಗೆ ಹೋದಾಗ, ಶರಣರು ಭಾಷಣ ಮಾಡುತ್ತಿದ್ದರು. ಅವರು ತಾವು ಪ್ರತಿ ತಿಂಗಳು ಏರ್ಪಡಿಸುತ್ತಿರುವ ಇಂತಹ ಸಾಮೂಹಿಕ ವಿವಾಹ ಸಮಾರಂಭಗಳ ಮಹತ್ವ ಮತ್ತು ವೈಶಿಷ್ಟ್ಯವನ್ನು ವಿವರಿಸುತ್ತಿದ್ದರು. ಅದರ ಕೆಲವು ಅಂಶಗಳು ನನ್ನನ್ನು ಬೆರಗುಗೊಳಿಸಿದವು. ಅವರು ರಾಹುಕಾಲದಲ್ಲಿ ವಿವಾಹ ಮಾಡಿಸುವರು. ಯಾವ ಪುರೋಹಿತನ ಮಧ್ಯಸ್ಥಿಕೆ ಇಲ್ಲದೆ, ಯಾವ ಶಾಸ್ತ್ರಭಾರಗಳಿಲ್ಲದೆ ಅಂತರ್ಜಾತೀಯ ಮತ್ತು ವಿಧವಾ ವಿವಾಹಗಳೂ ಸೇರಿದಂತೆ ಅನೇಕ ಸಾಮಾನ್ಯ ಕುಟುಂಬಗಳ ವಿವಾಹಗಳನ್ನು ಅವರು ನಡೆಸಿದ್ದಾರೆ. ಇಂತಹ ವಿದ್ಯಮಾನಗಳು ಮಠವೊಂದರಲ್ಲಿ ನಡೆಯುವುದು ದೊಡ್ಡ ವಿಷಯವೇ ನಿಜ. ಆದರೆ ಅಂದು ನನಗೆ ಅದಕ್ಕಿಂತ ದೊಡ್ಡ ವಿಷಯವೆನಿಸಿದ್ದು, ಶರಣರ ಈ ಭಾಷಣವನ್ನು ಜನಸಾಮಾನ್ಯರಿಂದಲೇ ತುಂಬಿ ತುಳುಕುತ್ತಿದ್ದ ಆ ಸಭೆ ಪದೇಪದೇ ಚಪ್ಪಾಳೆ ತಟ್ಟಿ ಸ್ವಾಗತಿಸುತ್ತಿದ್ದುದು! ಅಂದಿನ ಸಮಾರಂಭದಲ್ಲಿ ಮಿತಾ ದಂಪತಿಗಳೂ ಸೇರಿದಂತೆ, ನಾಲ್ಕೈದು ಅಂತರ್ಜಾತಿ ಜೋಡಿಗಳಿದ್ದವು. ಶರಣರು ಅವರನ್ನೆಲ್ಲ ಎದ್ದು ನಿಲ್ಲಿಸಿ, ಈ ಜೋಡಿಗಳ ಕಡೆ ವಿಶೇಷ ಗಮನ ಸೆಳೆದರು. ಪರೋಕ್ಷವಾಗಿ, ಜಾತಿ ಮೀರಿದ ವಿವಾಹಗಳಿಗೆ ತಮ್ಮ ವಿಶೇಷ ಪ್ರೋತ್ಸಾಹ ಎಂಬುದನ್ನು ಸೂಚಿಸಿದರು. ನಮ್ಮ ಎಷ್ಟು ಜನ ಮಠಾಧಿಪತಿಗಳಿಗೆ ಸಾರ್ವಜನಿಕವಾಗಿ ಹೀಗೆ ಘೋಷಿಸುವ ನೈತಿಕ ಧೈರ್ಯವಿದೆ? ಅದೂ, ವಿಧವಾ ವಿವಾಹ ಮತ್ತು ಅಂತರ್ಜಾತಿ ವಿವಾಹಗಳಿಗೆ ಶಾಸ್ತ್ರ ಸಮ್ಮತಿ ಇಲ್ಲದಿರುವುದರಿಂದ ಅವುಗಳನ್ನು ಪ್ರೋತ್ಸಾಹಿಸಲಾರೆ ಎಂದು ಹೇಳುವಂತಹ ಮಠಾಧೀಶರೊಬ್ಬರು ಇಂದು ಮತಾಂತರದ ಹುಯ್ಲಿನಲ್ಲಿ ನಮ್ಮ ಮಠಾಧಿಪತಿಗಳ ನೇತೃತ್ವ ವಹಿಸುತ್ತಿರುವಾಗ!

ಮಧ್ಯಾಹ್ನ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅಂತರ್ಜಾತಿ ವಿವಾಹಿತರಾದ ನಾವು ನಾಲ್ಕೈದು ಜನ ದಂಪತಿಗಳು ಭಾಗವಹಿಸಿದ್ದೆವು. ನಮ್ಮೊಂದಿಗೆ ಇಂದಿರಾ ಕೃಷ್ಣಪ್ಪ ಸೇರಿದಂತೆ, ರವಿವರ್ಮಕುಮಾರ್, ಬಂಜಗೆರೆ ಜಯಪ್ರಕಾಶ್ ದಂಪತಿಗಳು ಮತ್ತು ಕಾರ್ಯಕ್ರಮ ನಡೆಸಿಕೊಟ್ಟ ಸ್ವಾಮಿ ಆನಂದ್ ಭಾಗವಹಿಸಿದ್ದರು. ಎಲ್ಲರೂ ಅಂತರ್ಜಾತಿ ವಿವಾಹದ ತಂತಮ್ಮ ಕಷ್ಟ ಸುಖಗಳನ್ನು ಅಲ್ಲಿ ತಂದೆ ತಾಯಿಗಳೇ ಹೆಚ್ಚಿದ್ದ ಸಭಿಕರೊಂದಿಗೆ ಹಂಚಿಕೊಂಡರು. ಎಲ್ಲರ ಮನವಿ ಒಂದೇ: ನಿಮ್ಮ ಮಕ್ಕಳನ್ನು ಜಾತಿ ವಾತಾವರಣದಿಂದ ಮುಕ್ತಗೊಳಿಸಿ ಬೆಳೆಸಿ ಹಾಗೂ ನಿಮ್ಮ ಮಕ್ಕಳು ಜಾತಿ ಮೀರಿ ಮದುವೆಯಾಗ ಬಯಸಿದರೆ, ಅವರಿಗೆ ತೊಂದರೆ ಕೊಡದೆ ನೀವೇ ನಿಂತು ಮದುವೆ ಮಾಡಿಸಿ. ಅದರಿಂದ ಸಮಾಜಕ್ಕೂ, ರಾಷ್ಟ್ರಕ್ಕೂ ಒಳಿತಿದೆ, ಸುಖವಿದೆ. ನಾನು ಹೇಳಿದ್ದು: ಜಾತಿ ಬಿಡುಗಡೆಯ ಸುಖ ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು. ಅದು ಎಷ್ಟೊಂದು ನೆಲೆಗಳ ಬಂಧನಗಳಿಂದ ಬಿಡುಗಡೆ! ಇದು ಭಾರತದಲ್ಲಿ ಎಲ್ಲ ಬಿಡುಗಡೆಗಳಿಗಿಂತ ದೊಡ್ಡ ಬಿಡುಗಡೆ ಮತ್ತು ಎಲ್ಲ ಬಿಡುಗಡೆಗಳ ನಾಂದಿ ಬಿಡುಗಡೆ. ಅಂತರ್ಜಾತಿ ವಿವಾಹಗಳ ನಿರ್ಧಾರಗಳ ಹಿಂದೆ ಪ್ರೀತಿ ಮತ್ತು ವೈಚಾರಿಕತೆ ಎರಡೂ ಇರಬೇಕು. ಯಾವೊಂದಿಲ್ಲದಿದ್ದರೂ, ಅವು ತಮ್ಮ ಉದ್ದೇಶಗಳಲ್ಲಿ - ಸಂಪೂರ್ಣ ಸಾಮಾಜಿಕ ಬಿಡುಗಡೆಯಲ್ಲಿ ವಿಫಲವಾಗುವ ಸಾಧ್ಯತೆ ಇದೆ. ಇಂದು ನಮ್ಮ ಸಾಮಾಜಿಕ ನ್ಯಾಯ ಚಳುವಳಿ, ಇಂತಹ ಪ್ರೀತಿ ಮತ್ತು ವೈಚಾರಿಕತೆಗಳನ್ನು ಆಧರಿಸಿದ ಅಂತರ್ಜಾತಿ ವಿವಾಹಗಳನ್ನು ತನ್ನ ಒಂದು ಭಾಗವನ್ನಾಗಿ ಮಾಡಿಕೊಳ್ಳದಿರುವುದೇ, ಅದು ಒಂದು ಜಾತೀಯ ಚಳುವಳಿಯಾಗಿ ಅವನತಿಗೊಳ್ಳಲು ಕಾರಣವಾಗಿರುವುದು.

ಈ ಹಿನ್ನೆಲೆಯಲ್ಲಿ ನನ್ನ ಅಸಮಧಾನವೊಂದನ್ನು ತೋಡಿಕೊಳ್ಳುತ್ತಾ, ಶರಣರು ಜಾತಿಗೊಂದು ಮಠ ಮತ್ತು ಮಠಾಧೀಶರನ್ನು ತಯಾರು ಮಾಡುತ್ತಿರುವುದು ವಿಷಾದನೀಯ ಎಂದೆ. ಶರಣರೇನೋ ಈ ಬಗ್ಗೆ ತಮಲ್ಲಿ ಪುನರಾಲೋಚನೆಗೆ ಅವಕಾಶವಿದೆ ಎಂಬಂತೆ ತಲೆಯಲ್ಲಾಡಿಸಿದರು. ಆದರೆ ಆದಿಜಾಂಬವರ ಮಠದ ಸ್ವಾಮೀಜಿ ಕೊನೆಯಲ್ಲಿ ಮಾತನಾಡುತ್ತಾ, ತಮ್ಮ ಅತಿ ಅಸ್ಪೃಶ್ಯ ಜಾತಿಗೆ ಮಠದ ಆವರಣದಲ್ಲಿ ಮಾನ್ಯತೆ ನೀಡಿ ತಮ್ಮನ್ನು ಸಮಾನ ಗೌರವದಿಂದ ನೋಡಿಕೊಳ್ಳುತ್ತಿರುವುದು ನಿಜವಾದ ಪ್ರಗತಿಯ ಹೆಜ್ಜೆಯೇ ಎಂದು ಪ್ರತಿಪಾದಿಸಿದಾಗ, ನನಗೆ ಶರಣರು ಈ ಮೂಲಕ ಮಾಡುತ್ತಿರುವುದು ಹಿರಿದಾದ ಅರ್ಥದಲ್ಲಿ ಒಂದು ದೊಡ್ಡ ಅಂತರ್ಜಾತಿ `ವಿವಾಹ'ವೇ ಎನ್ನಿಸದಿರಲಿಲ್ಲ. ಆದರೆ ಇಲ್ಲಿಗೇ ತೃಪ್ತಿಪಟ್ಟುಕೊಂಡು, ಇದನ್ನು ಜಾತಿನಾಶ ಕಾರ್ಯಕ್ರಮದ ನೆಲೆಯಲ್ಲಿ ವಿಸ್ತರಿಸದೇ ಹೋದರೆ ಒಂದು ದೊಡ್ಡ ಜಾತಿ ವಿಷವ್ಯೂಹವನ್ನೇ ನಿರ್ಮಿಸಿದ ಆರೋಪಕ್ಕೆ ಶರಣರು ಗುರಿಯಾಗಬೇಕಾಗುತ್ತದೆ ಎಂದೂ ಎನ್ನಿಸಿತು.

ಇದನ್ನು ಶರಣರಿಗೆ ತಿಳಿಸಿದಾಗ, ಅವರು `ನೀವೆಲ್ಲ ನಮ್ಮ ಜೊತೆ ಇದ್ದರೆ ಎಲ್ಲ ಸರಿ ಹೊಂದುತ್ತದೆ' ಎಂದರು. ಈಗ ಉತ್ತರಿಸುವ ಹೊಣೆ ನನ್ನದಾಗಿತ್ತು! ನಾನು ನಿಜವಾಗಿಯೂ ಕಷ್ಟಕ್ಕೆ ಸಿಲುಕಿದ್ದೆ..