ಮಡೆನೂರು ಮಾಡಿದ ಮೋಡಿ
ಮೇ ೨೦೦೩ರಲ್ಲಿ ವಿಜಯ ಕರ್ನಾಟಕದಲ್ಲಿ ಮಡೆನೂರು ಅಣೆಕಟ್ಟಿನ ಬಗ್ಗೆ ಲೇಖನ ಬಂದಿತ್ತು. ಕೆಲವು ದಿನಗಳ ಬಳಿಕ ದ ಹಿಂದೂ ಪತ್ರಿಕೆಯಲ್ಲೂ ಮಡೆನೂರು ಅಣೆಕಟ್ಟಿನ ಬಗ್ಗೆ ಲೇಖನ ಬಂದಾಗ 'ನೋಡೇಬಿಡಾಣ...' ಎಂದು ನಿರ್ಧಾರ ಮಾಡಿ ನನ್ನ ಪ್ರಥಮ ಜರ್ನಿಗೆ ಅಣಿಯಾದೆ. ಸಹೋದ್ಯೋಗಿ ಪ್ರಶಾಂತ್ ಬರಲು ಒಪ್ಪಿಕೊಂಡ.
ಮಡೆನೂರು ಅಣೆಕಟ್ಟಿನ ಬಗ್ಗೆ ಒಂದಿಷ್ಟು: ಮಡೆನೂರು ಅಣೆಕಟ್ಟನ್ನು ಶರಾವತಿಯ ಉಪನದಿ ಎಣ್ಣೆಹೊಳೆಗೆ ಅಡ್ಡಲಾಗಿ ೧೯೩೯ರಲ್ಲಿ ನಿರ್ಮಿಸಲು ಆರಂಭಿಸಿ ೧೯೪೮ರಲ್ಲಿ ಪೂರ್ಣಗೊಳಿಸಲಾಗಿತ್ತು. ಜೋಗದಿಂದ ನದಿಗುಂಟ ೨೦ಕಿಮಿ ಮೇಲ್ಭಾಗದಲ್ಲಿರುವ ಈ ಅಣೆಕಟ್ಟಿನ ಪ್ರಮುಖ ಉದ್ದೇಶ ಜೋಗದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ನೀರು ಸರಬರಾಜು ಮಾಡುವುದಾಗಿತ್ತು. ೨ನೇ ಫೆಬ್ರವರಿ ೧೯೪೮ಕ್ಕೆ ವಿದ್ಯುತ್ ಉತ್ಪಾದನಾ ಕೇಂದ್ರ ಮತ್ತು ಅಣೆಕಟ್ಟಿನ ಉದ್ಘಾಟನೆ ನಡೆಯಬೇಕಿತ್ತು ಆದರೆ ಮಹಾತ್ಮಾ ಗಾಂಧಿಯವರ ನಿಧನದಿಂದ ನಡೆಯಲಿಲ್ಲ. ಕೃಷ್ಣರಾಜೇಂದ್ರ ಒಡೆಯರ್ ಹೈಡ್ರೊಎಲೆಕ್ಟ್ರಿಕ್ ಪ್ರೊಜೆಕ್ಟ್ ಎಂದು ನಾಮಕರಣ ಮಾಡಿದ್ದ ವಿದ್ಯುತ್ ಉತ್ಪಾದನಾ ಕೆಂದ್ರವನ್ನು ಮಹಾತ್ಮಾ ಗಾಂಧಿ ಹೈಡ್ರೊಎಲೆಕ್ಟ್ರಿಕ್ ಪ್ರೊಜೆಕ್ಟ್ ಎಂದು ಮರುನಾಮಕರಣ ಮಾಡಿ, ಮಡೆನೂರು ಅಣೆಕಟ್ಟಿನೊಂದಿಗೆ ೨೧ನೇ ಫೆಬ್ರವರಿ ೧೯೪೯ರಲ್ಲಿ ಉದ್ಘಾಟಿಸಲಾಯಿತು. ನಂತರ ೬೦ರ ದಶಕದಲ್ಲಿ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾದಾಗ ಅದರ ಅಗಾಧ ಹಿನ್ನೀರಿನಲ್ಲಿ ಮಡೆನೂರು ಅಣೆಕಟ್ಟು ತನ್ನ ಪ್ರಾಮುಖ್ಯತೆ ಮತ್ತು ಅಸ್ತಿತ್ವ ಎರಡನ್ನೂ ಕಳಕೊಂಡು ಮುಳುಗಿಹೋಯಿತು. ಲಿಂಗನಮಕ್ಕಿ ತನ್ನ ಗರಿಷ್ಟ ಮಟ್ಟ ೧೮೧೯ ಅಡಿ ತಲುಪಿದಾಗ ಮಡೆನೂರು ಅಣೆಕಟ್ಟಿನ ಮೇಲೆ ೧೫ ಅಡಿ ನೀರು ನಿಂತಿರುತ್ತದೆ.
ಸಾಗರದಿಂದ ೩೨ಕಿಮಿ ದೂರದಲ್ಲಿದೆ ಹೊಳೆಬಾಗಿಲು. ಈ ದಾರಿಯಲ್ಲಿ ೩೦ಕಿಮಿ ಕ್ರಮಿಸಿದ ಬಳಿಕ ಬಲಕ್ಕೆ ಸಿಗುವ ಅರಣ್ಯ ಇಲಾಖೆಯ ದ್ವಾರದೊಳಗೆ ತಿರುವು ತಗೊಂಡು ೬ಕಿಮಿ ಕ್ರಮಿಸಿದರೆ ಅಣೆಕಟ್ಟು ಇರುವ ಸ್ಥಳ ತಲುಪಬಹುದೆಂದು ಎರಡೂ ಲೇಖನಗಳು ತಿಳಿಸಿದ್ದರಿಂದ, ಸಾಗರಕ್ಕೆ ಹೋಗಿಯೇ ಮಡೆನೂರು ಅಣೆಕಟ್ಟಿರುವ ಸ್ಥಳಕ್ಕೆ ತೆರಳಬೇಕೆಂದು ಗ್ರಹಿಸಿ, ಭಟ್ಕಳ ಮುಖಾಂತರ ಸಾಗರಕ್ಕೆ ತೆರಳುವ ನಿರ್ಧಾರ ಮಾಡಿದೆ. ಭಟ್ಕಳ - ಸಾಗರ ಅಂತರ ಹೆಚ್ಚೆಂದರೆ ೫೦ಕಿಮಿ ಇರಬಹುದೆಂದು ಗೆಸ್ ಮಾಡಿ ಜೂನ್ ೧, ೨೦೦೩ರ ಬೆಳಗ್ಗೆ ೭ಕ್ಕೆ ಉಡುಪಿಯಿಂದ ರಿಲ್ಯಾಕ್ಸ್ ಆಗಿ ಹೊರಟೆವು. ಭಟ್ಕಳದಿಂದ ಸಾಗರ ದಾರಿಯಲ್ಲಿ ಕೇವಲ ೧ಕಿಮಿ ಸಾಗಿದ್ದೇವಷ್ಟೆ, ಆಲ್ಲೊಂದು ದಾರಿಸೂಚಿಯಲ್ಲಿ ಬರೆದಿತ್ತು 'ಸಾಗರ - ೧೧೦ಕಿಮಿ' ಎಂದು! ರಾತ್ರಿ ಉಡುಪಿ ತಲುಪುವಾಗ ಮಧ್ಯರಾತ್ರಿ ದಾಟಬಹುದು ಎಂದು ತಿಳಿದು ಮುಂದುವರಿಸುವ ನಿರ್ಧಾರ ಮಾಡಿದೆವು. ಈ ಕೋಗಾರ ಘಟ್ಟದ ರಸ್ತೆ ಬಹಳ ಕೆಟ್ಟಿತ್ತು. ಸುಡು ಬಿಸಿಲು ಬೇರೆ. ೪೫ಕಿಮಿ ಬಳಿಕ ರಸ್ತೆಯಿಂದ ೨ಕಿಮಿ ಒಳಗೆ ತೆರಳಿ ಭೀಮೇಶ್ವರದಲ್ಲಿರುವ ಸುಂದರ ಶಿವ ದೇವಾಲಯಕ್ಕೆ ಭೇಟಿ ನೀಡಿದೆವು.
ಸಾಗರ ತಲುಪಿದಾಗ ಸಮಯ ೩.೪೫ ಮತ್ತು ಕ್ರಮಿಸಿದ ದಾರಿ ೨೦೬ಕಿಮಿ. ೪.೪೦ಕ್ಕೆ ಅರಣ್ಯ ಇಲಾಖೆಯ ದ್ವಾರದ ಬಳಿ ಬಂದಾಗ ೭ ಬೈಕುಗಳಲ್ಲಿ ೧೪ ಯುವಕರು ಮುಚ್ಚಿದ ದ್ವಾರದ ಒಳಗೆ ನುಗ್ಗಲು ತಯಾರಾಗಿ ನಿಂತಿದ್ದರು. ಅವರಲ್ಲೊಬ್ಬ ಹೊಳೆಬಾಗಿಲಿನಿಂದ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬನನ್ನು ತನ್ನ ಬೈಕಿನಲ್ಲಿ ಕರೆದುಕೊಂಡು ಬರುವುದಕ್ಕೂ, ನಾವು ಅಲ್ಲಿ ತಲುಪುವುದಕ್ಕೂ ಸರಿಹೋಯಿತು. ಒಳಗೆ ತೆರಳಲು ಹೊಳೆಬಾಗಿಲಿನಲ್ಲಿರುವ ಅರಣ್ಯ ಇಲಾಖೆಯ ಕಛೇರಿಯಿಂದ ಅನುಮತಿ ಪಡೆಯಬೇಕೆಂದು ನಮಗೆ ತಿಳಿದಿರಲಿಲ್ಲ. ಗೇಟು ತೆರೆದ ಆ ಸಿಬ್ಬಂದಿ, ನಾವೂ ಅದೇ ಗುಂಪಿನವರಿರಬಹುದೆಂದು ನಮ್ಮನ್ನೂ ಒಳಬಿಟ್ಟ. ಸಮ್ ಲಕ್!
ಈ ೬ಕಿಮಿ ದಾರಿ ಕಚ್ಚಾ ರಸ್ತೆ. ೪ಕಿಮಿ ಬಳಿಕ ರಸ್ತೆಯ ಮಧ್ಯದಲ್ಲೇ ಒಂದು ದೊಡ್ಡ ಮರ. ಅದಕ್ಕೊಂದು ಕಟ್ಟೆ. ಕಟ್ಟೆಯ ಮೇಲೆ ಬರೆದಿತ್ತು 'ಮಡೆನೂರು ಸಂತೆ ನಡೆಯುತ್ತಿದ್ದ ಸ್ಥಳ'. ಆಗಿನ ಮಡೆನೂರು ಹಳ್ಳಿಯೊಳಗಿನ ಪ್ರಮುಖ ವೃತ್ತ ಇದಾಗಿತ್ತು. ನಮ್ಮೊಂದಿಗಿದ್ದ ಬೈಕ್ ಯುವಕರು ಮುಂದೆ ಹೋಗಿದ್ದರಿಂದ ಅಲ್ಲಿ ನಾವಿಬ್ಬರೆ. ನೀರವ ಮೌನ. ತರಗೆಲೆಗಳಿಂದ ಆವೃತವಾಗಿದ್ದ ನೆಲ. ಬಲಕ್ಕೊಂದು ಕಲ್ಲು, ಹುಲ್ಲು, ಮುಳ್ಳುಗಳಿಂದ ಮುಚ್ಚಿಹೋಗಿದ್ದ ಕವಲೊಡೆದ ದಾರಿ. ಈ ದಾರಿಯಲ್ಲಿ ಸ್ವಲ್ಪ ದೂರ ನಡೆದು, ಆ ಮೌನ ಹೆದರಿಕೆ ಹುಟ್ಟಿಸುತ್ತಿದ್ದರಿಂದ ಮುಂದೆ ಸಾಗಲು ಧೈರ್ಯ ಸಾಲದೆ ಮರಳಿ ಕಟ್ಟೆ ಮೇಲೆ ಬಂದು ಕೂತೆವು. ಆಗಿನ ಕಾಲದಲ್ಲಿ ಅದು ಮಡೆನೂರಿನಿಂದ ತಾಳಗುಪ್ಪಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿತ್ತು ಎಂದು ಎಲ್ಲೋ ಓದಿದ ನೆನಪು.
ಕಟ್ಟೆ ಮೇಲೆ ಕುಳಿತು ಸಂತೆ ಹೇಗೆ ಕಾಣುತ್ತಿರಬಹುದೆಂದು ಮಾತನಾಡತೊಡಗಿದೆವು. ನನಗಂತೂ ಆಗಿನ ಕಾಲದ ದಿರಿಸು ಧರಿಸಿದ್ದ ಜನರು 'ಏನು ಕೊಳ್ಳಲಿ' ಎಂದು ಯೋಚಿಸುತ್ತ ಕೈಯಲ್ಲೊಂದು ಚೀಲ ಹಿಡಿದು ಕೈಯನ್ನು ಹಿಂದಕ್ಕೆ ಕಟ್ಟಿ ನಿಧಾನವಾಗಿ ಅಚೀಚೆ ನಡೆದಾಡುವುದು, ತರಕಾರಿ-ಸೊಪ್ಪು ಇತ್ಯಾದಿಗಳನ್ನು ಮಾರಾಟ ಮಾಡುವ ಹೆಂಗಸರು, ಅವರೊಂದಿಗೆ ಖರೀದಿಸುವ ಸಲುವಾಗಿ ಚೌಕಾಶಿ ಮಾಡುತ್ತಿರುವವರು, ಕಟ್ಟೆ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದ ಹಿರಿಯರು, ಅಲ್ಲೇ ಅಲೆದಾಡುತ್ತಿದ್ದ ಪಡ್ಡೆಗಳು, ಮಕ್ಕಳ ಚಿಲಿಪಿಲಿ, ಏನಾದರೂ ತಿನ್ನಲು ಸಿಗಬಹುದೋ ಎಂದು ಜೊಲ್ಲು ಸುರಿಸುತ್ತ ನಿಂತಿದ್ದ ದನಗಳು, ತಾಳಗುಪ್ಪ ರಸ್ತೆಯಲ್ಲಿ ಹೊರಡಲು ಅನುವಾಗಿ ನಿಂತಿದ್ದ ಎತ್ತಿನಗಾಡಿಗಳು ಇತ್ಯಾದಿಗಳ ಚಿತ್ರಣ ಮನದಲ್ಲಿ ಬರುತ್ತಿತ್ತು; ಎಲ್ಲಾ ೫೫-೬೦ ವರ್ಷಗಳ ಹಿಂದೆ ಮಡೆನೂರು ಎಂಬ ಸಮೃದ್ಧ ಹಳ್ಳಿಯ ತುಂಬಿದ ಸಂತೆಯಲ್ಲಿ.
೫ ಗಂಟೆಯ ಹೊತ್ತಿಗೆ ಅಣೆಕಟ್ಟು ಇದ್ದಲ್ಲಿ ತಲುಪಿದೆವು. ನೀರಿನ ಮಟ್ಟ ಬಹಳ ಕಡಿಮೆ ಇದ್ದಿದ್ದರಿಂದ ಬಹಳ ಮುಂದಿನವರೆಗೆ ಯಮಾಹ ಓಡಿತು. ಒಂದು ದಿಬ್ಬದ ಹಿಂದೆ ಅಣೆಕಟ್ಟು ಇದ್ದಿದ್ದರಿಂದ ಅದಿನ್ನೂ ನಮಗೆ ಕಾಣಿಸುತ್ತಿರಲಿಲ್ಲ. ದಿಬ್ಬದ ಈ ಬದಿಯಲ್ಲಿ ಮನೆ, ರಸ್ತೆಗಳಿದ್ದ ಕುರುಹುಗಳು. ಆಗಿನ ಕಾಲದ ಟಾರು ರಸ್ತೆ ಮಣ್ಣಿನಿಂದ ಮೇಲೆದ್ದು ಸ್ವಲ್ಪ ದೂರ ಸಾಗಿ ಮತ್ತೆ ಮಣ್ಣಿನೊಳಗೆ ಮಾಯವಾಗಿತ್ತು. ಈ ಟಾರು ರಸ್ತೆಯ ಮೇಲೆ ಬೈಕ್ ನಿಲ್ಲಿಸಿ ಅಣೆಕಟ್ಟಿನೆಡೆ ಹೆಜ್ಜೆ ಹಾಕಿದೆವು. ದಿಬ್ಬ ದಾಟಿ ಐದೇ ನಿಮಿಷದಲ್ಲಿ ನಾವು ಅಣೆಕಟ್ಟಿನ ಮೇಲಿದ್ದೆವು. ಪ್ರಥಮ ನೋಟದಲ್ಲೇ ಮಡೆನೂರು ಅಣೆಕಟ್ಟಿನ ಸೌಂದರ್ಯಕ್ಕೆ ನಾನು ಮಾರುಹೋದೆ. ಐವತ್ತಕ್ಕೂ ಹೆಚ್ಚಿನ ವರ್ಷ ನೀರಿನಡಿ ಇದ್ದು, ಕಿಂಚಿತ್ತೂ ಹಾನಿಯಾಗದೇ ತನ್ನ ಒರಿಜಿನಲ್ ಸೌಂದರ್ಯವನ್ನು ಉಳಿಸಿಕೊಂಡು ಇನ್ನೂ ಗಟ್ಟಿಮುಟ್ಟಾಗಿರುವ ಈ ಅಣೆಕಟ್ಟು, ಸೈಫನ್ ಮಾದರಿ ಬಳಸಿ ನಿರ್ಮಿಸಿದ ಗಣೇಶ್ ಅಯ್ಯರ್ ಎಂಬವರ ನಿರ್ಮಾಣ ನೈಪುಣ್ಯತೆಗೆ ಸಾಕ್ಷಿ.
ಅಣೆಕಟ್ಟು ೧೧೪ಅಡಿ ಎತ್ತರ ಮತ್ತು ೩೮೭೦ಅಡಿ ಅಗಲವಿದ್ದು ೧೧ ಸೈಫನ್ ಗಳನ್ನು ಹೊಂದಿದೆ. ಸೈಫನ್ ಎಂದರೆ ವೃತ್ತಾಕಾರದ ನೀರಿನ ಟ್ಯಾಂಕ್ ಇದ್ದಂಗೆ. ಪ್ರತಿ ಸೈಫನ್ ೧೮ಅಡಿ ಅಗಲ ಮತ್ತು ೫೮ಅಡಿ ಎತ್ತರವಿದ್ದು, ೧೨ ಕಂಬಗಳನ್ನು ಆಧಾರವಾಗಿ ಹೊಂದಿದೆಯಲ್ಲದೇ ಮೇಲೆ ೩-೪ ದೊಡ್ಡ ರಂಧ್ರಗಳನ್ನೂ ಹೊಂದಿದೆ. ಅಣೆಕಟ್ಟು ತುಂಬಿದಾಗ ನೀರು ತಂತಾನೆ ಈ ರಂಧ್ರಗಳಿಂದ ಹೊರಬೀಳುತ್ತಿತ್ತು. ಸೈಫನ್ ಗಳನ್ನು ಅಣೆಕಟ್ಟಿಗೆ ಪ್ಯಾರಲಲ್ ಆಗಿ ನಿರ್ಮಿಸಲಾಗಿದೆ. ಅಣೆಕಟ್ಟಿನಿಂದ ಪ್ರತಿ ಸೈಫನ್ ಮೇಲೆ ತೆರಳಲು ಅವಕಾಶ ಮಾಡಿಕೊಡಲಾಗಿದೆ. ಹಾಗೇನೇ ಒಂದು ಸೈಫನ್ ಮೇಲಿಂದ ಮತ್ತೊಂದಕ್ಕೆ ತೆರಳಲೂ ಸಣ್ಣ ಕಾಂಕ್ರೀಟ್ ಸೇತುವೆ ಮಾಡಲಾಗಿದೆ. ಈ ಸೈಫನ್ ಗಳ ಮೇಲೆ ಎಚ್ಚರಿಕೆಯಿಂದ ನಡೆದಾಡಬೆಕು. ಅವುಗಳ ಮೇಲಿರುವ ರಂಧ್ರಗಳು ಮನುಷ್ಯನೊಬ್ಬ ಬೀಳುವಷ್ಟು ದೊಡ್ಡದಾಗಿವೆ ಮತ್ತು ಒಳಗೆ ನೀರಿರುತ್ತದೆಯಲ್ಲದೆ ಕತ್ತಲ ಹೊರತು ಬೇರೇನೂ ಕಾಣದು. ಅಣೆಕಟ್ಟಿನಿಂದ ಸುಮಾರು ೪೦ ಮೆಟ್ಟಿಲುಗಳನ್ನಿಳಿದು ಸೈಫನ್ ಗಳ ಬುಡಕ್ಕೆ ಬಂದು ಅವುಗಳ ಚೆಲುವನ್ನು ವೀಕ್ಷಿಸಬಹುದು.
ನಂತರ ಬರುವುದು ೩ ದೈತ್ಯಗಾತ್ರದ ಕ್ರೆಸ್ಟ್ ಗೇಟುಗಳು. ಇವುಗಳಿಗೆ ಬಳಿದ ಕಪ್ಪು ಬಣ್ಣದಿಂದ ಅವು ಭಯಾನಕವಾಗಿ ಕಾಣುತ್ತಿದ್ದವು. ಕ್ರೆಸ್ಟ್ ಗೇಟುಗಳನ್ನು ಇಷ್ಟು ಸನಿಹದಿಂದ ಎಂದೂ ವೀಕ್ಷಿಸಿರಲಿಲ್ಲ. ಮುರೂ ಕ್ರೆಸ್ಟ್ ಗೇಟುಗಳ ತಳದಲ್ಲಿ ನೀರಿನಲ್ಲಿ ಅರ್ಧ ಮುಳುಗಿದ್ದ ದೈತ್ಯಗಾತ್ರದ ಸಲಕರಣೆಗಳು ಮತ್ತಿನ್ನೇನೋ ಮಷೀನುಗಳು. ಗಾತ್ರದ ಅಗಾಧತೆಯೇ ದಂಗುಬಡಿಸಿತು. ಸೈಫನ್ ಗಳಂತೆಯೇ ಈ ಕ್ರೆಸ್ಟ್ ಗೇಟುಗಳು ಕೂಡಾ ಮೃತ್ಯುಕೂಪಗಳೇ.
ಅಣೆಕಟ್ಟಿನಿಂದ ಆರೇಳು ಮೆಟ್ಟಿಲುಗಳನ್ನಿಳಿದರೆ ಅಲ್ಲೊಂದು ೨ಅಡಿ ಅಗಲದ ಕಬ್ಬಿಣದ ಹಲಗೆ. ಈ ಹಲಗೆ ಮುರೂ ಕ್ರೆಸ್ಟ್ ಗೇಟುಗಳ ಉದ್ದಕ್ಕೆ ಹಾದುಹೋಗಿದೆ. ಇದರ ಮೇಲೆ ನಡೆದು, ಕ್ರೆಸ್ಟ್ ಗೇಟುಗಳನ್ನು ಮತ್ತಷ್ಟು ಸನಿಹದಿಂದ ವೀಕ್ಷಿಸಿ ಮತ್ತೊಂದು ಬದಿಯಿಂದ ಅಣೆಕಟ್ಟಿನ ಮೇಲೆ ಬರಬಹುದು. ಅಲ್ಲಲ್ಲಿ ಸಸ್ಯ ಬೆಳೆದು ಅಲ್ಲಲ್ಲಿ ತುಕ್ಕು ಹಿಡಿದಿದ್ದರಿಂದ ಈ ಕಬ್ಬಿಣದ ಹಲಗೆ ದೃಢವಾಗಿದೆ ಎಂದು ಹೇಳಲು ಸಾಧ್ಯವಿರಲಿಲ್ಲ. ಪ್ರಶಾಂತ್ ಧೈರ್ಯ ಮಾಡಿ ಆ ಹಲಗೆಯ ಮೇಲೆ ಹೆಜ್ಜೆ ಇಟ್ಟು ನೋಡ್ತಾ ನೋಡ್ತಾ ಮತ್ತೊಂದು ಬದಿಯಿಂದ ಅಣೆಕಟ್ಟು ಮೇಲೆ ಬಂದ್ಬಿಟ್ಟ. ಈಗ ಬೈಕ್ ಯುವಕರು ಮತ್ತು ನಾನು ನಿಧಾನವಾಗಿ ಈ ಹಲಗೆಯ ಮೇಲೆ ತೆರಳಿ ಕ್ರೆಸ್ಟ್ ಗೇಟುಗಳ ಅಂದವನ್ನು ಅಸ್ವಾದಿಸಿ ಬಂದೆವು.
ಹಾಗೆ ಸ್ವಲ್ಪ ಮುಂದೆ ನಡೆದು ಅಣೆಕಟ್ಟಿನ ಮತ್ತೊಂದು ತುದಿ ತಲುಪಿದೆವು. ಈ ಬದಿಯಿಂದಲೂ ಬಹಳಷ್ಟು ಜನರು ನೋಡಲು ಬಂದಿದ್ದರು. ಯಾವ ದಾರಿಯಿಂದ ಬಂದಿರಬಹುದು ಎಂದು ಒಂದು ಕ್ಷಣ ಯೋಚಿಸಿ, ತಡವಾಗುತ್ತಿದ್ದರಿಂದ ಬೇಗನೇ ಹೆಜ್ಜೆ ಹಾಕಿ ಈ ಕಡೆ ಬಂದೆವು. ಅಲ್ಲೊಂದು ಒಣಗಿದ್ದ ನಗ್ನ ಮರ ಮತ್ತದರ ಬುಡದಲ್ಲಿ ಸಣ್ಣ ದೇವಾಲಯದ ಕುರುಹು. ಹಿನ್ನೀರಿನಲ್ಲಿ ಮುಖ ತೊಳೆದು ಬೈಕಿನತ್ತ ನಡೆದೆವು. ಸಮಯ ೬.೧೫ ಆಗಿತ್ತು.
ಆಗ ನನ್ನಲ್ಲಿದ್ದ ಎಸ್.ಎಲ್.ಆರ್ ಕ್ಯಾಮರದಿಂದ ಫೋಟೊ ತೆಗೆಯಲು ಬಹಳ ಪರದಾಡುತ್ತಿದ್ದೆ. ಒಂದು ಫೋಟೊ ತೆಗೆಯಲೂ ಬಹಳ ಸಮಯ ತಾಗುತ್ತಿತು. ಆದ್ದರಿಂದ ನೋಡಬೇಕಾದಷ್ಟನ್ನು ಮೊದಲು ನೋಡಿ ಮುಗಿಸಿದಾಗ ಕತ್ತಲಾಗುತ್ತಿತ್ತು. ಮಡೆನೂರಿನ ಅಂದವನ್ನು ಕ್ಯಾಮರಾ ಕಣ್ಣುಗಳಲ್ಲಿ ಸೆರೆಹಿಡಿಯಲಾಗಲಿಲ್ಲವಲ್ಲ ಎಂಬ ನಿರಾಸೆ ಈಗಲೂ ಇದೆ.
ಅರಣ್ಯ ಇಲಾಖೆ ದ್ವಾರದಿಂದ ಹೊರಬಂದು ಸಾಗರದತ್ತ ಸ್ವಲ್ಪ ದಾರಿ ಕ್ರಮಿಸುವಾಗ ಒಂದು 'ಟಿ' ಜಂಕ್ಷನ್ ಇರುವಲ್ಲಿ (ಈ ಸ್ಥಳದ ಹೆಸರು ನೆನಪಿಲ್ಲ) ಇಂಧನ ಕೇಳಲು ನಿಂತೆವು. ಅಲ್ಲಿ ಸಿಕ್ಕಿದ ಸೀಮೆ ಎಣ್ಣೆ ವಾಸನೆಯಿದ್ದ ಪೆಟ್ರೋಲ್ ನ್ನು ಬೈಕಿಗೆ ಕುಡಿಸಿ ಬರುವಷ್ಟರಲ್ಲಿ ಭಲೇ ಮಾತುಗಾರನಾಗಿರುವ ಪ್ರಶಾಂತ್ ನಾಲ್ಕಾರು ಹಳ್ಳಿಗರಿಗೆ ನಮ್ಮ ಪ್ರಯಾಣ ವಿವರಿಸುತ್ತಿದ್ದ. ಅವರಲ್ಲೊಬ್ಬ ನನ್ನಲ್ಲಿ 'ಸಾರ್ ಕೋಗಾರು ಘಾಟಿಯಲ್ಲಿ ತೆರಳಬೇಡಿ. ರಾತ್ರಿ ೮ರ ಬಳಿಕ ಆ ದಾರಿ ಸರಿಯಲ್ಲ. ನೀವು ಈ ದಾರಿಯಲ್ಲಿ (ಟಿ ಜಂಕ್ಷನ್ ಕಡೆ ತೋರಿಸುತ್ತಾ) ತೆರಳಿದರೆ ಹೊಸನಗರ ಮಾರ್ಗವಾಗಿ ಹುಲಿಕಲ್ ಘಾಟಿ ಇಳಿದು ಉಡುಪಿ ಸೇರಬಹುದು. ಸುರಕ್ಷಿತ ದಾರಿ' ಎಂದು ಸಲಹೆ ಕೊಟ್ಟ. ನನಗೂ ಅದು ಸೂಕ್ತವೆನಿಸಿತು. ಈಗ ನಮ್ಮ ಸುತ್ತಲೂ ಸುಮಾರು ೧೫ ಹಳ್ಳಿಗರು ಇದ್ದರು. ಅವರಲ್ಲೊಬ್ಬ 'ಕತ್ಲಲ್ಲಿ ಎಲ್ಲೋಗ್ತೀರಾ ಸಾರ್, ಇಲ್ಲೇ ಉಳ್ಕಂಬಿಡಿ. ನಾಳೆ ಬೆಳಗ್ಗೆ ಹೋಗುವಿರಂತೆ' ಎಂದಾಗ, 'ಬೆಳಗ್ಗೆ ೯ಕ್ಕೆ ಮಂಗಳೂರಿಗೆ ಬಾ, ಕಾಯುತ್ತಿರುತ್ತೇನೆ' ಎಂದಿದ್ದ ಬಾಸ್ ಮುಖ ನೆನಪಾಗಿ, ನಯವಾಗಿ ನಿರಾಕರಿಸಬೇಕಾಯಿತು.
ಹೊಸನಗರ ತಲುಪಿದಾಗ ಸಮಯ ೮.೩೦. ಇಲ್ಲಿ ನನ್ನ ಸಂಬಂಧಿ ಮಂಜುನಾಥನ ಮನೆಗೆ ತೆರಳಿ ಊಟ ಮುಗಿಸಿ ೯.೩೦ಕ್ಕೆ ಮತ್ತೆ ಯಮಾಹ ಸ್ಟಾರ್ಟ್. ಉಡುಪಿಯಲ್ಲಿ ಪ್ರಶಾಂತನನ್ನು ಮನೆಗೆ ಬಿಟ್ಟು ೪೬೨ಕಿಮಿ ಪ್ರಯಾಣದ ಬಳಿಕ ಬೆಳಗ್ಗಿನ ಜಾವ ೨.೧೫ಕ್ಕೆ ಮನೆ ತಲುಪಿದೆ.
ಜನವರಿ ೨೦೦೪ರಂದು ಕಳಸವಳ್ಳಿಗೆ ತೆರಳಿದೆ. ಇಲ್ಲಿತ್ತು ಲಾಂಚ್ (ಬಾರ್ಜ್). ಈ ಕಡೆ ಕಳಸವಳ್ಳಿಯಿದ್ದರೆ, ಹಿನ್ನೀರಿನ ಆ ಕಡೆ ಇತ್ತು ಹೊಳೆಬಾಗಿಲು. ಬಲಕ್ಕೆ ಅನತಿ ದೂರದಲ್ಲಿತ್ತು ಸೈಫನ್ ಗಳ ಮೇಲ್ಭಾಗವಷ್ಟೇ ನೀರಿನಿಂದ ಹೊರಗೆ ಕಾಣುತ್ತಿದ್ದ ಮಡೆನೂರು ಅಣೆಕಟ್ಟು! ನಾವಲ್ಲಿಗೆ ತೆರಳಿದ್ದಾಗ ಆಣೆಕಟ್ಟಿನ ಮತ್ತೊಂದು ಬದಿಯಿಂದಲೂ ಜನರು ನೋಡಲು ಆಗಮಿಸಿದ್ದನ್ನು ಗಮನಿಸಿದ್ದ ನಾನು, ಕಳಸವಳ್ಳಿಯ ಭಟ್ರ ಹೋಟೇಲಿನಲ್ಲಿ ಆ ಬಗ್ಗೆ ವಿಚಾರಿಸಿದೆ. ಅವರ ಪ್ರಕಾರ ತುಮರಿಯಿಂದ ವಳಗೆರೆ ಮುಖಾಂತರ ತೆರಳಿದರೆ ಆಣೆಕಟ್ಟು ಇರುವಲ್ಲಿಗೆ ೧೦ಕಿಮಿ ದೂರ! ಅಂದರೆ ಉಡುಪಿಯಿಂದ ಅಣೆಕಟ್ಟು ೧೩೩ಕಿಮಿ ದೂರ ಇದ್ದರೆ, ಸರಿಯಾದ ದಾರಿ ತಿಳಿಯದ ನಾನು ೨೪೦ಕಿಮಿ ದೂರದ ಸುತ್ತುಬಳಸಿನ ದಾರಿಯಲ್ಲಿ ತೆರಳಿದ್ದೆ!
ಇನ್ನೊಂದು ಸಲ ಮಡೆನೂರು ಅಣೆಕಟ್ಟನ್ನು ನೋಡಬೇಕು, ಬಹಳಷ್ಟು ಫೋಟೊ ತೆಗೆಯಬೇಕು ಎಂದು ಮೇ ೨೦೦೪ ಮತ್ತು ಮೇ ೨೦೦೫ರಲ್ಲಿ ಮರಳಿ ಕಳಸವಳ್ಳಿಗೆ ತೆರಳಿದ್ದೇನೆ. ಆದರೆ ಅಣೆಕಟ್ಟು ಸಂಪೂರ್ಣವಾಗಿ ನೀರಿನಿಂದ ಮೇಲೆದ್ದಿರಲಿಲ್ಲ. ೨೦೦೬ರಲ್ಲಿ ಮಳೆ ಎಪ್ರಿಲ್ ತಿಂಗಳಲ್ಲೇ ಬಂದಿದ್ದರಿಂದ ಅಣೆಕಟ್ಟು ಕಾಣುವ ಚಾನ್ಸೇ ಇರಲಿಲ್ಲ. ಈ ವರ್ಷ ಮೇ ತಿಂಗಳಲ್ಲಿ ಮಳೆ ಬರದಿದ್ದರೆ ಮತ್ತೆ ಕಳಸವಳ್ಳಿಯೆಡೆ ಓಡಲಿದೆ ನನ್ನ ಯಮಾಹ.