ಮತದಾನದ ಸಮಯದಲ್ಲಿ ವಿವಿ ಪ್ಯಾಟ್ ನ ಉಪಯೋಗವೇನು?

ಮತದಾನದ ಸಮಯದಲ್ಲಿ ವಿವಿ ಪ್ಯಾಟ್ ನ ಉಪಯೋಗವೇನು?

ಕೆಲವು ದಶಕಗಳ ಹಿಂದೆ ಮತದಾನ ಎಂದರೆ ಪೇಪರ್ ಒಂದರಲ್ಲಿ ಮುದ್ರಿಸಿದ ಮತ ಪತ್ರ, ಅದರಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಹೆಸರು ಮತ್ತು ಚಿನ್ಹೆ. ನಮ್ಮ ಆಯ್ಕೆಯನ್ನು ನಮೂದಿಸಲು ಒಂದು ಶಾಯಿಯಲ್ಲಿ ಅದ್ದಿದ ಮರದ ತುಂಡು. ಅದನ್ನು ಅಭ್ಯರ್ಥಿಯ ಚಿನ್ಹೆಯ ಮೇಲೆ ಒತ್ತಿದರೆ ಮತದಾನ ಮುಗಿಯಿತು. ನಂತರ ಆ ಮತಪತ್ರವನ್ನು ಒಂದು ಮತ ಪೆಟ್ಟಿಗೆ (ಬ್ಯಾಲೆಟ್ ಬಾಕ್ಸ್) ಯೊಳಗೆ ಹಾಕಬೇಕು. ಮತದಾನ ಮಾಡಿದ ಕುರುಹಾಗಿ ನಮ್ಮ ಬೆರಳಿಗೊಂದು ಅಳಿಸಲಾಗದ ಶಾಯಿಯಿಂದ ಒಂದು ಗುರುತು. ಈ ಪ್ರಕ್ರಿಯೆಯಲ್ಲಿ ಮತದಾನ ಮಾಡುವಾಗ ಮತದಾರ ಹಾಕಿದ ಗುರುತು ಸರಿಯಾಗಿ ಬೀಳದೇ ಇರುವುದು, ಎರಡು ಅಭ್ಯರ್ಥಿಯ ನಡುವೆ ಗುರುತು ಇರುವುದು ಮುಂತಾದ ವಿವಿಧ ಕಾರಣಗಳಿಂದ ಮತಗಳು ಕುಲಗೆಟ್ಟ ಮತ ಎಂದು ತೀರ್ಮಾನವಾಗುತ್ತಿತ್ತು. ಈ ಮತಗಳಿಗಾಗಿ ವಿವಿಧ ಪಕ್ಷಗಳ ನಡುವೆ ಗಲಾಟೆಗಳೂ ನಡೆಯುತ್ತಿದ್ದವು. ಈ ಪೇಪರ್ ಮತ ಪತ್ರವನ್ನು ಎಣಿಕೆ ಮಾಡಲು ಬಹಳಷ್ಟು ಸಮಯ ಬೇಕಾಗುತ್ತಿತ್ತು. ದಿನವಿಡೀ ಮತ ಎಣಿಕೆಗೆ ತಗಲುತ್ತಿತ್ತು.

ಇದನ್ನು ತಪ್ಪಿಸಲು ಚುನಾವಣಾ ಆಯೋಗ ಮತ ಯಂತ್ರ ಅಥವಾ ಇಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ (ಇವಿಎಂ) ಬಳಕೆಗೆ ತಂದಿತು. ಇದರಿಂದ ಪ್ರಾರಂಭದಲ್ಲಿ ಮತದಾರನಿಗೆ ಒಂದಿಷ್ಟು ಗೊಂದಲಗಳಾದರೂ ನಂತರದ ದಿನಗಳಲ್ಲಿ ಸರಾಗವಾಗಿ ಮತ ಚಲಾಯಿಸುವಂತಾಯಿತು. ಚಲಾಯಿಸಿದ ಮತಗಳ ಎಣಿಕೆಯೂ ಸುಲಭವಾಯಿತು. ಎಣಿಕೆ ಪ್ರಾರಂಭವಾದ ೨-೩ ಗಂಟೆಗಳಲ್ಲೇ ಫಲಿತಾಂಶ ಬರಲು ಪ್ರಾರಂಭವಾಯಿತು. ಇವಿಎಂ ಬಳಕೆಯಿಂದ ಪೇಪರ್ ಬಳಕೆ ನಿಂತು ಹೋಗಿ ಪರಿಸರಕ್ಕೂ ಉಪಯೋಗವಾಯಿತು. ಮತದಾರ ಯಾವುದಾದರೂ ಒಂದು ಬಟನ್ ಒತ್ತಲೇ ಬೇಕಾದ ಅನಿವಾರ್ಯತೆ ಇರುವುದರಿಂದ ಮತಗಳು ಹಾಳಾಗುವುದು ತಪ್ಪಿತು. ನಂತರದ ದಿನಗಳಲ್ಲಿ ‘ ಮೇಲಿನ ಯಾವ ಅಭ್ಯರ್ಥಿಗೂ ನನ್ನ ಮತವಿಲ್ಲ' ಎಂದು ಹೇಳುವ NOTA (ನೋಟಾ) ಜಾರಿಗೆ ಬಂತು. ಆದರೆ ಇಲ್ಲೂ ಹಲವಾರು ಮಂದಿಯ ಮನಸ್ಸಿನಲ್ಲಿ ಉಳಿದುಕೊಂಡ ಸಂದೇಹವೆಂದರೆ ‘ನಾವು ಬಟನ್ ಒತ್ತಿದಾಗ ಚಲಾವಣೆಯಾದ ಮತ ನಾವು ಬಯಸಿದ ಅಭ್ಯರ್ಥಿಗೇ ಹೋಗಿದೆಯೇ?’ ಎನ್ನುವುದು. ಇದನ್ನು ನಿವಾರಿಸಲು ಬಂದ ಉಪಕರಣವೇ ವಿ ವಿ ಪ್ಯಾಟ್. ಚುನಾವಣೆಯಲ್ಲಿ ಮತದಾನದ ಬಗ್ಗೆ ಪಾರದರ್ಶಕತೆ ಮತ್ತು ನಿಖರತೆಯನ್ನು ತರುವ ಉದ್ಡೇಶದಿಂದ ೨೦೧೩ರಲ್ಲಿ ವಿವಿ ಪ್ಯಾಟ್ ಎನ್ನುವ ಪ್ರಿಂಟರ್ ಹೊಂದಿದ ಉಪಕರಣದ ಬಳಗೆ ಪ್ರಾರಂಭವಾಯಿತು. 

ಇದನ್ನು ಮೊದಲ ಬಾರಿಗೆ ಅದೇ ವರ್ಷದಲ್ಲಿ ನಡೆದ ನಾಗಾಲ್ಯಾಂಡ್ ನ ಉಪಚುನಾವಣೆಯಲ್ಲಿ ಬಳಕೆ ಮಾಡಲಾಯಿತು. ನೋಕ್ಸೆನ್ ಎನ್ನುವ ಕ್ಷೇತ್ರದ ಉಪ ಚುನಾವಣೆಯ ಸಮಯದಲ್ಲಿ ದೇಶದಲ್ಲಿ ಮೊತ್ತಮೊದಲ ಬಾರಿಗೆ ವಿ ವಿ ಪ್ಯಾಟ್ ಉಪಕರಣವನ್ನು ಬಳಸಲಾಯಿತು. ಪ್ರಾರಂಭದಲ್ಲಿ ಮತದಾನದ ಬಳಿಕ ಮತ ಎಣಿಕೆಯ ಸಮಯದಲ್ಲಿ ಯಾದೃಚ್ಛಿಕವಾಗಿ ಆಯ್ಕೆ ಮಾಡಿದ ಒಂದು ಮತಗಟ್ಟೆಯಲ್ಲಿನ ವಿವಿ ಪ್ಯಾಟ್ ಸ್ಲಿಪ್ ಗಳನ್ನು ಎಣಿಕೆ ಮಾಡಲಾಗುತ್ತಿತ್ತು. ಇತ್ತೀಚೆಗೆ ೨೦೧೯ರಿಂದ ಕೆಲವು ರಾಜಕೀಯ ಪಕ್ಷದವರ ಒತ್ತಾಸೆಯ ಮೇರೆಗೆ ಒಂದು ವಿಧಾನ ಸಭಾ ಕ್ಷೇತ್ರದ ಐದು ಮತಗಟ್ಟೆಗಳ ವಿವಿ ಪ್ಯಾಟ್ ಗಳ ಸ್ಲಿಪ್ ಗಳ ಎಣಿಕೆ ಮಾಡಲಾಗುತ್ತದೆ. ಈ ರೀತಿ ಎಣಿಕೆ ಮಾಡುವ ಸಂದರ್ಭದಲ್ಲಿ ಅಭ್ಯರ್ಥಿಗಳು ಅಥವಾ ಅವರನ್ನು ಪ್ರತಿನಿಧಿಸುವ ಏಜೆಂಟರು ಸ್ಥಳದಲ್ಲಿರಬೇಕಾದದ್ದು ಕಡ್ಡಾಯವಾಗಿರುತ್ತದೆ. ಅವರ ಸಮ್ಮುಖದಲ್ಲಿ ಲಾಟರಿ ಎತ್ತುವ ಮೂಲಕ ಐದು ಮತಗಟ್ಟೆಗಳನ್ನು ಆಯ್ಕೆ ಮಾಡಲಾಗುತ್ತದೆ. 

ವಿವಿ ಪ್ಯಾಟ್ ಯಂತ್ರ ಎಂದರೇನು?: ಇಷ್ಟೆಲ್ಲಾ ಹೇಳಿದ ಬಳಿಕ ನಿಮ್ಮ ಮನಸ್ಸಿನಲ್ಲಿ ವಿವಿ ಪ್ಯಾಟ್ ಎಂಬ ಯಂತ್ರ ಹೇಗಿರುತ್ತದೆ ಮತ್ತು ಅದರ ಕಾರ್ಯ ನಿರ್ವಹಣೆ ಹೇಗೆ ಎನ್ನುವ ಬಗ್ಗೆ ಸಂದೇಹ ಕೊರೆಯುತ್ತಿರಬಹುದು ಅಲ್ಲವೇ? ವಿವಿ ಪ್ಯಾಟ್ ಎನ್ನುವುದು ಒಂದು ಪ್ರಿಂಟರ್ ಹೊಂದಿರುವ ಯಂತ್ರ. ಇದನ್ನು ಇವಿಎಂ ನ ಬ್ಯಾಲೆಟ್ ಯೂನಿಟ್ ಗೆ ಸೇರಿಸಲಾಗಿರುತ್ತದೆ. ಮತದಾರ ತನ್ನ ಆಯ್ಕೆಯ ಬಟನ್ ಮತ ಯಂತ್ರದಲ್ಲಿ ಒತ್ತಿದ ಮರುಕ್ಷಣವೇ ವಿವಿ ಪ್ಯಾಟ್ ಯಂತ್ರದಲ್ಲಿ ಅದು ಮುದ್ರಿತವಾಗಿ, ಆ ಕಾಗದವು ವಿವಿ ಪ್ಯಾಟ್ ನ ಗಾಜಿನ ಕಿಟಕಿಯ ಹಿಂದೆ ೭ ಸೆಕೆಂಡುಗಳ ವರೆಗೆ ಕಾಣಿಸುತ್ತದೆ. ಈ ಕಾಗದದಲ್ಲಿ ಮತದಾರ ಮತ ಹಾಕಿದ ವ್ಯಕ್ತಿಯ ಕ್ರಮ ಸಂಖ್ಯೆ, ಹೆಸರು, ಚಿನ್ಹೆ ಮುದ್ರಿತವಾಗಿರುತ್ತದೆ. ಇದನ್ನು ನೋಡಿದ ಬಳಿಕವೇ ಮತದಾರ ಮತಗಟ್ಟೆಯಿಂದ ಹೊರಬರಬೇಕು. ಇದರಿಂದ ಮತದಾರನಿಗೆ ತಾನು ಹಾಕಿದ ಮತ ಯಾರಿಗೆ ಬಿದ್ದಿದೆ ಎನ್ನುವುದು ನಿಖರವಾಗಿ ತಿಳಿದುಬರುತ್ತದೆ. ೭ ಸೆಕೆಂಡುಗಳ ಬಳಿಕ ಆ ಕಾಗದದ ಸ್ಲಿಪ್ ಯಂತ್ರದ ಕೆಳಗೆ ಇರುವ ಡಬ್ಬದಲ್ಲಿ ಸಂಗ್ರಹವಾಗುತ್ತದೆ. ಮತದಾರನಿಗೆ ಆತ ಹಾಕಿದ ಮತದ ಸ್ಲಿಪ್ ಅನ್ನು ಮನೆಗೆ ತೆಗೆದುಕೊಂಡು ಹೋಗುವ ಅವಕಾಶ ಇಲ್ಲ. ಆದರೆ ಮತ ಎಣಿಕೆಯ ಸಮಯದಲ್ಲಿ ಏಳುವ ಸಂದೇಹಗಳಿಗೆ ಈ ಚೀಟಿಗಳು ಪರಿಹಾರ ಒದಗಿಸಬಲ್ಲವು ಎನ್ನುವುದು ಚುನಾವಣಾ ಆಯೋಗದ ನಂಬಿಕೆ.

ಮತದಾನವನ್ನು ಇನ್ನಷ್ಟು ಪಾರದರ್ಶಕವನ್ನಾಗಿಸಲು ವಿವಿ ಪ್ಯಾಟ್ ಎನ್ನುವ ಯಂತ್ರದ ಪರಿಕಲ್ಪನೆಯನ್ನು ೨೦೧೦ರಲ್ಲಿ ಚುನಾವಣಾ ಅಯೋಗ ಮಾಡಿತು. ಅದರಂತೆ ರಾಜಕೀಯ ಪಕ್ಷಗಳ ಜೊತೆ ಸಮಾಲೋಚನೆ ಮಾಡಿದ ಬಳಿಕ ೨೦೧೧ರ ಜುಲೈನಲ್ಲಿ ಲಡಾಖ್, ತಿರುವನಂತಪುರಂ, ಚಿರಾಪುಂಜಿ, ಪೂರ್ವ ದಿಲ್ಲಿ ಮತ್ತು ಜೈಸಲ್ಮೇರ್ ಮುಂತಾದ ಕ್ಷೇತ್ರಗಳಲ್ಲಿ ಇದರ ಪ್ರಯೋಗಗಳನ್ನು ನಡೆಸಲಾಯಿತು. ಅದರಲ್ಲಿ ಕಂಡುಬಂದ ಕುಂದುಕೊರತೆಗಳನ್ನು ನಿವಾರಿಸಿ ಇನ್ನಷ್ಟು ಸುಧಾರಿತ ವಿವಿ ಪ್ಯಾಟ್ ಯಂತ್ರವನ್ನು ತಯಾರು ಮಾಡಿ ಬಳಕೆಗಾಗಿ ಫೆಬ್ರವರಿ ೨೦೧೩ರಲ್ಲಿ ಇಸಿ (ಇಲೆಕ್ಷನ್ ಕಮಿಷನ್) ತಜ್ಞರ ಅನುಮತಿಯನ್ನು ಕೋರಿತು. ಅದೇ ವರ್ಷ ಇವಿಎಂ ಗೆ ಪ್ರಿಂಟರ್ ಹೊಂದಿರುವ ವಿವಿಪ್ಯಾಟ್ ಅನ್ನು ಜೋಡನೆ ಮಾಡುವ ಬಗ್ಗೆ ಅನುಮತಿ ನೀಡಲಾಯಿತು. ಇದಕ್ಕಾಗಿ ೧೯೬೧ರ ಚುನಾವಣಾ ನಿಯಮಗಳನ್ನು ತಿದ್ದುಪಡಿ ಮಾಡಲಾಯಿತು. ನಂತರ ಪ್ರಥಮ ಬಾರಿಗೆ ನಾಗಾಲ್ಯಾಂಡ್ ನ ನೋಕ್ಸೆನ್ ವಿಧಾನಸಭಾ ಕ್ಷೇತ್ರದ ಎಲ್ಲಾ ೨೧ ಮತಗಟ್ಟೆಗಳಲ್ಲಿ ವಿವಿ ಪ್ಯಾಟ್ ಯಂತ್ರವನ್ನು ಬಳಕೆ ಮಾಡಲಾಯಿತು. ನಂತರ ಹಂತ ಹಂತವಾಗಿ ದೇಶದಾದ್ಯಂತ ನಡೆದ ಚುನಾವಣೆಗಳಲ್ಲಿ ವಿವಿ ಪ್ಯಾಟ್ ಯಂತ್ರವನ್ನು ಇವಿಎಂಗೆ ಅಳವಡಿಕೆ ಮಾಡಲಾಯಿತು. ಜೂನ್ ೨೦೧೭ರ ಹೊತ್ತಿಗೆ ಶೇ.೧೦೦ ವಿವಿಪ್ಯಾಟ್ ಯಂತ್ರಗಳ ಅಳವಡಿಕೆಯಾಗಿತ್ತು. 

ವಿ ವಿ ಪ್ಯಾಟ್ ಅಳವಡಿಕೆಯಿಂದ ಬಹಳಷ್ಟು ಮತದಾರರ ಮನಸ್ಸಿನಲ್ಲಿ ಹಲವಾರು ಸಮಯದಿಂದ ಕಾಡುತ್ತಿದ್ದ ಸಂದೇಹಕ್ಕೆ ಪರಿಹಾರ ದೊರೆತಿದೆ. ಅವರು ಚಲಾಯಿಸಿದ ಮತ ನಿಜಕ್ಕೂ ಅದೇ ಅಭ್ಯರ್ಥಿಗೆ ಬಿದ್ದಿದೆಯೇ ಎನ್ನುವ ಸಂದೇಹ ನಿವಾರಣೆಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಇದೇ ಬರುವ ಎಪ್ರಿಲ್ ೨೬ ಮತ್ತು ಮೇ ೭ರಂದು ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಇಷ್ಟರವರೆಗೆ ವಿವಿ ಪ್ಯಾಟ್ ಗಮನಿಸದೇ ಇದ್ದವರು, ದಯವಿಟ್ಟು ಈ ಬಾರಿ ಅದನ್ನು ಗಮನಿಸಿ. ನೀವು ಮತದಾನ ಮಾಡಿದ ಬಳಿಕ ಅಲ್ಲೇ ಇರುವ ವಿ ವಿ ಪ್ಯಾಟ್ ಯಂತ್ರದ ಗಾಜಿನ ಕಿಟಕಿಯಲ್ಲಿ ನಿಮ್ಮ ಮತ ಯಾರಿಗೆ ಬಿದ್ದಿದೆ ಎಂಬುವುದನ್ನು ಪರಿಶೀಲಿಸಿ. ನೆನಪಿಡಿ, ಇದಕ್ಕೆ ನಿಮಗೆ ಲಭಿಸುವ ಸಮಯಾವಕಾಶ ಕೇವಲ ೭ ಸೆಕೆಂಡುಗಳು ಮಾತ್ರ. ನೀವು ಚಲಾವಣೆ ಮಾಡದ ಅಭ್ಯರ್ಥಿಗೆ ಮತ ಬಿದ್ದಿದ್ದರೆ, ನೀವು ಅಲ್ಲೇ ಇರುವ ಮತಗಟ್ಟೆಯ ಅಧಿಕಾರಿಗೆ ದೂರು ನೀಡಬಹುದು. ಅತೀ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ಭಾರತದ ಚುನಾವಣಾ ಆಯೋಗದ ಈ ಕೆಲಸ ಸ್ತುತ್ಯಾರ್ಹ ಎನ್ನುವುದರಲ್ಲಿ ಎರಡು ಮಾತಿಲ್ಲ ಅಲ್ಲವೇ? ಪ್ರತಿಯೊಬ್ಬ ಅರ್ಹ ಮತದಾರರು ಮತದಾನದ ದಿನ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ. ಭವ್ಯ ಭಾರತದ ನಿರ್ಮಾಣದಲ್ಲಿ ಸಹಕಾರ ನೀಡಿ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ