ಮತದಾರರಿಗೆ ಕೆಲವು ಪ್ರಶ್ನೆಗಳು

ಮತದಾರರಿಗೆ ಕೆಲವು ಪ್ರಶ್ನೆಗಳು

ಬರಹ

ರಾಜ್ಯದಲ್ಲಿ ಇದೇ ೩೦ರಂದು ನಡೆಯಲಿರುವ ಎರಡನೇ ಹಂತದ ಮತದಾನದ ದಿನ ಮತ ನೀಡದಿರಲು ಯೋಚಿಸುತ್ತಿರುವ ವಿದ್ಯಾವಂತ ಮತದಾರರು ‍ಯಾರಿದ್ದೀರಿ ಅವರೆಲ್ಲರಲ್ಲಿ ನನ್ನ ಕೆಲವು ಪ್ರಶ್ನೆಗಳು:

* ವಿಶ್ರಾಂತಿಗೆ, ಮನೋರಂಜನೆಗೆ, ಒಣಹರಟೆಗೆ ಮತ್ತು ನಿಷ್ಪ್ರಯೋಜಕ ಕೆಲಸಗಳಿಗೆ ಸಾಕಷ್ಟು ಸಮಯ ವ್ಯಯಿಸುವ ನೀವು ಎರಡೋ ಮೂರೋ ವರ್ಷಗಳಿಗೊಮ್ಮೆ ಮತದಾನಕ್ಕಾಗಿ ಒಂದೆರಡು ಗಂಟೆಗಳನ್ನೂ ವಿನಿಯೋಗಿಸಲಾರಿರಾ?

* ಅಯೋಗ್ಯರಿಗೇನು ವೋಟುಮಾಡುವುದು ಎಂದು ಹೇಳಿ ಮನೆಯಲ್ಲಿ ಕೂತರೆ ನೀವೂ ಅಯೋಗ್ಯರಾದಂತಲ್ಲವೆ?

* ಇದ್ದುದರಲ್ಲಿಯೇ ಯೋಗ್ಯರಿಗೆ ಮತ ನೀಡುವ ಮೂಲಕ ನೀವು ರಾಜಕೀಯ ಪಕ್ಷಗಳಿಗೆ ಒಂದು ಸಂದೇಶವನ್ನು ತಲುಪಿಸಬಹುದಲ್ಲವೆ? ಮುಂದಿನ ಸಲ ಅವು ಯೋಗ್ಯನನ್ನೇ ಕಣಕ್ಕಿಳಿಸಬೇಕಾದಂಥ ಪರಿಸ್ಥಿತಿ ಸೃಷ್ಟಿಸಬಹುದಲ್ಲವೆ?

* ನಾನೊಬ್ಬ ವೋಟ್ ಹಾಕದಿದ್ದರೆ ಏನು ವ್ಯತ್ಯಾಸವಾಗುತ್ತದೆ ಎಂದು ಕೇಳುವ ನಿಮಗೆ, ಕೊಪ್ಪರಿಗೆ ಇರಿಸಿ ಅದಕ್ಕೆ ಒಂದೊಂದು ತಂಬಿಗೆ ಹಾಲು ಹಾಕಲು ಪ್ರಜೆಗಳಿಗೆ ಆಜ್ಞಾಪಿಸಿದ ರಾಜನ ಕಥೆ ಗೊತ್ತಿಲ್ಲವೆ? ಎಲ್ಲರೂ ಹಾಲು ಹಾಕುವಾಗ ನಾನೊಬ್ಬ ನೀರು ಹಾಕಿದರೆ ಕೊಪ್ಪರಿಗೆ ನೋಡಿದ ರಾಜನಿಗೇನು ಗೊತ್ತಾಗುತ್ತದೆ ಎಂದು ಬುದ್ಧಿ ಓಡಿಸಿ ಪ್ರತಿಯೊಬ್ಬ ಪ್ರಜೆಯೂ ಕೊಪ್ಪರಿಗೆಗೆ ನೀರನ್ನೇ ಹಾಕಿದ ಕಥೆಯನ್ನು ನೀವು ಕೇಳಿಲ್ಲವೆ? ಆ ಕಥೆಯಂತಾಗಬೇಕೇ ನಮ್ಮ ಪ್ರಜಾಪ್ರಭುತ್ವ?

* ಮತದಾನವನ್ನೇ ಮಾಡದಿದ್ದರೆ ನಿಮಗೆ ರಾಜಕಾರಣಿಗಳನ್ನು ನಿಂದಿಸಲಿಕ್ಕಾಗಲೀ ನಿಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಆಗ್ರಹಿಸಲಿಕ್ಕಾಗಲೀ ನೈತಿಕ ಹಕ್ಕೆಲ್ಲಿದೆ?

* ನಿರಕ್ಷರಿಗಳು ಹೋಗಿ ವೋಟ್ ಹಾಕುವಾಗ, ವಿದ್ಯಾವಂತರಾದ ನೀವು ಮನೆಯಲ್ಲೇ ಉಳಿದಿರೆಂದರೆ ನೀವು ಕಲಿತ ವಿದ್ಯೆಗೆ ಏನು ಬೆಲೆ? ನಿಮ್ಮ ವಿದ್ಯೆ ಹೊಟ್ಟೆಪಾಡಿಗಾಗಿ ಮಾತ್ರವೆ? ಅವಿದ್ಯಾವಂತರು, ಮಾತ್ರವಲ್ಲ, ಪ್ರಾಣಿಗಳೂ ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿಲ್ಲವೆ?

* ಮತದಾನವನ್ನು ಕಡ್ಡಾಯಗೊಳಿಸಿದರೆ ಆಗಲೂ ನೀವು ಮತದಾನ ಮಾಡದೆ ಕೂರುತ್ತಿರಾ? ಇಲ್ಲ ತಾನೆ? ಅಂದರೆ, ’ದಂಡಂ ದಶಗುಣಂ’ ಎಂಬ ಮಾತಿಗೇ ಯೋಗ್ಯರೆ ನೀವು?

* ಯಾರು ಆರಿಸಿಬಂದರೂ ಅಷ್ಟೆ ಎಂಬ ಅಭಿಪ್ರಾಯದಿಂದಾಗಿ ನೀವು ಮತದಾನದಿಂದ ವಿಮುಖರಾಗುತ್ತೀರಾ? ಎಷ್ಟು ಚಿಕಿತ್ಸೆ ನೀಡಿದರೂ ಅಷ್ಟೆ ಎಂದು ಗೊತ್ತಿದ್ದೂ ನೀವು ನಿಮ್ಮ ರೋಗಪೀಡಿತ ಬಂಧುವಿಗೆ ಚಿಕಿತ್ಸೆ ಮುಂದುವರಿಸುತ್ತೀರಲ್ಲಾ, ಆ ಬಂಧುವಿಗಿಂತ ಕಡೆಯಾಯಿತೇ ನಿಮಗೆ ನಿಮ್ಮ ದೇಶ?

* ಮತದಾನ ಮಾಡುವುದರಿಂದ ನನಗೇನು ಲಾಭ ಎನ್ನುತ್ತೀರಾ? ನಿಮಗೇ ಸ್ವಾಮೀ ಲಾಭ. ವಿದ್ಯಾವಂತರಾದ ನಿಮಗೆ ಅಷ್ಟೂ ಗೊತ್ತಾಗುವುದಿಲ್ಲವೆ?!

ಆದ್ದರಿಂದ ಹೋಗಿ, ೩೦ರಂದು ವೋಟ್ ಹಾಕಿಬನ್ನಿ.