ಮತದಾರರ ಜವಾಬ್ದಾರಿ

ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟಣೆಗೆ ದಿನಗಣನೆ ಶುರುವಾಗಿದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಸೇರಿದಂತೆ ಉನ್ನತ ತಂಡವೊಂದು ಮೂರು ದಿನ ರಾಜ್ಯದಲ್ಲಿದ್ದು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿತಲ್ಲದೆ, ಚುನಾವಣಾ ಸಿದ್ಧತೆಗಳ ಕುರಿತು ಅಧಿಕಾರಿಗಳ ಜತೆ ಚರ್ಚೆ ನಡೆಸಿತು. ಮೇ ೨೪ರ ಒಳಗೆ ಹದಿನಾರನೇ ವಿಧಾನ ಸಭೆ ಅಸ್ತಿತ್ವಕ್ಕೆ ಬರುವ ರೀತಿಯಲ್ಲಿ ಪ್ರಕ್ರಿಯೆಗಳನ್ನು ನಡೆಸಲಾಗುವುದು ಎಂದು ಸಿ ಇ ಸಿ ರಾಜೀವ್ ಕುಮಾರ್ ತಿಳಿಸಿದ್ದಾರೆ. ಇದಲ್ಲದೆ, ಮತದಾನಕ್ಕೆ ಸಂಬಂಧಿಸಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಯೋಗದಿಂದ ಏನೇನು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬುದರ ವಿವರಗಳನ್ನು ನೀಡಿದ್ದಾರೆ. ಅಂಗವಿಕಲರಿಗೆ ಮತಕೇಂದ್ರಗಳಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲಾಗುತ್ತದೆ. ಮತದಾನದಿಂದ ಯಾರೂ ವಂಚಿತರಾಗಬಾರದು ಎಂಬ ಉದ್ದೇಶದಿಂದ, ೮೦ ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಲಾಗುವುದು ವಿಶೇಷ. ಅದರಲ್ಲೂ ದೇಶದಲ್ಲಿ ಮೊದಲ ಬಾರಿ ಕರ್ನಾಟಕದಿಂದಲೇ ಈ ಉಪಕ್ರಮವನ್ನು ಆರಂಭಿಸುತ್ತಿರುವುದು ಇನ್ನೊಂದು ವಿಶೇಷ. ರಾಜಕೀಯ ಪಕ್ಷಗಳ ಬೂತ್ ಏಜೆಂಟರು ಹಾಗೂ ಅಧಿಕಾರಿಗಳನ್ನೊಳಗೊಂಡಂತೆ, ಪಾರದರ್ಶಕವಾಗಿ ಈ ಪ್ರಕ್ರಿಯೆ ನಡೆಸಲಾಗುವುದು ಎಂದು ರಾಜೀವ್ ಕುಮಾರ್ ಹೇಳಿದ್ದಾರೆ. ಮತದಾನ ಕೇಂದ್ರಕ್ಕೆ ಬರಲಾಗದು ಎನ್ನುವವರಿಗೆ ಈ ವ್ಯವಸ್ಥೆ ಮಾಡಲಾಗುತ್ತದೆ. ಮತಪ್ರಮಾಣ ಹೆಚ್ಚಿಸುವಲ್ಲಿ ಮತ್ತು ಈ ಹಕ್ಕಿನ ಅವಕಾಶದಿಂದ ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ಈ ಹೆಜ್ಜೆ ಗಮನಾರ್ಹ. ಆನ್ ಲೈನ್ ವೋಟಿಂಗ್ ಗೆ ಅವಕಾಶ ನೀಡಬೇಕೆಂಬ ಹೊತ್ತಿನಲ್ಲಿ, ಈ ಹೆಜ್ಜೆ ಗಮನಸೆಳೆಯುವಂತಿದೆ. ರಾಜ್ಯದಲ್ಲಿ ಒಟ್ಟು ೫.೨೧ ಕೋಟಿ ಮತದಾರರಿದ್ದು, ಇವರಲ್ಲಿ ೨.೬೨ ಕೋಟಿ ಮಹಿಳೆಯರು ಮತ್ತು ೨.೫೯ ಕೋಟಿ ಪುರುಷರು. ಇದೇ ಹೊತ್ತಿನಲ್ಲಿ, ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿರುವ ಬಗ್ಗೆ ಮುಖ್ಯ ಚುನಾವಣಾ ಆಯುಕ್ತರು ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ೨೦೧೩ಕ್ಕಿಂತ ೨೦೧೮ರಲ್ಲಿ ಮತ ಚಲಾವಣೆ ಕಡಿಮೆ ಆಗಿರುವುದನ್ನು ಅವರು ಉಲ್ಲೇಖಿಸಿದ್ದಾರೆ.
ಬೆಂಗಳೂರಿನಂತಹ ನಗರದಲ್ಲಿ ಮತದಾನ ಪ್ರಮಾಣ ಕುಸಿತ ಕಾಣುವುದನ್ನು ನೋಡುತ್ತಲೇ ಇದ್ದೇವೆ. ಮತದಾನ ಕಡಿಮೆಯಾದಲ್ಲಿ ಶೇ ೨೦-೨೫ ಮತ ಪಡೆದ ಅಭ್ಯರ್ಥಿಯೂ ಆರಿಸಿ ಬರುವ ಸಾಧ್ಯತೆ ಇದೆ. ಅಂದರೆ, ಬಹುಜನರ ಅನುಮೋದನೆ ಪಡೆಯದವ ಶಾಸಕನಾಗಿ ಅವರನ್ನು ಪ್ರತಿನಿಧಿಸುವಂತಾಗುತ್ತದೆ. ಇಂಥ ಸನ್ನಿವೇಶ ಎದುರಾಗದಂತೆ ನೋಡಿಕೊಳ್ಳಬೇಕಾದ ಹೊಣೆ ಜನರ ಮೇಲೇ ಇರುತ್ತದೆ. ಅದಲ್ಲದೆ, ಕಡಿಮೆ ಮತದಾನದಿಂದ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಅಂಥ ಸನ್ನಿವೇಶ ಏರ್ಪಟ್ಟಲ್ಲಿ ರಾಜಕೀಯ ವಾತಾವರಣ ಮತ್ತಷ್ಟು ಗೊಂದಲಕಾರಿಯಾಗುತ್ತದೆ. ಆಡಳಿತ ಮೇಲೆ ಪರಿಣಾಮವಾಗುತ್ತದೆ. ಇನ್ನೊಂದೆಡೆ, ಚುನಾವಣಾ ಆಯುಕ್ತರನ್ನು ನೇಮಿಸುವ ವ್ಯವಸ್ಥೆಯಲ್ಲಿ ಪ್ರಧಾನ ಮಂತ್ರಿ ಜತೆಗೆ, ಲೋಕಸಭೆ ವಿಪಕ್ಷ ನಾಯಕ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿಯನ್ನೂ (ಸಿಜೆಐ) ಸೇರಿಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವುದು ಸಹ ಈ ಸಂದರ್ಭದಲ್ಲಿ ಉಲ್ಲೇಖನೀಯ. ಪ್ರಜಾತಂತ್ರದಲ್ಲಿ ಜನರು ಮತ್ತು ಜನಪ್ರತಿಧಿಗಳು ಹಾಗೂ ಶಾಸನಬದ್ಧ ಸಂಸ್ಥೆಗಳು ತಂತಮ್ಮ ಹೊಣೆಗಾರಿಕೆಯನ್ನು ಸರಿಯಾಗಿ ನಿಭಾಯಿಸಿದರೆ ಮಾತ್ರ ವ್ಯವಸ್ಥೆ ಸರಿದಾರಿಯಲ್ಲಿ ಸಾಗುತ್ತದೆ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೩-೦೩-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ