ಮತ್ತದೇ ನೆನಪು

ಮತ್ತದೇ ನೆನಪು

ಬರಹ

ಕಿವಿಗಳೆರಡೂ ತೂತಾಗಿವೆ
ಮತ್ತದೇ ಮಾತು ಕೇಳಿ,
ಸೂರ್ಯ ಬಂದ,
ಬೆಳಕಾಯ್ತು,
ಹಾಲು ತಂದ್ಯ ?, ಸ್ನಾನ ಆಯ್ತಾ?,
ತಿಂಡಿ ರೆಡಿನಾ?,
ಅಯ್ಯೋ ! ಆಫೀಸಿಗೆ ಲೇಟಾಯ್ತು,
ಬೇರೇನಿದೆ,ಆಯ್ತು, ಹೋಯ್ತು ಇಷ್ಟೇ
ಇದನ್ನೇ ಒಪ್ಪಿಕೊಂಡಿದ್ದೇನೆ.
ಮತ್ತು ಮಾಡುತ್ತಿದ್ದೇನೆ.
ಆಫೀಸಿನ ಗೌಜು ಗದ್ದಲದ ನಡುವೆ
ಒಂದು ಮುಖ, ಮತ್ತದರ ನಗು
ಬೇಡವೆಂದರೂ ಹಿಂಬಾಲಿಸುತ್ತದೆ.
ನಾನೂ ಹಂಬಲಿಸುತ್ತೇನೆ.
ಅವಳ ಪ್ರತಿಯೊಂದು
ಅನುಮಾನಗಳನ್ನ ನಾನೇ
ಸರಿಮಾಡುತ್ತೇನೆ.
ಮತ್ತವಳು ನನ್ನನ್ನೇ ಕೇಳುತ್ತಾಳೆ.
ನಾನಂತೂ ಒಂದು ದಿನವೂ
ಹೆಸರಿಟ್ಟು ಕೂಗಿಲ್ಲ
ಏನಮ್ಮಾ, ಎಂತಲೇ
ಅಂದದ್ದು ನೆನಪು
ನಂತರ
ಗಂಟೆಗಟ್ಟಲೆ
ಫೋನಲ್ಲಿ ಹರಟಿದರೂ
ಹೇಳು ಪುಟ್ಟಿ,
ಏನೋ ಬಂಗಾರ, ಹೇಳಮ್ಮಾ,
ಇವಿಷ್ಟೇ ಸಂಬೋಧನೆ.
ಅವಳ ಪ್ರತಿಯೊಂದು
ಗಾಬರಿಗೂ ನಾ ಮಾತಾಗಿದ್ದೆ.
ಅವಳ ಪ್ರತಿಯೊಂದು
ಮಾತಿಗೂ ನಾ ಕಿವಿಯಾಗಿದ್ದೆ.
ಯಾವುದೋ ಆಟದಲ್ಲಿ
ನನಗೇ ತಿಳಿಯದಂತೆ
ಬೆನ್ನಹಿಂದೆ
ನಿಮ್ಮ ಗುಣ ಹಿಡಿಸಿತು,
ನೀವೂ ಹಿಡಿಸಿದಿರಿ,
ಎಂದಾಗ ಹಿಗ್ಗಿದ್ದೆ.
ಇದರರ್ಥವೇನೆಂದು ಕೇಳಿದಾಗ
ನಾಚಿದ್ದಳು, ನಾನೂ ನಾಚಿದ್ದೆ.
ಈಗವಳ ಮದುವೆ
ಕೆಳಗಿನವುಗಳು ಅವಳದೇ ಮಾತುಗಳು
"ಮದುವೆ ಅಸಾಧ್ಯವೆಂದು
ಗೊತ್ತಿದ್ದೂ ಪ್ರೀತಿಸಿದೆ
ಏಕೆಂದು ಕೇಳಬೇಡಿ
ಇದು ನಿಮಗೂ ಗೊತ್ತಿತ್ತು
ನನ್ನಪ್ಪ ಅಮ್ಮನ
ಪ್ರಾಣ ಪಕ್ಷಿ ನಾನು
ಅವರ ಮಾನಾಪಮಾನಗಳು
ನನ್ನವಲ್ಲವೇ, ಹೇಳಿ
ನನ್ನದು ತಪ್ಪೇ?"
ನಾನು ಮೂಕನಾಗಿದ್ದೆ
ಮತ್ತು ಹೆದರಿದ್ದೆ.
ವಾಸ್ತವ ಭೀಕರವಾದರೂ
ಅದೇ ವಾಸ್ತವ.
ಕಲ್ಪನೆ ಬರೀ ಕಲ್ಪನೆಯಷ್ಟೇ.
ಹೊಟ್ಟೆಯೊಳಗೆ ಸಂಕಟ
ನೋವಿನಿಂದ ವಾಕರಿಕೆ ಬರುತ್ತಿದೆ.
ಆದರೂ ಬದುಕಿದ್ದೇನೆ.
ಇವೆಲ್ಲವನ್ನೂ ಒಮ್ಮೊಮ್ಮೆ
ಮನದೊಳಗಿನ್ದೆಳೆದುಕೊಂಡು
ಕಣ್ಣೀರಾಗುತ್ತೇನೆ.
ಮತ್ತು ನಗುತ್ತೇನೆ.
ಮತ್ತದೇ ಮಾತು
ಸೂರ್ಯ ಬಂದ,
ಬೆಳಕಾಯ್ತು........

ಹರೀಶ್ ಆತ್ರೇಯ