ಮತ್ತೆ ಕ್ಯಾತೆ ತೆಗೆದ ಚೀನಾ
ಗಡಿರೇಖೆಯಲ್ಲಿ ಮತ್ತೆ ಚೀನಾ ಕ್ಯಾತೆ ತೆಗೆದಿದೆ. ತವಾಂಗ್ ವಾಸ್ತವ ನಿಯಂತ್ರಣ ರೇಖೆಯ ಬಳಿ ಚೀನಾ, ಭಾರತದ ಪಡೆಗಳೊಂದಿಗೆ ಕ್ಯಾತೆ ತೆಗೆದಿದೆ. ಇದು ಮೇಲ್ನೋಟಕ್ಕೆ ಕ್ಯಾತೆ ಎಂಬುದು ಸ್ಪಷ್ಟ. ಮೊದಲಿನಿಂದಲೂ ಭಾರತದ ಭೂ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಚೀನಾ ಈಗ ಅರುಣಾಚಲ ಪ್ರದೇಶದಲ್ಲಿ ಕಾಲು ಕೆದರುವ ಮೂಲಕ ದುರಾಕ್ರಮಣ ಪ್ರವೃತ್ತಿಯನ್ನು ಪ್ರದರ್ಶಿಸಿದೆ. ಚೀನಾ ಸೈನಿಕರ ಈ ದುಂದಾವೃತ್ತಿಗೆ ಭಾರತೀಯ ಸೈನಿಕ ಪಡೆ ಸರಿಯಾದ ತಿರುಗೇಟು ನೀಡಿದೆ. ಒಟ್ಟಿನಲ್ಲಿ ಭಾರತ ಮತ್ತು ಚೀನಾ ಗಡಿಯಲ್ಲಿ ಶಾಂತಿಯನ್ನು ಕದಡುವ ಮೂಲಕ ಚೀನಾ ಮತ್ತೆ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದೆ.
ಎರಡು ವರ್ಷಗಳ ಹಿಂದೆ ಚೀನಾ, ತನ್ನ ಕುತಂತ್ರದ ಹಾದಿಗಳನ್ನು ಬಳಸಿ ಒಂದಲ್ಲ ಒಂದು ರೀತಿಯಲ್ಲಿ ತನ್ನ ವಿಕೃತ ಭಾವಗಳನ್ನು ಹೊರ ಹಾಕುತ್ತಿರುವುದು ಇದೇನೂ ಹೊಸತಲ್ಲ. ಭಾರತ ಮತ್ತು ಚೀನಾ ಗಡಿ ಭಾಗದಲ್ಲಿ ಪ್ರಗತಿಪರ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಕೂಡಾ ಚೀನಾ ಅಡ್ಡಿಯಾಗಿರುವುದು ಗಮನಾರ್ಹ. ಭಾರತದೊಂದಿಗೆ ಸುಮಧುರ ಬಾಂಧವ್ಯ ಮತ್ತು ಸ್ನೇಹಪೂರ್ವಕ ಸಂಬಂಧಗಳು ಬೇಕೆಂದು ಜಾಗತಿಕ ಮಟ್ಟದಲ್ಲಿ ಹೇಳಿಕೆಗಳನ್ನು ನೀಡುವ ಚೀನಾ, ತನ್ನ ಅಂತರಾಳದಲ್ಲಿ ಸೌಹಾರ್ದತೆ ಮನೋಭಾವನೆಯನ್ನು ಹೊಂದಿಲ್ಲ. ವಿಶ್ವಸಂಸ್ಥೆಯ ಸಭೆಗಳಲ್ಲಿ ಚೀನಾ, ಭಾರತದೊಂದಿಗಿನ ಸ್ನೇಹ ಸಂಬಂಧಗಳ ಬಗ್ಗೆ ಹೇಳುವುದೇ ಒಂದು. ತೆರೆಮರೆಯ ಹಿಂದೆ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುವ ರೀತಿಯಲ್ಲಿ ವ್ಯೂಹಾತ್ಮಕವಾಗಿ ಮಾಡುವುದೇ ಮತ್ತೊಂದು !
ಅರುಣಾಚಲ ಪ್ರದೇಶದ ಮೇಲೆ ತನ್ನ ಹಿಡಿತವನ್ನು ಸಾಧಿಸುವ ಉದ್ದೇಶದಿಂದ ಇಲ್ಲಿ ಬಂಡುಕೋರರನ್ನು ಸೃಷ್ಟಿಸಿ, ಭಾರತಕ್ಕೆ ಸಮಸ್ಯೆಗಳನ್ನು ತಂದಿಡುವ ಚೀನಾ ದುರ್ಬುದ್ಧಿ ಇಂದು ಹೊಸದೇನಲ್ಲ. ಆದರೂ ಚೀನಾ ಮೇಲಿಂದ ಮೇಲೆ ನಡೆಸುವ ಇಂತಹ ಭೂ ದುರಾಕ್ರಮಣಗಳ ಮೇಲೆ ಭಾರತೀಯ ರಕ್ಷಣಾ ಪಡೆ ಎಲ್ಲ ರೀತಿಯಲ್ಲಿ ನಿಗಾಯಿಟ್ಟಿರುವುದು ಗಮನಾರ್ಹ. ಎರಡು ವರ್ಷಗಳ ಹಿಂದೆ ಗಾಲ್ವಾನ್ ಬಳಿ ಭಾರತೀಯ ಸೈನಿಕರ ಮೇಲೆ ಭೀಕರ ದಾಳಿ ನಡೆಸಿ ಗಂಭೀರ ನಷ್ಟ ಉಂಟು ಮಾಡಿದ ಬಳಿಕ ದೇಶದೊಂದಿಗೆ ಡ್ರ್ಯಾಗನ್ ಹೊಂದಿದ್ದ ಬಹುತೇಕ ವಾಣಿಜ್ಯ ವಹಿವಾಟಿನ ಒಪ್ಪಂದಗಳೆಲ್ಲವೂ ರದ್ದಾಗಿದೆ. ಕಳೆದ ಮೂರು, ನಾಲ್ಕು ವರ್ಷಗಳಿಂದ ಭಾರತದಲ್ಲಿ ಚೀನಾ ಉತ್ಪಾದಿತ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಗೊಂಡಿರುವುದರಿಂದ ಈ ದೇಶವೀಗ ಆರ್ಥಿಕ ಹಿನ್ನಡೆಯನ್ನು ಕಾಣುವಂತಾಗಿದೆ. ಏಕೆಂದರೆ ಚೀನಾ ದೇಶದಲ್ಲಿ ತಯಾರಾಗುವ ಬಹುತೇಕ ಉತ್ಪನ್ನಗಳಿಗೆ ಅತಿ ದೊಡ್ಡ ಮಾರುಕಟ್ಟೆ ಭಾರತವೇ ಆಗಿತ್ತು. ಚೀನಾವನ್ನು ಈಗ ಹತಾಶೆಯ ಮನೋಭಾವ ಕಾಡುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿಯೇನಲ್ಲ. ಒಟ್ಟಿನಲ್ಲಿ ಪದೇ ಪದೇ ಗಡಿರೇಖೆಯಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸುವ ಚೀನಾ ಪ್ರವೃತ್ತಿ ಖಂಡನಾರ್ಹ. ಮಾತುಕತೆಯ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಶಕ್ಯವಿಲ್ಲದ ಚೀನಾ ನಂಬಿಕೆಗೆ ಅರ್ಹವಲ್ಲದ ದೇಶ ಎಂಬುದರಲ್ಲಿ ಸಂದೇಹವಿಲ್ಲ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೪-೧೨-೨೦೨೨
ಚಿತ್ರ ಕೃಪೆ: ಇಂಟರ್ನೆಟ್ ತಾಣ