ಮತ್ತೆ ಸಿರಿಗಂಧದ ಬೀಡು, ನಮ್ಮ ನಾಡು

ಮತ್ತೆ ಸಿರಿಗಂಧದ ಬೀಡು, ನಮ್ಮ ನಾಡು

ಅದೊಂದು ಕಾಲವಿತ್ತು. ಭಾರತ ಶ್ರೀಗಂಧದ ಬೀಡಾಗಿತ್ತು. ಕ್ರಮೇಣ ಶ್ರೀಗಂಧದ ಮರಗಳೆಲ್ಲ ಗಂಧದ ಕಳ್ಳರ ಪಾಲಾಗಿ, ಈಗ ಗಂಧದ ಮರಗಳೇ ಇಲ್ಲವೆನ್ನುವ ಪರಿಸ್ಥಿತಿ.
ಸರಕಾರದ ಧೋರಣೆಯೂ ಈ ಪರಿಸ್ಥಿತಿಗೆ ಕಾರಣ. ಇಸವಿ ೨೦೦೦ದ ವರೆಗೆ, ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಕಾಡುಗಳಲ್ಲಿ ಹಾಗೂ ಈ ರಾಜ್ಯ ಸರಕಾರಗಳ ಪ್ಲಾಂಟೇಷನುಗಳಲ್ಲಿ ಮಾತ್ರ ಶ್ರೀಗಂಧದ ಮರಗಳ ಬೆಳೆ. ಯಾಕೆಂದರೆ ಖಾಸಗಿ ಜಮೀನುಗಳಲ್ಲಿ ಶ್ರೀಗಂಧ ಬೆಳೆಯುವಂತಿರಲಿಲ್ಲ.
ಇದೆಲ್ಲ ಶುರುವಾದದ್ದು ೧೭೯೨ರಲ್ಲಿ. ಆಗ ಮೈಸೂರಿನ ರಾಜನಾಗಿದ್ದ ಟಿಪ್ಪು ಸುಲ್ತಾನ, ಶ್ರೀಗಂಧ ರಾಜರ ಸೊತ್ತು ಎಂದು ಘೋಷಿಸಿದಾಗ. ಆಗಿನಿಂದ ಕರ್ನಾಟಕ ಮತ್ತು ತಮಿಳ್ನಾಡಿನಲ್ಲಿ ಶ್ರೀಗಂಧದ ಮರಗಳ ಮೇಲೆ ಆಳುವವರ ನಿಯಂತ್ರಣ. ನಮ್ಮ ಜಮೀನಿನಲ್ಲಿ ಶ್ರೀಗಂಧದ ಮರವಿದ್ದರೂ ನಾವು ಅದರ ಒಡೆಯರಲ್ಲ, ಅದು ಸರಕಾರಕ್ಕೆ ಸೇರಿದ್ದು ಎಂಬ ನಿಯಮ. ಹಾಗಾಗಿ, ಆ ಮರ ಕಳವಾದರೆ, ಅರಣ್ಯಇಲಾಖೆ ಕೇಸ್ ಹಾಕುತ್ತಿದ್ದದ್ದು ಜಮೀನಿನ ಮಾಲೀಕನ ಮೇಲೆ!
ಇದೆಲ್ಲದರ ಪರಿಣಾಮವಾಗಿ, ಶ್ರೀಗಂಧದ ಉತ್ಪಾದನೆಯಲ್ಲಿ ಭಾರತ ತನ್ನ ಮೊದಲನೇ ಸ್ಥಾನ ಕಳೆದುಕೊಳ್ಳ ಬೇಕಾಯಿತು. ೧೯೬೦ರ ದಶಕದಲ್ಲಿ ಭಾರತದಲ್ಲಿ ಶ್ರೀಗಂಧದ ವಾರ್ಷಿಕ ಉತ್ಪಾದನೆ ೪,೦೦೦ ಟನ್. ಇದು, ಆಗಿನ ಜಾಗತಿಕ ಬೇಡಿಕೆ ವಾರ್ಷಿಕ ೬,೦೦೦ ಟನ್ನುಗಳಿಗೆ ಹೋಲಿಸಿದಾಗ ಗಣನೀಯ. ಕ್ರಮೇಣ ಕಳ್ಳಸಾಗಣೆಯಿಂದಾಗಿ ನಮ್ಮ ಗಂಧದ ಸಂಪತ್ತೆಲ್ಲ ಲೂಟಿ. ಭಾರತದಲ್ಲಿ ೨೦೧೫ರಲ್ಲಿ ಶ್ರೀಗಂಧದ ವಾರ್ಷಿಕ ಉತ್ಪಾದನೆ ಕೇವಲ ೪೦೦ ಟನ್ನುಗಳಿಗೆ ಕುಸಿದಿತ್ತು.
ಅನಂತರ, ಕರ್ನಾಟಕ (೨೦೦೧ರಲ್ಲಿ) ಮತ್ತು ತಮಿಳ್ನಾಡು (೨೦೦೨ರಲ್ಲಿ) ಸರಕಾರಗಳ ಧೋರಣೆ ಬದಲಾಯಿತು. ಬದಲಾದ ನಿಯಮಗಳ ಪ್ರಕಾರ, ಖಾಸಗಿ ಜಮೀನಿನಲ್ಲಿಯೂ ಶ್ರೀಗಂಧ ಬೆಳೆಯಬಹುದು. ಕ್ರಮೇಣ ಇತರ ರಾಜ್ಯಗಳೂ ಶ್ರೀಗಂಧದ ಕೃಷಿ ಪ್ರೋತ್ಸಾಹಿಸಿದವು.
ಇದರ ಪರಿಣಾಮವಾಗಿ, ೨೦೧೧ - ೨೦೧೫ ಅವಧಿಯಲ್ಲಿ, ಈ ೫ ರಾಜ್ಯಗಳಲ್ಲಿ ಒಟ್ಟಾಗಿ ೨,೮೦೦ ಹೆಕ್ಟೇರುಗಳಲ್ಲಿ ಶ್ರೀಗಂಧದ ಕೃಷಿ ಆರಂಭವಾಗಿದೆ: ಆಂಧ್ರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ಉತ್ತರಖಂಡ. ಪ್ರತಿ ವರುಷ ಸುಮಾರು ೬೦೦ ಹೆಕ್ಟೇರ್ ಪ್ರದೇಶದಲ್ಲಿ ಹೊಸದಾಗಿ ಶ್ರೀಗಂಧ ಬೆಳೆಸಲಾಗುತ್ತಿದೆ ಎಂಬುದು ಬೆಂಗಳೂರಿನ ಮೋಪು ವಿಜ್ನಾನ ಮತ್ತು ತಂತ್ರಜ್ನಾನ ಸಂಸ್ಥೆಯ ಅಂದಾಜು.
ಕರ್ನಾಟಕ ಸರಕಾರವಂತೂ ಶ್ರೀಗಂಧದ ಕೃಷಿ ಪ್ರೋತ್ಸಾಹಿಸಲಿಕ್ಕಾಗಿ ಕಾಯಿದೆಯನ್ನು ಸರಳೀಕರಿಸಿದೆ. ಈಗ, ಶ್ರೀಗಂಧವನ್ನು ಅರಣ್ಯ ಇಲಾಖೆಗೆ ಮಾರಬೇಕೆಂಬ ಕಡ್ಡಾಯವಿಲ್ಲ. (ಅ) ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಹಾಗೂ (ಆ) ಕರ್ನಾಟಕ ಸಾಬೂನು ಮತ್ತು ಡಿಟರ್ಜೆಂಟ್ ನಿಯಮಿತ – ಈ ಸಂಸ್ಥೆಗಳಿಗೂ ಮಾರಾಟ ಮಾಡಬಹುದು. ಕರ್ನಾಟಕ ಸರಕಾರ ಶ್ರೀಗಂಧದ ಕೃಷಿಗೆ ಶೇಕಡಾ ೭೫ ಸಹಾಯಧನವನ್ನೂ ಘೋಷಿಸಿತು.
ಶ್ರೀಗಂಧ ಅರೆಪರೋಪಜೀವಿ ಸಸ್ಯ.(ಸಸ್ಯಶಾಸ್ತ್ರೀಯ ಹೆಸರು: ಸಂಟಾಲಮ್ ಪನಿಕುಲಾಟಮ್) ಇದರ ವೈಜ್ನಾನಿಕ ಕೃಷಿ ವಿಧಾನಗಳನ್ನು ಅಭಿವೃದ್ಧಿ ಪಡಿಸಿದೆ ಬೆಂಗಳೂರಿನ ಮೋಪು ವಿಜ್ನಾನ ಮತ್ತು ತಂತ್ರಜ್ನಾನ ಸಂಸ್ಥೆ. ಮೊಳಕೆ ಬರಿಸುವುದು, ರೋಗನಿಯಂತ್ರಣ ಮತ್ತು ಸಸ್ಯಾಭಿವೃದ್ಧಿಗಾಗಿ ಅಂಗಾಂಶ ಕೃಷಿ ವಿಧಾನಗಳನ್ನು ಈ ಸಂಸ್ಥೆ ರೂಪಿಸಿದೆ.
ಎಕರೆಗೆ ೩೫೦ ಶ್ರೀಗಂಧದ ಸಸಿ ನೆಡಬೇಕೆಂಬುದು ಈ ಸಂಸ್ಥೆಯ ಶಿಫಾರಸ್. “ಮುಟ್ಟಿದರೆ ಮುನಿ” (ನಾಚಿಕೆ ಮುಳ್ಳು, ಮೈಮೊಸಾ ಪುಡಿಕಾ) ಗಂಧದ ಸಸಿಗೆ ಆರಂಭದ ದಿನಗಳಲ್ಲಿ ಅತ್ಯುತ್ತಮ ಜೊತೆಸಸ್ಯವೆಂದು ಈ ಸಂಸ್ಥೆ ಗುರುತಿಸಿದೆ. ಅನಂತರ ಪಪ್ಪಾಯಿ ಮತ್ತು ದಾಳಿಂಬೆ ಹಾಗೂ ತೊಗರಿ ಗಿಡಗಳು ಉತ್ತಮ ಜೊತೆಸಸ್ಯಗಳು. ಆರಂಭದ ಏಳೆಂಟು ವರುಷಗಳಲ್ಲಿ ಈ ಬೆಳೆಗಳಿಂದ ಬರುವ ಆದಾಯ ರೈತನಿಗೆ ಬೋನಸ್. ಅನಂತರ ಈ ಜೊತೆಸಸ್ಯಗಳು ದುರ್ಬಲವಾಗಿ ಶ್ರೀಗಂಧದ ಸಸಿ ಮಾತ್ರ ಬೆಳೆಯುತ್ತದೆ. ಈ ಸಂಸ್ಥೆ ಕಡಿಮೆ ದರದಲ್ಲಿ ರೈತರಿಗೆ ಶ್ರೀಗಂಧದ ಸಸಿ ಒದಗಿಸುತ್ತಿದೆ.  
ಶ್ರೀಗಂಧದ ಕೃಷಿಯ ಆದಾಯ ಆಕರ್ಷಕ. ಏಳೆಂಟು ವರುಷಗಳ ನಂತರ, ಶ್ರೀಗಂಧದ ಸಸ್ಯದ ವಾರ್ಷಿಕ ಬೆಳವಣಿಗೆ ಪರಿಮಾಣ ಒಂದು ಕಿಗ್ರಾ. ಒಂದು ಹೆಕ್ಟೇರಿನಲ್ಲಿ ಶ್ರೀಗಂಧ ಬೆಳೆಸುವ ವೆಚ್ಚ ಸುಮಾರು ರೂ.೩೦ ಲಕ್ಷ. ಎಲ್ಲವೂ ಎಣಿಸಿದಂತೆ ನಡೆದರೆ ೧೫ನೇ ವರುಷದಲ್ಲಿ ಶ್ರೀಗಂಧ ಕಟಾವು ಮಾಡಿದಾಗ ಬೆಳೆಗಾರನ ಕೈಗೆ ಸಿಗಬಹುದಾದ ಆದಾಯ ಹೆಕ್ಟೇರಿಗೆ ರೂ.೧.೨ರಿಂದ ರೂ.೧.೫ ಕೋಟಿ. ಆದರೆ ಎಲ್ಲದಕ್ಕಿಂತ ದೊಡ್ಡ ಸಮಸ್ಯೆ ಶ್ರೀಗಂಧ ಕಳ್ಳರದ್ದು. ಜಿಲ್ಲಾಧಿಕಾರಿಗಳ ನಿವಾಸದ ಕಂಪೌಂಡಿನಿಂದಲೇ ರಾತ್ರಿ ಬೆಳಗಾಗುವಾಗ ಶ್ರೀಗಂಧದ ಮರಗಳನ್ನು ಕದ್ದೊಯ್ದ ಉದಾಹರಣೆಗಳು ಸಾಕಷ್ಟಿವೆ. ಹಾಗಿರುವಾಗ ಸಾಮಾನ್ಯ ಬೆಳೆಗಾರರ ಪಾಡೇನು?
ತಮ್ಮ ಜಮೀನಿನಲ್ಲಿ ಬೆಳೆಸಿದ ಶ್ರೀಗಂಧದ ಸಸಿಗಳನ್ನು ಕಳ್ಳರಿಂದ ರಕ್ಷಿಸಲಿಕ್ಕಾಗಿ ಬೆಳೆಗಾರರು ಬಹಳ ವೆಚ್ಚ ಮಾಡಬೇಕಾಗುತ್ತದೆ. ಅವುಗಳ ರಕ್ಷಣೆಗಾಗಿ ತೋಟದ ಸುತ್ತಲೂ ಮುಳ್ಳಿನ ಅಕೇಸಿಯಾ ಮರಗಳ ಬೇಲಿ ಮತ್ತು ಕಂದಕ ನಿರ್ಮಿಸಬಹುದು. ಜೊತೆಗೆ ಸೌರಶಕ್ತಿ ಆಧಾರಿತ ಬೇಲಿಯನ್ನೂ ಹಾಕಬಹುದು. ಸಿಸಿ ಕೆಮರಾದಂತಹ ಈಗಿನ ತಂತ್ರಜ್ನಾನ ಬಳಸಿ, ಶ್ರೀಗಂಧ ತೋಟದಲ್ಲಿ ರಕ್ಷಣಾ ವ್ಯವಸ್ಥೆ ಅಳವಡಿಸಲು ಸಾಧ್ಯ.  
ಭಾರತದಲ್ಲಿ ೨೦೧೪ರಲ್ಲಿ ಶ್ರೀಗಂಧ ಬೆಳೆಸುತ್ತಿದ್ದ ಪ್ರದೇಶದ ವಿಸ್ತೀರ್ಣ ೨೦,೨೭೫ ಹೆಕ್ಟೇರ್. ಇವು ಬೆಳೆದು ನಿಂತಾಗ, ನಮ್ಮ ದೇಶ ಗಂಧದ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಪುನಃ ಮುಂಚೂಣಿಗೆ ಬರಲಿದೆ (ಸುಮಾರು ೯,೦೦೦ ಹೆಕ್ಟೇರುಗಳಲ್ಲಿ ಶ್ರೀಗಂಧ ಬೆಳೆಯುತ್ತಿರುವ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ). ಹೆಚ್ಚೆಚ್ಚು ರೈತರು ಶ್ರೀಗಂಧ ಬೆಳೆಯುತ್ತಿದ್ದು ನಮ್ಮ ದೇಶ ಮತ್ತೆ ಶ್ರೀಗಂಧದ ಬೀಡು ಆಗಲಿದೆ.

ಫೋಟೋ 1: ಕೇರಳದ ಮುನ್ನಾರ್ ಹತ್ತಿರದ ಮರಯೂರಿನಲ್ಲಿ ಶ್ರೀಗಂಧದ ಕಾಡು
ಫೋಟೋ 2 ಮತ್ತು 3    : ಶ್ರೀಗಂಧದ ಹೂಗಳು ಮತ್ತು ಹಣ್ಣುಗಳು
ಫೋಟೋ 4: ಶ್ರೀಗಂಧದ ಚಕ್ಕೆ (ಫೋಟೋ ಕೃಪೆ: ಐಸ್ಟಾಕ್)