ಮತ್ತೊಮ್ಮೆ ಬಾ ನನ್ನ ಮುದ್ದು ಬಾಲ್ಯವೇ....

ಮತ್ತೊಮ್ಮೆ ಬಾ ನನ್ನ ಮುದ್ದು ಬಾಲ್ಯವೇ....

ತಿಳಿಯಬೇಕಿದೆ ಮುದ್ದು ಕಂದಮ್ಮಗಳಿಂದ ಬದುಕಿನ ನೀತಿಯನ್ನು, ಅರಿಯಬೇಕಿದೆ ಚಿಂಟುಗಳಿಂದ ಆ ಮುಗ್ಧ ಮನಸ್ಸಿನ ಗುಟ್ಟನ್ನು, ಕಲಿಯಬೇಕಿದೆ ಪುಟ್ಟಮ್ಮಗಳಿಂದ ಆ ಮನತುಂಬುವ ನಗುವನ್ನು, ಅರ್ಥ ಮಾಡಿಕೊಳ್ಳಬೇಕಿದೆ ಬಂಗಾರಿಗಳಿಂದ ಕಲೆತು ತಿನ್ನುವುದನ್ನು, ಗೊತ್ತು ಮಾಡಿಕೊಳ್ಳಬೇಕಿದೆ ಚಿನ್ನುಗಳಿಂದ ಜಗದ ಸಮಾನತೆಯನ್ನು, ನೋಡಬೇಕಿದೆ ತೆರೆದ ಕಣ್ಣುಗಳಿಂದ ಆ ಹಸುಳೆಗಳ ಚಿಲಿಪಿಯನ್ನು, ಸವಿಯಬೇಕಿದೆ ಎಳೆಯರಿಂದ ತಿನ್ನುವ ಪರಿಯನ್ನು, ಬದುಕಬೇಕಿದೆ ಆ ಮುದ್ದುಮರಿಗಳ ಚಟುವಟಿಕೆಯಂತೆ, ಕುಣಿಯಬೇಕಿದೆ ಆ ಚಿಣ್ಣಾರಿಗಳ ಚಿಗರೆಯಂತೆ, ಹಿರಿಯರ ಅನುಭವ, ಕಿರಿಯರ ಹೊಸತನ, ಮಕ್ಕಳ ಮುಗ್ಧತೆ, ನಮಗೆ ಪಾಠವಾಗಬೇಕಿದೆ...

ಮುಂದಿನ ಯೋಚನೆಗಳಿಲ್ಲದ, 

ಹಿಂದಿನ ನೆನಪುಗಳಿಲ್ಲದ,

ಭವಿಷ್ಯದ ಯೋಜನೆಗಳಿಲ್ಲದ, 

ಇಂದಿನ ಕನಸುಗಳಿಲ್ಲದ,

 

ಅತಿಯಾದ ಆಸೆಗಳಿಲ್ಲದ, 

ಹೆಚ್ಚಿನ ನಿರಾಸೆಗಳಿಲ್ಲದ,

ಶ್ರೀಮಂತಿಕೆಯ ಮೋಹವಿಲ್ಲದ, 

ಬಡತನದ ನೋವೇ ಗೊತ್ತಾಗದ,

 

ದ್ವೇಷದ ಅರಿವಿಲ್ಲದ, 

ಪ್ರೀತಿಯ ಆಳ ಅರಿಯದ,

ಅಹಂಕಾರದ ಸೋಂಕಿಲ್ಲದ,

ಮುಗ್ಧತೆಯ ತಿಳಿವಳಿಕೆ ಇಲ್ಲದ,

 

ಜಾತಿ ಗೊತ್ತಿರದ, 

ಧರ್ಮ ಅರ್ಥವಾಗದ,

ರಾಜಕಾರಣ ತಿಳಿಯದ,

ಆಡಳಿತ ಅರಿವಾಗದ,

 

ತೆರಿಗೆ ಕಟ್ಟದ, 

ದುಡ್ಡು ಮಾಡದ,

ಏಳುವ ಎಚ್ಚರವಿರದ, 

ಬೀಳುವ ಭಯವಿರದ,

 

ಮೋಸ ಗೊತ್ತಾಗದ, 

ವಂಚನೆ ತಿಳಿಯದ,

ಕೆಲಸದ ಬಗ್ಗೆ ಯೋಚಿಸದ, 

ಆಟದ ಬಗ್ಗೆ ಒಲವಿರುವ,

 

ನಿದ್ದೆ ಬಂದಾಗ ಮಲಗುವ, 

ಎದ್ದಾಗ ಬದುಕುವ,

ನಾಳೆಯ ನಿರೀಕ್ಷೆಗಳಿಲ್ಲದ, 

ಇಂದಿನ ಒತ್ತಡಗಳಿಲ್ಲದ,

 

ಆರೋಗ್ಯದ ಕಾಳಜಿ ಇಲ್ಲದ, ಅನಾರೋಗ್ಯದ ಭೀತಿ ಇಲ್ಲದ,

ಸಂಬಂಧಗಳ ರಗಳೆ ಇಲ್ಲದ, 

ನಿಯಮಗಳ ಬಂಧವಿಲ್ಲದ,

 

ನಗು ಬಂದಾಗ ನಗುವ, 

ಅಳು ಬಂದಾಗ ಅಳುವ,

ಮುಖವಾಡವಿಲ್ಲದ, 

ಸಹಜ ಸ್ವಾಭಾವಿಕ......

 

ಆ ನನ್ನ ಬಾಲ್ಯವೇ ಮತ್ತೊಮ್ಮೆ ಬಾ,

ಆ ನಿನ್ನ ಮುಗ್ಧತೆ ನೆನಪಿಸು ಬಾ,

ಈಗ ನನ್ನ ದೇಹ ಮನಸ್ಸುಗಳು 

ಕಲ್ಮಷಗೊಂಡಿವೆ, 

ಈ ಯಾತನೆ ಸಹಿಸಲಾಗಿತ್ತಿಲ್ಲ.

ನನ್ನರಿವೇ ನನ್ನನ್ನು ಕೊಲ್ಲುತ್ತಿದೆ. 

ಅದನ್ನು ತಡೆಯಲಾದರೂ,

ಮತ್ತೊಮ್ಮೆ ಬಾ ನನ್ನ ಮುದ್ದು ಬಾಲ್ಯವೇ...

  • 305 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ಹಾಸನ ನಗರದಿಂದ ಸುಮಾರು 32 ಕಿಲೋಮೀಟರ್ ದೂರದ ಆಲೂರು ತಾಲ್ಲೂಕು ದಾಟಿ ಬಾಳ್ಳುಪೇಟೆ ಗ್ರಾಮ ತಲುಪಿತು. ಇಂದು 2/9/2021 ಗುರುವಾರ 306 ನೆಯ ದಿನ  ನಮ್ಮ ಕಾಲ್ನಡಿಗೆ ಬೆಳಗ್ಗೆ ಬಾಳ್ಳುಪೇಟೆಯಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ನಂತರ ಇಲ್ಲಿಂದ ಸುಮಾರು 14 ಕಿಲೋಮೀಟರ್ ದೂರದ ಸಕಲೇಶಪುರ ತಾಲ್ಲೂಕು ತಲುಪಲಿದೆ. ನಾಳೆ 3/9/2021 ಶುಕ್ರವಾರ 307 ನೆಯ ದಿನ ನಮ್ಮ ಕಾಲ್ನಡಿಗೆ ಅರೇಹಳ್ಳಿ ಗ್ರಾಮದತ್ತಾ...

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಬಾಲ್ಯವನ್ನು ನೆನಪಿಸುತ್ತಿರುವ ಮಕ್ಕಳು : ದಿಯಾ, ಸಾನ್ವಿ, ಹವಿಕ್ಷ್, ಮಾಲ್ವಿ, ಕುಂಪಲ, ಮಂಗಳೂರು