ಮತ್ಸರ ಮೂಡುತಿದೆ !

ಮತ್ಸರ ಮೂಡುತಿದೆ !

ಬರಹ

ಪ್ರಿಯಕರನೊಬ್ಬ ತನ್ನ ಪ್ರಿಯತಮೆಯೊಡನೆ ಸದಾ ಜೊತೆಗಿರುವ ಅಂಶಗಳನ್ನು ಕಂಡು ಕರುಬುತ್ತಾನೆ. ಅವುಗಳಲ್ಲಿ ಒಂದಾದರೂ ತಾನಾಗಿರಬೇಕೆಂದು ಬಯಸುವುದು ಅಡಕವಾಗಿದೆ. ಹಿಂದಿನ ಹಾಗೂ ಈಗಿನ ಕಾಲದ ಎರಡೂ ಕಲ್ಪನೆಗಳನ್ನು ಈ ಕವಿತೆಯಲ್ಲಿ ಉಣಬಡಿಸಲಾಗಿದೆ. ಬರಲಿರುವ ಪ್ರೇಮಿಗಳ ದಿನಕ್ಕೆ ನಿಮಗೆ ಈ ಕವಿತೆಯಿಂದೇನಾದರೂ ನಿಮಗೆ ಉಪಯೋಗವಾದಲ್ಲಿ ಪ್ರಯತ್ನ ಸಾರ್ಥಕ. ನಿಮಗೆ ಏನನ್ನಿಸುತ್ತದೆ ತಿಳಿಸುವಿರಾ ?

ಅಂದು
ನಿನ್ನ ಹಣೆಯನೇರಿ ಸದಾ ಶೋಭಿಸುವ
ಕೆಂಪು ಕುಂಕುಮದ ಭಾಗ್ಯವ ಕಂಡೆನಗೆ
ಮತ್ಸರ ಮೂಡುತಿದೆ

ನಿನ್ನ ಅಂದದ ಕೆನ್ನೆಯ ಮೇಲೆ ಹರಿವ
ಗುಂಗುರು ಕೂದಲಿನ ಭಾಗ್ಯವ ಕಂಡೆನಗೆ
ಮತ್ಸರ ಮೂಡುತಿದೆ

ನಿನ್ನ ಬಟ್ಟಲಗಣ್ಣುಗಳಿಗೊಪ್ಪುವ
ಕಪ್ಪು ಕಾಡಿಗೆಯ ಭಾಗ್ಯವ ಕಂಡೆನಗೆ
ಮತ್ಸರ ಮೂಡುತಿದೆ

ನಿನ್ನ ಕೊರಳ ಸದಾ ಅಪ್ಪಿ ಹಿಡಿವ
ಮುತ್ತಿನ ಹಾರದ ಭಾಗ್ಯವ ಕಂಡೆನಗೆ
ಮತ್ಸರ ಮೂಡುತಿದೆ

ನಿನ್ನ ನೀಳ ಬೆರಳ ಸುತ್ತಿ ಹಿಡಿವ
ಬಂಗಾರದ ಉಂಗುರದ ಭಾಗ್ಯವ ಕಂಡೆನಗೆ
ಮತ್ಸರ ಮೂಡುತಿದೆ

ನಿನ್ನ ಸುಂದರ ನೀಳ ದೇಹ ಸುತ್ತಿ ತಿರುಗುವ
ರೇಷ್ಮೆ ವಸ್ತ್ರದ ಭಾಗ್ಯವ ಕಂಡೆನಗೆ
ಮತ್ಸರ ಮೂಡುತಿದೆ

ಇಂದು
ನಿನ್ನ ಸುಂದರ ಕಿವಿಗಳ ಸದಾ ಅಪ್ಪಿ ಹಿಡಿವ
ಮೊಬೈಲ್ ಫ಼ೋನಿನ ಭಾಗ್ಯವ ಕಂಡೆನಗೆ
ಮತ್ಸರ ಮೂಡುತಿದೆ

ನಿನ್ನ ತೊಂಡೇ ತುಟಿಗಳ ರಂಗೇರಿಸುವ
ಬಣ್ಣದ ಲಿಪ್ಸ್ಟಿಕ್’ನ ಭಾಗ್ಯವ ಕಂಡೆನಗೆ
ಮತ್ಸರ ಮೂಡುತಿದೆ

ನಿನ್ನೊಡಲಿಗೆ ಸದಾ ತಾಕಿ ನೆಡೆವ
ಲೆದರ್ ಪರ್ಸ’ನ ಭಾಗ್ಯವ ಕಂಡೆನಗೆ
ಮತ್ಸರ ಮೂಡುತಿದೆ

ಸೀಟಿನ ಮೇಲೆ ಕುಳಿತಾಗ ನಿನ್ನಪ್ಪಿ ಹಿಡಿವ
ಸೀಟ್ ಬೆಲ್ಟ್’ನ ಭಾಗ್ಯವ ಕಂಡೆನಗೆ
ಮತ್ಸರ ಮೂಡುತಿದೆ

ನಿನ್ನ ಬೆಚ್ಚನೆಯ ಮೃದು ಕೈಗಳಲಿ ನಲಿವ
ಕಂಪ್ಯೂಟರ್ ಮೌಸ್’ನ ಭಾಗ್ಯವ ಕಂಡೆನಗೆ
ಮತ್ಸರ ಮೂಡುತಿದೆ

ನಿನ್ನೊಂದಿಗೆ ಪ್ರತೀ ಸಂಜೆ ಹಾಯಾಗಿ ಸುತ್ತುವ
ಪಾಮೊರಿನ್ ಮರಿಯ ಭಾಗ್ಯವ ಕಂಡೆನಗೆ
ನಿಜಕ್ಕೂ ಮತ್ಸರ ಮೂಡುತಿದೆ