ಮದುಮಲೈ ಟೈಗರ್ ಫಾರೆಸ್ಟ್ ನಲ್ಲಿ ಜೇನು (ಭಾಗ 1)

ಮದುಮಲೈ ಟೈಗರ್ ಫಾರೆಸ್ಟ್ ನಲ್ಲಿ ಜೇನು (ಭಾಗ 1)

ಸುಮಾರು 6 ವರ್ಷಗಳ ಹಿಂದೆ ಶಾಲೆಯಲ್ಲಿ ಮಹಾನ್ ಚೇತನ ಅಂಬೇಡ್ಕರ್ ಜಯಂತಿಯನ್ನು ಮುಗಿಸಿಕೊಂಡು ಮಧ್ಯಾಹ್ನದ ಊಟ ಮಾಡಿ ನನ್ನ ಕರ್ತವ್ಯದ ಸ್ಥಳದಿಂದ ಸಂಜೆ ಮೂರು ಗಂಟೆ ಸುಮಾರಿಗೆ ಊಟಿಗೆ ಹೋಗಲು ನಮ್ಮ ಪಯಣದ ಹಾದಿ ಶುರುವಾಗಿತ್ತು. ನಾನು, ಕುಮುದಾ, ಮಗಳು ತನೇಹಾ, ಶಿಷ್ಯ ಸಿದ್ದೇಶ ಹಾಗೂ ದೇವರಾಜ ಮತ್ತು ಸಣ್ಣ ರುದ್ರ ಎಂಬ ಅತಿಥಿ ಶಿಕ್ಷಕರು ನಮ್ಮ ಜೊತೆಯಲ್ಲಿ ಇದ್ದರು. ಬೇಸಿಗೆಯಾದ್ದರಿಂದ ನಾಲ್ಕೂ ಕಿಟಕಿಗಳು ಓಪನ್ ಇರುತ್ತಿದ್ದವು. ರೋಡ್ ಪ್ರೀ ಇದ್ದರೆ ನನ್ನ ಗಾಡಿಯ ವೇಗ ಕನಿಷ್ಠ  110-120 km/h ಇರುತ್ತದೆ. ಅದರಂತೆ ಬಳ್ಳಾರಿಯಿಂದ ನಂಜನಗೂಡಿಗೆ ಹೋಗಿ ರಾತ್ರಿ ಅಲ್ಲಿಯೇ ಉಳಿದು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಅಲ್ಲಿಂದ ಊಟಿಗೆ ಹೊರಡುವುದು ನಮ್ಮ ಪ್ಲಾನ್ ಆಗಿತ್ತು. ಅದೆಷ್ಟು ಬಾರಿ ಮೈಸೂರಿಗೆ ನಾವು ಜಾಲಿರೈಡ್ ಹೊಗಿದ್ದೇವೋ ಗೊತ್ತಿಲ್ಲ. ಪ್ರತಿ ಬಾರಿಯೂ  ವಿಶೇಷ ವಿಭಿನ್ನ... ಮೈಸೂರೇ ಹಾಗೇ... ಅಂದು  ಯೋಜನೆಯಂತೆ ಶ್ರೀರಂಗಪಟ್ಟಣದ ಬಳಿ ಯಾವುದೂ ಒಂದು ಹೋಟೆಲಲ್ಲಿ  ವೆಜ್ ಊಟವನ್ನು ಪಾರ್ಸಲ್ ಕಟ್ಟಿಸಿಕೊಂಡು ಮಗಳಿಗೆ ಕಾರಿನಲ್ಲೇ ಊಟ ಮಾಡಿಸುತ್ತಾ ಹೆದ್ದಾರಿಯ ದಾಟಿ ಮೈಸೂರು ನಗರಕ್ಕೆ ಬಂದೆವು. ನಾವು ಹೋಗುವ ಕೆಲವೇ ಹೊತ್ತಿನಲ್ಲಿ ಒಂದು ಸುತ್ತು ಮಳೆ ಹನಿ ಬಂದು ಹೋಗಿ  ಆಗ ತಾನೇ ಮಳೆಬಿಟ್ಟು ಸೋನೆಮಳೆ ಸುಳಿಗಾಳಿಯಲ್ಲಿ ತೇಲಿಬರುತ್ತಿತ್ತು. ನಂಜನಗೂಡು ರಸ್ತೆಗಾಗಿ  ಲೊಕೇಶಣ್ಣನ (google location) ಮಾರ್ಗದರ್ಶನದಲ್ಲಿ  ಹೋಗಲು ಮುಂದೆ ಸಾಗುತ್ತಾ ಬಂದೆವು. ಮೈಸೂರು ರಿಂಗ್ ರೋಡಲ್ಲಿ ಬಂದಾಗ ಸುಮಾರು ಹನ್ನೊಂದು ಹನ್ನೊಂದು ಇಪ್ಪತ್ತು.. ಬಲಕ್ಕೆ ಚಾಮುಂಡೇಶ್ವರಿ ಬೆಟ್ಟ ಕಾಣುತ್ತಿರುವುದು ಬಿಟ್ಟರೆ ನಾವೆಲ್ಲಿದ್ದಿವಿ... ನಾವು ಹೋಗುತ್ತಾ ಇರುವ ದಾರಿ ಸರಿನಾ?? ನಾವು ನಂಜನಗೂಡಿಗೆ ಹೋಗುತ್ತಿದ್ದೇನೋ ಬೇರೆ ಎಲ್ಲಿಗಾದರೂ ಹೋಗುತ್ತಿದ್ದೇನೋ ಏನು ಗೊತ್ತಾಗುತ್ತಿಲ್ಲ. ಮೊಬೈಲ್ ನೋಡಿದರೆ ಲೋಕೇಶಣ್ಣ ಮೂತಿ ಬೇರೆಕಡೆ ತಿರುಗಿಸಿ ಕೂತಿದ್ದಾನೆ. ನಿರ್ಜನ ಪ್ರದೇಶ. ಅಲ್ಲೊಂದು ಇಲ್ಲೊಂದು ವಾಹನಗಳು ವೇಗವಾಗಿ ಪಾಸ್ ಆಗುತ್ತಿದ್ದವು. ದಿಕ್ಕು ತೋಚದೇ  ಯಾರಿಗೂ ಕೇಳದೇ ಮುಂದೆ ಹೋಗಾಣ ಎಂದರೆ ಧೈರ್ಯ ಬರುತ್ತಿಲ್ಲ. ಯಾರನ್ನಾದರೂ ಕೇಳೋಣ ಎಂದರೆ ಅಲ್ಲಿ ಯಾರೂ ಕಾಣುತ್ತಿಲ್ಲ. ಆ ಸಮಯಕ್ಕೆ  ಸರಿಯಾಗಿ ಅಲ್ಲೊಂದು ಯಾವುದೋ ಪ್ಯಾಸೆಂಜರ್ ಆಟೋ ಬಂತು. ಕೈ ಅಡ್ಡ ಹಾಕಿ ನಂಜನಗೂಡು ಅಂತ ಕೇಳಿದರೆ ಈಗ ನೀವು ಮೈಸೂರು ಸಿಟಿಕಡೆ  ಹೋಯಿತಾ ಇದೀರಿ...  U -Turn  ತಗೊಂಡು  ಸ್ಟ್ರೈಟ್ ಹೋಗಿ  ಹದಿನೈದು ಹದಿನಾರು ಕಿಮೀ ಆದ ಮೇಲೆ ಒಂದು Arch (ಕಮಾನು) ಬರತ್ತೆ ಅಲ್ಲಿ ಡೈರೆಕ್ಷನ್ ತೋರಿಸಿದ್ದಾರೆ ಹೋಗಿ ಎಂದು ಹೇಳಿದ. 

ಅವನ ಮಾತನ್ನು ಕೇಳಿ ಮುಂದೆ ಬಂದಾಗ ಊಟಿ ಮುಖ್ಯರಸ್ತೆಯಿಂದ ಡೈರೆಕ್ಷನ್ ತೋರಿಸಿದಂತೆ ಎಡಕ್ಕೆ ನಂಜನಗೂಡು ಕಡೆಗೆ ತಿರುಗಿಸಿದೆ. ಊಟಿ ಮುಖ್ಯರಸ್ತೆಯಲ್ಲಿ ಸಿಟಿ ದಾಟಿ ಬಂದೆವು. ಹೈವೆಯ ಯಾವುದೋ  ಒಂದು ಸೇತುವೆ. ಆ ಸೇತುವೆಯ ಮೇಲೆ  HEADLIGHT ಬೆಳಕಿಗೆ ಅರ್ಧ ಗೋಲಾಕಾರದಂತೆ  ಏನೋ ಕಾಣಿಸಿತು. ತಕ್ಷಣಕ್ಕೆ ಅದೇನು ಅಂತ ಗೊತ್ತಾಗಲಿಲ್ಲ. ಹತ್ತಿರ ಬಂದು ನೋಡಿದರೆ ನಾಲ್ಕೈದು  ಕೆಜಿಯಷ್ಟು ತೂಕದ ದೊಡ್ಡ ಆಮೆಯೊಂದು ರಸ್ತೆಯನ್ನು ಕ್ರಾಸ್ ಮಾಡಲು ತೆವಳಿಕೊಂಡು ಹೋಗುತ್ತಿತ್ತು. ವಾಹನಗಳ ಸಂಖ್ಯೆಯು ವಿರಳವಾಗಿತ್ತಾದರೂ ಆ ರಸ್ತೆಯಲ್ಲಿ ಗರಿಷ್ಠ  ವೇಗದಿಂದ ವಾಹನಗಳು ಪಾಸ್ ಆಗುತ್ತಿದ್ದವು. ಯಾರಾದರೂ ಸ್ಯಾಡಿಸ್ಟ್  ಲಾರಿಡ್ರೈವರ್ ಗಳು ಅದರ ಮೇಲೆ ವಾಹನ ಚಲಾಯಿಸಿಕೊಂಡು ಹೋಗಬಹುದೆಂದು ಪಾರ್ಕಿಂಗ್ ಲೈಟ್ ಆನ್ ಮಾಡಿ ಕಾರು ಸೈಡಿಗೆ ಹಾಕಿದೆ. ದೇವರಾಜ ಬಳ್ಳಾರಿ ಭಾಷೆಯಲ್ಲಿ 'ಲೇ ರುದ್ರ ತಬಾಲಿ ಲೇ... ಎದ್ದೇಳು..' ಎಂದು ಸೀಟಿಗೆ ಆನಿಕೊಂಡು ತೂಕಡಿಸುತ್ತಿದ್ದ ರುದ್ರೇಶನನ್ನು ಎಬ್ಬಿಸಿ ಕೆಳಗಿಳಿದರು. ಹೆಡ್ಲೈಟ್ ಬೆಳಕಿನಲ್ಲಿ ತೆವಳಿ ತೆವಳಿ ಸಾಗುತ್ತಿದ್ದ ಆಮೆಯ ಮುಂದೆ ನಿಂತರು. ಅದು ಒಂದು ಕ್ಷಣ ತನ್ನ ಕತ್ತು ಕಾಲು ಒಳಗೆ ಹಾಕಿ ನಿಂತಿತು. "ಸಾರ್ ದೊಡ್ಡ ತಬಾಲಿ ಸಾರ್" ಎಂದು ದೇವರಾಜ ಕೂಗಿದ. ಆಕಡೆ ಬಗ್ಗಿನೋಡು ಏನಿದೆ ಅಂತ ಹೇಳಿದ್ದಕ್ಕೆ ನೀರಿದೆ ಸಾರ್ ಎಂದು ಹೇಳಿದ ಹಾಗದರೆ ಎತ್ತಿ ನೀರಿಗೆ ಹಾಕು ಎಂದು ಹೇಳಿದ್ದಕ್ಕೇ ಕಚ್ಚುವುದೋ ಪರಚುವುದೋ ಎಂಬ ಭಯದಿಂದಲೇ ಎತ್ತಿ ನೀರಿಗೆ ಎಸೆದರು. ಬಹುಶಃ ಅದು ಆ ನೀರಿನಿಂದಲೇ ಎದ್ದು ಬಂದಿರಬೇಕು ಆದರೆ ರಸ್ತೆಯ ಮೇಲೆ ಅಪಾಯಕಾರಿಯಾದ ಜಾಗದಲ್ಲಿ ಇದ್ದುದ್ದರಿಂದ ಅದರ ಉಳಿಗಾಲಕ್ಕೆ ತೊಂದರೆ ಯಾಗಬಹುದೆಂದು ಯಾವುದಾದರೂ ವಾಹನಗಳ ಚಕ್ರಕ್ಕೆ ಸಿಲುಕಿಯೋ, ಅಥವಾ ಆಮೆ ತಿನ್ನುವರ ಕೈಗೆ ಸಿಕ್ಕೋ ಬಲಿಯಾಗುವ ಎಲ್ಲಾ ಸಾದ್ಯತೆ ಇದ್ದುದರಿಂದ ನೀರಿಗೆ ಎಸೆಯಿರಿ ಎಂದು ಹೇಳಿ ನೀರಿಗೆ ಹಾಕಿಸಿ ನಂಜುಂಡೇಶ್ವರನ ಸನ್ನಿದಿಗೆ ಮುಟ್ಟಿದೆವು. ಅಲ್ಲಿದ್ದ ವಸತಿ ಗೃಹಗಳಿಗೆ ರೂಂ ಕೇಳಿದರೆ ಎಲ್ಲವೂ ಪುಲ್ ಆಗಿ ಹಾದಿ ಬೀದಿಯಲೆಲ್ಲಾ ಜನ ಗಾಡಿ ನಿಲ್ಲಿಸಿ ಎಲ್ಲೆಂದರಲ್ಲೇ ಮಲಗಿದ್ದರು. ಆ ರಶ್ ನೋಡಿ ಹಾಗೆ  ಊಟಿ ರಸ್ತೆಯ ಹಿಡಿಯೋಣ ಎಂದೆನಿಸಿದರೂ National Reserve ಪಾರೆಸ್ಟ್ ರೋಡ್ ಆದ್ದರಿಂದ ರಾತ್ರಿ ಒಂಭತ್ತು ಗಂಟೆಯ ನಂತರ ಬಂಡೀಪುರ ಅಭಯಾರಣ್ಯದ ರಸ್ತೆ ಬೆಳಿಗ್ಗೆ ಆರು ಗಂಟೆಯವರೆಗೆ ಕ್ಲೋಸ್ ಇರುತ್ತದೆ. ಅಲ್ಲೆಲ್ಲಿಯೋ  ಹೋಗಿ ಅರಣ್ಯದಲ್ಲಿ ನಿಂತುಕೊಳ್ಳುವುದು ಬೇಡ ಎಂದೆನಿಸಿ  ಇಲ್ಲೇ ಎಲ್ಲೋ ಸೈಡಿಗೆ ಹಾಕಿ ಚಾಪೆ ಹಾಸಿ  ಕಟ್ಟಿಸಿಕೊಂಡು ಬಂದಿದ್ದ ಊಟ ಮಾಡಿ ಮಲಗಿದೆವು. Nonstop ಡ್ರೈವಿಂಗ್ ಆದ್ದರಿಂದ ನಿದ್ರೆ ಬರುತ್ತಿತ್ತಾದರೂ  ಸೊಳ್ಳೆಗಳ ಹಾಡಿಗೆ ನಿದ್ರೆ ಬರಲಿಲ್ಲ. ಹೆಚ್ಚೆಂದರೆ ಹದಿನೈದು ಇಪ್ಪತ್ತು ನಿಮಿಷಗಳ ಕಾಲ ಮಲಗಿರಬಹುದು. ಹಾಗೆ ತೂಕಡಿಸುತ್ತಾ ಜೋಂಪು ಹತ್ತುವಷ್ಟತ್ತಿಗೆ ಸೊಳ್ಳೆಗಳು ಕಚ್ಚಿ ಎಚ್ಚರಗೊಳಿಸುತ್ತಿದ್ದವು.  ಹಿಂಗೇ ಮಾಡಿ ಹಂಗೂ ಹಿಂಗೂ ನಾಲ್ಕು ಗಂಟೆ ಆಯಿತು. ಎಲ್ಲರನ್ನೂ ಎಬ್ಬಿಸಿ ಗಂಟು ಮೂಟೆಗಳನ್ನು ಕಟ್ಟಿ ಕಾರು ಹತ್ತಿ ಕಪಿಲ ನದಿಕಡೆ ಬಂದೆವು. ಆಗ ಸ್ನಾನಘಟ್ಟದಲ್ಲಿ ಸ್ನಾನ ಮಾಡಲು ಬಂದ ಜನಸ್ತೋಮ ಕಡಿಮೆ ಇತ್ತು. ಎಲ್ಲರೂ ನೀರೊಳಗೆ ಮಿಂದು ಐದು ಗಂಟೆಯೊಳಗೆ ಸಿದ್ದವಾದೆವು. ನಂಜುಂಡನ ದರ್ಶನಕ್ಕೆ ಬಹುದೊಡ್ಡ ಸಾಲು ಇದ್ದುದರಿಂದ ನಂಜುಂಡನ ನೋಡದೇ ಊಟಿಯ ರಸ್ತೆ ಹಿಡಿದೆವು.

ಮೂಡಣದಿ ಶುಕ್ರಗ್ರಹ ಪ್ರಕಾಶಮಾನವಾಗಿ ಕಾಣುತ್ತಿತ್ತು. ಇನ್ನೇನು ಕೆಲವೇ ಹೊತ್ತಿನಲ್ಲಿ ಬೆಳಕು ಹರಿಯುತ್ತಲಿತ್ತು. ಬಂಡೀಪುರ ರಸ್ತೆ ಹಿಡಿದ ನಮ್ಮ ಕಾರು ಶರವೇಗದಿ ಸಾಗುತ್ತಲಿತ್ತು. ಸುತ್ತಲೂ ಬಯಲು ಪ್ರದೇಶವೇ ಕಾಣಿಸುತ್ತಿದ್ದುದರಿಂದ ಆನೆ ಇರುವಂತ ಕಾಡು ಇಲ್ಲಿ ಎಲ್ಲಿದೆಯೇ ?? ಹೆಚ್ಚು ಕಡಿಮೆ ನಮ್ಮ ಏರಿಯಾ ಇದ್ದ ಹಾಗೆಯೇ ಇದೆ ಎಂದೆ. ಮುಂದೆ ಬರುತ್ತಾ ಆ ಕಾಡಿನ ಸುತ್ತಲೂ  ದೊಡ್ಡದಾಗಿ ಆಳವಾಗಿ ಕಂದಕ ಮಾಡಿದ್ದರು. ನಾನು ದಿನಪತ್ರಿಕೆಗಳಲ್ಲಿ ನೋಡಿದಂತೆ ಆನೆ ಹುಲಿಗಳು ಅರಣ್ಯದಾಟಿ ಹೋಗದಂತೆ ಮಾಡಿರುವ ಕಂದಕ ಎಂದು ಎಲ್ಲರಿಗೂ ತೋರಿಸಿ ಹೇಳಿದೆ. ನೋಡಿ ಅದು ಎಂದು ಹೇಳುತ್ತಾ ಚೆಕ್ ಪೋಸ್ಟ್ ಹತ್ತಿರ ಬಂದಾಗ ಆರು ಗಂಟೆಗೆ ಹತ್ತುನಿಮಿಷ ಬಾಕಿ. ನಮಗಿಂತ ಮುಂಚೆ ಯಾವಾಗಲೋ ಬಂದು ನಿಂತ ವಾಹನಗಳು ಅನೇಕ ಇದ್ದವು. ಹತ್ತು ನಿಮಿಷಗಳು ಕಾದು ಚೆಕ್ ಪೋಸ್ಟ್ ಗೇಟ್ ಓಪನ್ ಆದ ಮೇಲೆ ಒಳಗೆ ಬಂದೆವು. ನಾನು 'ಬಂಡೀಪುರ' ಎಂಬ ಹೆಸರನ್ನು ಕೇವಲ ಪಠ್ಯಪುಸ್ತಕಗಳಲ್ಲಿ ಕೇಳಿದ್ದೆ, ಓದಿದ್ದೆ.  ಆದರೆ ಆ ಕಾಡಿನೊಳಗೇ ಪ್ರವೇಶಿಸಿದ್ದು ಅದೇ ಮೊದಲು. ನನ್ನ ಮುಂದೆ ಐದಾರು ಗೂಡ್ಸ್ ವಾಹನಗಳು, ಐದಾರು ಕಾರುಗಳು ಇದ್ದವು. ಸರಿಯಾಗಿ ಆರು ಗಂಟೆಗೆ ಗೇಟ್ ಓಪನ್ ಆದ ತಕ್ಷಣ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದ ಒಳಗೆ ಅಧಿಕೃತ ಪ್ರವೇಶ ಪಡೆದೆವು.

ಬಂಡೀಪುರ ಅಭಯಾರಣ್ಯ 874 ಚದರ ಕಿಲೋಮೀಟರ್ ವಿಸ್ತಾರದ ದಕ್ಷಿಣ ಏಷ್ಯಾದ ಅತಿದೊಡ್ಡ ಆನೆಗಳ, ನಮ್ಮ ರಾಷ್ಟೀಯ ಪ್ರಾಣಿ ಹುಲಿಗಳ ಆವಾಸ ಸ್ಥಾನ. ಅರಣ್ಯಕ್ಕೆ ಪ್ರವೇಶ ಪಡೆದ ಮೇಲೆ ಅಸಲಿ ಮಜಾ ಶುರುವಾಗಿದ್ದು. ದೊಡ್ಡ ದಟ್ಟವಾದ ಕಗ್ಗತ್ತಲಂತಹ ಕಾಡು ಅಲ್ಲದೇ ಇದ್ದರೂ ಕೆಂಪು ನೆಲದಲ್ಲಿ ಸಾಧಾರಣ ಎತ್ತರ ಬೆಳೆದ ಕುರುಚಲು ಕಾಡಿನಂತೆಯೇ ಆರಂಭವಾಗುವ ಸಾಮಾನ್ಯ ಗಿಡಮರಗಳು ಇದ್ದವು. ವಾಹನಗಳನ್ನು ವೇಗವಾಗಿ ಚಲಾಯಿಸಬಾರದೆಂದು ಪ್ರತಿ ನೂರು ಮೀಟರ್ ಗೆ ಒಂದು ರೋಡ್ ಹಂಪ್ಸ್ ಮತ್ತು ವೇಗಮಿತಿ 20-30 km/h. ನಾನು ಆ ಮಾರ್ಗವಾಗಿ ಮೊದಲ ಭೇಟಿಯಾದ್ದರಿಂದ ಪರಿಚಯ ಇರಲಿಲ್ಲ. 

(ಇನ್ನೂ ಇದೆ)

-ನಾಗೇಂದ್ರ ಬಂಜಗೆರೆ, ಬಳ್ಳಾರಿ

ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ