ಮಧ್ಯ ವಯಸ್ಸಿನವರಿಗೆ ಮರೆವು ಹೆಚ್ಚಾಗಲು ಕಾರಣವೇನು?
ಈಗಿನ ಯಾಂತ್ರಿಕ ಯುಗದಲ್ಲಿ ಎಲ್ಲರಿಗೂ ನೆನಪಿನ ಸಮಸ್ಯೆ ಕಾಡತೊಡಗಿದೆ. ಮೊದಲಾದರೆ ವಯಸ್ಸು ೯೦ ಆಗಿದ್ದರೂ ಜ್ಞಾಪಕ ಶಕ್ತಿ ಚುರುಕಾಗಿರುತ್ತಿತ್ತು. ಆ ವ್ಯಕ್ತಿಯ ಜೀವನದಲ್ಲಿ ನಡೆದ ಎಲ್ಲಾ ಘಟನೆಗಳು ನೆನಪಿರುತ್ತಿತ್ತು. ಆದರೆ ಈಗ ಮಧ್ಯ ವಯಸ್ಸಿಗೆ ಬರುವಾಗಲೇ ನೆನಪಿನ ಶಕ್ತಿ ಕುಂದಲಾರಂಭಿಸುತ್ತದೆ ಅಥವಾ ನಮಗೆ ಹಾಗೆ ಅನ್ನಿಸತೊಡಗುತ್ತದೆ. ಕೆಲವು ಸಲ ನಮ್ಮ ಮಾನಸಿಕ ಒತ್ತಡದ ಕಾರಣದಿಂದಲೂ ನಮಗೆ ಯಾವುದೇ ವಿಷಯ ನೆನಪಾಗುವುದಿಲ್ಲ. ಬಿಡುವಿಲ್ಲದ ಕೆಲಸ ಕಾರ್ಯಗಳಲ್ಲಿ ತೊಡಗುವುದರಿಂದಲೂ ಸಣ್ಣ ಸಣ್ಣ ವಿಷಯಗಳು ನೆನಪಾಗುವುದೇ ಇಲ್ಲ. ಮರೆವು ಕೆಲವು ಸಲ ಬಹಳ ದೊಡ್ಡ ಅನಾಹುತಕ್ಕೆ ಕಾರಣವಾಗಲೂ ಬಹುದು. ನಾವು ನಗೆಪಾಟಲಿಗೆ ಗುರಿಯಾಗಲೂ ಬಹುದು. ಈ ಮರೆವು ಸಂಭವಿಸಲು ಕೆಲವು ಸಾಮಾನ್ಯ ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
* ನಾವೇ ನಮ್ಮ ಜೀವನದಲ್ಲಿ ತಂದುಕೊಳ್ಳುವ ಕೆಲವು ಬದಲಾವಣೆಗಳು ನಮ್ಮ ಮಾನಸಿಕ ಸಂತುಲನವನ್ನು ಹಾಳು ಮಾಡುವ ಸಾಧ್ಯತೆ ಇದೆ. ಇದು ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಿ ಸಣ್ಣ ವಯಸ್ಸಿನಲ್ಲೇ ಮರೆವಿನ ಕಾಯಿಲೆ ಬರಬಹುದು.
* ನಾವು ಮಾಡುವ ಕೆಲಸ, ಸಂಸಾರದಲ್ಲಿನ ತೊಂದರೆಗಳು ನಮ್ಮ ಮಾನಸಿಕ ಒತ್ತಡ, ಆತಂಕಗಳಿಗೆ ಕಾರಣವಾಗಿ ಖಿನ್ನತೆ ಉಂಟಾಗಿ ನೆನಪು ಕಡಿಮೆಯಾಗಬಹುದು.
* ಸರಿಯಾಗಿ ನಿದ್ರೆ ಮಾಡದೇ ಇದ್ದರೆ, ನಿರಂತರವಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿಕೊಂಡಿದ್ದರೆ ಸರಿಯಾಗಿ ವಿಶ್ರಾಂತಿ ಸಿಗದೇ ಏಕಾಗ್ರತೆಯನ್ನು ಕಳೆದುಕೊಂಡು ಜ್ಞಾಪಕ ಶಕ್ತಿ ಕಡಿಮೆಯಾಗಬಹುದು.
* ನಮ್ಮ ದೇಹದಲ್ಲಿರುವ ಥೈರಾಯಿಡ್ ಗ್ರಂಥಿಯು ದೇಹದ ಸಂಪೂರ್ಣ ಬೆಳವಣಿಗೆಯಲ್ಲಿ ತನ್ನ ಪ್ರಭಾವವನ್ನು ಬೀರುತ್ತದೆ. ಅಂದರೆ ಕೆಲವೊಂದು ನಿರ್ದಿಷ್ಟ ಹಾರ್ಮೋನುಗಳನ್ನು ನಮ್ಮ ದೇಹದಲ್ಲಿ ಹರಿಯುವ ರಕ್ತಕ್ಕೆ ಬಿಡುಗಡೆ ಮಾಡಿ ಮೆಟಬಾಲಿಸಂ, ದೈಹಿಕ ಅಭಿವೃದ್ಧಿಗೆ ತೊಂದರೆ ಉಂಟು ಮಾಡಬಹುದು.
* ದೇಹದ ಕಾರ್ಯಕ್ಷಮತೆಯಲ್ಲಿ ಸ್ವಲ್ಪ ಅಡಚಣೆ ಉಂಟಾದರೆ ವ್ಯಕ್ತಿಯ ದೈಹಿಕ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಕಾರಣದಿಂದ ಕೆಲವು ಮಂದಿಗೆ ಶಾಶ್ವತವಾಗಿ ನೆನಪು ಶಕ್ತಿ ಅಳಿಸಿ ಹೋಗುವ ಸಂಭವವಿದೆ.
* ಕೆಲವು ವ್ಯಕ್ತಿಗಳು ನಿರಂತವಾಗಿ ಸೇವಿಸುವ ಮದ್ಯ, ಧೂಮಪಾನ ಮುಂತಾದ ಚಟಗಳಿಂದಲೂ ನೆನಪಿನ ಶಕ್ತಿ ಕುಂಠಿತವಾಗುತ್ತದೆ.
* ಯಾವುದಾದರೂ ಘಟನೆಯು ತೀವ್ರವಾಗಿ ನಮ್ಮ ಮನಸ್ಸನ್ನು ಕಾಡಿದ್ದರೂ, ನಮ್ಮ ಜೀವನದಲ್ಲಿ ಉತ್ಸಾಹವೇ ಹೊರಟು ಹೋಗಿ ಜ್ಞಾಪಕ ಶಕ್ತಿಗೆ ಕುಂದಾಗುತ್ತದೆ. ಕೆಲವು ಸಲ ಹಳೆಯ ನೆನಪುಗಳು ಜೀವಂತವಾಗಿದ್ದರೂ ಹೊಸದಾಗಿ ನಡೆದ ಘಟನೆಗಳು ಮರೆತು ಹೋಗುತ್ತವೆ.
* ದೈಹಿಕ ಆರೋಗ್ಯದ ಸಮಸ್ಯೆಗಳಾದ ಅಧಿಕ ರಕ್ತದೊತ್ತಡ, ಮಧುಮೇಹ ಇತ್ಯಾದಿಗಳು ನಿರಂತರವಾಗಿ ಕಾಡ ತೊಡಗಿದಾಗ ನೆನಪಿನ ಶಕ್ತಿ ಕುಂದುತ್ತದೆ.
ಮನಸ್ಸನ್ನು ಶಾಂತಗೊಳಿಸಲು ಪ್ರಾಣಾಯಾಮ, ಯೋಗ, ವ್ಯಾಯಾಮಗಳನ್ನು ಅಭ್ಯಾಸ ಮಾಡಿದರೆ ಮನಸ್ಸು ನಿಯಂತ್ರಣಕ್ಕೆ ಬರುತ್ತದೆ. ಗಲಿಬಿಲಿಯಾಗದೇ ಇರುವಾಗ ನೆನಪೂ ಚೆನ್ನಾಗಿರುತ್ತದೆ. ಆದುದರಿಂದ ಏಕಾಗ್ರತೆಯನ್ನು ಹೆಚ್ಚಿಸುವ ಮನಸ್ಥಿತಿಯನ್ನು ಬೆಳೆಸಿಕೊಂಡರೆ ಉತ್ತಮ. ನೆನಪು ಶಕ್ತಿ ಹೆಚ್ಚಿಸುವಂತಹ ಆಹಾರಗಳನ್ನೂ ಸೇವಿಸಬಹುದು.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ