ಮನಸಾಕ್ಷಿ

ಮನಸಾಕ್ಷಿ

ಪುಸ್ತಕದ ಲೇಖಕ/ಕವಿಯ ಹೆಸರು
ತೆಲುಗು ಮೂಲ: ನಕ್ಷತ್ರಂ ವೇಣುಗೋಪಾಲ್ ಕನ್ನಡಕ್ಕೆ: ಎಂ ಜಿ ಶುಭಮಂಗಳ
ಪ್ರಕಾಶಕರು
ವಂಶಿ ಪಬ್ಲಿಕೇಷನ್ಸ್, ನೆಲಮಂಗಲ, ಬೆಂಗಳೂರು - ೫೬೨ ೧೨೩
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ : ೨೦೨೨

ತೆಲುಗು ಭಾಷೆಯಿಂದ ಅನುವಾದಗೊಂಡಿರುವ ಈ 'ಮೌನಸಾಕ್ಷಿ' ಕಥಾ ಸಂಕಲನದಲ್ಲಿ ಹನ್ನೊಂದು ವೈವಿಧ್ಯಮಯ ಬದುಕಿನ ಕಥೆಗಳಿವೆ. ಇಲ್ಲಿ ಜಟಿಲವಾದ ಘಟ್ಟದಲ್ಲಿ ಮಧ್ಯಮ ವರ್ಗದ ಹೆಣ್ಣೊಬ್ಬಳು ತನ್ನ ಜೀವನದ ಗಮ್ಯವನ್ನು ರೂಪಿಸಿಕೊಳ್ಳುವ ಗಟ್ಟಿನಿಲುವಿನ ಕಥೆ, ಒಂದು ಸಾಮಾಜಿಕ ಧ್ಯೇಯ ಸಾಧನೆಗೆ ಹೋರಾಡುವ ನಿಸ್ವಾರ್ಥ ಮತ್ತು ಸ್ವಾರ್ಥ ಹೋರಾಟಗಾರರ ಭಿನ್ನ ನಿಲುವುಗಳನ್ನು ಅನಾವರಣಗೊಳಿಸುವ, ಮಕ್ಕಳ ಭವಿಷ್ಯತ್ತಿಗಾಗಿ ಭಾರತೀಯ ಮತ್ತು ಅನಿವಾಸಿ ಭಾರತೀಯ ಪೋಷಕರ ಚಿಂತನೆಗೆ ಕನ್ನಡಿ ಹಿಡಿಯುವ, ನಾಗರಿಕತೆ ಮತ್ತು ಮಾನವೀಯತೆಯ ವ್ಯಾಖ್ಯಾನವನ್ನು ಪ್ರಶ್ನಿಸುವ ಹಾಗೂ ಸಾಮಾಜಿಕ ತುಡಿತದ ಎಳೆಯುಳ್ಳ ಕಥೆಗಳಿವೆ. ಅವು ಕಣ್ಣಿಗೆ ಕಟ್ಟುವಂತೆ ನಿರೂಪಣೆಗೊಂಡಿವೆ.

ತೆಲುಗು ಭಾಷೆಯ ಮೂಲ ಲೇಖಕರಾದ ನಕ್ಷತ್ರಂ ವೇಣುಗೋಪಾಲ್ ಹುಟ್ಟೂರು ತೆಲಂಗಾಣ ಸಿದ್ದಿಪೇಟೆ. ಎರಡುವರೆ ದಶಕಗಳಿಂದ ಅಮೇರಿಕದ ವಾಷಿಂಗ್ಟನ್ ಡಿಸಿಯಲ್ಲಿ ನೆಲೆಸಿದ್ದಾರೆ. ಸಾಫ್ಟ್ ವೇರ್ ಉದ್ಯೋಗಿ, ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರಸಾರ ಮಾಧ್ಯಮ 'ಪಿಲುಪು' ಟಿವಿ ಸಂಸ್ಥಾಪಕರು ಮತ್ತು ಸಂಪಾದಕರಾಗಿದ್ದಾರೆ. ಕಾರ್ಯಕ್ರಮಗಳ ಪ್ರಸಾರದ ಮೂಲಕ 'ಪಿಲುಪು' ಟಿ ವಿ ಅಪಾರ ಜನಮನ್ನಣೆ ಗಳಿಸಿದೆ. ಅವರದ್ದು ತೆಲಂಗಾಣ ಮತ್ತು ಅನಿವಾಸಿ ಭಾರತೀಯರ ವಿಶಿಷ್ಟ ದನಿ. ಇವರ ಸಾಹಿತ್ಯ ವಿವಿಧ ಭಾಷೆಗಳಿಗೆ ಅನುವಾದ ಗೊಂಡಿದೆ. ಇವರ ಪ್ರಕಟಿತ ಕೃತಿಗಳು 'ಪಗಟೆ ಚುಕ್ಕಲು' (ನಾಟಕ), 'ಶ್ರೀಗೀತಂ' (ಕಾದಂಬರಿ), 'ಮೌನಸಾಕ್ಷಿ ಮತ್ತು 'ಅರುಗು' (ಕಥಾ ಸಂಕಲನಗಳು).

ನಕ್ಷತ್ರಂ ವೇಣುಗೋಪಾಲ್ ಅವರ ತೆಲುಗು ಕಥೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದವರು ಎಂ ಜಿ ಶುಭಮಂಗಳ. ಇವರು ಕೋಲಾರ ಜಿಲ್ಲೆಯ ಗುಡಿಬಂದೆಯಲ್ಲಿ ಜನಿಸಿ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ರಾಜ್ಯಶಾಸ್ತ್ರದಲ್ಲಿ ಎಂ ಎ ಪದವಿ. ಭಾರತೀಯ ವಿದ್ಯಾ ಭವನದ ಕನ್ನಡ ಪತ್ರಿಕೋದ್ಯಮ ಸ್ನಾತಕೋತ್ತರ ಡಿಪ್ಲೊಮಾ ಪದವೀಧರರು. ಒಂದು ದಶಕಗಳ ಕಾಲ ಉಪ ಸಂಪಾದಕಿ, ವರದಿಗಾರ್ತಿ, ಅನುವಾದಕಿಯಾಗಿ ಕೆಲಸ ಮಾಡಿದ್ದಾರೆ. ಇವರ ಅನುವಾದಿತ ಕಥೆಗಳು ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.