ಮನಸ್ಸಿನ ಮ್ಯಾಜಿಕ್

ಮನಸ್ಸಿನ ಮ್ಯಾಜಿಕ್

ಪುಸ್ತಕದ ಲೇಖಕ/ಕವಿಯ ಹೆಸರು
ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈ.ಲಿ., ಕ್ರೆಸೆಂಟ್ ರಸ್ತೆ, ಬೆಂಗಳೂರು
ಪುಸ್ತಕದ ಬೆಲೆ
ರೂ: ೫೦.೦೦ ಮುದ್ರಣ : ೨೦೧೪

ನವಕರ್ನಾಟಕ ಪ್ರಕಾಶನದವರು ಡಾ. ಸಿ.ಆರ್. ಚಂದ್ರಶೇಖರ್ ಇವರ ಸಂಪಾದಕತ್ವದಲ್ಲಿ ವ್ಯಕ್ತಿ ವಿಕಸನ ಮಾಲೆ ಈ ಮಾಲಿಕೆಯಲ್ಲಿ ಹೊರತಂದ ಪುಸ್ತಕವೇ ‘ಮನಸ್ಸಿನ ಮ್ಯಾಜಿಕ್'. ವೃತ್ತಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿದ್ದ ಅಡ್ಡೂರು ಕೃಷ್ಣ ರಾವ್ ಇವರ ಪ್ರವೃತ್ತಿ ಬರವಣಿಗೆ. ಮಂಗಳೂರಿನ ಬಳಕೆದಾರರ ವೇದಿಕೆಯ ಸಂಚಾಲಕರಾಗಿ ಹಲವಾರು ಮಂದಿಗೆ ಸಲಹೆ ಸಹಾಯ, ಮಾರ್ಗದರ್ಶನ ಮಾಡಿಕೊಟ್ಟಿದ್ದಾರೆ. ಕೃಷಿಯ ಬಗ್ಗೆಯೂ ಆಸಕ್ತಿ ಇರುವ ಇವರು ‘ಹಸುರು ಹೆಜ್ಜೆ' ಎಂಬ ಕೃತಿಯನ್ನು ಹೊರತಂದಿದ್ದಾರೆ. ದಿನ ಹಾಗೂ ಮಾಸ ಪತ್ರಿಕೆಗಳಿಗೆ ನಿರಂತರವಾಗಿ ಜಲಜಾಗೃತಿಯ ಬಗ್ಗೆ ಅಂಕಣ ಬರಹಗಳನ್ನು ಬರೆದಿದ್ದಾರೆ. ‘ಮೋಜಿನ ಗಣಿತ' ಮತ್ತು ಮನರಂಜನೆಗಾಗಿ ಬೀಜಗಣಿತ' ಇವರ ಅನುವಾದಿತ ಕೃತಿಗಳು.

ಅಡ್ಡೂರು ಕೃಷ್ಣ ರಾವ್ ಇವರು ಈ ಬಾರಿ ಹೊಸ ದಾರಿಯಲ್ಲಿ ಸಾಗುವ ಪ್ರಯತ್ನ ಮಾಡಿರುವಂತಿದೆ. ಏಕೆಂದರೆ ಈ ಸಲ ಅವರು ವ್ಯಕ್ತಿತ್ವ ವಿಕಸನದ ಬಗ್ಗೆ ಮಾಹಿತಿ ಪೂರ್ಣವಾಗಿ ಬರೆದಿದ್ದಾರೆ. ಖ್ಯಾತ ಮನೋ ವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್ ಅವರ ಸಂಪಾದಕತ್ವದಲ್ಲಿ ಹೊರ ಬಂದ ಈ ಪುಸ್ತಕ ಹಲವಾರು ವ್ಯಕ್ತಿತ್ವ ವಿಕಸನದ ಚಟುವಟಿಕೆಗಳತ್ತ ಬೆಳಕು ಚೆಲ್ಲುತ್ತದೆ. ಸಂಪಾದಕೀಯದಲ್ಲಿ ಅವರು ಬರೆದಂತೆ ಅಡ್ಡೂರು ಕೃಷ್ಣ  ರಾವ್ ಅವರು ಈ ಪುಸ್ತಕದಲ್ಲಿ ಸಣ್ಣ ಸಣ್ಣ ಅಧ್ಯಾಯಗಳು, ಅವುಗಳಿಗೆ ಆಕರ್ಷಕ ಶೀರ್ಷಿಕೆಗಳು, ಚಿಕ್ಕ ವಾಕ್ಯಗಳು, ಉದಾಹರಣೆಯಾಗಿ ಸಣ್ಣ ಕಥೆಗಳು, ಸ್ವ ಅನುಭವಗಳು ಇವೆಲ್ಲಾ ಅಪರೂಪದ ಶೈಲಿ ಓದುಗರ ಮನಮುಟ್ಟುತ್ತವೆ. ಕನ್ನಡಿಗರಿಗೆ ಈ ಪುಸ್ತಕ ಉಪಯುಕ್ತ ಎನ್ನುವುದರಲ್ಲಿ ಅನುಮಾನವೇ ಇಲ್ಲ ಎಂಬುದು ಸಂಪಾದಕರ ಮನದ ನುಡಿ.

ಲೇಖಕರಾದ ಅಡ್ಡೂರು ಕೃಷ್ಣ ರಾವ್ ಅವರು ಬರೆಯುವಂತೆ’ ನಮ್ಮ ಮನಸ್ಸು ಮ್ಯಾಜಿಕ್ ಮಾಡುತ್ತಲೇ ಇರುತ್ತದೆ. ಅಸಾಧ್ಯವೆಂದು ತೋರುವ ಕಸನುಗಳನ್ನು ಹುಟ್ಟುಹಾಕುತ್ತದೆ. ಅನಂತರ ಅವುಗಳನ್ನು ನನಸು ಮಾಡುವ ದಾರಿಗಳನ್ನೂ ತೋರಿಸುತ್ತಲೂ ಇರುತ್ತದೆ. ಆ ದಾರಿಗಳಲ್ಲಿ ಯಾವುದು ಸೂಕ್ತವೆಂದು ಆಯ್ಕೆ ಮಾಡುತ್ತಾ, ಹೆಜ್ಜೆಯ ಮೇಲೆ ಹೆಜ್ಜೆಯನ್ನಿರಿಸುತ್ತಾ ಸಾಧನೆಯ ಮಾರ್ಗದತ್ತ ಸಾಗುವುದು ನಮ್ಮ ಕೈಯಲ್ಲಿದೆ. ಪ್ರಗತಿಯ ಬೀಜ ಮಂತ್ರ ನಿಮ್ಮ ಮನಸ್ಸಿನಲ್ಲಿದೆ. ಇಂತಹ ಹಲವಾರು ಸಾಧನೆಗಳಿಗೆ ನಿಮ್ಮ ಮನಸ್ಸಿನ ತಾಕತ್ತು ಹಾಗೂ ಲಾಸ್ಯಗಳನ್ನು ಹೇಗೆ ದುಡಿಸಿಕೊಳ್ಳಬಹುದು ಎಂಬುದನ್ನು ತಿಳಿಸುವುದೇ ಈ ಪುಸ್ತಕದ ಉದ್ದೇಶ ಎಂದು ಹೇಳಿಕೊಳ್ಳುತ್ತಾರೆ.

೨೦ ಅಧ್ಯಾಯಗಳನ್ನು ಹೊಂದಿರುವ ಈ ಪುಸ್ತಕದ ಒಂದೊಂದು ಅಧ್ಯಾಯವೂ ಮಾಹಿತಿ ಪೂರ್ಣವಾಗಿದೆ. 

ಅಡ್ಡೂರು ಕೃಷ್ಣ ರಾವ್ ಇವರು ವ್ಯಕ್ತಿ ವಿಕಸನದ ಕುರಿತು ಪ್ರತಿಯೊಂದು ಅಧ್ಯಾಯದಲ್ಲಿ ಸೊಗಸಾಗಿ ವರ್ಣಿಸಿದ್ದಾರೆ. ಅದಕ್ಕೆ ಪೂರಕವಾಗುವ ರೇಖಾ ಚಿತ್ರಗಳೂ ಜೊತೆಗಿವೆ. ಮಾನವನ ಜೀವನದಲ್ಲಿರುವ ಆಂತರಿಕ ಶಕ್ತಿಯ ಖಜಾನೆಗಳು, ಮಾನಸಿಕ ತಡೆಯನ್ನು ತೊಲಗಿಸುವುದು, ಏಕಾಗ್ರತೆ ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಸಣ್ಣದಾಗಿ ಆದರೂ ಪ್ರಭಾವಶಾಲಿಯಾಗಿ ಬರೆದಿದ್ದಾರೆ. ತಮ್ಮದೇ ಕೆಲವು ಸ್ವಂತ ಅನುಭವವನ್ನೂ ಕಟ್ಟಿಕೊಟ್ಟಿದ್ದಾರೆ. ಉತ್ತಮ ಸಂಬಂಧಕ್ಕಾಗಿ ಎಂಪಥಿ ಎಂಬ ಅಧ್ಯಾಯದಲ್ಲಿ ಬ್ಯಾಂಕ್ ಕ್ಯಾಷಿಯರ್ ಒಬ್ಬರ ಅನುಭವ ಕಟ್ಟಿಕೊಟ್ಟಿದ್ದಾರೆ. ಕ್ಯಾಷಿಯರ್ ಆಗಿದ್ದ ಮಹಿಳೆಯೊಬ್ಬರ ಕೈಯಿಂದ ೫೦೦೦ ರೂ ಅಧಿಕ ಪಾವತಿಯಾಗಿತ್ತು. ಗಡಿಬಿಡಿಯಲ್ಲಿ ಹುಡುಕಿದಾಗ ಅದು ಸಿಗಲಿಲ್ಲ. ಆಗ ಆ ಮಹಿಳೆಗೆ ಬೇಕಾಗುವುದು ಸಿಂಪಥಿ (ಸಾಂತ್ವನ)ಯಲ್ಲ. ಎಂಪಥಿ. ಅಂದರೆ ನಿಮ್ಮ ಸಹಾಯಕ್ಕೆ ನಾನಿದ್ದೇನೆ ಎಂಬ ಭಾವ. ಆ ಸಮಯ ಬ್ಯಾಂಕ್ ಪ್ರಬಂಧಕರು ಆ ಮಹಿಳೆಗೆ ೫೦೦೦ರೂಗ಼ಳ ಚೆಕ್ ನೀಡಿ ಅಂದಿನ ಖಾತೆಯನ್ನು ಸರಿತೂಗಿಸಲು ಸಹಾಯ ಮಾಡುತ್ತಾರೆ. ಇದು ನಿಜಕ್ಕೂ ಪ್ರಯೋಜನಕ್ಕೆ ಬರುವಂತಹ ಸಹಾಯ.

"ಪ್ರತಿಯೊಂದು ಅಧ್ಯಾಯದಲ್ಲಿಯೂ, ಆ ಅಧ್ಯಾಯದಲ್ಲಿ ಸಾದರಪಡಿಸಿದ ಸಂಗತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆ ಎಂಬುದನ್ನು ವಿವರಿಸಿರುವುದು ಈ ಪುಸ್ತಕದ ವಿಶೇಷತೆ. ಉದಾಹರಣೆಗೆ, "ನಿಮ್ಮ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸಲಿಕ್ಕಾಗಿ..." ಎಂಬ ಅಧ್ಯಾಯದಲ್ಲಿ, ತಪ್ಪುಗಳಿಂದ ಕಲಿಯಲಿಕ್ಕಾಗಿ ಮಕ್ಕಳಿಗೆ ಹೇಗೆ ಮಾರ್ಗದರ್ಶನ ನೀಡಬೇಕು, "ಅದೇನು, ಇದೇನು?'ಎಂದು ಮತ್ತೆಮತ್ತೆ ಪ್ರಶ್ನಿಸುವ ಮಕ್ಕಳ ಪ್ರಶ್ನೆಗಳಿಗೆ ತಾಳ್ಮೆಯಿಂದ ಯಾಕೆ ಉತ್ತರಿಸಬೇಕು, ಮಕ್ಕಳ ಆಸಕ್ತಿಯ ಎಳೆ ಅನುಸರಿಸಿ ಕಠಿಣ ವಿಷಯಗಳನ್ನು ಹೇಗೆ ಕಲಿಸಬೇಕು, ಮಕ್ಕಳ ಮಾತುಗಳನ್ನು ಅಗಾಧ ಸಹನೆಯಿಂದ ಹೇಗೆ ಆಲಿಸಬೇಕು ಇತ್ಯಾದಿ ಸಂಗತಿಗಳನ್ನು ತಮ್ಮ ಹಾಗೂ ಇತರರ ಅನುಭವಗಳ ಮೂಲಕ ಸೊಗಸಾಗಿ ಪ್ರಸ್ತುತ ಪಡಿಸಿದ್ದಾರೆ. 

ಹೀಗೆ ಹತ್ತು ಹಲವಾರು ನಿದರ್ಶನಗಳನ್ನು ಹೊಂದಿರುವ ಈ ಪುಸ್ತಕವನ್ನು ಓದಿಯೇ ತಿಳಿದುಕೊಳ್ಳಬೇಕು. ಸುಮಾರು ೧೨೦ ಪುಟಗಳಿರುವ ಪುಸ್ತಕವನ್ನು ಓದಿದರೆ ನಿಜಕ್ಕೂ ಮನಸ್ಸಿಗೆ ಮ್ಯಾಜಿಕ್ ಮಾಡಿದಂತೆಯೇ ಅನಿಸುತ್ತದೆ.