ಮನುಷ್ಯತ್ವ ಮಾರಿದವರಿಗೇಕಿಲ್ಲ ಶಿಕ್ಷೆ ?
ಇವರೆಲ್ಲಾ ನಮ್ಮ ಕಿವಿಗೆ ಹೂವು ಇಟ್ಟಿದ್ದು ಗೊತ್ತಾಗುವುದೇ ಇಲ್ಲ... ಅಲ್ಲವೇ? ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ … ಎಲ್ಲಿ ನಾರಿಯರನ್ನು ಪೂಜಿಸಲಾಗುತ್ತೊ ಅಲ್ಲಿ ದೇವರ ವಾಸ... ಅದು ಅಮೃತ ಸಮಾನ ಸ್ವರ್ಗದ ನೆಲೆ... ಎಂತಹ ಅಮೃತವಾಣಿ…!
ಆದರೆ ಬೆಂಗಳೂರಿನ ಅಮೃತಹಳ್ಳಿಯ ಲಕ್ಷ್ಮಿನರಸಿಂಹ ದೇವಸ್ಥಾನದಲ್ಲಿ.. ಅಮೃತವಾಗದಂತಹ ಒಂದು ಘಟನೆ ನಡೆದಿದೆ.. ಅಲ್ಲಿ ನಡೆದ ಒಂದು ಅಮಾನವೀಯ ಘಟನೆಯು ಟೀವಿಯಲ್ಲಿ ಚಲನಚಿತ್ರದಂತೆ ಪ್ರಸಾರವಾಗುತ್ತಿರುವುದನ್ನು ನೀವೂ ಗಮನಿಸಿರಬಹುದು. ದೇವಸ್ಥಾನದ ಆಡಳಿತ ಮಂಡಳಿಯ ಧರ್ಮದರ್ಶಿ ದೇವರ ದರ್ಶನಕ್ಕೆ ಬಂದ ಕಪ್ಪಾಗಿರುವ ಹೆಂಗಸೊಬ್ಬಳನ್ನು, ಅವಳ ಜಾತಿಯ ಮತ್ತು ಸ್ಥಾನದ ಬಗ್ಗೆ ಹೀಯಾಳಿಸಿ, ಹಿಗ್ಗಾಮುಗ್ಗಾ ಥಳಿಸಿ, ದರ ದರ ತಲೆಗೂದಲು ಹಿಡಿದೆಳೆದು, ದೇವಸ್ಥಾನದಿಂದ ಹೊರಕ್ಕೆಳೆದು ಬೀಸಾಕಿದ್ದಾನೆ. ಕಬ್ಬಿಣದ ಸಲಾಕೆಯಿಂದ ಹೊಡಯಲು ಮುಂದಾಗಿದ್ದಾನೆ. ತಮ್ಮೆದುರು ನಡೆಯುತ್ತಿರುವ ಇದನ್ನು ನೋಡಿದ, ದೇವರ ಅರ್ಚಕರು ಮತ್ತು ಇತರ ಸಜ್ಜನರು, ಇದಾಗದ ಹಾಗೆ ತಡೆಯಬಹುದಿತ್ತು...ತಡೆಯಲಿಲ್ಲ ..ದೇವರು ಕೂಡ ಕಾಪಾಡದೆ ದಂಗಾಗಿ ನಿಂತಿದ್ದ..ನೋಡಿಯೂ ನೋಡದಂತೆ..ಪಾಪ, ಪಾರುಪತ್ಯಗಾರರಿಗೆ ಹೆದರಿ..!
ಇತ್ತೀಚೆಗೆ ಹಳ್ಳಿಯೊಂದರಲ್ಲಿ ಅಸ್ಪೃಶ್ಯ ಹೆಂಗಸೊಬ್ಬಳು, ಕುಡಿಯುವ ನೀರು ಮುಟ್ಟಿ, ಮೈಲಿಗೆ ಆಗಿ..ಎಲ್ಲಾ ನೀರನ್ನೂ ಚೆಲ್ಲಿ, ನೀರಿನ ಟ್ಯಾಂಕ್ ಅನ್ನು ಆಕಳ ಮೂತ್ರದಿಂದ ಶುದ್ಧಿ ಮಾಡಿದ ಘಟನೆ.. ಮರೆಯುವ ಮುನ್ನವೇ ಇದು ನಡೆದಿದೆ. ಇಂತಹವುಗಳು ದೇವರು ಧರ್ಮ ಅರಿಯದ, ಯಾಂತ್ರಿಕವಾಗಿ ಬದುಕುವ ಅಪ್ರಬುದ್ಧ ಜನಗಳ ದೌರ್ಜನ್ಯವಾದರೆ, ಇನ್ನು ಸುಶಿಕ್ಷಿತ ಸಮಾಜದ ಪ್ರಬುದ್ಧ ಜನಗಳ ಮೊನ್ನೆ ಮೊನ್ನೆ ನಡೆದಿರುವ ಕಥೆ ಇನ್ನೊಂದು ರೀತಿಯಿದೆ. ಇಂತಹವರು ನೆಲದ ಮೇಲೆ ನಡೆಯದ ಆಕಾಶದಲ್ಲಿ ಹಾರಾಡುವ, ವಿಮಾನಗಳಲ್ಲಿ ಓಡಾಡುವ ಉನ್ನತ ಜನರು, ಕುಡಿದು ತೂರಾಡುವ ಜನರು.. ಮೈ ಮರೆತು, ವಿಮಾನಗಳಲ್ಲಿ ವಯಸ್ಸಾದ ಗೌರವಾನ್ವಿತ ಮಹಿಳೆಯ ಮೇಲೆ ಉನ್ಮತ್ತರಂತೆ ಮೂತ್ರ ವಿಸರ್ಜನೆ ಮಾಡುತ್ತಾರೆ. ಆದರೂ ಸುದ್ದಿಯಾಗದೆ, ಶಿಕ್ಷೆಯಾಗದೆ, ಸದ್ದು ಮಾಡದೆ ತಪ್ಪಿಸಿಕೊಳ್ಳುತ್ತಾರೆ. (ಆದರೆ ಈಗ ತಡವಾಗಿಯಾದರೂ ಈ ಘಟನೆಯು ಬೆಳಕಿಗೆ ಬಂದು ಆರೋಪಿಯನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ)
ಹೆಣ್ಣಿನ ಮೇಲೆ ನಾನಾ ರೀತಿಯ ದಬ್ಬಾಳಿಕೆ, ಅತ್ಯಾಚಾರ, ಅನಾಚಾರಗಳು ನಡೆಯುತ್ತಲೇ ಇರುತ್ತವೆ. ಏಕೆ ಗೊತ್ತೆ? ಸಬಲರ ಪೋಷಣೆ ಮತ್ತು ದುರ್ಬಲರ ಶೋಷಣೆಯ ಮನಸ್ಥಿತಿ. ಇಂತಹುದನ್ನೆಲ್ಲಾ ಘಟನೆಗಳು ನಡೆಯುತ್ತಿರುವಾಗ ಅಲ್ಲಿರುವ ಜನ ಸಾಮಾನ್ಯರು ಪ್ರತಿಭಟನೆ ಮಾಡುವುದೇ ಇಲ್ಲ. ಇಂತಹ ತಲೆ ತಗ್ಗಿಸುವಂತಹ ಅನೇಕಾನೇಕ ಘಟನೆಗಳು ಜರುಗುತ್ತಿದ್ದರೂ ಗಮನಿಸದೆ, ನಮ್ಮ ರಾಜಕೀಯ ನಾಯಕರು ಬಿಗಿಯುವ ಭಾಷಣಗಳಲ್ಲಿ, ನಾವು ಇಡೀ ವಿಶ್ವಕ್ಕೇ ಮಾದರಿಯಾಗಿದ್ದೇವೆ. ವಿಶ್ವ ಗುರುವೇ ಆಗಿದ್ದೇವೆ ಎಂದು ಘೋಷಿಸುವಾಗ....ಅದೆಂತಹ ಧನ್ಯತಾ ಭಾವದಿಂದ ಪುಳುಕಗೊಳ್ಳುತ್ತಾರೆ...!? ದೇವರೇ ಬಲ್ಲ. ಅವರು ಇವರ ಕಿವಿಗೆ ಹೂವು ಇಟ್ಟಿದ್ದು ಗೊತ್ತಾಗುವುದೇ ಇಲ್ಲ...ಅಲ್ಲವೇ !?...
-ಮೋಹನ ವೀ ಹೊಸೂರ.
ಚಿತ್ರ ಕೃಪೆ: ಇಂಟರ್ನೆಟ್ ತಾಣ