ಮನುಷ್ಯ ರೂಪದ ಸೌಂದರ್ಯ ಪ್ರಜ್ಞೆ ಎಂಬ ವಿಸ್ಮಯ...
ಒಬ್ಬ ಅತ್ಯಂತ ಸುಂದರ ಯುವಕ/ ಯುವತಿ ನಮಗೆ ಪರಿಚಯವಾಗುತ್ತಾರೆ. ಕೊನೆಗೆ ಅದು ಆತ್ಮೀಯ ಸ್ನೇಹವಾಗಿ ಮುಂದೆ ವ್ಯಾವಹಾರಿಕ ಸಂಬಂಧವೂ ಏರ್ಪಡುತ್ತದೆ. ಆಗ ಆ ವ್ಯಕ್ತಿ ನಮ್ಮ ಜೊತೆ ಉತ್ತಮ ಬಾಂಧವ್ಯ ಹೊಂದಿರುವವರೆಗೂ ಆತ ಅಥವಾ ಆಕೆ ಸುಂದರವಾಗಿಯೇ ಕಾಣುತ್ತಾರೆ. ಆದರೆ ಏನೋ ಕಾರಣದಿಂದಾಗಿ ಆ ಸುಂದರ ವ್ಯಕ್ತಿಯಿಂದ ನಮಗೆ ಮೋಸವಾಗುತ್ತದೆ ಎಂದು ಭಾವಿಸಿ. ಆಗ ಯಾವ ಸುಂದರ ವ್ಯಕ್ತಿ ತನ್ನ ಸೌಂದರ್ಯದಿಂದ ನಮ್ಮ ಮನ ಗೆದ್ದಿದ್ದರೋ ಅದೇ ವ್ಯಕ್ತಿ ಈಗ ನಮಗೆ ಕೆಟ್ಟದಾಗಿ ಕುರೂಪಿಯಾಗಿ ಕಾಣತೊಡಗುತ್ತಾರೆ. ಅವರ ಮುಖ ನೋಡಲೇ ಅಸಹ್ಯವಾಗುತ್ತದೆ. ಅದೇ ಬಾಹ್ಯ ಸೌಂದರ್ಯ ವ್ಯಾವಹಾರಿಕ ವ್ಯತ್ಯಾಸದಿಂದ ನಮಗೆ ಆ ರೀತಿಯ ಭಾವನೆ ಉಂಟು ಮಾಡುತ್ತದೆ.
ಅದೇ ರೀತಿ ಒಬ್ಬ ಕುರೂಪಿ ವ್ಯಕ್ತಿ ಅಥವಾ ನೋಡಲು ಅಷ್ಟೇನು ಚಂದವಿಲ್ಲದ ವ್ಯಕ್ತಿ ನಮ್ಮ ಜೀವನದ ಅತ್ಯಂತ ಕಷ್ಟದ ದಿನಗಳಲ್ಲಿ ನಮಗೆ ಸಹಾಯ ಮಾಡಿದರೆ ಅದೇ ಕುರೂಪಿ ವ್ಯಕ್ತಿಯ ಚಿತ್ರಣ ನಮ್ಮ ಮನಸ್ಸಿನಲ್ಲಿ ಬದಲಾವಣೆ ಹೊಂದಿ ಸುಂದರವಾಗಿ ಕಾಣತೊಡಗುತ್ತಾರೆ. ಅವರ ನಡವಳಿಕೆಗಳು ನಮಗೆ ಆತ್ಮೀಯತೆಯ ಅನುಭವ ನೀಡುತ್ತದೆ. ಅಂದರೆ ವ್ಯಕ್ತಿಯ ಸೌಂದರ್ಯ ಆತ ನಮ್ಮೊಡನೆ ಹೊಂದಿರುವ ಸಂಬಂಧದಿಂದ ಮತ್ತು ಆತನ ಬಗೆಗಿನ ನಮ್ಮ ಅಭಿಪ್ರಾಯದಿಂದ ನಿರ್ಧರಿಸಲ್ಪಡುತ್ತದೆ ಎಂದಾಯಿತು. ಹಾಗಾದರೆ ಮೇಲ್ನೋಟದ ಸೌಂದರ್ಯವನ್ನು ದೀರ್ಘಕಾಲದಲ್ಲಿ ನಿರ್ಧರಿಸುವುದು ನಮ್ಮ ಗುಣ - ನಡವಳಿಕೆ ಎಂದು ಭಾವಿಸಬಹುದಲ್ಲವೇ.?
ಇದೇ ಆಧಾರದ ಮೇಲೆ ಬಹುತೇಕ ಸಿನಿಮಾಗಳು, ಅದರಲ್ಲಿ ನಟಿಸುವ ನಟ ನಟಿಯರ ಗುಣ ರೂಪಗಳು ಸೃಷ್ಟಿಯಾಗಿವೆ. ಒಬ್ಬ ಯುವತಿಯನ್ನು 5-6 ಜನ ಯುವಕರು ಅತ್ಯಾಚಾರ ಮಾಡಲು ಪ್ರಯತ್ನಿಸುತ್ತಾರೆ. ಆಕೆ ಆ ಸಮಯದಲ್ಲಿ ಅಸಹಾಯಕಳಾಗಿರುತ್ತಾಳೆ. ಅದೇ ಸಮಯಕ್ಕೆ ಆಪದ್ಭಾಂದವನಂತೆ ಪ್ರತ್ಯಕ್ಷವಾಗುವ ನಾಯಕ ಆಕ್ರೋಶದಿಂದ ಆ ಎಲ್ಲಾ ಜನರನ್ನು ಹೊಡೆದು ನಾಯಕಿಯನ್ನು ರಕ್ಷಿಸುತ್ತಾನೆ. ನೋಡುವ ಪ್ರೇಕ್ಷಕನಿಗೆ ಅವನ ಒಳ್ಳೆಯತನದಿಂದಲೇ ಸುಂದರ ನಾಯಕನಾಗಿ ಕಾಣುತ್ತಾನೆ. ಆ ಯುವಕರು ನೋಡಲು ಸುಂದರವಾಗಿದ್ದರೂ ವಿಲನ್ ಗಳಂತೆ ಕೆಟ್ಟದಾಗಿ ಕಾಣುತ್ತಾರೆ. ಅಂದರೆ ಬಾಹ್ಯ ಸೌಂದರ್ಯ ಭ್ರಮೆ ಮತ್ತು ತಾತ್ಕಾಲಿಕ. ಆತನ ಒಳ್ಳೆಯತನವೇ ನಿಜ ಮತ್ತು ಶಾಶ್ವತ ಸೌಂದರ್ಯ ಎಂದು ಪರಿಗಣಿಸಬಹುದಲ್ಲವೇ.?
ಇದೇ ಸತ್ಯವಾದಲ್ಲಿ ಎಷ್ಟೊಂದು ಚೆಂದ ಅಲ್ಲವೆ. ಒಂದು ವೇಳೆ ನಮ್ಮ ಸೌಂದರ್ಯವನ್ನು ನಮ್ಮ ಒಳ್ಳೆಯ ನಡತೆ ನಿರ್ಧರಿಸುವುದಾದರೆ ಅದು ಅನೇಕರಿಗೆ ಉತ್ತಮ ನಾಗರೀಕ ನಡವಳಿಕೆಯನ್ನು ರೂಪಿಸಿಕೊಳ್ಳಲು ಪ್ರೇರಣೆಯಾಗಬಹುದಲ್ಲವೇ. ಬಾಹ್ಯ ಸೌಂದರ್ಯ ಕೇವಲ ಮೊದಲ ನೋಟದ Physical ಅಪಿಯರೆನ್ಸ್ ಮಾತ್ರ ಮತ್ತು ಭ್ರಮೆ. ನಿಮ್ಮ ಗುಣವೇ ಶಾಶ್ವತ ಸೌಂದರ್ಯ. ಸಮಾಜದ ಎಲ್ಲರ ಮನಸ್ಸು - ಆತ್ಮ - ವ್ಯಕ್ತಿತ್ವಗಳಲ್ಲಿ ಇದು ನೆಲೆಗೊಳ್ಳಲಿ ಎಂದು ಆಶಿಸುತ್ತಾ...
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಫೇಸ್ಬುಕ್ ಜಾಲತಾಣ