ಮನೆಯಂಗಳದಲ್ಲಿ ತರಕಾರಿ ಬೆಳೆಯುವಿರಾ?

ಮನೆಯಂಗಳದಲ್ಲಿ ತರಕಾರಿ ಬೆಳೆಯುವಿರಾ?

ನಾವು ಸೇವಿಸುತ್ತಿರುವ ಆಹಾರವಾಗಲೀ, ಉಸಿರಾಡುತ್ತಿರುವ ಗಾಳಿಯಾಗಲೀ ಎಲ್ಲವೂ ವಿಷಮಯವಾಗಿದೆ. ಬೆಂಗಳೂರು, ಮುಂಬೈ, ದೆಹಲಿ ಮುಂತಾದ ದೊಡ್ಡ ದೊಡ್ದ ನಗರವಾಸಿಗಳಿಗೆ ಈಗ ಶುದ್ಧ ವಸ್ತುಗಳು ಸಿಗುವುದು ಅಪರೂಪವೇ ಆಗಿ ಹೋಗಿದೆ. ಗ್ರಾಮೀಣ ಭಾಗಗಳಲ್ಲಿ ರೈತರು ಬೆಳೆಯುವ ಕೃಷಿ ಉತ್ಪನ್ನಗಳೂ ರಾಸಾಯನಿಕ ಗೊಬ್ಬರಗಳು ಹಾಗೂ ಕೀಟನಾಶಕಗಳ ಕಾರಣದಿಂದಾಗಿ ಅವೂ ಕಲುಶಿತವಾಗಿವೆ. ನಾವು ಆಹಾರದಲ್ಲಿ ಬಳಸುವ ಪ್ರಮುಖ ವಸ್ತುವೆಂದರೆ ತರಕಾರಿಗಳು. ನಮ್ಮ ಮನೆಗೆ ಬೇಕಾದಷ್ಟು ತರಕಾರಿ, ಸೊಪ್ಪುಗಳನ್ನು ನಾವೇ ನಮ್ಮ ಮನೆಯಂಗಳದಲ್ಲಿ ಬೆಳೆದರೆ ನಮಗೆ ಶುದ್ಧವಾದ, ರಾಸಾಯನಿಕ ರಹಿತ ಆಹಾರ ಸಿಗುತ್ತದೆಯಲ್ಲವೇ?

ನಗರ ಪ್ರದೇಶಗಳಲ್ಲಿ ವಾಸಿಸುವ ನಿಮಗೆಲ್ಲಾ ಗೊತ್ತೇ ಇದೆ, ನಿರಂತರ ವಾಹನಗಳ ಓಡಾಟ, ಕೈಗಾರಿಕೆಗಳಿಂದ ಹೊರಬರುವ ನಿರುಪಯುಕ್ತ ರಾಸಾಯನಿಕ ಭರಿತ ವಸ್ತುಗಳು ಇವೆಲ್ಲವೂ ನಮ್ಮ ಜೀವನವನ್ನು ಬಹಳಷ್ಟು ಹಾಳು ಮಾಡಿ ಬಿಟ್ಟಿವೆ. ಯಾವುದೇ ಆಹಾರ ಪದಾರ್ಥಗಳನ್ನು ನಾವು ಖರೀದಿಸಿದರೂ ಅವುಗಳು ರಾಸಾಯನಿಕ ಮುಕ್ತವಾಗಿರುವುದಿಲ್ಲ. ಕೆಲವು ಮಂದಿ ‘ಸಾವಯವ’ ಬ್ರಾಂಡ್ ಮಾಡಿಕೊಂಡು ರಾಸಾಯನಿಕ ವಸ್ತುಗಳನ್ನೇ ಮಾರಾಟ ಮಾಡುತ್ತಾರೆ. ಅವುಗಳನ್ನು ಕಂಡು ಹಿಡಿಯುವ ಸರಿಯಾದ ಮಾನದಂಡಗಳೂ ನಮ್ಮಲ್ಲಿಲ್ಲ. ನಮ್ಮ ಕೈಯಾರೆ ನಾವೇ ವಿಷವನ್ನು ಸೇವಿಸುವ ಪರಿಸ್ಥಿತಿ ಎದುರಾಗಿದೆ. 

ನಮ್ಮದೇ ಮನೆಯ ಅಂಗಳ ಅಥವಾ ತಾರಸಿಯಲ್ಲಿ ನಮಗೆ ಅವಶ್ಯಕವಾಗಿರುವಷ್ಟು ತರಕಾರಿ ಮತ್ತು ಸೊಪ್ಪುಗಳನ್ನು ಬೆಳೆದರೆ ಈ ರಾಸಾಯನಿಕ ಪದಾರ್ಥಗಳಿಂದ ಸ್ವಲ್ಪ ಮಟ್ಟಿಗಾದರೂ ದೂರವುಳಿಯಬಹುದು. ಈಗೀಗ ದೊಡ್ದ ದೊಡ್ಡ ನಗರಗಳಲ್ಲಿ ವಾಸಿಸುವ ಜನರಿಗೂ ಆರೋಗ್ಯದ ಬಗ್ಗೆ ಕಾಳಜಿ ಮೂಡಲು ಪ್ರಾರಂಭವಾಗಿದೆ. ಬೆಳಗ್ಗೆಯ ಒಂದು ಪುಟ್ಟ ವಾಕಿಂಗ್, ಲಘು ವ್ಯಾಯಾಮ, ಗ್ರೀನ್ ಟೀ, ಕಿರು ಧಾನ್ಯಗಳು ಇವೆಲ್ಲಾ ಇವರ ದೈನಂದಿನ ಚಟುವಟಿಕೆಗಳ ಭಾಗವಾಗುತ್ತಿವೆ. ಮನೆಯಂಗಳದ ‘ಕಿಚನ್ ಗಾರ್ಡನ್’ ಬಗ್ಗೆ ಒಂದಿಷ್ಟು ಮಾಹಿತಿ ಪಡೆಯೋಣ.

ನಮ್ಮ ಮನೆಯ ಸುತ್ತಮುತ್ತಲಿನಲ್ಲಿರುವ ಅಲ್ಪ ಜಾಗದಲ್ಲಿ ನಾವು ತರಕಾರಿ ಅಥವಾ ಹಣ್ಣುಗಳನ್ನು ಬೆಳೆಯಬಹುದಾಗಿದೆ. ನಮ್ಮದೇ ತೋಟದ್ದಾದುದರಿಂದ ನಮಗೆ ತಾಜಾ ತರಕಾರಿಯೂ ಲಭ್ಯವಾಗುತ್ತದೆ. ಅವಶ್ಯವಾಗಿದ್ದಾಗ ಮಾತ್ರ ಗಿಡದಿಂದ ತೆಗೆದು ಬಳಸಬಹುದು. ಮಕ್ಕಳಿಗೂ ಕೈತೋಟದಲ್ಲಿ ಆಸಕ್ತಿ ಕುದುರುವಂತೆ ಮಾಡಿದರೆ ಅವರಿಗೆ ಉತ್ತಮ ವ್ಯಾಯಾಮವೂ ದೊರಕುತ್ತದೆ. ಕೃಷಿಯಲ್ಲಿ ಆಸಕ್ತಿಯೂ ಮಾಡುತ್ತದೆ. 

ಮನೆಯಲ್ಲಿ ತರಕಾರಿ ಬೆಳೆಯುವಿರಾದರೆ ನೀವು ಗಮನವಿಟ್ಟುಕೊಳ್ಳಬೇಕಾದ ವಿಷಯವೆಂದರೆ ಕೀಟನಾಶಕಗಳನ್ನು ಬಳಕೆ ಮಾಡಲೇ ಬಾರದು. ನಿಮ್ಮ ಮನೆಯಲ್ಲಿ ನೀವು ಬೆಳೆಯುವ ತರಕಾರಿಗಳ ಪ್ರಮಾಣ ಬಹಳ ಕಡಿಮೆಯಾಗಿರುವುದರಿಂದ ಅದಕ್ಕೆ ತಗಲುವ ರೋಗಗಳ ಪ್ರಮಾಣವೂ ಕನಿಷ್ಟವಾಗಿರುತ್ತದೆ. ಈ ಕಾರಣದಿಂದ ನೀವು ಕೀಟನಾಶಕ ಬಳಕೆ ಮಾಡುವುದು ಅಷ್ಟು ಸೂಕ್ತವಲ್ಲ. ಅವಶ್ಯಕವೆನಿಸಿದರೆ ರಾಸಾಯನಿಕ ರಹಿತ ಕೀಟನಾಶಕಗಳನ್ನು ಬಳಸಬಹುದಾಗಿದೆ. ಇದರಿಂದಾಗಿ ನಿಮ್ಮ ಮಣ್ಣಿನಲ್ಲಿರುವ ಪೌಷ್ಟಿಕ ಅಂಶಗಳು ಹಾಳಾಗದೇ ಉಳಿಯುತ್ತವೆ. ಬಹುತೇಕ ತರಕಾರಿಗಳು ಅಲ್ಪಾವಧಿಯದ್ದಾಗಿರುವುದರಿಂದ ನಿಮಗೆ ಬಹುಬೇಗನೇ ಫಲ ದೊರೆತು ಮುಂದಿನ ಬೆಳೆಗೆ ನೀವು ತಯಾರಾಗಬಹುದು. 

ನಿಮ್ಮ ತೋಟದಲ್ಲಿ ನೀವೇ ದುಡಿಯುವುದರಿಂದ ನಿಮಗೆ ಉತ್ತಮ ವ್ಯಾಯಾಮವೂ, ಸಮಯ ಕಳೆಯಲು ಉತ್ತಮ ಅಭ್ಯಾಸವೂ ಆಗುತ್ತದೆ. ಮಕ್ಕಳಿಗೂ ಕೆಲವೊಂದು ಗಿಡಗಳ ನಿರ್ವಹಣಾ ಜವಾಬ್ದಾರಿಯನ್ನು ವಹಿಸಿಕೊಟ್ಟರೆ ಅವರಿಗೂ ಖುಷಿಯಾಗುತ್ತದೆ. ಅಂಗಳದ ತರಕಾರಿ ಸೇವನೆಯಿಂದ ಖಂಡಿತವಾಗಿಯೂ ಆರೋಗ್ಯ ಸುಧಾರಿಸುತ್ತದೆ. ಆರ್ಥಿಕವಾಗಿಯೂ ನಿಮಗೆ ಕೆಲವೊಂದು ಲಾಭಗಳು ಆಗುತ್ತವೆ.

ನಿಮ್ಮ ತೋಟದಲ್ಲಿ ಸ್ವಲ್ಪ ಅಧಿಕ ಜಾಗವಿದ್ದರೆ ನೆರಳು ನೀಡಬಲ್ಲ ಹಣ್ಣಿನ ಗಿಡಗಳನ್ನು ನೆಡಬಹುದು. ಇದರಿಂದ ನಿಮಗೂ ಹಣ್ಣುಗಳು ಸಿಗುತ್ತವೆ, ಸ್ವಲ್ಪ ಪಾಲು ಹಕ್ಕಿಗಳಿಗೂ, ಉಪಯೋಗಿ ಕೀಟಗಳಿಗೂ ಸಿಗುತ್ತವೆ. ಇದರಿಂದಾಗಿ ನಿಮ್ಮ ತೋಟದಲ್ಲಿ ಸದಾಕಾಲ ಹಕ್ಕಿಗಳ ಕಲರವ ಇರುತ್ತದೆ. ತರಕಾರಿ ತ್ಯಾಜ್ಯಗಳಿಂದ ಉತ್ತಮ ಹಸಿರು ಗೊಬ್ಬರವನ್ನು ನಾವು ಮನೆಯಲ್ಲೇ ತಯಾರಿಸಿಕೊಳ್ಳಬಹುದಾಗಿದೆ. ನಮ್ಮ ಕಿಚನ್ ಗಾರ್ಡನ್ ನಲ್ಲಿ ನಾವು ಹಸಿರು ಸೊಪ್ಪುಗಳಾದ ಹರಿವೆ ಸೊಪ್ಪು, ಬಸಳೆ, ಪಾಲಕ್, ಮೆಂತೆ ಸೊಪ್ಪು, ಕೊತ್ತಂಬರಿ ಸೊಪ್ಪು ಇತ್ಯಾದಿಗಳನ್ನು ಸುಲಭವಾಗಿ ಬೆಳೆಸಬಹುದು. ಅದೇ ರೀತಿ ಬೆಂಡೆ ಕಾಯಿ, ತೊಂಡೆ ಕಾಯಿ, ಮೆಣಸಿನ ಕಾಯಿ, ಬದನೆ, ಹಾಗಲಕಾಯಿ, ಸೋರೆಕಾಯಿ, ಕುಂಬಳಕಾಯಿ, ಟೊಮ್ಯಾಟೊ, ಪಡುವಲ ಕಾಯಿ, ಸೌತೇಕಾಯಿ ಮುಂತಾದ ತರಕಾರಿಗಳನ್ನು ಬೆಳೆಸಬಹುದಾಗಿದೆ. ಕೆಲವು ತರಕಾರಿಗಳು ಬಳ್ಳಿ ಹಬ್ಬುವುದರಿಂದ ಅವುಗಳಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು. 

ನೀರಿನ ಹಾಗೂ ಗೊಬ್ಬರದ ವ್ಯವಸ್ಥೆ ಸೂಕ್ತವಾಗಿರುವಂತೆ ನೋಡಿಕೊಳ್ಳಬೇಕು. ಮಣ್ಣು, ಗೊಬ್ಬರ, ಕ್ರಿಮಿನಾಶಕಗಳ ಮಿಶ್ರಣದ ಅನುಪಾತವು ಸೂಕ್ತವಾಗಿರಬೇಕು. ಕೋಕೊಪಿಟ್ ಶೇ ೪೦, ಸಾವಯವ ಗೊಬ್ಬರ ಶೇ ೩೦, ಕೆಂಪುಮಣ್ಣು ಶೇ ೨೦ ಹಾಗೂ ರೋಗ ನಿರೋಧಕ ಮಿಶ್ರಣ ಶೇ ೧೦ರ ಪ್ರಮಾಣದಲ್ಲಿ ಬಳಸಿಕೊಳ್ಳುವುದು ಸೂಕ್ತ. ಇದರ ಜೊತೆ ಬೇವಿನ ಎಣ್ಣೆ, ಪಂಚಜನ್ಯ, ಸುಣ್ಣವನ್ನೊಳಗೊಂಡಂತೆ ಮಿಶ್ರಣವನ್ನು ಸಿದ್ಧಪಡಿಸಿಕೊಂಡು ಬಳಸಿಕೊಳ್ಳಬಹುದು. ಈ ಮಿಶ್ರಣವನ್ನು ಮಾರುಕಟ್ಟೆಯಲ್ಲಿ ಸಿಗುವ ‘ಗ್ರೋ ಬ್ಯಾಗ್' ಅಥವಾ ಪ್ಲಾಸ್ಟಿಕ್ ಬ್ಯಾಗ್ ಗಳಲ್ಲಿ ತುಂಬಿ ಅದರಲ್ಲಿ ತರಕಾರಿ ಬೆಳೆಯನ್ನು ಬೆಳೆಸಬಹುದು. ನೀವು ಬೆಳೆಯಲು ಉದ್ದೇಶಿಸಿರುವ ತರಕಾರಿಯ ಗಿಡದ ಗಾತ್ರಕ್ಕೆ ಸರಿಯಾಗಿ ಗ್ರೋ ಬ್ಯಾಗ್ ಅನ್ನು ಖರೀದಿಸಬೇಕು. ಉತ್ತಮ ದರ್ಜೆಯ ಗ್ರೋ ಬ್ಯಾಗ್ ಬಳಸಿದರೆ ನೀವು ೩-೪ ಸಲ ಆ ಬ್ಯಾಗ್ ಬಳಸಿಕೊಳ್ಳಬಹುದು. ೧೫೦ ಮೈಕ್ರಾನ್ ದಪ್ಪದ ಪ್ಲಾಸ್ಟಿಕ್ ಬ್ಯಾಗ್ ಗಳನ್ನು ಬಳಸಿದರೆ ನಿಮಗೆ ಕನಿಷ್ಟ ಐದು ವರ್ಷ ಬಾಳಿಕೆ ಬರುತ್ತದೆ.

ನೀವು ತರಕಾರಿಗಳನ್ನು ನೇರವಾಗಿ ಭೂಮಿಯಲ್ಲಿ ಅಥವಾ ಗ್ರೋ ಬ್ಯಾಗ್ ಗಳಲ್ಲಿ ಬೆಳೆಸಿದಾಗ ಮಣ್ಣಿನ ತೇವಾಂಶ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಕಾಲಕಾಲಕ್ಕೆ ಸೂಕ್ತ ಸಾವಯವ ಗೊಬ್ಬರ ನೀಡಬೇಕು. ಸೂರ್ಯನ ಬೆಳಕು ಸಿಗುವಂತೆ ಗಿಡಗಳನ್ನು ಬೆಳೆಸಬೇಕು. ನಿರುಪಯುಕ್ತ ಬಾಟಲಿಗಳು (ಪೆಪ್ಸಿ, ಕೋಲಾ), ಪೈಂಟ್ ಡಬ್ಬಿಗಳು ಇವುಗಳಲ್ಲೂ ಕೆಲವು ಬಗೆಯ ಸಸಿಗಳನ್ನು ಬಳಸಬಹುದು. ಇದರಿಂದ ನಿರುಪಯುಕ್ತ ಪ್ಲಾಸ್ಟಿಕ್ ಗಳು ಕಸದ ರಾಶಿಗೆ ಸೇರಿ ಮಾಲಿನ್ಯವಾಗುವುದನ್ನು ತಪ್ಪಿಸಬಹುದಾಗಿದೆ. 

ನಿಮ್ಮ ಮನೆಯ ಆವರಣದ ಗೋಡೆಗಳ ಮೇಲೂ ನೀವು ಅಲ್ಪ ಸ್ವಲ್ಪ ಬದಲಾವಣೆಗಳನ್ನು ಮಾಡಿ ಕುಂಡಗಳನ್ನು ಇಡಲು ಜಾಗ ಮಾಡಿಕೊಂಡರೆ ಅಲ್ಲೂ ನೀವು ತರಕಾರಿ ಗಿಡಗಳನ್ನು ಬೆಳೆಸಬಹುದಾಗಿದೆ. ಈಗಂತೂ ತಾರಸಿಯಲ್ಲಿ ಕೃಷಿ ಮಾಡುವುದು ಬಹಳ ಜನಜನಿತವಾಗಿದೆ. ಮನೆಯ ಆವರಣದಲ್ಲಿ ಜಾಗ ಇಲ್ಲದಿದ್ದರೇನಂತೆ. ತಾರಸಿಯಲ್ಲಿ ಇರುವ ಜಾಗದಲ್ಲೇ ಹಲವಾರು ‘ಗ್ರೋ ಬ್ಯಾಗ್' ಗಳನ್ನು ಇರಿಸುವುದರ ಮೂಲಕ ತರಕಾರಿ, ಸೊಪ್ಪುಗಳನ್ನು ಬೆಳೆಯಬಹುದು. ಹೀಗೆ ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲಲ್ಲಿ ತರಕಾರಿ ಬೆಳೆದರೆ ನಿಮ್ಮ ಅಡುಗೆ ಮನೆಗೆ ನಿಮ್ಮದೇ ತೋಟದ ತರಕಾರಿ ಬಳಸಬಹುದು. ರಾಸಾಯನಿಕ ರಹಿತ, ಶುದ್ಧ ಆಹಾರ ನಿಮ್ಮದಾಗುವುದು. ಮನೆಯಂಗಳದಲ್ಲೇ ತರಕಾರಿ ಬೆಳೆದ ಐಟಿ ಉದ್ಯೋಗಿಯ ಯಶೋಗಾಥೆಯನ್ನು ಮುಂದಿನ ದಿನಗಳಲ್ಲಿ ನೀವು ‘ಸಂಪದ'ದಲ್ಲಿ ಓದಲಿರುವಿರಿ.

ಚಿತ್ರ ವಿವರ: ೧. ಮನೆಯಂಗಳದಲ್ಲೇ ಬೆಂಡೆಕಾಯಿ (ಚಿತ್ರ: ಶರತ್ ಕುಮಾರ್)

೨. ಗ್ರೋ ಬ್ಯಾಗ್ ನಲ್ಲಿ ತರಕಾರಿ ಕೃಷಿ (ಚಿತ್ರ: ಅಂತರ್ಜಾಲ)