ಮನೆಯೊಳಗಿನ ಕೆಲವು ಸಂಗತಿಗಳು!

ಮನೆಯೊಳಗಿನ ಕೆಲವು ಸಂಗತಿಗಳು!

ಹೆದರಬೇಡಿ, ಮನೆಯೊಳಗಿನ ಸಂಗತಿಗಳೆಂದರೆ ಕಣ್ಣು, ಕಿವಿ, ಬಾಯಿ ತೆರೆದು ಕುಳಿತುಕೊಳ್ಳಬೇಡಿ. ಈ ಸಂಗತಿಗಳು ಗಂಡ-ಹೆಂಡತಿ ಪ್ರೇಮ ಹಾಗೂ ಕಲಹದ್ದಲ್ಲ, ಅತ್ತೆ ಸೊಸೆಯ ಜಗಳದ್ದಲ್ಲ, ಮಕ್ಕಳ ಆಟದ್ದೂ ಅಲ್ಲ. ಅತ್ತೆ ಮಾವನ ಅನಾರೋಗ್ಯದ ಬಗ್ಗೆಯೂ ಅಲ್ಲ. ಇಲ್ಲಿ ನೀಡಿರುವ ವಿಚಾರಗಳು ನಮ್ಮ ಮನೆಯೊಳಗಿನ ಕೆಲವು ವೈಜ್ಞಾನಿಕ ಸಂಗತಿಗಳು ಅಷ್ಟೇ. ನಾವು ಮನೆಯೊಳಗೆ ಅನುಭವಿಸುವ ಕೆಲವು ವಿಷಯಗಳ ಹಿಂದಿನ ವಿಜ್ಞಾನ ನಮಗೆ ತಿಳಿದಿರುವುದಿಲ್ಲ. ಆ ಬಗ್ಗೆ ಒಂದಿಷ್ಟು ಚುಟುಕಾದ ಮಾಹಿತಿಗಳು.

ಫ್ಯಾನ್ ಗಾಳಿ ಕೋಣೆಯನ್ನು ತಂಪು ಮಾಡುತ್ತದೆಯಾ? :ನಮಗೆ ಜೋರು ಸೆಖೆಯಾದಾಗ ನಾವು ಫ್ಯಾನ್ ಗಾಳಿಗೆ ಮೈಯೊಡ್ಡುತ್ತೇವೆ. ನಿಜವಾಗಿಯೂ ಫ್ಯಾನ್ ಗಾಳಿ ನಮ್ಮ ಮನೆಯನ್ನು ಅಥವಾ ಕೋಣೆಯನ್ನು ತಂಪಾಗಿಡುತ್ತದೆಯಾ? ಖಂಡಿತಾ ಇಲ್ಲ. ಫ್ಯಾನ್ ಗಾಳಿ ನಾವಿರುವ ಕೊಠಡಿಯನ್ನು ತಂಪಾಗಿಡುವುದಿಲ್ಲ. ಫ್ಯಾನ್ ಕೆಳಗಡೆ ಕುಳಿತುಕೊಂಡರೆ, ಅದರಲ್ಲೂ ಹೊರಗಡೆ ಜೋರಾದ ಬಿಸಿಲು ಇದ್ದಾಗ ತಿರುಗಾಡಿಕೊಂಡು ಕುಳಿತುಕೊಂಡಾಗ ಫ್ಯಾನ್ ಗಾಳಿ ನಮ್ಮ ಶರೀರವನ್ನು ಮಾತ್ರ ತಂಪಾಗಿಸುತ್ತದೆ. ಏನಿದರ ಮರ್ಮ?

ನಮ್ಮ ಚರ್ಮ ಅಥವಾ ಶರೀರಕ್ಕಿಂತಲೂ ನಮ್ಮ ಸುತ್ತಲೂ ಇರುವ ಗಾಳಿ ತಣ್ಣಗೆ ಇರುತ್ತವೆ ಎಂದು ಅಂದುಕೊಂಡರೆ ಆ ಸಮಯದಲ್ಲಿ ನಮ್ಮ ಶರೀರ ಸರಾಸರಿ ೧೦೦ ವ್ಯಾಟ್ ಗಳ ವ್ಯರ್ಥ ಉಷ್ಣವನ್ನು ಬಿಡುಗಡೆ ಮಾಡುತ್ತದೆ. ಅಂದರೆ ನಮ್ಮ ಮನೆಯಲ್ಲಿನ ಒಂದು ಬಲ್ಬ್ ಉರಿಯುವಷ್ಟು ಉಷ್ಣ ಎಂದರ್ಥ. ಹೊರಗಿನ ಗಾಳಿ ಬೀಸದಂತೆ ಇದ್ದಂತಾದರೆ ನಮ್ಮ ಶರೀರದಿಂದ ಬಿಡುಗಡೆಯಾಗುವ ಈ ಉಷ್ಣ ಶಕ್ತಿ ನಮ್ಮ ಚರ್ಮದ ಮೇಲೆ ಒಂದು ತೆಳ್ಳಗಿನ ಬಿಸಿಗಾಳಿಯ ಪೊರೆಯು ಹರಡಿಕೊಂಡು ಬಿಡುತ್ತದೆ. ಈ ಗಾಳಿಯ ಪೊರೆಯು ನಮ್ಮ ಚರ್ಮದಷ್ಟು ಬಿಸಿಯಾಗಿ ಮಾರ್ಪಟ್ಟಾಗ ಅದು ಇನ್ನೂ ಉತ್ತಮ ಉಷ್ಣ ನಿರೋಧಕವಾಗಿ ಕೆಲಸ ಮಾಡುತ್ತದೆ. ಈ ಉಷ್ಣತೆ ಎನ್ನುವುದು ಕೇವಲ ಬಿಸಿಯಾದ ಪ್ರದೇಶದಿಂದ ತಣ್ಣನೆಯ ಪ್ರದೇಶಕ್ಕೆ ಮಾತ್ರ ಪಸರಿಸುತ್ತದೆಯಾದುದರಿಂದ, ನಮ್ಮ ಚರ್ಮದ ಬಿಸಿ, ಅದರ ಮೇಲಿರುವ ತೆಳ್ಳನೆಯ ಗಾಳಿಯ ಪೊರೆಯನ್ನು ಭೇಧಿಸಿ ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ.

ಈ ಕಾರಣದಿಂದ ನಮ್ಮ ಚರ್ಮದ ಉಷ್ಣತೆ ಮತ್ತಷ್ಟು ಅಧಿಕವಾಗುತ್ತದೆ. ಆಗ ನಮಗೆ ಸೆಖೆಯ ಅನುಭವವಾಗುತ್ತದೆ. ಈ ಪರಿಸ್ಥಿತಿಯಿಂದ ಹೊರಗೆ ಬರಲು ನಮಗಿರುವುದು ಎರಡೇ ದಾರಿ. ಅತ್ತಿಂದ ಇತ್ತ ತಿರುಗುವುದು, ಬೆವರು ಬರುವಂತೆ ನೋಡಿಕೊಳ್ಳುವುದು. ಮತ್ತೊಂದು ಫ್ಯಾನ್ ಕೆಳಗಡೆ ಕೂತುಕೊಳ್ಳುವುದು. ನಮ್ಮ ಶರೀರದ ಅದ್ಭುತ ವ್ಯವಸ್ಥೆ ಎಂದರೆ ಸೆಖೆಯಾದಾಗ ಬೆವರು ಮೂಡಿ ಹೊರ ಬಂದು ಸೆಖೆಯ ಪ್ರಮಾಣವನ್ನು ಕಮ್ಮಿ ಮಾಡಿ, ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುತ್ತದೆ. 

ನಾವು ಫ್ಯಾನ್ ಕೆಳಗಡೆ ಕೂತುಕೊಂಡಾಗ ಏನಾಗುತ್ತದೆ? ಗಮನಿಸುವ. ಅದು ನಮ್ಮ ಶರೀರವನ್ನು ಆವರಿಸಿದ ಬಿಸಿ ಗಾಳಿಯ ಪೊರೆಯನ್ನು ಸರಿಸುವುದರಿಂದ ನಮ್ಮ ಶರೀರದ ತಾಪಮಾನ ಕಮ್ಮಿಯಾಗುತ್ತದೆ. ಇದರಿಂದ ನಮಗೆ ಸ್ವಲ್ಪ ಮಟ್ಟಿನ ತಂಪಿನ ಅನುಭವವಾಗುತ್ತದೆ. ಆದರೆ ಫ್ಯಾನ್ ಗಾಳಿ ಏರ್ ಕಂಡೀಷನ್ (AC) ತರಹ ಕೋಣೆಯ ತಾಪಮಾನವನ್ನು ತಗ್ಗಿಸುವುದಿಲ್ಲ. ಕೇವಲ ನಿಮ್ಮ ಶರೀರದ ಉಷ್ಣತೆಯನ್ನು ತಗ್ಗಿಸುವ ಕೆಲಸ ಮಾತ್ರ ಮಾಡುತ್ತದೆ. ನಾವು ಸೆಖೆಯಿಂದ ಬೆವರು ಬಂದ ಸಂದರ್ಭದಲ್ಲಿ ಫ್ಯಾನ್ ಕೆಳಗಡೆ ಕೂತುಕೊಳ್ಳುವುದರಿಂದ ಆ ಬೆವರು ಫ್ಯಾನ್ ಗಾಳಿಗೆ ಇಂಗಿ ಹೋಗುವುದರಿಂದಲೂ ನಮಗೆ ತಂಪಿನ ಅನುಭವವಾಗುತ್ತದೆ. ಕೋಣೆಯೊಳಗೆ ಬಿಸಿ ಗಾಳಿ ಇದ್ದರೆ, ಫ್ಯಾನ್ ಗಾಳಿಯೂ ಬಿಸಿಯಾಗಿಯೇ ಇರುತ್ತದೆ. ಏಕೆಂದರೆ ಫ್ಯಾನ್ ಗಾಳಿಯನ್ನು ತನ್ನ ಸುತ್ತ ಮುತ್ತಲಿನ ವಾತಾವರಣದಿಂದಲೇ ಪಡೆದುಕೊಳ್ಳುತ್ತದೆ. ಹೀಗಿದೆ ನೋಡಿ ಫ್ಯಾನ್ ಚಮತ್ಕಾರ! (ಸಾಂದರ್ಭಿಕ ಚಿತ್ರ ೧)

***

ನಾವು ಮಲಗುವ ಕೋಣೆಯಲ್ಲಿ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಇರಿಸಿಕೊಳುವುದು ಕ್ಷೇಮಕರವೇ? ಅಥವಾ ಆರೋಗ್ಯಕ್ಕೆ ಹಾನಿಕರವೇ?: ಈ ಬಗ್ಗೆ ಸ್ವಲ್ಪ ಮಾಹಿತಿ ಇಲ್ಲಿದೆ. ಹಲವರ ಮಲಗುವ ಕೋಣೆಯಲ್ಲಿ ಟಿವಿ, ರೆಫ್ರಿಜರೇಟರ್, ಕಂಪ್ಯೂಟರ್, ಮೊಬೈಲ್ ಫೋನ್ ಗಳು, ವಿದ್ಯುತ್ ಬಳಸುವ ಸಂಗೀತ ಪರಿಕರಗಳು ಎಲ್ಲವೂ ಇರುತ್ತದೆ. ಇವುಗಳು ಚಾಲನೆಯಲ್ಲಿರುವಾಗ ಬಹಳಷ್ಟು ವಿದ್ಯುದಯಸ್ಕಾಂತ ತರಂಗಗಳನ್ನು ಬಿಡುಗಡೆ ಮಾಡುತ್ತವೆ ಹಾಗೂ ಆರೋಗ್ಯಕ್ಕೆ ತುಂಬಾ ಹಾನಿಯುಂಟು ಮಾಡುತ್ತವೆ ಎನ್ನುತ್ತಾರೆ ವಿಜ್ಞಾನಿಗಳು. ಆ ಕಾರಣದಿಂದ ವಿಜ್ಞಾನಿಗಳು ನೀವು ಮಲಗುವ ಕೋಣೆಯಲ್ಲಿ ಯಾವುದೇ ವಿದ್ಯುತ್ ಬಳಸುವ ವಸ್ತುಗಳನ್ನು ಇರಿಸಬೇಡಿ ಎನ್ನುತ್ತಾರೆ.

ಈ ಇಲೆಕ್ಟ್ರಾನಿಕ್ಸ್ ವಸ್ತುಗಳು ಬಿಡುಗಡೆ ಮಾಡುವ ತರಂಗಗಳು ಹಾಗೂ ಅನಿಲಗಳು ನಮ್ಮ ಉತ್ತಮ ನಿದ್ರೆಯನ್ನು ಹಾಳು ಮಾಡುತ್ತವೆಯಂತೆ. ಈ ಬಗ್ಗೆ ವಿಜ್ಞಾನಿಗಳು ನಡೆಸಿದ ಹಲವಾರು ಸಂಶೋಧನೆಗಳಿಂದ ಸಾಬೀತಾಗಿದೆ ಎನ್ನುತ್ತಾರೆ. ಆದುದರಿಂದ ನಾವು ಮಲಗುವ ಕೋಣೆಯಲ್ಲಿ ಯಾವುದೇ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಇಡದೇ ಇರುವುದು ಉತ್ತಮ. ಅನಿವಾರ್ಯ ಸಂದರ್ಭಗಳಲ್ಲಿ ಇಡಲೇ ಬೇಕಾದರೂ ಅವುಗಳನ್ನು ಬಂದ್ ಮಾಡಿ (ಸ್ವಿಚ್ ಆಫ್) ಇಡುವುದು ಕ್ಷೇಮ. 

ಮೊಬೈಲ್ ಗಳನ್ನು ತಲೆ ದಿಂಬಿನ ಬಳಿಯಲ್ಲಿಡುವುದು ಕ್ಷೇಮವಲ್ಲ. ಅದರಿಂದ ನಿರಂತರ ತರಂಗಗಳು ಹೊರ ಹೊಮ್ಮುತ್ತಿರುತ್ತವೆ. ಪ್ರಮುಖವಾಗಿ ಎಲ್ಲರ ಮನೆಯ ಕೋಣೆಗಳಲ್ಲಿ ಈಗ ಟಿವಿ ಇರುವುದು ಸಾಮಾನ್ಯವಾಗಿದೆ. ಮೊದಲಾದರೆ ಹಾಲ್ ನಲ್ಲಿ ಎಲ್ಲರೂ ಜೊತೆಯಾಗಿ ಟಿವಿ ನೋಡಿ ಆನಂದಿಸುವ ಕ್ರಮವಿತ್ತು. ಅದರೆ ಈಗ ಬದಲಾದ ಪರಿಸ್ಥಿತಿಯಲ್ಲಿ ನೂರಾರು ಚಾನೆಲ್ ಗಳು. ಅಮ್ಮನಿಗೆ ಧಾರವಾಹಿ, ಅಪ್ಪನಿಗೆ ಕ್ರೀಡೆ, ಹೆಂಡತಿಗೆ ಸಿನೆಮಾ, ಮಕ್ಕಳಿಗೆ ಕಾರ್ಟೂನ್ ನೋಡಲು ಒಂದೇ ಮನೆಯಲ್ಲಿ ಹೋಟೇಲ್ ರೂಂಗಳಂತೆ ಪ್ರತಿಯೊಂದು ಕೋಣೆಯಲ್ಲಿ ಒಂದೊಂದು ಟಿವಿ ಇರುವುದು ಸಾಮಾನ್ಯ ಸಂಗತಿಯಾಗಿದೆ. ಹೀಗೆ ಆಗಿರುವುದರಿಂದ ಹಾಸಿಗೆಯಲ್ಲಿ ಮಲಗಿಯೇ ಟಿವಿ ವೀಕ್ಷಣೆ ಮಾಡುವುದರಿಂದ ನಿದ್ರೆಯ ಪ್ರಮಾಣವೂ ಕಮ್ಮಿಯಾಗತೊಡಗಿದೆ. 

ಅಮೇರಿಕಾದ ‘ಯೂನಿವರ್ಸಿಟಿ ಆಫ್ ಮಿನ್ನಿಸೋಟಾ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್' ಗೆ ಸೇರಿದ ವಿಜ್ಞಾನಿಗಳು ಸುಮಾರು ೮೦೦ ಮಂದಿ ಹದಿಹರೆಯದ (೧೫-೧೮ ವಯಸ್ಸು) ಹುಡುಗ-ಹುಡುಗಿಯರ ಮೇಲೆ ಸಂಶೋಧನೆಯನ್ನು ನಡೆಸಿ ಟಿವಿಯನ್ನು ಮಲಗುವ ಕೊಠಡಿಯಲ್ಲಿಟ್ಟರೆ ಆಗುವ ಪರಿಣಾಮಗಳ ಬಗ್ಗೆ ತಿಳಿದುಕೊಂಡರು. ಅವರ ಪ್ರಕಾರ,

ಮಲಗುವ ಕೋಣೆಯಲ್ಲಿ ಟಿವಿ ಇಟ್ಟುಕೊಂಡಿರುವವರು ಮಿಕ್ಕವರಿಗಿಂತ ಹೆಚ್ಚು ಟಿವಿ ನೋಡುತ್ತಾರೆ. ಇವರು ದಿನಕ್ಕೆ ಸರಾಸರಿ ೫-೬ ಗಂಟೆಗಳ ಕಾಲ ಟಿವಿಯನ್ನು ವೀಕ್ಷಿಸುತ್ತಾರೆ. ಇದರಿಂದ ಅವರ ಮಾನಸಿಕ ಸಮಸ್ಯೆಗಳು ಅಧಿಕವಾಗುತ್ತವೆ. ಇದರ ಜೊತೆಗೆ ಟಿವಿ ನೋಡುವ ಸಮಯದಲ್ಲಿ ತಿನ್ನುವ ಚಿಪ್ಸ್ ನಂತಹ ಎಣ್ಣೆ ತಿಂಡಿಗಳು ಹಾಗೂ ಕೋಲಾದಂತಹ ಪಾನೀಯಗಳಿಂದ ಆರೋಗ್ಯ ಸಮಸ್ಯೆಗಳೂ ಅಧಿಕಗೊಳ್ಳುತ್ತವೆ. ಉಳಿದಂತೆ ಅಧಿಕ ಟಿವಿ ವೀಕ್ಷಣೆಯಿಂದ ಮನೆಯ ಕರೆಂಟ್ ಬಿಲ್ ಸಹಾ ಜಾಸ್ತಿಯಾಗುತ್ತದೆ. ಇವರು ತರಕಾರಿಗಳನ್ನು ಕಮ್ಮಿ ತಿನ್ನುತ್ತಾರೆ. ಮಾಂಸಹಾರ ಸೇವನೆ ಅಧಿಕವಾಗಿರುತ್ತದೆ.

ಮಲಗುವ ಕೋಣೆಯಲ್ಲೇ ಟಿವಿ ಇರುವುದರಿಂದ ಓದುವುದರ ಕಡೆಗೆ ಗಮನ ನೀಡಲು ಸಾಧ್ಯವಾಗದೇ ಆ ವಿದ್ಯಾರ್ಥಿಗಳಿಗೆ ಕಡಿಮೆ ಅಂಕಗಳು ಬಂದಿವೆ. ಈ ಕಾರಣಗಳಿಂದ ಟಿವಿಯನ್ನು ಮಲಗುವ ಕೋಣೆಯಲ್ಲಿ ಇರಿಸಲೇ ಬಾರದು. ಮನೆಮಂದಿಯೆಲ್ಲಾ ಜೊತೆಯಾಗಿಯೇ ಸೇರಿ ಕಾರ್ಯಕ್ರಮಗಳನ್ನು ನೋಡುವುದರಲ್ಲೇ ಮಜಾ ಇದೆ. ಅನಿವಾರ್ಯ ಕಾರಣಗಳಿಂದ ಮಲಗುವ ಕೋಣೆಯಲ್ಲಿ ಟಿವಿ ಇರಿಸಬೇಕಾದರೂ ಅದನ್ನು ಸೂಕ್ತ ಸಮಯಕ್ಕೆ ಆಫ್ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಬೇಕು ಮತ್ತು ಅದನ್ನು ಸರಿಯಾಗಿ ಪಾಲಿಸಬೇಕು. (ಸಾಂದರ್ಭಿಕ ಚಿತ್ರ ೨)

(ಆಧಾರ) 

ಚಿತ್ರ ಕೃಪೆ: ಅಂತರ್ಜಾಲ ತಾಣ