ಮನೆ ಮನದ ಸಂಪತ್ತು

ಮನೆ ಮನದ ಸಂಪತ್ತು

ಎಲ್ಲಾ ಮುದ್ದು ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು. ನವಂಬರ-೧೪ ಮಕ್ಕಳ ದಿನಾಚರಣೆ, ಮಕ್ಕಳ ಹಬ್ಬ, ನಮಗೆಲ್ಲ ತಿಳಿದ ವಿಚಾರವೇ ಆಗಿದೆ. ಏನು ವಿಶೇಷ ಎಂದರೆ ನಮ್ಮ ದೇಶದ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂರವರ ಜನ್ಮ ದಿನ. ಮಕ್ಕಳೆಂದರೆ ದೇವಲೋಕದ ಕುಸುಮಗಳು. ಭಗವಂತನ ವರಪ್ರಸಾದ. ಹೆತ್ತವರ ಕರುಳ ಕುಡಿಗಳು. ನಾಳೆಯ ಭವಿಷ್ಯದ ಹಿತಚಿಂತಕರು. ಪ್ರಜೆಗಳು, ದೇಶವನ್ನು ಮುನ್ನಡೆಸುವ ಪುಷ್ಪಗಳು. ಇಂತಹ ಮಕ್ಕಳ ಮನಸ್ಸಿನಲ್ಲಿ ಹೊಸಹೊಸ ಕನಸುಗಳನ್ನು ಬಿತ್ತಿ, ಮೊಳಕೆಯೊಡೆಯುವಂತೆ ಮಾಡುವುದು ಪ್ರತಿಯೊಬ್ಬ ಹಿರಿಯರ ಕರ್ತವ್ಯ. ಮಕ್ಕಳೇ ನಮ್ಮ ಆಸ್ತಿಗಳು. ಭವಿಷ್ಯದ ಅಮೂಲ್ಯ ಆಸ್ತಿಗಳಾದ ಮುದ್ದು ಕಂದಮ್ಮಗಳನ್ನು ಕಂಡರೆ ಜವಹರಲಾಲ್ ನೆಹರೂರವರಿಗೆ ತುಂಬಾ ಪ್ರೀತಿಯಂತೆ. ಹಾಗಾಗಿ ತಮ್ಮ ಹುಟ್ಟಿದ ದಿನವನ್ನು ‘ಮಕ್ಕಳ ದಿನ’ ಎಂದು ಆಚರಿಸುವಂತೆ ಸೂಚಿಸಿದರಂತೆ.

ಈದಿನ ಶಾಲೆಗಳಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನಿಟ್ಟುಕೊಳ್ಳುತ್ತಾರೆ. ನೆಹರೂರವರ ಆದರ್ಶಗಳ ಕುರಿತಾಗಿ ಮಾಹಿತಿ ನೀಡುವ ಕಾರ್ಯಕ್ರಮವಿರುತ್ತದೆ. ಭಾವಚಿತ್ರ ಬಿಡಿಸುವ ಸ್ಪರ್ಧೆ, ಭಾಷಣ, ಮಕ್ಕಳಿಗೆ ವಿವಿಧ ವೇಷಭೂಷಣಗಳನ್ನು ಹಾಕಿಸುವುದು, ಸಾಮೂಹಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವುದು ಇರುತ್ತದೆ.

ಶಿಕ್ಷಣ ಪ್ರೇಮಿಗಳನ್ನು ಬರಹೇಳಿ ಉತ್ತಮ ನಡವಳಿಕೆಯ ಬಗ್ಗೆ ಮಾಹಿತಿ ನೀಡುವರು. ಮಕ್ಕಳ ಉತ್ತಮ ಕೆಲಸಗಳಿಗೆ ಪ್ರಶಂಸೆ, ಪ್ರೋತ್ಸಾಹ ನೀಡಬೇಕು. ಹಾಗೆಯೇ ರಾಷ್ಟ್ರಮಟ್ಟದಲ್ಲಿ ಶೌರ್ಯ ಪ್ರಶಸ್ತಿಗಳನ್ನು ಸಹ ನೀಡಿ ಗೌರವಿಸುವರು. ಶಾಲಾ ಶಿಕ್ಷಣದ ಜೊತೆ ಜೀವನ ಶಿಕ್ಷಣವನ್ನೂ ಸಹ ನೀಡಬೇಕು. ‘ಬಿತ್ತಿದಂತೆ ಬೆಳೆ’ ಅಲ್ಲವೇ? ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳಲು ಹಿರಿಯರ ಸಹಕಾರವಿರಬೇಕು. ಜೀವನ ಮೌಲ್ಯಗಳು, ಪ್ರೀತಿ, ನಂಬಿಕೆ, ವಿಶ್ವಾಸ, ಸ್ನೇಹ, ಸಹಕಾರ ಮನೋಭಾವ ಕಲಿಸೋಣ. ಈ ಒಂದು ದಿನ ನಮ್ಮ ಮಕ್ಕಳು ಖುಷಿ ಖುಷಿಯಾಗಿರಲಿ. ಅನಂತರ ಶಾಲೆ, ಓದು, ಬರಹ ಇದ್ದದ್ದೇ. ಅದು ಸಹ ಮುಖ್ಯವೇ. ಮುಂದಿನ ಬದುಕಿಗೆ ನಾಂದಿ. ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರವರು ತಿಳಿಸಿದಂತೆ, ನಮ್ಮ ಮಕ್ಕಳು ಉತ್ತಮ ನಾಳೆಯನ್ನು ಹೊಂದಲು, ನಮ್ಮ ಇಂದಿನ ದಿನವನ್ನು ತ್ಯಾಗ ಮಾಡಲೇಬೇಕು. ಮಗುವಿನ ಬೆಳವಣಿಗೆಯಲ್ಲಿ ಹೆತ್ತವರು, ಶಾಲಾ ಶಿಕ್ಷಕರು, ಪರಿಸರ, ಸ್ನೇಹಿತರ ಬಳಗ ಎಲ್ಲರ ಪಾತ್ರವೂ ಅವಶ್ಯ ಮತ್ತು ಅಮೂಲ್ಯ. ನಯವಾಗಿ ತಿದ್ದಿತೀಡುವ ಮಹತ್ತರ ಹೊಣೆಗಾರಿಕೆ ದೊಡ್ಡವರದಾಗಿದೆ. ತಳಪಾಯವನ್ನು ಗಟ್ಟಿಗೊಳಿಸಬೇಕಾಗಿದೆ. ಭವಿಷ್ಯದ ಕುಡಿಗಳಾದ, ನಮ್ಮ ಮನ ಮನೆಯ ಸಂಪತ್ತಾದ ಪುಟಾಣಿಗಳಿಗೆ ಈ ಸಂದರ್ಭದಲ್ಲಿ ಶುಭವನ್ನು ಹಾರೈಸೋಣ.

ಚಿಕ್ಕಪುಟ್ಟ ಕಂದರೆಲ್ಲ ಓಡೋಡಿ ಬನ್ನಿ

ಶಾಲೆಯ ಬಯಲಲ್ಲಿ ಸೇರೋಣ ಬನ್ನಿ

ಸಂಭ್ರಮದಿ ಚಾಚಾ ನೆಹರು ಎನ್ನೋಣ ಬನ್ನಿ

ಒಗ್ಗೂಡಿ ನಲಿಯುತ ಸಿಹಿಯ ಸವಿಯೋಣ ಬನ್ನಿ

-ರತ್ನಾ ಕೆ ಭಟ್, ತಲಂಜೇರಿ

 ಚಿತ್ರ ಕೃಪೆ: ಇಂಟರ್ನೆಟ್ ತಾಣ