ಮನೋಹರ್ ಪರಿಕ್ಕರ್ ಹೇಳಿದ ಕಲ್ಲಂಗಡಿ ಕಥೆ
ಗೋವಾದ ವಿಮಾನ ನಿಲ್ದಾಣಕ್ಕೆ ಒಂದು ಟ್ಯಾಕ್ಸಿ ಬಂದು ನಿಲ್ಲುತ್ತೆ. ಅದರಿಂದ ಓರ್ವ ಮಧ್ಯ ವಯಸ್ಕ, ಸಾಧಾರಣ ಉಡುಪು ಧರಿಸಿದ ವ್ಯಕ್ತಿ ಸಣ್ಣ ಬ್ಯಾಗ್ ಹಿಡಿದುಕೊಂಡು ನೇರ ಒಳಗೆ ಬರುತ್ತಾರೆ. ಚೆಕ್ ಇನ್ ಮಾಡಿಸಿಕೊಂಡು ವಿಮಾನ ಏರಲು ಕುಳಿತುಕೊಂಡು ಬ್ಯಾಗ್ ಒಳಗಿನಿಂದ ಒಂದು ಪುಸ್ತಕ ತೆಗೆದು ಓದಲು ಶುರು ಮಾಡುತ್ತಾರೆ. ವಿಮಾನ ಏರಲು ಕರೆ ಬಂದಾಗಲೂ ಅಷ್ಟೇ ಸರದಿ ಸಾಲಿನಲ್ಲಿ ಹೋಗಿ ವಿಮಾನದಲ್ಲಿ ಕುಳಿತುಕೊಂಡು, ವಿಮಾನದಿಂದ ಇಳಿದಾಗಲೂ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಬಸ್ ಮೂಲಕವೇ ಪ್ರಯಾಣಿಸಿ ವಿಮಾನ ನಿಲ್ದಾಣದಿಂದ ಹೊರಗೆ ಬರುತ್ತಾರೆ. ಇವರು ಸಾಧಾರಣ ವ್ಯಕ್ತಿ ಎಂದು ತಿಳಿದಿರಾ? ನಿಮ್ಮ ಊಹೆ ತಪ್ಪು, ಅವರು ಗೋವಾ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಮನೋಹರ್ ಗೋಪಾಲಕೃಷ್ಣ ಪ್ರಭು ಪರಿಕ್ಕರ್. ಕೇವಲ ಪಂಚಾಯತ್ ಸದಸ್ಯನಾದವನೇ ತನ್ನ ಹಿಂದೆ ಮುಂದೆ ಜನರನ್ನು ಸೇರಿಸಿಕೊಂಡು ಸೂಟು ಬೂಟು ಹಾಕಿ ತಿರುಗಾಡುವಾಗ ಒಂದು ರಾಜ್ಯದ ಮುಖ್ಯಮಂತ್ರಿಯಾದವರು ಒಬ್ಬರೇ ಇಷ್ಟು ಸರಳವಾಗಿ ಇರುವುದು ಬಹಳ ವಿರಳವೇ ಸರಿ. ಮನೋಹರ್ ಪರಿಕ್ಕರ್ ಅವರಾದರೂ ಅಷ್ಟೇ, ಕೋಟು ಸೂಟುಗಳನ್ನು ಧರಿಸದೇ ಸಾಮಾನ್ಯ ಉಡುಗೆಯಲ್ಲೇ ಖುಷಿ ಕಂಡವರು. ೩ ಬಾರಿ ಗೋವಾ ಮುಖ್ಯ ಮಂತ್ರಿಯಾಗಿದ್ದವರು. ಮುಖ್ಯಮಂತ್ರಿಯಾಗಿರುವಾಗಲೇ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಮಾರ್ಚ್ ೧೭, ೨೦೧೯ರಲ್ಲಿ ನಿಧನ ಹೊಂದಿದರು. ಅವರ ಚತುರತೆ ಹಾಗೂ ಕಾರ್ಯ ಕ್ಷಮತೆಯನ್ನು ಗುರುತಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಮಂತ್ರಿಮಂಡಲದಲ್ಲಿ ಅವರನ್ನು ರಕ್ಷಣಾ ಮಂತ್ರಿ ಮಾಡಿದ್ದರು. ಇಂತಹ ವ್ಯಕ್ತಿ ನಮ್ಮ ದೇಶದ ರಾಜಕಾರಣದಲ್ಲಿ ಅಪರೂಪಕ್ಕೆ ಕಾಣ ಸಿಗುತ್ತಾರೆ. ಹಳೆಯ ಉತ್ಥಾನ ಪತ್ರಿಕೆಯನ್ನು ಓದುತ್ತಿದ್ದಾಗ ಅವರ ಜೀವನದ ಅವರೇ ಹೇಳಿದ ಪ್ರಸಂಗವೊಂದು ಗಮನ ಸೆಳೆಯಿತು. ಅವರದ್ದೇ ಮಾತಲ್ಲಿ ಓದೋಣ ಬನ್ನಿ…
“ನಮ್ಮದು ಗೋವಾ ಸಮೀಪದ ಪರ್ರಾ ಎನ್ನುವ ಊರು. ಅದರ ಕಾರಣದಿಂದಲೇ ನನ್ನ ಹೆಸರಿನ ಜೊತೆ ಪರಿಕ್ಕರ್ ಎಂದು ಅಡ್ಡ ನಾಮ ಬಂದಿದೆ. ನಮ್ಮ ಊರು ದೊಡ್ಡ ದೊಡ್ಡ ಕಲ್ಲಂಗಡಿ ಹಣ್ಣಿಗೆ ಖ್ಯಾತಿ ಪಡೆದಿತ್ತು. ನಾನು ಸಣ್ಣವನಿರುವಾಗ ಮೇ ತಿಂಗಳಲ್ಲಿ ಹಣ್ಣು ಕಟಾವಿಗೆ ಬಂದಾಗ ಮಕ್ಕಳಿಗಾಗಿ ಕಲ್ಲಂಗಡಿ ತಿನ್ನುವ ಸ್ಪರ್ಧೆ ಏರ್ಪಡಿಸುತ್ತಿದ್ದರು. ಎಲ್ಲಾ ಮಕ್ಕಳೂ ತಮಗೆ ಬೇಕಾದಷ್ಟು, ಸಾಧ್ಯವಾಗುವಷ್ಟು ಕಲ್ಲಂಗಡಿ ಹಣ್ಣು ತಿನ್ನ ಬೇಕು ಅನ್ನೋದೇ ನಿಯಮ. ಎಷ್ಟು ಬೇಕಾದರೂ ಕಲ್ಲಂಗಡಿ ತಿನ್ನ ಬಹುದು ಎಂಬ ಆಶೆಗೆ ಮಕ್ಕಳೂ ತಾ ಮುಂದು, ನೀ ಮುಂದು ಎಂದು ಓಡೋಡಿ ಬರುತ್ತಿದ್ದರು.
ವರ್ಷಗಳು ಕಳೆದವು ನಾನು ಓದಿಗಾಗಿ ಮುಂಬೈ ಬಂದೆ. ಐದಾರು ವರ್ಷಗಳ ನಂತರ ನನ್ನ ಊರಿಗೆ ಹಿಂದಿರುಗಿದಾಗ ಕಲ್ಲಂಗಡಿ ಹಣ್ಣುಗಳು ಬಹಳ ಕಮ್ಮಿಯಾಗಿದ್ದವು. ಇದ್ದ ಕಲ್ಲಂಗಡಿ ಹಣ್ಣುಗಳು ಗಾತ್ರದಲ್ಲಿ ತುಂಬಾ ಸಣ್ಣದಾಗಿದ್ದವು.
ನಾನು ಕಲ್ಲಂಗಡಿ ಸ್ಪರ್ಧೆ ಮಾಡಿಸುತ್ತಿದ್ದ ರೈತನನ್ನು ನೋಡಲು ಹೋದೆ. ಆದರೆ ಈಗ ಅವನ ಮಗ ಸ್ಪರ್ಧೆ ಮಾಡಿಸುತ್ತಿದ್ದ. ನಾವು ಚಿಕ್ಕವರಿದ್ದಾಗ ಕಲ್ಲಂಗಡಿ ಹಣ್ಣನ್ನು ತಿಂದು ಬೀಜಕ್ಕೆ ಪೆಟ್ಟಾಗದ ಹಾಗೆ ಬೇರೊಂದು ಪಾತ್ರೆಯಲ್ಲಿ ಉಗುಳಬೇಕಿತ್ತು. ಆ ರೈತ ದೊಡ್ಡ ದೊಡ್ಡ ಚೆನ್ನಾಗಿ ಬಲಿತ ಕಲ್ಲಂಗಡಿಗಳನ್ನೇ ಸ್ಪರ್ಧೆಗೆ ನೀಡುತ್ತಿದ್ದ. ಅದರಿಂದ ಅವನಿಗೆ ಉತ್ತಮ ಬೀಜಗಳು ಮುಂದಿನ ವರ್ಷದ ಬೆಳೆಗೆ ಸಿಗುತ್ತಿದ್ದವು. ಆದರೆ ಈಗ ಸ್ಪರ್ಧೆಯ ನಿಯಮಗಳೇ ಬದಲಾಗಿದ್ದವು.
ಆ ರೈತನ ಮಗ ಈಗ ಸ್ಪರ್ಧೆ ಮಾಡಿಸುವಾಗ ಸಣ್ಣ ಕಲ್ಲಂಗಡಿಯನ್ನೇ ಕೊಡುತ್ತಿದ್ದ. ದೊಡ್ಡ ಕಲ್ಲಂಗಡಿಗಳಿಗೆ ಒಳ್ಳೆಯ ಬೆಲೆ ಇರುವುದನ್ನು ಗಮನಿಸಿ ಅದನ್ನು ಅವನು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರುತ್ತಿದ್ದ. ಸಣ್ಣ ಸಣ್ಣ ಕಲ್ಲಂಗಡಿಗಳ ಬೀಜದಿಂದ ವರ್ಷದಿಂದ ವರ್ಷಕ್ಕೆ ಕಲ್ಲಂಗಡಿ ಆಕಾರವೇ ಬದಲಾಗಿ ಕೇವಲ ಆರೇಳು ವರ್ಷಗಳಲ್ಲಿ ನಮ್ಮ ಪರ್ರಾದ ಕಲ್ಲಂಗಡಿ ತಳಿಯೇ ನಿರ್ನಾಮವಾಯಿತು. ಕಲ್ಲಂಗಡಿ ಹಣ್ಣಿನ ಒಂದು ಪೀಳಿಗೆ ಅವಧಿ ಒಂದು ವರ್ಷ. ಹಾಗಾಗಿ ಆ ತಳಿಗಳು ಬದಲಾಗಿ ಸಣ್ಣ ತಳಿಯೇ ಮುಂದುವರೆಯತೊಡಗಿದವು. ನಂತರದ ದಿನಗಳಲ್ಲಿ ನಾನು ದೊಡ್ಡ ಕಲ್ಲಂಗಡಿಯನ್ನು ಕಂಡದ್ದೇ ಅಪರೂಪ.
ಮನುಷ್ಯರಲ್ಲಿಯೂ ಹಾಗೆಯೇ, ನಾವು ನಮ್ಮ ಮಕ್ಕಳಿಗೆ ಶಿಕ್ಷಣ ನೀಡುವಾಗ ಎಲ್ಲಿ ಎಡವಿದ್ದೇವೆಯೋ ಅದರ ಫಲಿತಾಂಶ ತಿಳಿಯಲು ಸುಮಾರು ಇನ್ನೂರು ವರ್ಷಗಳು ಬೇಕಾಗುತ್ತವೆ. ಏಕೆಂದರೆ ನಮ್ಮ ಒಂದು ಪೀಳಿಗೆಯ ವಿದ್ಯಾರ್ಜನೆಯ ಅವಧಿ ಇಪ್ಪತೈದು ವರ್ಷ”.
ಮನೋಹರ್ ಪರಿಕ್ಕರ್ ಅವರು ಇಂದು ನಮ್ಮೊಂದಿಗಿಲ್ಲ. ಆದರೆ ಅವರು ತಮ್ಮ ಊರಿನ ದೃಷ್ಟಾಂತದ ಮೂಲಕ ನಮಗೆ ಮಹತ್ತರವಾದ ವಿಷಯವನ್ನೇ ಹೇಳಿದ್ದಾರೆ. ಅವರ ಉದಾತ್ತ ಚಿಂತನೆಗಳು, ಸರಳತೆ ಇವುಗಳನ್ನು ನಾವೂ ನಮ್ಮ ಜೀವನದಲ್ಲಿ ಬೆಳೆಸಿಕೊಳ್ಳಬೇಕಾಗಿದೆ.
ಮಾಹಿತಿ ಆಧಾರ: ಉತ್ಥಾನ ಪತ್ರಿಕೆ
ಚಿತ್ರ: ಅಂತರ್ಜಾಲ ಕೃಪೆ