ಮನ್ನಿಸು ಕಂದ ನನ್ನನ್ನು...
ಮುದ್ದು ಕಂದನೊಂದು ನಗುನಗುತ್ತಾ ತನ್ನ ಕೈ ನೀಡುತ್ತಿದೆ. ಎದ್ದು ನಿಲ್ಲಲು - ನಿಂತು ನಡೆಯಲು ನನಗೆ ಸಹಾಯ ಮಾಡೆಂದು ತನ್ನ ಮುಗ್ದ ಕಣ್ಣುಗಳಲ್ಲೇ ಆಹ್ವಾನಿಸುತ್ತಿದೆ. ನಾನು ಕೈ ನೀಡಬೇಕೆಂದು ಕೈಚಾಚುತ್ತಾ ನನ್ನ ಕೈಗಳನ್ನೊಮ್ಮೆ ನೋಡಿಕೊಂಡೆ. ಕೈಗಳಿಗೆ ಅಲರ್ಜಿಯಾಗಿ ಗುಳ್ಳೆಗಳು ಎದ್ದಿವೆ, ಅಲ್ಲಲ್ಲಿ ಕೀವು ರಕ್ತದ ಗಾಯಗಳು ಕಾಣುತ್ತಿದೆ. ಅಂಗೈಗೆ ಮೆತ್ತಿರುವ ದ್ರವದಲ್ಲಿ ಭಯಂಕರ ವೈರಸ್ ಗಳು ಹರಿದಾಡುತ್ತಿದೆ. ತಿಳಿದೂ ತಿಳಿದೂ ಹೇಗೆ ನೀಡಲಿ ಈ ಮಲಿನವಾದ ಕೈಗಳನ್ನು ಆ ಪುಟ್ಟ ಕಂದಮ್ಮನಿಗೆ?
ನನಗೆ ಅಂಟಿರುವ ಈ ರೋಗ ಮಗುವಿಗೆ ಹರಡಿದರೆ ? ರೋಗ ನಿರೋಧಕ ಶಕ್ತಿ ಇನ್ನೂ ಬಲಿಯದ ಆ ಚಿನ್ನಾರಿಗೆ ರೋಗ ಅಂಟಿಸಿದ ಪಾಪಕ್ಕೆ ನಾನು ಗುರಿಯಾಗುವುದಿಲ್ಲವೇ ? ಅಕಸ್ಮಾತ್ ಕೈ ನೀಡಿ ಎದ್ದು ನಿಲ್ಲಿಸಿದರೂ ನಡೆದಾಡಲು ಕರೆದೊಯ್ಯುವುದೆಲ್ಲಿಗೆ ! ಕೆಸರು ತುಂಬಿದ ಕೊಚ್ಚೆ ದಾರಿಯ ಕಮಟು ವಾಸನೆಯ ಹಳ್ಳ ಬಿದ್ದ ಅಪಾಯಕಾರಿ ರಸ್ತೆಯಲ್ಲಿ ಅದನ್ನು ಹೇಗೆ ನಡೆಸಲಿ ? ಯೋಚಿಸುತ್ತಾ ಸುತ್ತಮುತ್ತಲು ನೋಡಿದೆ. ಬಹಳ ಜನ ಕಾಣಿಸಿದರು. ಆದರೆ ಎಲ್ಲರ ಕೈಗಳಿಗೂ ರೋಗ ಬಂದು ರಕ್ತ ಕೀವುಗಳು ಜಿನುಗುತ್ತಿದೆ. ಇದೊಂದು ಸಾಂಕ್ರಾಮಿಕ ರೋಗ, ಎಲ್ಲರನ್ನೂ ಆವರಿಸಿದೆ.
ಅಲ್ಲಿ ನೋಡಿದರೆ ನಿಷ್ಕಲ್ಮಶ ನಗುವಿನ ಮಗು ನನ್ನತ್ತ ಕೈಚಾಚಿತ್ತಿದೆ, ಭವಿಷ್ಯದ ಅಪಾರ ಕನಸುಗಳೊಂದಿಗೆ… ಶುದ್ಧ ಆರೋಗ್ಯವಂತ ಕೈಗಳಿಗಾಗಿ ನಾನು ಇನ್ನೂ ಹುಡುಕುತ್ತಲೇ ಇದ್ದೇನೆ. ಸಿಗುವುದೆಂಬ ಭರವಸೆಯಿಂದ. ಯಾರಾದರೂ ಆರೋಗ್ಯವಂತರು ಉಳಿದಿದ್ದರೆ ದಯವಿಟ್ಟು ಕೈಚಾಚಿ. ನನ್ನ ಜೀವನವಂತು ಮುಗಿಯಿತು, ಆ ಮಗುವಾದರೂ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲಿ....
ಕ್ಷಮಿಸು ಕಂದ ನನ್ನನ್ನು ನಿನಗೆ ಈ ಅನಾರೋಗ್ಯಕಾರಿ ವೈರಸ್ ಹಾವಳಿಯ ವಾತಾವರಣವನ್ನು ನಿರ್ಮಿಸಿರುವುದಕ್ಕೆ. ಮನ್ನಿಸು ಕಂದ ನನ್ನನ್ನು ನೀರು ಗಾಳಿ ಆಹಾರವನ್ನು ಮಲಿನಗೊಳಿಸಿ ನಿನಗೆ ಬಿಟ್ಟು ಹೋಗುತ್ತಿರುವುದಕ್ಕೆ. ಸಾಧ್ಯವಾದರೆ ಶಿಕ್ಷಿಸು ಕಂದ ನನ್ನನ್ನು ಹಣದಿಂದಲೇ ಎಲ್ಲವನ್ನೂ ಅಳೆದು ಅನಾರೋಗ್ಯವನ್ನು ಮನೆಯ ಬಾಗಿಲ ಬಳಿ ತಂದು ನಿಲ್ಲಿಸಿದಕ್ಕೆ...ಆದರೂ ನಿನಗೆ ಒಳ್ಳೆಯದಾಗಲಿ ಎಂದು ಹಾರೈಸುವ ಕಪಟ ನಾಟಕವಾಡುವ ಆತ್ಮವಂಚಕ ನಾನು....
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ