ಮನ ಮರ್ಕಟ...
ಬಾನಂಗಳದಲಿ ಹಾರುವ ವಿಮಾನದಲ್ಲಿ ಕುಳಿತ ಸುಮಳಿಗೆ ಮೇಲಿನಿಂದ ಭುವಿಯ ಸೊಬಗನ್ನು ಸವಿಯುತ್ತಿರುವಾಗ, ಅಬ್ಬಾ ಎಷ್ಟೊಂದು ಸುಂದರ ಈ ಪ್ರಕೃತಿ ಎಂದು ನಿಬ್ಬೆರಗಿನಿಂದ ಮಾತು ಬಾಯಿಂದ ತನಗೆ ತಾನೇ ಬಂದಿತು.
ಪ್ರಕೃತಿ ಪ್ರಿಯಳಾದ ಸುಮಳಿಗೆ ಕೆಳಗೆ ಕಾಣುವ ಮನೆಗಳು ಪುಟ್ಟ, ಪುಟ್ಟ ಬೆಂಕಿ ಪೊಟ್ಟಣದಂತೆ ಕಂಡಿತು. ಹರಿಯುವ ನದಿ ಸಣ್ಣ ತೊರೆಯಂತೆ, ಗುಡ್ಡ ಬೆಟ್ಟಗಳು ಸಣ್ಣ ದಿಣ್ಣೆಯಂತೆ ಕಂಡಾಗ ಅವಳಿಗೆನಿಸಿದ್ದು * ದೂರದ ಬೆಟ್ಟ ನುಣ್ಣಗೆ *. ಎಷ್ಟೊಂದು ಗಿಡ, ಮರಗಳು, ಕಲ್ಲು ಬಂಡೆಗಳು ಬೆಟ್ಟದಲ್ಲಿದ್ದರೂ ಕಣ್ಣಿಗೆ ಕಂಡದ್ದು ಮಾತ್ರ ನುಣ್ಣನೆ ದಿಣ್ಣೆಯಂತೆ. ಆಗ ಸುಮನಿಗೆನಿಸಿದ್ದು, ಹೌದಲ್ಲವೇ ನಮ್ಮ ಬದುಕು ಈ ಬೆಟ್ಟಗಳಂತೆ, ಎಲ್ಲವೂ ಇದ್ದೂ ಏನು ಇಲ್ಲದಂತೆ ಕಾಣುವ ದಿಣ್ಣೆಯಂತೆ. ವಾಸ್ತವ ಬದುಕಿನಲ್ಲಿ ಪರರ ಶ್ರೀಮಂತಿಕೆಯನ್ನು ನೋಡಿದಾಗ ಎಷ್ಟೊಂದು ಸುಖಮಯ ಜೀವನ ಎಂದು ನಾವೆಂದು ಕೊಳ್ಳುತ್ತೇವೆ. ಆದರೆ ಅದರ ರೂಪವೇ ಬೇರೆ ಇರುತ್ತದೆ. ತೋರ್ಪಡಿಕೆಗೆ ಸಿರಿವಂತಿಕೆಯಲ್ಲಿ ನೂರೆಂಟು ಸಮಸ್ಯೆಗಳು, ಸಾಲ, ಸೋಲಗಳು, ನೋವುಗಳೆಷ್ಟಿದ್ದರೂ ಮೇಲ್ನೋಟಕ್ಕೆ ಹೆಸರಿಗಷ್ಟೇ ಶ್ರೀಮಂತ ಬಾಳು. ಕೇಳುವವರಾರು ಅವರ ಗೋಳು.
ದೂರದಿಂದ ನೋಡುವವರಿಗೆ ಅಬ್ಬಾ! ಇವರೆಷ್ಟು ಭಾಗ್ಯವಂತರು ಎಂದು ಅಂದು ಕೊಳ್ಳುತ್ತೇವೆ. ಆದರೆ ಅವರೆಗಷ್ಟೇ ಗೊತ್ತಿರುತ್ತದೆ, ತಮ್ಮ ಬದುಕೆಷ್ಟು ಕಷ್ಟಕರ ಎಂದು ಹೀಗೆ ಸುಮಾಳ ಯೋಚನಾ ಲಹರಿ ಸಾಗುತ್ತಿದ್ದಾಗ- ಗಗನ ಸಖಿಯು ಮ್ಯಾಮ್, * ವಾಟ್ ಯು ವಾಂಟ್ ಕಾಫಿ ಆರ್ ಟೀ * ಎಂಬ ಮಧುರ ಧ್ವನಿಯಲ್ಲಿ ಕೇಳಿದಾಗ ದೂರದ ಬೆಟ್ಟ ನುಣ್ಣಗೆ ಗಾದೆ ಮಾತು ಎಷ್ಟು ಸತ್ಯವಲ್ಲವೇ, ಮನವರಿಕೆಯೊಂದಿಗೆ ಕಾಫಿ ಪಡೆದಳು.
-ವೀಣಾ ಕೃಷ್ಣಮೂರ್ತಿ, ದಾವಣಗೆರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ