ಮಮತೆಯ ಮಡಿಲಲ್ಲಿ.....
ಮದುವೆಯಾದ ಒಂದು ವರ್ಷಕ್ಕೆ ಅಮ್ಮನ ಮಡಿಲು ತುಂಬಿ,ಅಪ್ಪನ ಎದೆಗೆ ಮುದ್ದಾಗಿ ಒದ್ದ ಕೂಸು ನಾನು.ಹತ್ತಾರು ಕಷ್ಟಗಳ ನಡುವೆಯೂ ಇರುವ ಒಬ್ಬ ಮಗಳಿಗೆ ಏನು ಕೊರತೆ ಆಗಬಾರದು ಎಂದು ಅಪ್ಪ ಅಮ್ಮ ಪಟ್ಟಿರುವ ಪಾಡು ವಿವರಿಸಲಸಾಧ್ಯ.ಪುಟ್ಟ ನೌಕರಿಯೊಂದ ಮಾಡುತ್ತಾ ತನ್ನ ಆಸೆಗಳನ್ನು ಬದಿಗಿಟ್ಟು, ಅಮ್ಮ ಮತ್ತು ನನ್ನನ್ನು ನೆರಳಿನಂತೆ ಕಾದಿದ್ದಾರೆ(ಕಾಯುತಿದ್ದಾರೆ!).
ಒಮ್ಮೆ (ಅಂದರೆ ಸುಮಾರು ಒಂದು ವರ್ಷದವಳಿದ್ದಾಗ),ಅದೊಂದು ಭಾನುವಾರ, ಅಮ್ಮ ಅಡಿಗೆ ಕೆಲಸದಲ್ಲಿ ತಲ್ಲೀನರಾಗಿದ್ದಾಗ, ಮನೆಯನ್ನೆಲ್ಲಾ ಒಮ್ಮೆ ಅಂಬೆಗಾಲಾಕುತ್ತ ಓಡಾಡುತ್ತಿರುವಾಗ ಕೈಗೆ ಸಿಕ್ಕ ಸೊಳ್ಳೆಬತ್ತಿಯನ್ನು ಚಾಕೊಲೆಟ್ನ್ಂತೆ ತಿಂದು ಬಾಯೆಲ್ಲ ಹಸಿರು ಮಾಡಿಕೊಂಡು,ಅಡುಗೆ ಮನೆಯಲ್ಲಿದ್ದ ಅಮ್ಮನೆಡೆಗೆ ಒಮ್ಮೆ ಕಣ್ಹಾಯಿಸಿ, ಹೊರಗೆ ಕುಳಿತಿದ್ದ ಅಪ್ಪನೆಡೆಗೆ ತೆವಳುತ್ತಾ ಹೋಗಿ ’ಅಪ್ಪಾ!! ಅಪ್ಪಾ!!’,ಎಂದು ತೊದಲಿದೆನಂತೆ . ಏನೊ ಕಂದ ಎಂದು ನನ್ನೆಡೆಗೆ ತಿರುಗಿದ ಅಪ್ಪ ಹಸಿರುಹಸಿರಾಗಿದ್ದ ನನ್ನ ಬಾಯಿ ನೋಡಿ ಗಾಬರಿಯಾಗಿ ಅಮ್ಮನನ್ನು ಕೊಗಿದರಂತೆ.....ಕಕ್ಕಾಬಿಕ್ಕಿಯಾದ ಅಮ್ಮ ಓಡಿಬಂದು ನೋಡಿ ಅಳಲಾರಂಭಿಸಿದರಂತೆ(ಮೊದಲ ಬಾರಿ ಇದು ತಿಳಿದಾಗ ನನ್ನ ಕಣ್ಣೂ ಒದ್ದೆಯಾಗಿತ್ತು). ರಜೆ ದಿನವಾಗಿದ್ದರಿಂದ ಸರ್ಕಾರಿ ವೈದ್ಯರನ್ನು ಕಾಣಲಾಗದೆ,ಖಾಲಿಯಿದ್ದ ಜೇಬನ್ನೊಮ್ಮೆ ನೆನೆದು ಕಂಗಾಲಾದರಂತೆ.ಕೊನೆಗೆ ಸಂಜೆಯಾಗುತ್ತಾ ಹೋದಂತೆ ಅಪ್ಪ ಅಮ್ಮನಿಗೆ ಭೀತಿ ಶುರುವಾಗಿ ಸುರಿಯುತಿದ್ದ ಮಳೆಯಲ್ಲಿ ಸೈಕಲ್ ಏರಿ ಛತ್ರಿ ಹಿಡಿದು ಹೊರಟು ಅಮ್ಮ ತನ್ನ ತಾಳಿ ಮಾರಿ ಅಲ್ಲೆಲ್ಲೊ ದೂರದಲ್ಲಿದ್ದ ಖಾಸಗಿ ದವಾಖಾನೆಗೆ ಸೇರಿಸಿ,ವೈದ್ಯರ ಸಕಲ ಪ್ರಯತ್ನಗಳ ಫಲವಾಗಿ ನಾನು ಬದುಕುಳಿದೆ.
ಕಾಲಕಳೆದಂತೆ ಎಲ್ಲರಂತೆ ನಾನೂ ಶಾಲೆಗೆ ಸೇರಿ ಓದಲಾರಂಭಿಸಿ,ಎಲ್ಲಾ ಚಟುವಟಿಕೆಗಳಲ್ಲಿ ಮುಂದಿದ್ದೆ.ಅಪ್ಪನಿಗೆ ಇಂದು,ಅಂದು, ಒಂದೇ ಆಸೆ.ತಾವು ಸಾಧಿಸಲಾರದನ್ನು ನಾನು ಸಾಧಿಸಿ ಅವರ ಹೆಸರುಳಿಸಿ ನನ್ನ ಜೀವನದಿ ಸಾಧಕಳಾಗಬೇಕೆಂದು!(ನಾನೂ ಆ ಹಾದಿಯಲ್ಲಿಯೇ ಸಾಗುತಿದ್ದೇನೆ).ದಿನಗಳೆದಂತೆ,ನಮ್ಮ ಅರಮನೆಯಲ್ಲಿ ಮಾತು ಕಡಿಮೆಯಾಯಿತು ಎಂದರೆ ತಪ್ಪಾಗಲಾರದು.ಅಪ್ಪ ತನ್ನ ಕೆಲಸದಲ್ಲಿ ಕ್ರಮೇಣ ಬ್ಯುಸಿಯಾಗತೊಡಗಿದರು,ಅಮ್ಮ ಮನೆಗೆಲಸದಲ್ಲಿ ಮುಳುಗಿರುತ್ತಿದ್ದರು..ಓದಲು ಕಲಿತ ಕೆಲವೇ ದಿನಗಳಲ್ಲಿ ಅಪ್ಪನಿಂದ ಹಲವಾರು ಪುಸ್ತಕಗಳು ಉಡುಗೊರೆಯಾಗಿ ದೊರೆತವು.ಅವುಗಳಲ್ಲಿ ನಾನು ಮುಳುಗಿರುತ್ತಿದ್ದೆ...ಹೀಗೆ ನಾಲ್ಕು ವರ್ಷಗಳ ನಂತರ ನನ್ನ ತಮ್ಮ ವಿಷ್ಣು ಹುಟ್ಟಿದ.ಅದಾಗ ತಾನೆ ತೊದಲು ಮಾತುಗಳು ಕಡಿಮೆಯಾಗುತ್ತಿರುವಾಗ ಅವನು ಕೇಕೆಹಾಕುತ್ತಾ ನಗುವುದನ್ನು ನೋಡಲು ಇನ್ನಿಲ್ಲದ ಸಂತೋಷ.ದಿನವಿಡೀ ಅಮ್ಮ ಅಪ್ಪ ಮತ್ತು ನಾನು ಅವನನ್ನು ,ಅವನ ಲೀಲೆಗಳನ್ನು ನೋಡುತ್ತಾ ಮಾತುಮರೆಯುತ್ತಿದ್ದೆವು .ಹೀಗೆ ಒಂದಿಲ್ಲೊಂದು ಸಂತೋಷ ಅದರ ನಡುವೆ ದುಃಖ,ಕಷ್ಟಗಳು ಬಂದರೂ,ಅಂದಿನಿಂದ ಇಂದಿನವರೆಗೂ,ಕಡಿಮೆಯಾಗದ ಅಪ್ಪ ಅಮ್ಮನ ಪ್ರೀತಿ,ಮಮತೆ ನನ್ನನ್ನು ಪ್ರೇಮಾಂಧಳನ್ನಾಗಿಸಿದೆ.ಕಳೆದ ಕೆಲವು ವರ್ಷಗಳ ಹಿಂದೆ ಪುಟ್ಟ ಮನೆಯೊಂದರಲ್ಲಿ ಜೀವನ ಸಾಗಿಸುತ್ತಾ,ಹಾಸಿಗೆ ಇದ್ದಷ್ಟು ಕಾಲು ಚಾಚುತ್ತಾ ಬದುಕುತ್ತಿದ್ದ ಆ ದಿನಗಳನ್ನು, ಮರೆಯಲಸಾಧ್ಯ.ಎಲ್ಲಾ ಸೌಕರ್ಯಗಳನ್ನು ಕೊಟ್ಟು ಪಧವಿ ಓದುವವರೆಗೂ ಬೆನ್ನು ತಟ್ಟಿ ಕೈಹಿಡಿದು ನಡೆಸಿದ ಅಪ್ಪ ಅಮ್ಮನ ವ್ಯಕ್ತಿತ್ವ ಬಣ್ಣಿಸಲು ಪದಗಳಿಲ್ಲ.....
ಒಮ್ಮೊಮ್ಮೆ ಅವರಿಬ್ಬರ ಮೇಲೂ ಸಿಡುಕಿರುವುದೂ ಹೌದು,ಆದರೆ, ನಂತರ ಕಿಟಕಿಗೆ ಮುಖಮಾಡಿ,ಗೋಡೆಗೆ ಒರಗಿ ಕಂಬನಿಯಿಟ್ಟು ಕೊರಗಿದ ಕ್ಷಣಗಳು ಅವರಿಗೆ ಅರಿವಾಗಿಲ್ಲ.
ಅದೆಷ್ಟು ಜನ್ಮಗಳಾದರೂ ಮರೆಯಲಾಗದ ಅವರ ಪ್ರೀತಿಗೆ ನಾ ಚಿರಋಣಿ!.....
ಅಪ್ಪ ತಾವು ಪಟ್ಟ ಕಷ್ಟ ನಾವು ಪಡಬಾರದು ಎಂದು ಯಾವಾಗಲೂ ಹೇಳುತಿದ್ದರು.ಹಾಗೆಯೇ ನಮ್ಮನ್ನು ಮೇಲೆ ತಂದಿದ್ದಕ್ಕೆ ಇಗೋ ನನ್ನ ನಮನ!!
ಅಮ್ಮನ ತಾಳ್ಮೆಗೆ,
ಅಪ್ಪನ ತ್ಯಾಗಕ್ಕೆ,
ಅವರಿಬ್ಬರ ಪ್ರೀತಿಗೆ,
ತೀರಿಸಲಾಗದ ಮಮತೆಯ ಸಾಲಕ್ಕೆ,
ನನ್ನದೊಂದ್ದೇ ಕೊಡುಗೆ.
ಸಾಗುವೆ ನೆರಳಾಗಿ
ಅವರು ಸಾಗಿದಲ್ಲಿಗೆ
ನನ್ನ ಕೊನೆ ಉಸಿರಿನವರೆಗೆ.....