'ಮಯೂರ' ಹಾಸ್ಯ - ಭಾಗ ೧೭

ಇನ್ನೊಂದು ಜೊತೆ ಇದೆ
ಹುಟ್ಟಿದ ಹಬ್ಬದ ದಿನ ಹಿರಿಯರ ಆಶೀರ್ವಾದ ಪಡೆಯಲೆಂದು ನಮ್ಮ ಮನೆಗೆ ಬಂದ ಪಕ್ಕದ ಮನೆಯ ಹುಡುಗ ಮಾಧವ, ನನ್ನ ಮಾವನವರ ಕಾಲಿಗೆರಗಿ ಎದ್ದವನೇ ‘ವಾಹ್! ತಾತಾ ! ಹೊಸಾ ಫ್ಯಾಷನ್ ! ಗ್ರ್ಯಾಂಡ್ ಸೊಗಸಾಗಿದೆ ನಿಮ್ಮ ಕಾಲಚೀಲ' ಎಂದು ನಗಾಡಿದ. ನಾನು ಮಾವನವರ ಕಾಲ ಕಡೆ ನೋಡಿದೆ. ಒಂದು ಕಾಲಿಗೆ ಕಪ್ಪು, ಇನ್ನೊಂದು ಕಾಲಿಗೆ ನೀಲಿ ಕಾಲ ಚೀಲವನ್ನು ಧರಿಸಿ ಕಾಲು ಚಾಚಿ ಕುಳಿತಿದ್ದರು ಮಾವ. ಅವರಿಗೆ ಕಿವಿ ಸ್ವಲ್ಪ ಮಂದ. ಅವನು ಯಾಕೆ ನಕ್ಕನೆಂದು ತಿಳಿಯದೆ ‘ಏನಂತೆ?’ ಎಂದು ನನ್ನ ಕೇಳಿದರು. ‘ನಿಮ್ಮ ಕಾಲು ಚೀಲ ಫ್ಯಾಷನಬಲ್ ಆಗಿ ತುಂಬಾ ಚೆನ್ನಾಗಿದೆಯೆಂದು ಹೊಗಳುತ್ತಿದ್ದಾನೆ" ಎಂದು ಗಟ್ಟಿಯಾಗಿ ಹೇಳಿದೆ. ಮಾವ ಸಂತೋಷದಿಂದ ಮುಗ್ಧ ನಗೆ ಬೀರುತ್ತ, “ಹೌದೇ? ನನ್ನ ಹತ್ತಿರ ಒಳಗೆ ಇದೇ ತರಹದ್ದು ಇನ್ನೂ ಒಂದು ಜೊತೆ ಇದೆ.” ಎಂದು ಹೆಮ್ಮೆಯಿಂದ ಹೇಳಿದಾಗ ನಮಗ್ಯಾರಿಗೂ ನಗು ತಡೆಯಲಾಗಲಿಲ್ಲ... ಜೋರಾಗಿ ನಕ್ಕುಬಿಟ್ಟೆವು.
-ಬ್ರಹ್ಮಾಣಿ ಪಿ.ರಾವ್, ಬೆಂಗಳೂರು
***
ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು…
ಬಹಳ ವರ್ಷಗಳ ಹಿಂದಿನ ಮಾತು ನಾವು ಆಗ ಹೊಳೇನರಸೀಪುರದಲ್ಲಿದ್ದೆವು. ನಮ್ಮ ಅಣ್ಣ ಚಂದ್ರನಿಗೆ, ಸೂರ್ಯ ಎಂಬ ಆಪ್ತ ಸ್ನೇಹಿತರಿದ್ದರು. ನಿತ್ಯವೂ ಅವರು ಸಂಜೆಯ ವೇಳೆ ನಮ್ಮ ಮನೆಗೆ ಬರುವುದು, ಇಬ್ಬರೂ ಕೂಡಿ ಹೇಮಾವತಿ ನದಿಯ ತೀರದಲ್ಲಿ ವಾಕಿಂಗ್ ಹೋಗುವುದು.. ಇಬ್ಬರ ನಿತ್ಯದ ದಿನಚರಿಯಾಗಿತ್ತು. ಒಮ್ಮೆ ಅವರಿಬ್ಬರಿಗೂ ಯಾವುದೋ ಸಣ್ಣ ವಿಷಯಕ್ಕೆ ಮನಸ್ತಾಪ ಉಂಟಾಗಿ ಸೂರ್ಯ ಒಂದು ವಾರ ನಮ್ಮ ಮನೆ ಕಡೆ ತಲೆಯನ್ನೇ ಹಾಕಲಿಲ್ಲ! ಇಬ್ಬರಿಗೂ ಏನೋ ಬಿಗುಮಾನ! ಆದರೆ ಗೆಳೆಯನಿಂದ ದೂರವಿರಲಾರದ ಸೂರ್ಯ ತಾವೇ ಸೋತು ನಮ್ಮ ಅಣ್ಣನನ್ನು ನೋಡಲು ಬಂದರು.
ಅವರನ್ನು ನೋಡಿದವಳೇ ನನ್ನ ಪುಟ್ಟ ತಂಗಿ ಖುಷಿಯಿಂದ ‘ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು ವಾಕಿಂಗ್ ನಲ್ಲಿ ಏನೈತೆ ಸೊಗಸು?’ ಎಂದು ಮುದ್ದು ಮುದ್ದಾಗಿ ಹಾಡಲಾರಂಭಿಸಿದಾಗ ಇಬ್ಬರಲ್ಲೂ ಮನಸ್ತಾಪದ ಮೋಡ ಕರಗಿ ಮನೆಯೆಲ್ಲಾ ನಗುವಿನಿಂದ ತುಂಬಿಹೋಯ್ತು.
-ಶಾಂತಾ ಕೆ.ಪಿ., ಬೆಂಗಳೂರು
***
ಮಲಗಿದ್ಮೇಲೆ ತಗೊಳ್ಳಿ
ಮೊನ್ನೆ ಯಾಕೋ ಸ್ವಲ್ಪ ಶೀತ ತಲೆನೋವು ಇತ್ತು. ನಮ್ಮ ಸಹಾಯಕಿ ಮಂಜುಳಳನ್ನು ಕರೆದು ಮೆಡಿಕಲ್ ಶಾಪ್ ನಿಂದ ಮಾತ್ರೆ ತರುವಂತೆ ಕಳಿಸಿದೆ. ಒಂದೆರಡು ಮಾತ್ರೆಗಳನ್ನು ತಂದ ಆಕೆ ‘ಸರ್, ಈ ಮಾತ್ರೆ ತಗೊಂಡ್ರೆ ನಿದ್ದೆ ಬರುತ್ತಂತೆ, ಮಲಗಿದ್ಮೇಲೆ ತಗೋಬೇಕಂತೆ!’ ಅಂದಳು.
ಮರುದಿನವೂ ಸ್ವಲ್ಪ ಇರುಸುಮುರುಸು ಇತ್ತು. ಮಂಜುಳ ಕೇಳಿದಳು ‘ಯಾಕ್ಸಾರ್, ಇನ್ನೂ ಶೀತ ಹೋಗಿಲ್ಲ. ಮಾತ್ರೆ ತಗೊಳಿಲ್ವಾ?’ ‘ನೀನು ಹೇಳ್ದಂಗೆ ಮಲಗಿದ್ಮೇಲೆ ತಕೋಬೇಕಿತ್ತೇನೋ, ನಾನು ಮಲಗೋ ಮುಂಚೆನೇ ತಗೊಂಬಿಟ್ಟೆ. ಅದಕ್ಕೆ ಹೋಗಿಲ್ಲಾ ಅನ್ಸುತ್ತೆ' ಅಂದೆ.
-ಕೆ.ಪಿ.ಸತ್ಯನಾರಾಯಣ, ಹಾಸನ
***
‘ಬಾರಮ್ಮಾ..'
ನಮ್ಮ ಕುಟುಂಬದವರೆಲ್ಲಾ ಮಂಗಳೂರು, ಧರ್ಮಸ್ಥಳ, ಉಡುಪಿ ಇತ್ಯಾದಿ ದೇವಾಲಯಗಳ ದರ್ಶನಕ್ಕೆಂದು ಕಾರು ಮಾಡಿಕೊಂಡು ಹೊರಟಿದ್ದೆವು. ವಾರದ ಮಧ್ಯದಲ್ಲಿ ಆದ್ದರಿಂದ ಗಂಡಸರು ಯಾರೂ ನಮ್ಮ ಜೊತೆಗೆ ಇರಲಿಲ್ಲ. ದಿನವಿಡೀ ಸುತ್ತಾಡಿ ಕೊನೆಗೆ ಮಕ್ಕಳು ಮಲ್ಪೆ ಬೀಚ್ ಗೆ ಹೋಗಿ ಬಂದ ನಂತರ ಮಕ್ಕಳು ಮತ್ತೆ ನೀರಿನಲ್ಲಿ ಆಡಲು ಆಸೆಪಟ್ಟಿದ್ದರಿಂದ ಅವರನ್ನು ಆಡಲು ಬಿಟ್ಟೆವು. ಆಗಲೇ ಮಬ್ಬುಗತ್ತಲೆ ಆಗುತ್ತಾ ಇತ್ತು. ಸಂಜೆ ಕಾಫಿಗೆಂದು ನಮ್ಮ ಹೆಂಗಸರ ಗುಂಪು ಅಲ್ಲಿ ಇಲ್ಲಿ ಹೋಟೆಲ್ ಹುಡುಕಲು ಶುರು ಮಾಡಿದೆವು. ಅಷ್ಟರಲ್ಲಿ ನಮ್ಮತ್ತೆ ಜೋರಾಗಿ ಕೂಗಿ ‘ಇಲ್ಲೊಂದು ಹೋಟೆಲ್ ಇದೆ...ಬನ್ನಿ' ಎಂದು ಹೇಳಿದರು. ನಾವೆಲ್ಲಾ ಅತಿ ಉತ್ಸಾಹದಿಂದ ಆ ಮಬ್ಬುಗತ್ತಲಿನ ಹೋಟೆಲ್ ಗೆ ನುಗ್ಗಿದೆವು. ಬಾಗಿಲಲ್ಲಿ ನಿಂತಿದ್ದ ಮ್ಯಾನೇಜರ್ ನಂತೆ ಕಾಣುತ್ತಿದ್ದವನೊಬ್ಬ ಗಾಬರಿಯಾಗಿ ಬಾರಮ್ಮಾ, ಬಾರಮ್ಮಾಎಂದು ಹೇಳುತ್ತಲೇ ಇದ್ದ. ‘ಬರುತ್ತಾ ಇದ್ದೀವಲ್ಲಪ್ಪಾ’ ಎಂದು ನುಗ್ಗಿ ‘ಉಸ್ಸಪ್ಪಾ’ ಎಂದು ಕುಳಿತು ‘ಎಂಟು ಕಾಫಿ ಕೊಡಿ ‘ ಎಂದೆವು. ಅವನು ನಗುತ್ತಾ ಇದ್ದುದನ್ನು ನೋಡಿ ನಮ್ಮ ಅತ್ತೆ ‘ಯಾಕೆ ನಿಮ್ಮ ಹೋಟೆಲ್ ನಲ್ಲಿ ಕಾಫಿ ಮಾಡುವುದಿಲ್ಲವೇ?’ ಎಂದು ಕೇಳಿದರು. ಅದಕ್ಕೆ ಮ್ಯಾನೇಜರ್ ‘ದಯವಿಟ್ಟು ಕ್ಷಮಿಸಿ ಇದು ಬಾರ್. ನಮ್ಮ ಬಾರ್ ನಲ್ಲಿ ನಾವು ಕಾಫಿ ಮಾರೋದಿಲ್ಲ' ಎಂದ. ಆಗಲೇ ನಮಗೆ ತಿಳಿದದ್ದು ಅದು ಬಾರ್ ಎಂದು ಅದಕ್ಕೆ ಅವನು ‘ಬಾರಮ್ಮಾ, ಬಾರಮ್ಮಾ’ ಎಂದದ್ದು. ನಮಗೆ ‘ಒಳಗೆ ಬಾರಮ್ಮಾ’ ಎಂದು ಕೇಳಿಸಿತ್ತು. !
-ಸುಜಾತ ಶ್ರೀನಿವಾಸ್, ಬೆಂಗಳೂರು
***
(ಫೆಬ್ರವರಿ ೨೦೧೫ರ ‘ಮಯೂರ' ಪತ್ರಿಕೆಯ ಸಂಗ್ರಹ)