ಮರಳು ಗೂಡು,

ಮರಳು ಗೂಡು,

ಬರಹ

ಸಂಜೆ ಕಾಫಿ ಹೀರುತ್ತಾ, ತಾರಸಿಯ ಮೇಲೆ ನಿಂತಾಗ ಮುಳುಗುತ್ತಿರುವ ಸೂರ್ಯನ ಹೊಂಬಣ್ಣ, ಕಂಗಳಲ್ಲಿ ಹೊಂಬೆಳಕನ್ನೇ ತುಂಬುತ್ತದೆ, ಇನ್ನೂ ಸಂಜೆಯಾಗುತ್ತಲೇ ಗೂಡು ಸೇರುವ ತವಕದಲ್ಲಿ ಚಿತ್ತಾಕರ್ಶಕವಾಗಿ ಸಾಗಿ ಹೋಗುವ ಹಕ್ಕಿಗಳು, ಅವುಗಳ ಕಲರವ ಹೊಸ ಲೋಕಕ್ಕೆ ಒಯ್ಯುತ್ತವೆ. ಇಂತಹ ಸುಂದರ ವಾತಾವರಣವನ್ನೂ ಆಸ್ವಾದಿಸಿಯೇ ಇರಬೇಕು ಕವಿ ಪು.ತಿ.ನ ಅವರು ಬರೆದದ್ದು " ಈ ಬಾನು, ಈ ಚುಕ್ಕಿ, ಈ ಹೂವು, ಈ ಹಕ್ಕಿ " . ಇವೆಲ್ಲಾಕ್ಕಿಂತ ಆಕರ್ಷಕವಾದದ್ದು, ಸಂಜೆ ವೇಳೆಯಲ್ಲಿ ಆಡುವ ಮಕ್ಕಳು ಮರಳು ಗುಡ್ಡೆಯಲ್ಲಿಯೇ ಹೊಸದೊಂದು ಪ್ರಪಂಚವ ನಿರ್ಮಿಸುವ ಹುನ್ನಾರ ಅವರದು,ಹೊಸ ಹೊಸ ಆಟ, ಹಾಡು ಕುಣೆತ, ಹೇಗಿದೆ ನೋಡಿ ಅವರ ಹೊಸ ಸಂಚು.

ಹೌದು, ಇಂತಹ ಒಂದು ಸನ್ನಿವೇಶ ನೋಡಿ ತಮ್ಮ ಬಾಲ್ಯದ ನೆನಪಾಗಲಿಲ್ಲವೆಂದರೆ ಅದು, ಬಾಲ್ಯವೇ ಅಲ್ಲ ಬಿಡಿ, ಮರಳು ಗುಡ್ಡೆಯಲ್ಲಿ ಗೂಡನ್ನು ಕಟ್ಟಿ ಅದನ್ನು ಗುಬ್ಬಚ್ಚಿ ಗೂಡು ಎಂದು ಕರೆಯುತ್ತಿದ್ದದ್ದು, ಅವರವರ ಅರಿವಿನ ಆಚೆಗೆ ಗುಬ್ಬಚ್ಚಿ ಗೂಡುಗಳ ನಿರ್ಮಾಣ, ಯಾವ ಎಂಜಿನಿಯರ್ ಕೂಡ ಕಟ್ಟೊಕ್ಕಾಗಲ್ಲ ಬಿಡಿ, ಅದೇನಿದ್ದರೂ ಈ ನಮ್ಮ ಮಿನಿ ಎಂಜಿಯರ್ (ಮಕ್ಕಳು)ಗಳ ಕೆಲಸ ಮಾತ್ರ, ಹಾಗೆ ನೆನಪಾಗಿದ್ದು ಅವಳಿಗೆ ಅವಳ ಬಾಲ್ಯ, ಗೇಟಿನ ಸರಪಳಿಗಳ ಹಿಂದೆ ನಿಂತು ಆಡುತಿದ್ದ ಮಕ್ಕಳನ್ನು ನೋಡುತ್ತಿದ್ದದು, ಎಲ್ಲಾ ಹೋದ ಮೇಲೆ ಅವನು ಆಡಲು ಬರುತ್ತಿದ್ದ , ಅವನೊಂದಿಗೆ ಮಾತ್ರ ಅಮ್ಮ ಆಡಲು ಬಿಡುತ್ತಿದ್ದದ್ದು, ಅದ್ಯಾಕೆ ಹಾಗೆ, ಎಂದರೆ ಅವನು ತುಂಬಾ ಡೀಸೆಂಟ್ ಬಾಯ್ ಎನ್ನುತ್ತಿದ್ದದ್ದು, ನೆನಪಾಯ್ತು, ಅವನ ಅವಳ ಸ್ನೇಹ ಎಂದೂ ಸೇರುತ್ತಿರಲಿಲ್ಲ,

ಅಂದು ಅವಳು ಆಸೆಯಿಂದ ಮರಳು ಗೂಡುನ್ನು ಕಟ್ಟಿದ್ದಳು, ಅದಕ್ಕೆ ದೊಡ್ಡ ಅರಮನೆಗೆ ಇರುತ್ತಿದ್ದ ಹಾಗೆ , ದೊಡ್ಡ ರಹದಾರಿ, ಅಕ್ಕಪಕ್ಕ ಗಿಡಗಳನ್ನು ತಂದು ಅಲಂಕರಿಸಿದ್ದಳು. ಹೋಗುವವರೆಲ್ಲಾ ಒಮ್ಮೆ ನಿಂತು ನೋಡಿ ಹೋಗುವಂತೆ ಮಾಡುವಂತಹ ಆಕರ್ಷಕ ನಿರ್ಮಾಣದ ವ್ಯಕ್ತಿತ್ವ ಅವಳಲ್ಲಿತ್ತು. ಕಾರಿನ ಬದಲು ಒಂದು ಇಟ್ಟಿಗೆ ಕಾರಿನ ಜಾಗವನ್ನು ಪಡೆದಿತ್ತು. ಅಂದು ಆಕಾಶ ಕಪ್ಪು ಮೋಡಗಳಿಂದ ಕೂಡಿತ್ತು, ಮುಂಗಾರು ಮಳೆಯು ತನ್ನ ಮುತ್ತಿನ ಹನಿಗಳೊಂದಿಗೆ ಯಾವಾಗ ಬೇಕಾದರೂ ಬರಬಹುದಿತ್ತು, ಆದರೆ ಅವಳಿಗೆ ಅದರ ಅರಿವಿರಲಿಲ್ಲ ಅವಳು ಗೂಡಿನ ನಿರ್ಮಾಣದಲ್ಲಿ ನಿರತಳಾಗಿದ್ದಳೂ, ಇದ್ದಕ್ಕಿದಂತೆ ಬಂದ ಹನಿಗಳು ಭೂವಿಯನ್ನು ಸ್ಪರ್ಶಿಸಿದ್ದವು, ಅಷ್ಟರಲ್ಲಿ ಇವಳು ಒಳಹೋಗಿ ತಂದಿಟ್ಟ ಛತ್ರಿ, ಗೂಡನ್ನು ಕಾಪಾಡಲು ಅವಳು ಪಡುತಿದ್ದ ಪಾಡು ನೋಡಿ ಮಳೆರಾಯ ನಕ್ಕು , ಮತ್ತೆತ್ತಲೂ ತನ್ನ ಮೋಡಗಳೊಂದಿಗೆ ಸಾಗಿತು. ಖುಷಿಯಿಂದ ಮೇಘರಾಜನಿಗೊಂದಿಸಿ, ತನ್ನ ಪುಟ್ಟ ಗೂಡನ್ನು ಅಲಂಕರಿಸುತ್ತಿದ್ದರೆ,

ಅದೆಲ್ಲಿದ್ದನೋ ಅಮ್ಮನಾ ಆ ಡಿಸೆಂಟ್ ಬಾಯ್ ತನ್ನ ಮರಳು ಗೂಡನ್ನು ಹಾಳು ಗೆಡಹಿದನು.ತಾನು ಕಟ್ಟಿದ ಸುಂದರ ಗೂಡಿನ ಮೇಲೆ ಹಾರಿಕುಳಿತ ಆ ಸಂದರ್ಭ ಅವಳನ್ನೂ ಈಗಲೂ ಬೆಚ್ಚಿ ಬೀಳಿಸಿತು. ಅವನದೊಂದು ರೀತಿ ಅಸಹನೀಯ ಮನಸ್ಥಿತಿ, ಅಮ್ಮನಿಗೆ ಹೇಳಿಯು ಪ್ರಯೋಜನವಿಲ್ಲ ಕಾರಣ ಅಮ್ಮ ಅವನ ಪಾರ್ಟಿ.

ಅವನೀಗಾ ದೊಡ್ಡ ಹುದ್ದೆಯಲ್ಲಿದ್ದಾನೆ, ಹೊರದೇಶಕ್ಕೆ ಹೋಗಿ ಬಂದಿದ್ದಾನೆ, ಅಮ್ಮ ಅವನಮ್ಮನಿಗೆ ಮಾತು ಕೊಟ್ಟಿದ್ದಾಳಂತೆ, ನನ್ನನ್ನು ಅವನಿಗೆ ಕೊಡುವುದಾಗಿ, ಅವನನ್ನು ಹೇಗೆ ಒಪ್ಪಲಿ, ಅಂದಿನ ಆ ದಿನದಿಂದ ಇಲ್ಲಿಯವರೆಗೆ ಅವಳು ಅದನ್ನು ಮರೆತಿಲ್ಲ, ಅಂದಿನಿಂದ ಎಂದೂ ಅವನನ್ನೂ ಮಾತಾಡಿಸಿಲ್ಲ, ಅಗೋ ಅವನೆಅಲ್ಲವಾ ಬರುತ್ತಿದ್ದಾನೆ, ಅಯ್ಯೊ ಇಲ್ಲಿ ಆಡುತ್ತಿರುವ ಮಕ್ಕಳನ್ನು ಎನ್ನನ್ನುತ್ತಾನೋ, ಛೇ ಇನ್ನೆಷ್ಟು ಎಳೆ ಮನಗಳನ್ನು ಮುದುಡಿಸುವನೋ, ಎಂದು ಇವಳ ಮನ ಡವಗುಟ್ಟುತ್ತಿರುವಾಗಲೆ, ಆ ಮಕ್ಕಳ ಬಳಿ ಹೋದ ಅವನು ಅಲ್ಲಿ ಗೂಡು ಕಟ್ಟಲು ಬರದೆ ಒದ್ದಾಡುತ್ತಿದ್ದ, ಮಗುವಿಗೆ ಗೂಡು ಕಟ್ಟಿಕೊಟ್ಟಿದ್ದನ್ನು ನೋಡಿ, ದಿಗ್ಬ್ರಾಂತಿ, ಆಶ್ಚರ್ಯವಾಯಿತು. ಇವನು ಅವನೇನಾ ಎಂಬ ಅನುಮಾನ ಮನೆ ಮಾಡಿತು.

ಅದು ಕನಸಾ ಎಂದು ತನ್ನ ಕೈಯನ್ನು ಗಿಲ್ಲಿ ಪರೀಷಿಸಿಕೊಂಡಳು, ನಿಜ, ಮನಸ್ಸು ಪ್ರಪುಲ್ಲಗೊಂಡಿತು, ಕಾಲ ಎಲ್ಲವನ್ನೂ ಕಲಿಸುತ್ತದೆ, ಅನ್ನೋದು ಇದಕ್ಕೆನಾ ಎಂದು ಕೊಂಡಳು, ಕಾಲದೊಂದಿಗೆ ಮನಸ್ಸು ಮಾಗುವುದು ನಿಜನಾ, ಅವನು ಮನೆಯತ್ತ ಬರುತ್ತಿದ್ದಾನೆ , ತುಂಬಾ ವರುಷಗಳ ನಂತರ ಇದು ಅವರ ಮೊದಲ ಭೇಟಿ ಅಮ್ಮ ಹೇಳಿದ್ದು ನೆನಪಾಯ್ತು, ಅವನು ನನ್ನೊಂದಿಗೆ ಮಾತಾಡ ಬೇಕು ಎಂದಿದ್ದನಂತೆ. ಮನಸ್ಸು ಮುದಗೊಂಡಿದೆ, ಒಂದು ಸನ್ನಿವೇಶ ಅಥವ ಘಟನೆ ಬಾಳಿನ ದಿಕ್ಕನ್ನೇ ಬದಲಿಸುತ್ತವಲ್ಲವೇ, ಹಿಂದಿನ ಘಟನೆಯಿಂದ ಮನಸ್ಸಿಗೆ ಮಾರು ದೂರದಲ್ಲಿದ್ದವನು, ಇಂದಿನ ಘಟನೆಯಿಂದ ಮನಸ್ಸಿಗೆ ಇಷ್ಟು ಹತ್ತಿರ ಹೇಗಾದ, ಅವಳದೇ ಆದ ಆಲೋಚನಾ ಲೋಕದಲ್ಲಿ ಮುಳುಗಿದ್ದವಳಿಗೆ ಅವನು ಬಂದು ಕುಳಿತಿದ್ದದ್ದು , ಅರಿವಿಗೆ ಬರಲಿಲ್ಲಾ, ಅಮ್ಮ ಕೂಗಿ ಎಚ್ಚರಿಸಿದಾಗಲೇ ಅರಿವಾಗಿದ್ದು, ಅಮ್ಮ ಅಂದರೂ ಅವನು ಬಂದು ೧೫ ನಿಮಿಷ ಆಯ್ತು, ಎನಾದರೂ ಮಾತಾಡ ಬಾರದ, ಎಂದಾಗ , ಅವನ ಹುಸಿ ನಗು, ಅವನತ್ತ ಚಿತ್ತ ನೆಡುವಂತೆ ಮಾಡಿತು.

ಅವನು ಹಾಯ್ ಅಂದ, ಮುಸ್ಸಂಜೆಯಲ್ಲಿ ಮನಸ್ಸುಗಳ ಮಾತು ಸಾಗಿದವು.
ಮನದ ಬಾಗಿಲಲ್ಲಿ ನಿಂದು ಒಳಬರಲು ಅನುಮತಿ ಕೋರುತ್ತಿದ್ದಾನೆ, ಏನು ಮಾಡಲಿ?
ಮನಸ್ಸು ಹೊಸ ಮರಳು ಗೂಡಿನ ನಿರ್ಮಾಣದ ಕನಸು ಕಾಣುತ್ತಿದೆ,ಅದು ಕನಸಾಗದಿರಲಿ,
ಯಾವುದೋ ಹೊಸ ಸಂಚಿಗೆ ಒಳಗಾದವಳಹಾಗೆ ಒಳಗೊಳಗೆ ಭಾವಗಾನವೊಂದು ಗುನುಗಿದೆ,

"ಯಾವುದೀ ಹೊಸ ಸಂಚು ಎದೆಯಂಚಿನಲಿ ಮಿಂಚಿ
ಮನಸು ಕನಸುಗಳನ್ನು ಕಲೆಸಿರುವುದು
ಗಿರಿಕಮರಿ ಆಳದಲಿ ತೆವಳಿದ್ದ ಭಾವಗಳ
ಮುಗಿಲ ಮಂಚದಲಿಟ್ಟು ತೂಗುತಿಹುದು
ಯಾವುದೀ ಹೊಸ ಸಂಚು ಎದೆಯಂಚಿನಲಿ ಮಿಂಚಿ"

ನಿಜ, ಅಮ್ಮ ಹೇಳುತ್ತಿದ್ದದು. ಅವನು ಡಿಸೆಂಟ್ ಬಾಯ್ ಅಂತ,
********************