ಮರುಪರೀಕ್ಷೆ ನಡೆಯಲಿ

ಮರುಪರೀಕ್ಷೆ ನಡೆಯಲಿ

ಪಿ ಎಸ್ ಐ ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರೀ ಅಕ್ರಮಗಳು ನಡೆದಿದ್ದು, ದಿನಕಳೆದಂತೆ ಒಂದೊಂದೇ ಸತ್ಯ ಹೊರಬರುತ್ತಿವೆ. ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಳೆದ ತಿಂಗಳು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಅತ್ಯಂತ ಕಳಪೆ ಮಟ್ಟದ್ದಾಗಿತ್ತು. ಹಗಲಿರುಳು ಓದಿದ ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆ ನೋಡಿ ಕಕ್ಕಾಬಿಕ್ಕಿಯಾಗಿದ್ದರು ಎಂಬ ಸುದ್ದಿ ಆಗಲೇ ಹರಿದಾಡಿತ್ತು. ಇದೀಗ ಆ ಪ್ರಶ್ನೆ ಪತ್ರಿಕೆ ರಚನೆ ಯಾಕೆ ಹಾಗಿತ್ತು ಎಂಬ ಸತ್ಯ ಬಯಲಿಗೆ ಬಂದಿದೆ. ಪ್ರಶ್ನೆಗಳು ಕನಿಷ್ಟ ಪಕ್ಷ ಕೆ-ಸೆಟ್, ನೆಟ್ ಮಟ್ಟದಲ್ಲಿ ಇದ್ದಿದ್ದರೂ ವಿಷಯ ಜ್ಞಾನ ಹೊಂದಿದ ಉತ್ತಮ ಅಭ್ಯರ್ಥಿಗಳು ಆಯ್ಕೆಯಾಗುವ ಅವಕಾಶ ಹೆಚ್ಚಾಗಿರುತ್ತಿತ್ತು. ಆದರೆ ಕೆಲವೇ ಜನರಿಗೆ ಅನುಕೂಲವಾಗುವಂತೆ ಪ್ರಶ್ನೆ ಪತ್ರಿಕೆ ರಚಿಸಲಾಗಿತ್ತು. ಆ ಕೆಲವೇ ಜನರು ಯಾರು ಎಂಬುದು ಇದೀಗ ಬಹಿರಂಗವಾಗಿದೆ. ಹೀಗಾಗಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಮರುಪರೀಕ್ಷೆ ನಡೆಸುವ ಮೂಲಕ ನಿಷ್ಟೆಯಿಂದ ಓದಿದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವತ್ತ ಸಂಬಂಧಪಟ್ಟ ಸಚಿವರು, ಅಧಿಕಾರಿಗಳು ಗಮನಹರಿಸಬೇಕಾಗಿದೆ. ಇನ್ನೊಂದೆಡೆ ಕಳೆದ ಎರಡ್ಮೂರು ವರ್ಷಗಳಿಂದ ನಡೆಯದ ಪಿ ಎಸ್ ಐ ನೇಮಕ ಈ ಬಾರಿ ನಡೆದಿದ್ದು, ಅದರಲ್ಲೂ ಭ್ರಷ್ಟಾಚಾರದ ವಾಸನೆ ಹೆಚ್ಚಾಗಿಯೇ ಹೊಡೆದಿದೆ. ಕೂಲಿ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿದ ಅನೇಕ ಪೋಷಕರಿಗೆ ತಮ್ಮ ಮಕ್ಕಳ ಪರೀಕ್ಷಾ ಫಲಿತಾಂಶ ನಿರಾಶೆ ಹುಟ್ಟಿಸಿದೆ. ಇದೇ ನೇಮಕ ಪ್ರಕ್ರಿಯೆಯನ್ನು ಸರಕಾರ ಒಪ್ಪಿಕೊಂಡು ಆಯ್ಕೆಯಾದವರಿಗೆ ನೇಮಕ ಪತ್ರ ನೀಡಿದರೆ ಮತ್ತೆ ಪಿ ಎಸ್ ಐ ನೇಮಕಕ್ಕೆ ಅರ್ಜಿ ಆಹ್ವಾನಿಸಲು ವರ್ಷಗಳೇ ಕಳೆಯುವ ಸಾಧ್ಯತೆ ಇದೆ. ಹೀಗಾಗಿ ಪಿ ಎಸ್ ಐ ನೇಮಕಕ್ಕೂ ಮತ್ತೊಮ್ಮೆ ಪಾರದರ್ಶಕವಾಗಿ ಪರೀಕ್ಷೆ ನಡೆಸುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕಿದೆ. ಅಲ್ಲದೇ, ಇವೆರಡೂ ನೇಮಕ ಪ್ರಕ್ರಿಯೆಗಳಲ್ಲಿ ಭ್ರಷ್ಟಾಚಾರ ನಡೆಯಲು ಕಾರಣವಾದವರನ್ನು ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ಕೊಡಿಸಬೇಕಿದೆ. ಆ ಮೂಲಕ ವ್ಯವಸ್ಥೆಯ ಬಗ್ಗೆ ಜನರಲ್ಲಿ ಭರವಸೆ ಮೂಡಿಸುವ ಕೆಲಸ ತುರ್ತಾಗಿ ನಡೆಯಬೇಕಿದೆ.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೨೭-೦೪-೨೦೨೨ 

ಚಿತ್ರ ಕೃಪೆ: ಅಂತರ್ಜಾಲ ತಾಣ