ಮಲಾಲ ಯೂಸಫ್ ಝಾಯಿ :ನಿನ್ನ ಕಿಚ್ಚು ಕಾಳ್ಗಿಚ್ಚಾಗಿ ಹರಡಲಿ ...!
"ಮಲಾಲ ಯೂಸಫ್ ಝಾಯಿ"ಎಂಬ ಪುಟ್ಟ ಹೋರಾಟಗಾರ್ತಿ ಕೆಲವು ದಿನಗಳಿಂದ ಬಿಡದೆ ಕಾಡುತ್ತಿದ್ದಾಳೆ. ಇದೇ ಅಕ್ಟೋಬರ್ ೯ ರಂದು ನರ ರಾಕ್ಷಸ ತಾಲಿಬಾನಿಗರಿಂದ ಗುಂಡೇಟು ತಿಂದು ಸದ್ಯ ಜೀವನ್ಮರಣ ಹೋರಾಟದಲ್ಲಿರುವ 14ರ ಹರೆಯದ ಪುಟ್ಟ ಪಾಕಿಸ್ತಾನಿ ಮಾನವ ಹಕ್ಕುಗಳ ಹೋರಾಟಗಾರ್ತಿಯದು. ಅಷ್ಟಕ್ಕೂ ಆಕೆ ಮಾಡಿದ ತಪ್ಪಾದರೂ ಏನು..?. ಇಸ್ಲಾಮಿನಲ್ಲಿ ಪ್ರತಿಪಾದಿಸಿರುವ ಸ್ತ್ರೀ ವಿಧ್ಯಾಬ್ಯಾಸವನ್ನು ಎತ್ತಿ ಹಿಡಿದದ್ದೇ...? ಅಥವಾ ತಾಲಿಬಾನಿ ಕಪಿಮುಷ್ಟಿಯಲ್ಲಿರುವ ಸ್ವಾತ್ ಕಣಿವೆಯಲ್ಲಿ ಸ್ತ್ರೀ ಹಕ್ಕಿಗಾಗಿ ಹೋರಾಡಿದ್ದೆ...?
ಮಲಾಲ ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿರುವ ಮಿನ್ಗೋರ ಪಟ್ಟಣದ ಶಾಲಾ ವಿದ್ಯಾರ್ಥಿನಿ. ಅಪ್ಪ ಝೈದುದ್ದೀನ್ ಯೂಸುಫ್ಝಾಯಿ ಹುಟ್ಟು ಕವಿಯಾಗಿದ್ದರು. ಖುಶಾಲ್ ಎಂಬ ನಾಮದಡಿ ತನ್ನದೇ ಆದ ಹಲವು ಶಾಲೆಗಳನ್ನು ನಡೆಸುತ್ತಿದ್ದರಲ್ಲದೆ, ಶಿಕ್ಷಣದ ಹೋರಾಟಗಾರನೂ ಆಗಿದ್ದರು . ಮಲಾಲ ತನ್ನ ಭವಿಷ್ಯದ ಬಗ್ಗೆ ಅಧಮ್ಯವಾದ ಕನಸು ಹೊತ್ತಿದ್ದಳು. ಚಿಕ್ಕದ್ದಿನಿಂದಲೇ ಹೋರಾಟದ ಕಿಚ್ಚನ್ನು ಹತ್ತಿಸಿಕೊಂಡ ಅವಳು ರಾಜಕಾರಣಿಯಾಗಬೇಕೆಂಬುದು ಅಪ್ಪನ ಆಸೆಯಾಗಿದ್ದರೂ, ತಾನು ಡಾಕ್ಟರ್ ಆಗಬೇಕೆಂಬುದು ಅವಳ ಅಭಿಲಾಷೆಯಾಗಿತ್ತು. ತನ್ನೂರು ಸ್ವಾತ್ ಬಗ್ಗೆ ಅವಳಿಗೆ ಎಲ್ಲಿಲ್ಲದ ಕಾಳಜಿ. ಪ್ರೀತಿಯಿಂದ ಅದನ್ನು "ನನ್ನ ಸ್ವಾತ್ " ಎಂದು ಕರೆಯುತ್ತಿದ್ದಳು.
ಅದು 2009. ಮಲಾಲ'ಳಿಗಿನ್ನೂ 11 ವರ್ಷ ಪ್ರಾಯ. ಮೌಲಾನಾ ಫಜಲುಲ್ಲಾಹ್ ಎಂಬ ತಾಲಿಬಾನಿ ನಾಯಕ ಸ್ವಾತ್ ಕಣಿವೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಸರ್ವಾಧಿಕಾರ ನಡೆಸುತ್ತಿದ್ದ. ಸಂಗೀತ, ದೂರದರ್ಶನ, ಸ್ತ್ರೀ ವಿಧ್ಯಾಬ್ಯಾಸಕ್ಕೆಲ್ಲ ಆತ ನಿಷೇಧ ಹೇರಿದ್ದ. ಆ ಸಮಯದಲ್ಲಿ ಅಬ್ದುಲ್ ಹೈ ಕಕ್ಕಾರ್ ಎಂಬ BBC ಪತ್ರಕರ್ತನ ಮೂಲಕ ಮಲಾಲ'ಳಿಗೆ ಮೊತ್ತ ಮೊದಲಾಗಿ BBC ಉರ್ದುವಿನಲ್ಲಿ "ತಾಲಿಬಾನ್ ಆಡಳಿತದಲ್ಲಿ ನನ್ನ ಜೀವನ" ಎಂಬ ವಿಷಯದಲ್ಲಿ ಬರೆಯುವ ಅವಕಾಶ ಸಿಕ್ಕಿತ್ತು. ತನ್ನ ನಿಜ ನಾಮಧೇಯವನ್ನು ಬಳಸಿದರೆ ಆಗುವ ಅನಾಹುತದ ಸ್ಪಷ್ಟ ಚಿತ್ರಣವಿದ್ದ ಕಾರಣ ಮಲಾಲ "ಗುಲ್ ಮಖಾಯಿ" ಎಂಬ ಕಾವ್ಯನಾಮದಡಿ ತನ್ನ ಮೊದಲ ಅಂಕಣವನ್ನು ಶುರುವಿಟ್ಟಳು. ಹೀಗೆ ತಾಲಿಬಾನಿ ಕಪಿ ಮುಷ್ಟಿಯಲ್ಲಿ ನರಳುತ್ತಿರುವ ಸ್ವಾತ್ ಜನರ ಮನೋವೇದನೆಯನ್ನು, ತನ್ನ ಶಾಲಾ ದೈನಂದಿನ ಚಟುವಟಿಕೆಗಳನ್ನು ಆಕೆ ಹೊರ ಜಗತ್ತಿಗೆ ಪರಿಚಯಿಸತೊಡಗಿದಳು.
ಈ ಮಧ್ಯೆ ಪಾಕಿಸ್ತಾನ ಸರಕಾರ ತಾಲಿಬಾನ್ ವಿರುದ್ದ ಕೈಗೊಂಡ ಕಾರ್ಯಾಚರಣೆ ಯೂಸಫ್ ಝಾಯಿ ಕುಟುಂಬವನ್ನು ಪೇಶಾವರಕ್ಕೆ ತಲುಪಿಸಿತ್ತದೆ. ಅಲ್ಲಿಂದಲೇ ತನ್ನ ಹೋರಾಟದ ಕಿಚ್ಚಿಗೆ ತುಪ್ಪ ಸುರಿದ ಮಲಾಲ ದಿನದಿಂದ ದಿನಕ್ಕೆ ಜನಪ್ರಿಯತೆ ಗಳಿಸುತ್ತಿದ್ದಳು. ಆಕೆಯ ಬಗ್ಗೆ ಡಾಕ್ಯುಮೆಂಟರಿ ತಯಾರಾಯಿತು. ಯೂ ಟ್ಯೂಬಿನಲ್ಲಿ ಅವಳ ಸಂದರ್ಶನಗಳು ಬಂದವು. 2011 ಡಿಸೆಂಬರ್ 19ರಂದು ಪಾಕ್ ಸರಕಾರವು ಮಲಾಲಳಿಗೆ ಪ್ರಥಮ ರಾಷ್ಟ್ರೀಯ ಶಾಂತಿ ಪ್ರಶಸ್ತಿ ನೀಡಿ ಗೌರವಿಸಿತು.. ಅದೇ ತಿಂಗಳು 25ಕ್ಕೆ ಡಚ್ ಸರಕಾರ "ಅಂತರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿ" ಮತ್ತು ಅಕ್ಟೋಬರ್ 15 , 2012 ರಂದು ಪಾಕಿಸ್ತಾನ ಸರಕಾರ "ಅತ್ಯುನ್ನತ ನಾಗರಿಕ ಶೌರ್ಯ ಪ್ರಶಸ್ತಿ" ನೀಡಿತು. ಅದಲ್ಲದೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳು ಅವಳನ್ನು ಅರಸಿ ಬಂದವು . ಮಲಾಲ'ಳಿಗೆ ಗೌರವಾರ್ಥವಾಗಿ ಪಾಕಿಸ್ತಾನಿ ಸರಕಾರ ಸ್ವಾತ್ ನಲ್ಲಿರುವ ಸರಕಾರೀ ಸೆಕೆಂಡರಿ ಸ್ಕೂಲ್ 'ಗೆ "ಮಲಾಲ ಯೂಸಫ್ ಝಾಯಿ ಗರ್ಲ್ಸ್ ಸ್ಕೂಲ್" ಎಂದು ಮರು ನಾಮಕರಣ ಮಾಡಿತು. ಈ ನಡುವೆ ಆವಳನ್ನು ತಾಲಿಬಾನಿ ವಿರೋಧಿಯಂತೆ ಬಿಂಬಿಸಲಾಯ್ತು. ತಮ್ಮ ವಿರುದ್ದ ಧ್ವನಿಯೇತ್ತುವವರನ್ನು ಕೊಲ್ಲುವ ತಾಲಿಬಾನಿಗರು ಇವಳಿಗೂ ಜೀವ ಬೆದರಿಕೆಯೊಡ್ಡಿದರು. ಅದ್ಯಾವ ಅಂಜಿಕೆಯೂ ಇಲ್ಲದ ಮಲಾಲ ತನ್ನ ದೌತ್ಯದೆಡೆಗೆ ದಾಪುಗಾಲು ಹಾಕುತ್ತಲೇ ಇದ್ದಳು.
ಮಲಾಲ BBC ಉರ್ದುವಿಗೆ ಬರೆದ ಬರಹಗಳು:
ಜನವರಿ 3 ಶನಿವಾರ, 2009 - "ನಾನು ಭಯಭೀತಲಾದೆ"
ನಿನ್ನೆ ರಾತ್ರಿ ಕಂಡ ಘನ ಘೋರ ಕನಸಿನಲ್ಲಿ ಮಿಲಿಟರಿ ಹೆಲಿಕಾಪ್ಟರ್ ಮತ್ತು ತಾಲಿಬಾನಿಗರು ಬಂದಿದ್ದರು. ಸ್ವಾತ್ ನಲ್ಲಿ ಮಿಲಿಟರಿ ಕಾರ್ಯಾಚರಣೆ ಶುರುವಾಗಿನಿಂದಲೂ ಇಂತಹ ಕನಸುಗಳು ಮಾಮೂಲು. ಅಮ್ಮ ಕೊಟ್ಟ ತಿಂಡಿ ತಿಂದು ಶಾಲೆಗೇ ಹೊರಟೆ. ತಾಲಿಬಾನಿಗರು ಹೆಣ್ಣು ಮಕ್ಕಳು ಶಾಲೆ ಹೋಗುವುದನ್ನು ನಿಷೇಧಿಸಿದ್ದರಿಂದ ನನಗೆ ಒಳಗೊಳಗೇ ಭಯವಾಗುತ್ತಿದೆ.
ತಾಲಿಬಾನ್ ಆದೇಶದ ಪರಿಣಾಮವಾಗಿ 27 ಮಂದಿಯಲ್ಲಿ ಕೇವಲ 11 ಮಂದಿಯ ಹಾಜರಾತಿ. ನನ್ನ ಮೂವರು ಗೆಳತಿಯರು ಇದೇ ಅದೆಶದಿಂದಾಗಿ ಲಾಹೋರ್ ,ಪೇಶಾವರ ಮತ್ತು ರಾವಲ್ಪಿಂಡಿಗೆ ತಮ್ಮ ಕುಟುಂಬ ಸಮೇತ ತೆರಳಿದ್ದಾರೆ.
"ಕೊಂದು ಬಿಡ್ತೀನಿ ನಿನ್ನ" ಶಾಲೆಯಿಂದ ಮರಳುವಾಗ ವ್ಯಕ್ತಿಯೊಬ್ಬನ ಮಾತು ಕೇಳಿ ನಾನು ಭಯಭೀತಳಾಗಿ ನಡೆಯುವ ವೇಗವನ್ನು ಹೆಚ್ಚಿಸಿದೆ. ಸ್ವಲ್ಪ ದೂರದಿಂದ ಆತ ಹಿಂಬಾಲಿಸುತ್ತಿದ್ದಾನ ಎಂದರಿಯಲು ತಿರುಗಿ ನೋಡಿದೆ. ಆತ ಫೋನಿನಲ್ಲಿ ಮಾತನಾಡುತ್ತಿದ್ದುದು ಕಂಡು ನೆಮ್ಮದಿಯಾಯ್ತು. ನಿಜವೇನೆಂದರೆ ಆತ ಫೋನಲ್ಲಿ ಯಾರಿಗೋ ಬೆದರಿಕೆ ಒಡ್ಡುತ್ತಿದ್ದ.
ಜನವರಿ 4 ಭಾನುವಾರ, 2009 - "ನಾನು ಶಾಲೆಗೇ ಹೋಗಲೇಬೇಕು"
ಶಾಲೆಗೇ ರಜೆಯಾದ ಕಾರಣ ತಡವಾಗಿ ಎದ್ದೆ. ಗಂಟೆ ಹತ್ತು ಆಗಿರಬಹುದು. ಗ್ರೀನ್ ಚೌಕದಲ್ಲಿ ಮೂರು ಶವಗಳು ಬಿದ್ದಿರುವುದಾಗಿ ತಂದೆ ಮಾತನಾಡಿಕೊಳ್ಳುತ್ತಿದ್ದರು. ಅದನ್ನು ಕೇಳಿ ಬೇಸರವಾಯಿತು. ಸೈನಿಕ ಕಾರ್ಯಾಚರಣೆಯ ಆರಂಭಕ್ಕಿಂತ ಮುಂಚೆ ಆದಿತ್ಯವಾರ ಮರ್ಗಾಜ್ಹರ್ , ಫಿಜ್ಹ ಘಾಟ್ ಮತ್ತು ಕಂಜು ಮುಂತಾದ ಪ್ರದೇಶಗಳಿಗೆ ಪಿಕ್ನಿಕ್ ಹೋಗುತ್ತಿದ್ದೆವು.ಆದರೆ ಕಳೆದ ಒಂದೂವರೆ ವರ್ಷದಿಂದ ನಾವು ಎಲ್ಲೂ ಪಿಕ್ನಿಕ್'ಗೆ ಹೋಗಲಾರದ ಪರಿಸ್ಥಿತಿ.
ಮುಂಚೆ ರಾತ್ರಿ ಊಟ ಆದ ಬಳಿಕ ಸ್ವಲ್ಪ ದೂರ ನಡೆಯುತ್ತಿದ್ದೆವು. ಆದರೆ ಈಗ ಸೂರ್ಯ ಮುಳುಗುವ ಮುಂಚೆ ಮನೆ ಸೇರಬೇಕು. ಇಂದು ಒಂದಿಷ್ಟು ಮನೆಕೆಲಸ ಮಾಡಿ , ಹೋಂ ವರ್ಕ್ ಮುಗಿಸಿ ತಮ್ಮನ ಜೊತೆ ಆಟವಾಡಿದೆ.ಆದರೆ ಹೃದಯ ಮಾತ್ರ ಬಡಿದುಕೊಳ್ಳುತ್ತಲೇ ಇದೇ .."ನಾಳೆ ನಾನು ಶಾಲೆಗೇ ಹೋಗಬೇಕು..".
ಜನವರಿ 5 ಸೋಮವಾರ, 2009 - "ಬಣ್ಣದ ಬಟ್ಟೆಗಳನ್ನು ಧರಿಸಬಾರದು"
ಶಾಲೆಗೆ ಹೊರಡಲು ಅಣಿಯಾಗುತ್ತಾ ಯುನಿಫಾರ್ಮ್ ಕೈಗೆತ್ತಿಕೊಂಡೆ. ತಕ್ಷಣ, ನಾಳೆಯಿಂದ ಎಲ್ಲರೂ ಸಾಮಾನ್ಯ ಉಡುಪುಗಳನ್ನು ಧರಿಸಿ ಶಾಲೆಗೆ ಬರಬೇಕು, ಯುನಿಫಾರ್ಮು ಧರಿಸುವಂತಿಲ್ಲ ಎಂದು ಪ್ರಾಂಶುಪಾಲರು ಹೇಳಿದ್ದು ನೆನಪಾಯ್ತು. ನಾನು ನನ್ನ ಇಷ್ಟದ ಪಿಂಕ್ ಡ್ರೆಸ್ ಹಾಕುವುದಾಗಿ ತೀರ್ಮಾನಿಸಿದೆ.ಉಳಿದವರೆಲ್ಲರೂ ಬಣ್ಣದ ಬಣ್ಣದ ಡ್ರೆಸ್ ಧರಿಸಿದ್ದರಿಂದ ಶಾಲೆಯಲ್ಲೂ ಮನೆಯ ವಾತಾವರವಿತ್ತು. "ದೇವರಾಣೆ..! ಸತ್ಯ ಹೇಳು , ತಾಲಿಬಾನಿಗಳು ನಮ್ಮ ಶಾಲೆಯ ಮೇಲೆ ಆಕ್ರಮಣ ಮಾಡುತ್ತಾರಂತೆ ಹೌದಾ..?" ಗೆಳತಿಯೊಬ್ಬಳು ಪ್ರಶ್ನಿಸಿದಳು. ಬೆಳಗ್ಗಿನ ಅಸೆಂಬ್ಲಿಯಲ್ಲಿ ಬಣ್ಣದ ಬಟ್ಟೆ ಧರಿಸಿ ಬರಬೇಡಿ. ಅದಕ್ಕೆ ತಾಲಿಬಾನ್ ವಿರೋಧ ವ್ಯಕ್ತಪಡಿಸಬಹುದೆಂದು ತಾಕೀತು ಮಾಡಿದರು.
ಶಾಲೆಯಿಂದ ಬಂದು ಊಟ ಮುಗಿಸಿದೆ. ನಂತರ ಟ್ಯೂಶನ್ ಇತ್ತು. ಸಂಜೆ ಟಿ.ವಿ ನೋಡಿತ್ತಿದ್ದಾಗ ಶಕರ್ದದಲ್ಲಿ ಹದಿನೈದು ದಿನಗಳ ನಂತರ ಕರ್ಫ್ಯೂ ಹಿಂತೆಗೆದುಕೊಂಡ ಸುದ್ದಿ ಕೇಳಿ ಸಂತಸವಾಯಿತು. ನಮ್ಮ ಇಂಗ್ಲಿಷ್ ಟೀಚರ್ ಅಲ್ಲಿ ವಾಸವಿದ್ದರು. ಬಹುಶಃ ನಾಳೆ ಶಾಲೆಗೇ ಬರಬಹುದೇನೋ..?
ಜನವರಿ 7 ಬುಧವಾರ, 2009 - "ದಾಳಿಯೂ ಇಲ್ಲ.. ಹೆದರಿಕೆಯೂ ಇಲ್ಲ "
ನಾನು ಮೊಹರಂ ರಜೆ ಕಳೆಯಲು ಬುನೈರಿಗೆ ಬಂದಿದ್ದೇನೆ. ಚೆಂದದ ಪರ್ವತ ಮತ್ತು ಹಸಿರುಹಾಸಿನ ಕಾರಣ ನಾನು ಬುನೈರನ್ನು ತುಂಬಾ ಇಷ್ಟಪಡುತ್ತೇನೆ."ನನ್ನ ಸ್ವಾತ್ " ಕೂಡ ನಂಗೆ ತುಂಬಾ ಇಷ್ಟ. ಆದರೆ ಅಲ್ಲಿ ಶಾಂತಿಯಿಲ್ಲ. ಇಲ್ಲಿ ಶಾಂತಿಯಿದೆ;ನೆಮ್ಮದಿಯಿದೆ. ಇಲ್ಲಿ ಯಾವುದೇ ದಾಳಿ ಇಲ್ಲ , ಅದರ ಭಯವೂ ಇಲ್ಲ. ನಾವೆಲ್ಲಾ ತುಂಬಾ ಸಂತೋಷವಾಗಿದ್ದೇವೆ.
ಇವತ್ತು ನಾವು ಫೀರ್ ಬಾಬಾ ಮ್ಯೂಸಿಯಂ'ಗೆ ಹೋಗಿದ್ದೆವು. ಅಲ್ಲಿ ತುಂಬಾ ಜನ ಜಂಗುಳಿಯಿತ್ತು . ಅವರೆಲ್ಲರೂ ಪ್ರಾರ್ಥಿಸಲು ಬಂದಿದ್ದರು. ಆದರೆ ನಾವು ವಿಹಾರಕ್ಕೆಂದು ಬಂದವರು. ಇಲ್ಲಿ ಬಳೆ, ಕಿವಿಯ ರಿಂಗು ಮತ್ತಿತರ ಕೃತಕ ಆಭರಣಗಳ ಅಂಗಡಿ ಇದೆ. ಖರೀದಿಸಬೇಕು ಎಂದುಕೊಂಡೆಯಾದರೂ ಯಾವುದೂ ಇಷ್ಟ ಆಗಲಿಲ್ಲ. ಆದರೆ ನನ್ನ ತಾಯಿ ಬಳೆ ಮತ್ತು ಕಿವಿಯ ರಿಂಗನ್ನು ಖರೀದಿಸಿದರು.
ಜನವರಿ 9 ಶುಕ್ರವಾರ, 2009 - "ಮೌಲಾನ ರಜೆಯಲ್ಲಿ ಹೊರಟರೇ.. ?"
ಇಂದು ಶಾಲೆಯಲ್ಲಿ ಬುನೈರ್ ಪ್ರವಾಸದ ಬಗ್ಗೆ ಗೆಳತಿಯರಲ್ಲಿ ಹೇಳಿದೆ. ಬುನೈರ್ ಕತೆ ಕೇಳಿ ಬೇಸರವಾಗಿದೆ ಅಂತ ಅವರು ಮುಖ ತಿರುಗಿಸಿದರು. ತದನಂತರ ಎಫ್ ಎಂ ರೇಡಿಯೋದಲ್ಲಿ ಪ್ರವಚನ ನೀಡುತ್ತಿದ್ದ ಮೌಲಾನ ಸಾವಿನ ವದಂತಿಯ ಬಗ್ಗೆ ಚರ್ಚಿಸಿದೆವು. ಹೆಣ್ಣು ಮಕ್ಕಳು ಶಾಲೆಗೇ ಹೋಗಬಾರದೆಂದು ಘೋಷಿಸಿದವರಲ್ಲಿ ಅವರೂ ಒಬ್ಬರು.
ಕೆಲವರು ಅವರು ಸತ್ತು ಹೋಗಿದ್ದಾರೆ ಎಂದರೆ ಮತ್ತೆ ಕೆಲವರು ಅದನ್ನು ಒಪ್ಪಲಿಲ್ಲ. ನಿನ್ನೆ ರಾತ್ರಿ ರೇಡಿಯೋದಲ್ಲಿ ಅವರ ಪ್ರವಚನ ಪ್ರಸಾರವಾಗದ್ದರಿಂದ ಅವರು ಸತ್ತು ಹೋಗಿದ್ದಾರೆ ಅಂತ ವದಂತಿ ಹಬ್ಬಿತ್ತು. ಮೌಲಾನ ರಜೆಯ ಮೇಲೆ ಹೋಗಿದ್ದಾರಷ್ಟೇ ಎಂದು ಹುಡುಗಿಯೊಬ್ಬಳು ಹೇಳಿದಳು. ಶುಕ್ರವಾರ ಟ್ಯೂಶನ್
ಇಲ್ಲದ ಕಾರಣ ಇಡೀ ಮಧ್ಯಾಹ್ನ ಆಟವಾಡುತ್ತ ಕಳೆದೆ. ಸಂಜೆ ಟಿ.ವಿ ಆನ್ ಮಾಡಿದಾಗ ಲಾಹೋರಿನಲ್ಲಿ ಬಾಂಬ್ ಸ್ಪೋಟವಾದ ವರದಿ ಬರುತ್ತಿತ್ತು. "ಪಾಕಿಸ್ತಾನದಲ್ಯಾಕೆ ಇಷ್ಟು ಸ್ಪೋಟಗಳು ನಡೆಯುತ್ತವೆ" ನನಗೆ ನಾನೇ ಕೇಳಿಕೊಂಡೆ.
ಜನವರಿ 14 ಬುಧವಾರ ,2009 - "ಇನ್ನೆಂದೂ ಶಾಲೆಗೆ ಹೋಗಲಾರದು "
ಇವತ್ತು ಶಾಲೆಗೆ ಹೋಗಲು ಮನಸ್ಸಿರಲಿಲ್ಲ. ಕಾರಣ ನಾಳೆಯಿಂದ ಚಳಿಗಾಲದ ರಜೆ ಪ್ರಾರಂಭ. ಪ್ರಿನ್ಸಿಪಾಲರು ರಜೆಯನ್ನು ತಿಳಿಸಿದರಾದರೂ ಶಾಲೆಯ ಪುನರಾರಂಭದ ಬಗ್ಗೆ ಏನೂ ಹೇಳಲಿಲ್ಲ. ಈ ರೀತಿ ಆದದ್ದು ಇದು ಮೊದಲನೇ ಬಾರಿ.
ಮುಂಚೆ ಶಾಲೆ ಪುನರಾರಂಭದ ದಿನಾಂಕವನ್ನು ಸ್ಪಷ್ಟವಾಗಿ ಹೇಳುತ್ತಿದ್ದರು. ಜನವರಿ 15ರ ಬಳಿಕ ಹೆಣ್ಣು ಮಕ್ಕಳ ಶಾಲೆ ತೆರೆಯಕೂಡದು ಎಂಬ ತಾಲಿಬಾನ್ ಆದೇಶವೇ ಬಹುಶಃ ಪ್ರಾಂಶುಪಾಲರು ಮೌನವಾಗಿರುವುದಕ್ಕೆ ಕಾರಣ ಎಂದು ನನ್ನ ಅಂದಾಜು. ಈ ಬಾರಿ ನಮಗ್ಯಾರಿಗೂ ರಜೆಯ ಬಗ್ಗೆ ಸಂತಸವಿರಲಿಲ್ಲ.
ತಾಲಿಬಾನ್ ಆದೇಶ ಜಾರಿಗೆ ಬಂದರೆ ಮತ್ತೆ ನಾವು ಶಾಲೆಗೆ ಬರಲಾಗುವುದಿಲ್ಲ ಎಂಬ ಸತ್ಯ ನಮ್ಮ ಅರಿವಿಗೆ ಬಂದಿತ್ತು. ಕೆಲವರು ಪೆಬ್ರವರಿಯಲ್ಲಿ ಶಾಲೆ ಮತ್ತೆ ಆರಂಭವಾಗುತ್ತದೆ ಎಂಬ ಅಶಾವಾದದಲ್ಲಿದ್ದರು. ಮತ್ತೆ ಕೆಲವರ ಹೆತ್ತವರು ವಿಧ್ಯಭ್ಯಾಸಕ್ಕಾಗಿ ಸ್ವಾತನ್ನೇ ಬಿಟ್ಟು ಹೋಗುತ್ತಾರಂತೆ ಅಂತ ಮಾತನಾಡಿಕೊಳ್ಳುತ್ತಿದ್ದರು.
ಕೊನೆಯ ದಿನವಾದ ಕಾರಣ ಮೈದಾನದಲ್ಲಿ ಹೆಚ್ಚು ಹೊತ್ತು ಆಟವಾಡಿದೆವು. ಶಾಲೆ ಮತ್ತೆ ಪ್ರಾರಂಭವಾಗುತ್ತದೆ ಅಂತ ನಾನು ನಂಬಿದ್ದೇನೆ. ಆದರೂ ಶಾಲೆಯಿಂದ ಹೋಗುವಾಗ ಮತ್ಯಾವತ್ತು ಇಲ್ಲಿಗೆ ಬರದ ಭಾವದಿಂದ ಶಾಲಾ ಕಟ್ಟಡವನ್ನು ನೋಡಿಕೊಂಡು ಬಂದೆ.
ಜನವರಿ 15 ಗುರುವಾರ , 2009 - "ಕರಾಳ ರಾತ್ರಿಗಳು "
ರಾತ್ರಿಯಿಡೀ ಬಂದೂಕಿನ ಅರ್ಭಟದಿಂದಾಗಿ ಮೂರು ಬಾರಿ ಎಚ್ಚರವಾಯ್ತು. ಶಾಲೆಯಿಲ್ಲದ ಕಾರಣ ಹೊತ್ತು ಮೀರಿ ಹತ್ತು ಗಂಟೆಗೆ ಎದ್ದೆ. ತದನಂತರ ಮನೆಗೆ ಬಂದ ಗೆಳತಿಯೊಡನೆ ಹೋಂ ವರ್ಕಿನ ಬಗ್ಗೆ ಚರ್ಚಿಸಿದೆ. ಇಂದು ಜನವರಿ 15 . ತಾಲಿಬಾನ್ ಆದೇಶ ಜಾರಿಗೆ ತರಲು ಕೊನೆಯ ದಿನಾಂಕ. ನನ್ನ ಗೆಳೆತಿ ಇದ್ಯಾವುದರ ಪರಿವೇ ಇಲ್ಲದೆ ಹೋಂ ವರ್ಕಿನ ಬಗ್ಗೆ ಚರ್ಚಿಸುತ್ತಿದ್ದಳು.
ಇಂದು BBC ಉರ್ದುವಿಗೆ ನಾನು ಬರೆದ ಡೈರಿಯನ್ನು ಓದಿದೆ.ಮತ್ತು ಪತ್ರಿಕೆಯಲ್ಲಿ ಪ್ರಕಟಿಸಿದೆ. "ಗುಲ್ ಮಖಾಯಿ" ಎಂಬ ನನ್ನ ಕಾವ್ಯನಾಮವನ್ನು ತಾಯಿ ತುಂಬಾ ಇಷ್ಟಪಟ್ಟಿದ್ದಳು. ಅವಳ ಹೆಸರನ್ನು "ಗುಲ್ ಮಖಾಯಿ" ಅಂತ ಬದಲಿಸಬಹುದಲ್ಲವೇ ಅಂತ ತಂದೆಯಲ್ಲಿ ಕೇಳಿದರು. ನನಗೂ "ಗುಲ್ ಮಖಾಯಿ" ಎಂಬ ಹೆಸರು ಇಷ್ಟವಾಗಿತ್ತು ಕಾರಣ ನನ್ನ ನಿಜ ಹೆಸರಿನ ಅರ್ಥ "ದುಃಖ ಭರಿತಳು..!"
ಕೆಲ ದಿನಗಳ ಹಿಂದೆ ಯಾರೂ ನನ್ನ ಡೈರಿಯ ಪ್ರಿಂಟ್ ಔಟ್ ತೆಗೆದು ಎಷ್ಟು ಚೆನ್ನಾಗಿದೆ ಅಂತ ಹೇಳಿ ತಂದೆಗೆ ತೋರಿಸಿದರಂತೆ. ಇದು ಬರೆದದ್ದು ತನ್ನ ಮಗಳೆಂದು ಹೇಳದೆ ತಂದೆ ಮುಗುಳ್ನಕ್ಕು ಸುಮ್ಮನಾದರಂತೆ...!
ಮಲಾಲ ಕೇವಲ 11 ವರ್ಷ ಪ್ರಾಯದಲ್ಲಿ BBC ಉರ್ದುವಿಗಾಗಿ ಬರೆದ ಬರಹಗಳಿವು. ಧರ್ಮಾಂಧ ತಾಲಿಬಾನಿಗಳ ನಡುವೆ, ಸ್ತ್ರೀ ಸ್ವಾತಂತ್ರ , ಸ್ತ್ರೀ ಮೂಲಭೂತ ಹಕ್ಕುಗಳು ಮತ್ತು ಹದಿಹರೆಯದ ಹೆಣ್ಣು ಮಕ್ಕಳ ವಿಧ್ಯಾಬ್ಯಾಸದ ಅಗತ್ಯತೆಯನ್ನು ಎತ್ತಿಹಿಡಿದ ಪುಟ್ಟ ಮಲಾಲ'ಳನ್ನು ಅಮಾನವೀಯವಾಗಿ ಗುಂಡಿಟ್ಟ ತಾಲಿಬಾಲಿಗಳ ವಿರುದ್ದ ವಿಶ್ವ ವ್ಯಾಪಿ ಖಂಡನೆ, ಅಕ್ರೋಶ ವ್ಯಕ್ತವಾಗಿದೆ.ಪಾಕಿಸ್ತಾನದಾದ್ಯಂತ ಪ್ರತಿಭಟನೆಯ ಕಾವು ಹೆಚ್ಚಿದೆ. ಧರ್ಮದ ವಿಶಾಲತೆಯನ್ನು ಒಪ್ಪದೆ ಅದರ ಆದರ್ಶಗಳನ್ನು ದುರ್ವ್ಯಾಖ್ಯಾನಿಸಿ, ಆ ಮೂಲಕ ಹೊಸ ಅಚಾರ ವಿಚಾರಗಳನ್ನು ಸಮಾಜದ ಮೇಲೆ ಎತ್ತಿಕಟ್ಟುವ ಧಾರ್ಮಿಕ ಸಂಕುಚಿತವಾಗಿಗಳ ನಡುವೆ ದನಿಯೆತ್ತಿದ ಆಕೆಯ ಕಿಚ್ಚು, ಮುಂದೆ ಬೆಂಕಿಯುಂಡೆಯಾಗಿ, ಕಾಲ್ಗಿಚ್ಚಾಗಿ ಹರಡಲಿ ಎಂಬುದು ಎಲ್ಲರ ಪ್ರಾರ್ಥನೆ.