ಮಲೆನಾಡಿನ ಪರಿಸರ ಅವನತಿ - ಮತ್ತೊಂದು ಘಟ್ಟ

ಮಲೆನಾಡಿನ ಪರಿಸರ ಅವನತಿ - ಮತ್ತೊಂದು ಘಟ್ಟ

ಮಲೆನಾಡಿನ ಪರಿಸರ ಅವನತಿ - ಮತ್ತೊಂದು ಘಟ್ಟ.

ಹೇರಂಭಾಪುರದ ಸುಬ್ರಹ್ಮಣ್ಯ( ಸುಬ್ಬಿ) ಪರಿಸರದ ಬಗೆಗೆ ಲೇಖನ ಬರೆದುಕೊಡಲು ಕೇಳಿದಾಗ ಕುಷಿ ಆಯಿತು. ಈ ನನ್ನ ಸ್ನೇಹಿತ ನನಗೆ ಎಲೆ‌ಅಡಿಕೆಯ ಆಸೆ ಹಿಡಿಸಿದವ. ನಂತರ ತನ್ನ ಊರಾದ ಹೇರಂಭಾಪುರದಲ್ಲಿ ತನ್ನ ಮಿತ್ರರೊಂದಿಗೆ ಸಾಹಿತ್ಯದ ಸಮಾರಂಭ ನಡೆಸಿ ಶಿವರಾಮಕಾರಂತರನ್ನು ಕರೆಸಿಕೊಂಡು ನೆನಪಿನಲ್ಲಿ ಉಳಿಯುವಂಥ ಕಾರ್ಯಕ್ರಮ ನಡೆಸಿದಾಗ ಅದರ ವರದಿಯನ್ನು ಮಾಡಿಕೊಡಲು ಕೋರಿದಾಗ ನಾನು ನಿಜವಾಗಿ ಬರವಣಿಗೆಯ ಸಂತೋಷವನ್ನು ಪಡೆದಿದ್ದೆ. ನನ್ನ ಹೆಸರನ್ನು ಹಾಕದೇ ಅದನ್ನು ತೀರ್ಥಹಳ್ಳಿಯ ಬೃಹಸ್ಪತಿವಾಣಿಯ ಪತ್ರಿಕಾ ಕಛೇರಿಯ ರೋಲಿಂಗ್ ಶಟರಿನ ಅಡಿಯಲ್ಲಿ ತೂರಿಸಿ ಬಂದಿದ್ದೆ. ಅದನ್ನು ಅದರ ಸಂಪಾದಕರಾದ ಪೆ.ದೇವಣ್ಣರಾವ್ ಅನಾಮಿಕ ಎಂಬ ಹೆಸರಿನಲ್ಲಿ ಚೆನ್ನಾಗಿ ಪ್ರಕಟಿಸಿದ್ದರು. ಹೀಗೆ ನನಗೆ ಪತ್ರಿಕೆಯಲ್ಲಿ ಬರೆಯುವ ಹುಚ್ಚನ್ನು ಹಚ್ಚಿದವ ಈ ಸುಬ್ಬಿ.

ನಾವು ನಮ್ಮ ತಾಲ್ಲೂಕಿನಲ್ಲಿ ಕಂಡ ಎಂ.ಪಿ.ಎಂ.ಅಕೇಶಿಯಾ ಆಕ್ರಮಣದ ನಂತರದ ದಿನಗಳಲ್ಲಿ ನಿಜವಾದ ಜನಪ್ರತಿರೋಧ ಹುಟ್ಟಿದ್ದು ಈತನ ಊರಿಂದ. ಅದರ ಹಿಂದಿನ ಸ್ಪೂರ್ತಿ ಈತನೆಂದರೆ ತಪ್ಪಿಲ್ಲ. ನಿಜವಾಗಿ ಇದು ಮಲೆನಾಡಿನ ಚಾರಿತ್ರಿಕ ಘಟನೆ ಎಂದರೂ ತಪ್ಪಿಲ್ಲ. ಏಕೆಂದರೆ ಅಕೇಶಿಯಾ ಆಕ್ರಮಣವನ್ನು ಆಗಲೇ ರೈತರೂ, ಪರಿಸರ ಪ್ರೇಮಿಗಳೂ ಪ್ರತಿರೋಧಿಸಿದ್ದರೂ ಅದು ನಿರ್ಣಾಯಕವಾದ ಹಂತಕ್ಕೆ ತರಲು ಸಾಧ್ಯವಾಗಿರಲಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳೇ ಎಂ.ಪಿ.ಎಂ ನೆಡುತೋಪು ವಿಭಾಗದ ಅಧಿಕಾರಿಗಳಾಗಿ ಬಂದು ನಿರ್ವಹಿಸುತ್ತಿದ್ದುದರಿಂದ ಜನರನ್ನು ಬೆದರಿಸಿ , ಕೇಸನ್ನು ಹಾಕಿಸಿ ಕೈಗಾರಿಕಾ ನೆಡುತೋಪು ರಾಜ್ಯಸರ್ಕಾರದ  ಅಭಿವೃದ್ದಿಪರ ಯೋಜನೆಯೆಂಬಂತೆ ತೋರುತ್ತಾ ತಮ್ಮ ಅರಣ್ಯನಾಶದ ಚಟುವಟಿಕೆಯ ದಾರಿಯನ್ನು ಸುಗಮ ಮಾಡಿಕೊಂಡಿದ್ದರು.

ಇದಕ್ಕಾಗಿ ಆ‌ಈ‌ಔ ಎಂಬ ಹೆಸರಿನ ಸ್ಥಾನಮಾನವೂ ಇದೆ. ಅದೇ ಕಾಕಿ ಕಲರ್ರಿನ ಉಡುಗೆ, ಅರಣ್ಯ ಇಲಾಖೆಯ ಛಾಯೆಯನ್ನು ಹೊಂದಿಸಲಾಗಿದೆ. ಇವರೆಲ್ಲ ಸೇರಿ ನವ ಜಮೀನುದಾರಿ ಯಜಮಾನರಂತೆ ಅರಣ್ಯಭೂಮಿಯನ್ನು ಆಕ್ರಮಿಸುತ್ತಾ ಅದಕ್ಕೆ ಬೇಲಿಯನ್ನು ಹಾಕುತ್ತ ಅಲ್ಲಿ ಕಾರ್ಯಪ್ರವೃತ್ತರಾಗುತ್ತಿದ್ದುದ್ದು, ಹಳ್ಳಿಗಳ ಜಾನುವಾರುಗಳು ಆಪ್ರದೇಶದ ಒಳಹೊಕ್ಕರೆ ಅದನ್ನು ಸಾಯಿಸುವ ದ್ರಾಷ್ಟ್ಯ, ಬುಲ್ಡೋಜರ್ ಬಳಸಿ ಗಿಡ ಗಂಟಿಗಳನ್ನು ನೆಲಸಮಮಾಡುತ್ತಾ, ರಸ್ತೆ ನಿರ್ಮಿಸುತ್ತಾ, ಬೆಂಕಿ ಕೊಡುತ್ತಾ, ಸಾಗುತ್ತಿದ್ದುದು ಒಂದುರೀತಿಯಲ್ಲಿ ಮಲೆನಾಡಿನ ಈ ತಲೆಮಾರಿಗೆ  ಅರಣ್ಯ ಭೂಮಿಯ ಬಳಕೆಯ ಹೊಸ ಸಂವೇದನೆಯನ್ನೂ  ನೀಡಿದ್ದರೆಂದರೆ  ತಪ್ಪಿಲ್ಲ.  ಆಶ್ಚರ್ಯವೆಂದರೆ ಇವೆಲ್ಲವನ್ನೂ ಈ ಅಧಿಕಾರಿಗಳು ಮಾಡುವಾಗ ರಾಷ್ಟ್ರದಲ್ಲಿ ಹೊಸ ಅರಣ್ಯನೀತಿ ಜಾರಿಯಲ್ಲಿತ್ತು. ಅಲ್ಲದೇ ಬಲಿಷ್ಟ ಅರಣ್ಯ ಸಂರಕ್ಷಣಾ ಕಾಯ್ದೆಯೂ ಜಾರಿಯಲ್ಲಿತ್ತು. ಈ ಕಾಯ್ದೆಯ ಅನ್ವಯ ಹೀಗೆ ಬೇಕಾಬಿಟ್ಟಿ ಸಹಜ ಗಿಡಮರಗಳನ್ನು ನಾಶಪಡಿಸಲು ಸಾಧ್ಯವೇ ಇರಲಿಲ್ಲ. ಈ ಕೆಲಸಗಳಿಂದ ಅದೆಷ್ಟು ಹಾವಿನ ಹುತ್ತಗಳು ,ಜೇನುಗೂಡುಗಳು ನಾಶವಾದವೋ?
ಇಷ್ಟಲ್ಲದೇ ತಾವು ನೆಟ್ಟ ಗಿಡಗಳಿಗೆ ರಸಾಯನಿಕ ಗೊಬ್ಬರದ ಬಳಕೆ. ಇದು ಅವರ ಅಂಕಿ‌ಅಂಶದಂತೆ ಸಮರ್ಪಕವಾಗಿ ಬಳಕೆ ಆಗಿಲ್ಲ ಅಂದುಕೊಳ್ಳುತ್ತೇನೆ. ಅವರ ನೆಡುತೋಪಿನ ಪಕ್ಕದ ರೈತರ ಮನವೊಲಿಸಲು ಅವರೊಂದಿಗೆ " ವ್ಯವಹಾರ" ನೆಡೆಸಿಕೊಳ್ಳಲು ಈ ತರಹದ ಅನೇಕ ವಸ್ತು-ಸಾಮಗ್ರಿಗಳೂ ಬಳಕೆಯಾಗುತ್ತವೆ.  ಗುಡ್ದ - ಪರ್ವತಗಳ ಮಲೆನಾಡಿನ ಈ ಪ್ರದೇಶಗಳನ್ನು ಹೀಗೆ ಹೂಟಿಮಾಡಿ ಗೊಬ್ಬರ ಹಾಕಿದಾಗ ಸಡಿಲಗೊಂಡ ಮಣ್ಣು ಮಳೆಯಲ್ಲಿ ಕೊಚ್ಚಿ ಪಕ್ಕದ ಕಣಿವೆಗಳಿಂದ ನದಿ, ಜಲಾನಯನ ಸೇರುವುದಿಲ್ಲವೇ? ಆಣೆಕಟ್ಟುಗಳಿಗೆ ಹೂಳು ಸೇರುವುದಿಲ್ಲವೇ? ನೀರನ್ನು ಕಲ್ಮಶಗೊಳಿಸುವುದಿಲ್ಲವೇ? ಯಾಕೆ ಸರ್ಕಾರ ಇಷ್ಟೋಂದು ಸಂಬಳ ಸಾರಿಗೆ ನೀಡಿ ಜನರ ಕಲ್ಯಾಣಕ್ಕಾಗೆಂದು, ಪರಿಸರ ರಕ್ಷಣೆಗೆಂದು ನೇಮಿಸಿದ ಇಲಾಖೆಗಳೇ ಹೀಗೆ ಮತಿಹೀನ ಕೆಲಸಗಳಲ್ಲಿ ತೊಡಗುತ್ತವೆ ಎಂಬುದೇ ದುಃಖಕರ ವಿಚಾರ.  ಈ ದುಷ್ಟ ಪ್ರವೃತ್ತಿಯನ್ನು ನಾವೇ ಆಯ್ಕೆಮಾಡಿದ ಸರ್ಕಾರ ನಮಗೆ ನೀಡುತ್ತಾ ಮುಂದಿನ ತಲೆಮಾರುಗಳ ಬದುಕಿನ ಭರವಸೆಗಳನ್ನು ಕೊಲ್ಲುವ ಕೆಲಸಮಾಡುವುದು ನಮ್ಮ ಪ್ರಜಾತಂತ್ರದ ವ್ಯಂಗ್ಯ ಕೂಡ.  

   ಇತ್ತ ಜನರಿಗೆ ಹಿಂದಿನಿಂದ ತಾವು ಅನುಭವಿಸಿದ್ದ ಯಾವ ಭೂಮಿ ತಮ್ಮ ರೈತಪಿ-ಜಾನುವಾರುಗಳ ಹಿತಕ್ಕಾಗಿದೆ, ಯಾವುದು ನಿಜವಾಗಿ ಅರಣ್ಯಭೂಮಿ ಇತ್ಯಾದಿಗಳು ತಿಳಿಯದಂತೆ ಗೊಂದಲಮಯವಾಗಿದ್ದವು. ಆರ್.ಟಿ.ಸಿಯಲ್ಲಿ ಸೊಪ್ಪಿನಬೆಟ್ಟ, ಗೋಮಾಳ ಎಂದು ನಮೂದಿಸಿದ್ದ ಭೂಮಿಗಳಲ್ಲೂ ಈ ನೆಡುತೋಪುಗಳು ಏರ್ಪಟಿದ್ದವು.ಒಟ್ಟಿನಲ್ಲಿ ಅವರವರ ಹಿತವನ್ನು ಹೇಗೆ ತಮ್ಮ ಶಕ್ತಿಗೆ ಅನುಸಾರವಾಗಿ ಕಾಪಾಡಿಕೊಳ್ಳಬಹುದು ಎಂಬುದೇ ಜನರಿಗೂ ಮೂಡಿದ ಅವಸರ ಈ ನೆಡುತೋಪುಗಳ ಪರಂಪರೆಯಿಂದ ಉಂಟಾಯಿತು. ರೈತರು ತಾವು ರಕ್ಷಿಸಿಟ್ಟ ಕಾಡುಗಳಿಗೆ ಅಲ್ಲಿಯವರೆಗೂ ಬೇಲಿಯನ್ನು ಹಾಕುತ್ತಿರಲಿಲ್ಲ. ಈಗ ಬೇಲಿಗಳು ಮೂಡಿದವು. ಕಟ್ಟಿಗೆ ಬಳಸಿ ಬದುಕುವ ಕೃಷಿಕಾರ್ಮಿಕವರ್ಗಕ್ಕೆ ನೆಡುತೋಪುಗಳು ಕಟ್ಟಿಗೆ , ಗೊಬ್ಬರಕ್ಕೆ ದರಗು ಪೂರೈಸುತ್ತವೆ ಎಂಬುವಂತೆ ಪರಿಸ್ಥಿತಿ ಏರ್ಪಟ್ಟವು. ಈ ನೆಡುತೋಪುಗಳಿಂದ ಸಹಜ ಕಾಡಿನಮೇಲೆ ಒತ್ತಡ ಕಡಿಮೆಯಾಗುತ್ತಾ ಅರಣ್ಯ ಸಂರಕ್ಷಣೆ ಆಗುತ್ತಿದೆ ಎಂಬ ನಂಬಿಕೆಯನ್ನೂ ಮೂಡಿಸಲಾಯಿತು. ಇವೆಲ್ಲ ಬೇಜವಾಬ್ದಾರಿ ಮನಸ್ಸುಗಳು ಪ್ರಜಾತಂತ್ರದ ದುರ್ಬಳಕೆಮಾಡಿಕೊಂಡು ಸ್ವಾರ್ಥವನ್ನು ಸಾಧಿಸುವ ಉಪಾಯಗಳೆಂದು ಹೇಳದೇ ವಿಧಿ‌ಇಲ್ಲ. ಜನರಿಗೆ ಜೀವನಾವಶ್ಯಕ ವಸ್ತುಗಳಾದ ಕಟ್ಟಿಗೆ, ಕಟ್ಟಡ ಸಾಮಗ್ರಿಗಳು ಬೇಕೆಂದರೆ ಅದಕ್ಕೆಂದೇ ಬೆಳೆಯಲು ಬೇರೆ ವ್ಯವಸ್ಥೆಯನ್ನೇ ರೂಪಿಸಿಕೊಳ್ಳಬಹುದು. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಇದನ್ನು ರೂಪಿಸುವ ಹೊಣೆಗಾರಿಕೆಯನ್ನು ಆಯ್ಕೆಗೊಂಡ ಜನಪ್ರತಿನಿಧಿಗಳು ಆಲೋಚಿಸಬೇಕು. ಅಹಂಕಾರಕ್ಕೆ, ಸ್ವಾರ್ಥಕ್ಕೆ ಒ‌ಐಂ, ಒP ಆಗಬೇಕೆಂದು ಬಯಸುವಾತನಿಗೆ ಇದು ಹೊಳೆಯಲಾರದು. ಇಂಥ ಅಧಿಕಾರಿಗಳಿಗೂ ಕೂಡ. ಹೀಗಾಗಿಯೇ ಇಂದು ನಾವು ರೂಪಿಸಿದ ತಪ್ಪಾದ ಹಾದಿಯನ್ನು ಸಮರ್ಥಿಸುವ ವಾದಗಳೇ ವಿಜ್ರಂಭಿಸುತ್ತಿವೆ. ಇಂದು ಸಂಪತ್ಭರಿತ ಮಲೆನಾಡು ಸಾವಿರಾರು  ಗೃಹ ಕಸಬುಗಳ ಉದ್ಯೋಗಗಳ ತಾಣವಾಗಬೇಕಿತ್ತು. ಈಗ ಬರಡಾಗಿ, ಭರವಸೆಯಿಲ್ಲದ, ಕ್ರಿಯಾಶೀಲತೆಯಿಲ್ಲದ, ರೈತಾಪಿ ಬದುಕು ಸ್ಪೂರ್ತಿ ಕಳೆದುಕೊಂಡಿದೆ ಎಂದರೆ ಇದಕ್ಕೆ ಕಾರಣಗಳು ನಮ್ಮ ತಪ್ಪು ಆಯ್ಕೆಯೇ ಆಗಿದೆ.

ಹಾಗಾದರೆ ಈ ಕುರಿತಾಗಿ ನಿಜವಾದ ಪ್ರಶ್ಣೆಗಳಿಗೆ ಚಾಲನೆ ನೀಡಿದ್ದು ಹೇರಂಭಾಪುರದ ಜನ. ಇದರ ಹಿಂದೆ ಧಾರವಾಡದ ಕಿತ್ತಿಕೋ-ಹಚ್ಚಿಕೋ ಚಳುವಳಿಯ ನೇತಾರ ಶ್ರೀ. ಹಿರೇಮಟ್ ಅವರ ಮಾರ್ಗದರ್ಶನವೂ ಇದೆ.  ಅವರಿಂದ ಅರಿವು, ಸ್ಪೂರ್ತಿಯನ್ನು ಪಡೆದ ಈ ಗ್ರಾಮದ ( ಸುಬ್ರಹ್ಮಣ, ಶಂಕರನಾರಯಣ ಐತಾಳ, ಮುಂತಾದ ಗ್ರಾಮಸ್ಥರನ್ನು ನೆನೆಪಿಸಿಕೊಳ್ಳಬೇಕು) ಪಡೆ ಇಶ್ಟರವರೆಗೂ ಯಾರ ಕಣ್ಣಿಗೂ ಬೀಳದಂತೆ ಜೋಪಾನವಾಗಿಟ್ಟುಕೊಂಡು, ತಮ್ಮ ಅರಣ್ಯ ನಾಶದ ಹೇಯ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದ ನೆಡುತೋಪು ಅರಣ್ಯ ಅಧಿಕಾರಿಗಳನ್ನು - ಅವರ ಸ್ವಾರ್ಥಪರ ಸಂಗಡಿಗರನ್ನೂ ಬೆಚ್ಚಿಬೀಳಿಸಿದ್ದು ಯಾವಾಗೆಂದರೆ ಎಂ.ಪಿ.ಎಂ. ನೆಡುತೋಪಿನ "ಲೀಸ್ ಅಗ್ರಿಮೆಂಟ್" ನ್ನು ಪಡೆದಾಗ. ಇದನ್ನು ಕೊಡದಹೊರತು ಚಲಿಸಲು ಅವಕಾಶ ನೀಡುವುದೇ ಇಲ್ಲ ಎಂದು ಅಂದಿನ ಅಧಿಕಾರಿ ಶಾಂತಕುಮಾರರನ್ನು ಬೆನ್ನೆಟ್ಟಿದಾಗ.

ನಿಜಕ್ಕೂ ಈ ಸಂಗತಿ ಮಲೆನಾಡಿನ ಇತಿಹಾಸದಲ್ಲಿ ಬಹಳ ಮಹತ್ವದ್ದು.

ಈ ದಾಖಲೆ ಮುಂದಿನ ಹೋರಾಟದ ದಿಕ್ಕನ್ನು ಬದಲಿಸಿತು. ಇಡೀ ಇಲಾಖೆ ಈ ಘಟನೆಯ ನಂತರ ಬೆತ್ತಲೆಗೊಂಡಿತು. ತನ್ನ ಸ್ವಾರ್ಥಕ್ಕಾಗಿ ಈ ಅಧಿಕಾರಿಗಳು ಏನೆಲ್ಲ ಮಾಡಬಹುದೆಂಬುದನ್ನು ಇದು ಅನಾವರಣಗೊಳಿಸಿತು. ಸರ್ಕಾರದ ಆಲೋಚನೆಗಳ ಹಿಂದೆ ಎಂಥ ಜನವಿರೋಧಿ, ಪರಿಸರವಿರೋಧಿ ಮನಸ್ಸುಗಳು ಕೆಲಸಮಾಡುತ್ತವೆ ಎಂಬುದೆಲ್ಲ ಬಹಿರಂಗವಾಯಿತು. ನಮ್ಮ ಮಲೆನಾಡನ್ನು ಮುಳಗಿಸಿದ ಆಣೆಕಟ್ಟುಗಳಿಂದ ನಾಶವಾದ ಅರಣ್ಯಪ್ರದೇಶವನ್ನು ತುಂಬಿಕೊಡಲು ಇದೇ ಮಲೆನಾಡಿನ ಗ್ರಾಮಗಳ ಸಾಮೂಹಿಕ ಬಳಕೆಯ ಭೂಮಿಗಳು ರಾತೋ ರಾತ್ರಿ ಅರಣ್ಯಭೂಮಿಗಳಾಗಿ ಮಾರ್ಪಟ್ಟವು. ಅಲ್ಲದೇ ನಶಿಸಿದ ಅರಣ್ಯವೆಂದು ಕೈಗಾರಿಕಾ ನೆಡುತೋಪುಗಳಿಗೆ ವರ್ಗಾಯಿಸಲ್ಪಟ್ಟವು. ಅರಣ್ಯವೇ ಇದ್ದ ಪ್ರದೇಶಗಳೂ ಈ ಅಧಿಕಾರಿಗಳ ದುರಾಸೆಗೆ ಬರಡುಭೂಮಿಗಳೆಂದು ಬುಲ್ಡೋಜರ್ ಅಡಿಸಿಕ್ಕವು. ಬೆಂಕಿಗೆ ಆಹುತಿಯಾದವು.ನಾವು ಬಳಸುತ್ತ, ಸುತ್ತುತ್ತಾ ಇದ್ದ ಹಣ್ಣು ಹಂಪಲುಗಳ ಗುಡ್ಡಗಳು ನಮ್ಮ ಕಣ್ಣ ಮುಂದೆಯೇ ನಾಮಾವಶೇಷಗೊಂಡಿದ್ದನ್ನು ನೋಡಿದ್ದು ನಮ್ಮ ತಲೆಮಾರು.

ಹೀಗೆ ಪ್ರಾರಂಭವಾದ ಹೋರಾಟದಿಂದ ಪಡೆದ ಈ ಮಹತ್ವದ ಮಾಹಿತಿಯಿಂದ ಮುಂದೆ ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮ್ಮೆಯನ್ನು ಹೂಡಲು ಅವಕಾಶ ಏರ್ಪಟ್ಟಿತು. ಹೆಗ್ಗೋಡಿನ ಕೆ.ವಿ.ಸುಬ್ಬಣ್ಣ ನಮ್ಮ ಈ ಹೊಸ ಹೋರಾಟವನ್ನು ಬೆಂಬಲಿಸಿ ನಮಗೆ ಧೈರ್ಯ - ಉತ್ಸಾಹ ತುಂಬಿದರು. ಬೆಂಗಳೂರಿನ ಹಿರಿಯ ವಕೀಲರಾದ ಶ್ರೀ. ರಘುಪತಿಯವರು ಉತ್ಸುಕತೆಯಿಂದ ಕೇಸನ್ನು ನೆಡೆಸಿದರು. ನ್ಯಾಯಾಲಯವು ಕೋರ್ಟ್ ಕಮೀಶನ್ ಅನ್ನು ನೇಮಿಸಿತು. ಮಾನ್ಯ ಯಲ್ಲಪ್ಪರೆಡ್ಡಿಯವರ ಮಾರ್ಗದರ್ಶನದಂತೆ ದುಲೀಪ್ ಮಥಾಯ್ಸ್ ಅವರನ್ನು ನಾವು ಆಯ್ಕೆಮಾಡಿಕೊಂಡೆವು. ನ್ಯಾಯಾಲಯ ಇದನ್ನು ಪುರಸ್ಕರಿಸಿತು.    ಅವರಂಥ ಹಿರಿಯ ಅರಣ್ಯ ತಜ್ಞರು ಇಲ್ಲಿಗೆ ಭೇಟಿನೀಡಿ ನಿಜವಾಗಿ ಸಂಚಲನ ಮೂಡಿಸಿದರು. ನಮ್ಮ ಹೋರಾಟದ ಮಹತ್ವವನ್ನು ನಮಗೇ ಮನಗಾಣಿಸಿದರು.  ವಯೋವೃದ್ದರಾದ ಅವರೊಂದಿಗೆ ನಾವು  ಮಲೆನಾಡಿನ ಅನೇಕ ಗುಡ್ಡ ಬೆಟ್ಟಗಳನ್ನು ಅದಕ್ಕಾದ ಹಾನಿಯನ್ನೂ ತೋರಿಸುತ್ತ ನಮ್ಮ ಆತಂಕವನ್ನು ತೆರೆದಿಟ್ಟೆವು. ಒಂದುರೀತಿಯಲ್ಲಿ ಇಲಾಖೆಯ ಒಳ್ಳೆಯ ಅಧಿಕಾರಿಗಳಿಗೆ ಕಣ್ಣನ್ನು ತೆರೆಸುವ ಅವಕಾಶ ಏರ್ಪಟ್ಟಿದ್ದು ಆಗ. ಹಳ್ಳಿಯ ಜನರಿಗೆ ಕಾಡಿನ ವಾಣಿಜ್ಯ ವಿಚಾರ ಆಸೆಯಾಗಿಬಿಟ್ಟರೆ ಆಗಬಹುದಾದ ಅಪಾಯಗಳನ್ನು ನಮ್ಮೊಂದಿಗೆ ಮಾನ್ಯ ಮಥಯಿಸ್ ಹಂಚಿಕೊಂಡು ನಮ್ಮ ಆತಂಕವನ್ನು ಹೆಚ್ಚಿಸಿದ್ದರು.  ಇವೆಲ್ಲವೂ ಅನೇಕರೀತಿಯಲ್ಲಿ ನಮ್ಮ ಚಳುವಳಿಯನ್ನು ಬೆಳೆಗಿಸಿದ ಘಟನಾವಳಿಗಳು.

ಈ ನೆಲದ ನೆಡುತೋಪುಗಳನ್ನು ಇಂಗ್ಲೆಂಡಿನ ಕಾಮನ್ವೆಲ್ತ್ ಡೆವೆಲಪ್ಮೆಂಟ್ ಬ್ಯಾಂಕಿಗೆ ಒತ್ತೆಯಿಟ್ಟು ಹತ್ತು ಸಾವಿರ ಮಿಲಿಯನ್ ಪೌಂಡ್ ಸಾಲವನ್ನು ಪಡೆದು ಹಣದ ಆರ್ಭಟದಲ್ಲಿ ಮೆರೆಯುತ್ತಿದ್ದ ಕ್ರಿಯೆಗೆ ನ್ಯಾಯಾಲಯ ತಡೆಯೊಡ್ಡಿ ಒತ್ತೆಯಿಟ್ಟ ಭೂಮಿಯನ್ನು ವಾಪಾಸ್ ಪಡೆಯಲು ಸರ್ಕಾರಕ್ಕೆ ಆದೇಶನೀಡಿತು. ಸರ್ಕಾರ ಈ ಹಣವನ್ನು ವಾಪಾಸ್ ಮಾಡಬೇಕಾಗಿ ಬಂತು. ಆಗ ಈ ನೆಡುತೋಪುಗಳ ನವ ಜಮೀಂದಾರಿಗಳ ಸೊಕ್ಕು ಸ್ವಲ್ಪ ಕಡಿಮೆ ಆಯಿತು.ಈ ಅಧಿಕಾರಿವರ್ಗ ಮಲೆನಾಡಿನಲ್ಲಿ ನೆಡುತೋಪು ಪ್ರದೇಶಗಳ ವಿಸ್ತರಣೆಯನ್ನು ಕೈಬಿಟ್ಟಿದ್ದು ಇದರಿಂದಲೇ. ಇದ್ದಷ್ಟನ್ನು ಹೇಗಾದರೂಮಾಡಿ ನಿರ್ವಹಿಸಿದರೆ ಸಾಕೆಂದು ಅವರಿಗೆ ಅನಿಸಿದ್ದು ಈಗಲೇ.

 ಅರಣ್ಯಭೂಮಿಯನ್ನು ಹೀಗೆಲ್ಲ ಬಳಸುವಾಗ ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಅರಣ್ಯ ಸಂರಕ್ಷಣಾ ಕಾಯ್ದೆಯ ಅನ್ವಯ ಅಗತ್ಯವಿತ್ತು. ಇದನ್ನು ನ್ಯಾಯಾಲಯ ಒಪ್ಪಿತು. ಅಂತೆಯೇ ಕೇಂದ್ರದ ಅರಣ್ಯ ಸಚಿವಾಲಯ ಮಹತ್ವದ ನಿಭಂದನೆಗಳನ್ನು ಮುಂದೊಡ್ಡಿತು. ಬಹುಶಃ ಈ ನಿಬಂಧನೆಗಳಂತೆ ಮಲೆನಾಡಿನಲ್ಲಿ ಈ ನೆಡುತೋಪುಗಳನ್ನು ಮಾಡಲು ಸಾಧ್ಯವೇ ಇಲ್ಲ. ನಾವು ಇದನ್ನು ಬಳಸಿಕೊಂಡು ಇಲ್ಲಿನ ಎಂ.ಪಿ.ಎಂ ನವರ ಎಲ್ಲ ಕಾರ್ಯಚಟುವಟಿಕೆಯನ್ನು ನಿಲ್ಲಿಸಿಬಿಡಲು ಸಾದ್ಯವಿದೆ.

ಇಲ್ಲಿ ನಮ್ಮ ಮಿತಿಗಳು ಹಲವಿವೆ. ಈ ಭೂಮಿಗಳನ್ನು ಪುನಹ ಅರಣ್ಯವಾಗಿಸುವ ಕ್ರಿಯೆ ಸುಲಭದ್ದಲ್ಲ. ಅದಕ್ಕೆ ಜನರಿಗೆ ಪ್ರೌಡಿಮೆ ಬೇಕು. ಬದುಕುವ ಅವಕಾಶಗಳು ಮೂಡಬೇಕು. ಅಂಥಹ ಯೋಜನೆಗಳನ್ನು ರೂಪಿಸಬೇಕು. ಇಲ್ಲವಾದರೆ ಈ ಪ್ರದೇಶಗಳು ಕೆಲವೇ ಬಲಿಷ್ಟರ ವಶಕ್ಕೆ ಹೋಗಬಹುದು ಅಥವ ಸ್ವಾರ್ಥ ರಾಜಕಾರಣಿಗಳ ಧಾರಾಳುತನಕ್ಕೋ, ವಿಶೇಷ ಆರ್ಥಿಕವಲಯಕ್ಕೋ ಒಳಗಾಗಬಹುದು. ಬಾಣಲೆಯಿಂದ ಬೆಂಕಿಗೆ ಈ ಭೂಮಿ ಹೋಗಬಾರದು. ಅದಕ್ಕಾಗಿ ಅವಸರದಿಂದ ನಾವು ಈ ನಿಷೇಧಕ್ಕೆ ಮುಂದಾಗಿರಲಿಲ್ಲ. ಈ ಬಗೆಗೆ ಮುಂದೊಮ್ಮೆ ನಾವೆಲ್ಲ ಗಂಭೀರವಾಗಿ ಚರ್ಚಿಸಬೇಕಿದೆ. ಈ ಚಳುವಳಿಯ ಮುಖ್ಯವಾದ ಕೆಲಸ ಅಲ್ಲಿದೆ.  

ಈ ಚಳುವಳಿಯ ಕಾರಣದಿಂದಲೇ ಸುಮಾರು ಇಪ್ಪತ್ತೈದು ಸಾವಿರ ಎಕರೆ ನೆಡುತೋಪು ಪ್ರದೇಶ ವಿವಿಧ ವಿಭಾಗಗಳಿಗೆ ವಾಪಾಸ್ ಬಂದಿವೆ. ಅವುಗಳಲ್ಲಿ ಸುಮಾರು ಎಂಟುಸಾವಿರ ಎಕರೆ ಗೋಮಾಳಗಳೂ ಸೇರಿವೆ. ಇನ್ನೂ ಕೇಸು ನಡೆಯುತ್ತಲೇ ಇದೆ. ಇತ್ತೀಚೆಗೆ ನ್ಯಾಯಾಲಯ ಖ್ಯಾತ ಪರಿಸರ ತಜ್ನ ಶ್ರೀ. ಯಲ್ಲಪ್ಪರೆಡ್ಡಿ ಯವರ ನೇತ್ರತ್ವದಲ್ಲಿ ಒಂದು ಕಮಿಟಿಯನ್ನು ರಚಿಸಿ ಅದು ಮಾರ್ಚ್ ೨೦೧೧ ರ ಒಳಗೆ ಮಲೆನಾಡಿನ ಈ ನೆಡುತೋಪುಗಳು ಹೇಗೆ ಹಂತ ಹಂತವಾಗಿ ಸಹಜ ಅರಣ್ಯವನ್ನಾಗಿ ಹೇಗೆ ಬದಲುಮಾಡಬಹುದೆಂದು ತಿಳಿಯಲು ವರದಿಯನ್ನು ನೀಡಲು ಕೋರಿದೆ. ಇದಕ್ಕೂ ಮುಂಚೆ ಸರ್ಕಾರವೇ ತನ್ನ ಮರ್ಯಾದೆಯನ್ನು ಉಳಸಿಕೊಳ್ಳಲು ಮಲೆನಾಡಿನಲ್ಲಿ ಅಕೇಶಿಯಾ ನೀಲಿಗಿರಿಯನ್ನು ನಿಷೇಧಿಸುತ್ತೇವೆಂದು ಹೇಳಲು ಪ್ರಾರಂಭಿಸಿದೆ. ಇದರ ಹಿಂದೆ ನಮ್ಮ ನ್ಯಾಯಾಂಗ ಚಳುವಳಿಯ ಬಿಸಿ ಕೆಲಸಮಾಡಿದೆ. ನ್ಯಾಯಾಲಯ ಹೇಳುವ ಮೊದಲೇ ಹೇಳಿಬಿಟ್ಟರೆ ಒಳ್ಳೆಯದೆಂದು ಇದೇ ಅಧಿಕಾರಿಗಳು ಸರ್ಕಾರಕ್ಕೆ ಗಡಿಬಿಡಿ ಮಾಡುತ್ತಿದ್ದಾರೆ!! ಗಾಢವಾದ ಆಲೋಚನೆಯಿಲ್ಲದ ಈ ತೀರ್ಮಾನಗಳಿಂದ ಮಹಥ್ವದ್ದೇನೂ ಆಗುವುದಿಲ್ಲ. ಇದು  ಸರ್ಕಾರದ ಕಪಾಳಕ್ಕೆ ಬೀಳುವ ಏಟನ್ನು ತಪ್ಪಿಸಿಕೊಳ್ಳುವ ಉಪಾಯವಷ್ಟೆ.

ಇವೆಲ್ಲವನ್ನೂ ಬರೆಯುವಾಗ ನಾವೆಲ್ಲ ಏನನ್ನೂ ಮಹಾ ಕಡೆದಿದ್ದೇವೆಂದು ಖಂಡಿತ ಅನ್ನಿಸುತ್ತಿಲ್ಲ. ಇದು ನಿಜವಾದ ಗೆಲುವೂ ಅಲ್ಲ. ಏಕೆಂದರೆ ನಮ್ಮ ಮಲೆನಾಡು ತನ್ನ ಜೀವವೈವಿಧ್ಯತೆಯ ಸಂಭ್ರಮವನ್ನು ಕಳೆದುಕೊಂಡಿದೆ. ಅನೇಕ ಅಭಿವೃದ್ದಿ ಎಂಬ ಹೆಸರಿನ ಆಕ್ರಮಣಗಳಿಗೆ ಒಳಗಾಗಿ ತನ್ನ ಬಹಳಶ್ಟು ಜೀವಂತಿಕೆಯನ್ನು ಈಗ ಹೊಂದಿಲ್ಲ. ಹಿಂದಿನ ತಲೆಮಾರುಗಳು ಕಂಡ ಮಲೆನಾಡು ಇಂದು ಬದಲಾಗಿಬಿಟ್ಟಿದೆ. ಅರಣ್ಯನಾಶದಿಂದ ತೊರೆಗಳು ಮಾಯವಾಗಿವೆ. ಅನೇಕ ಪ್ರಾಣಿ-ಪಕ್ಷಿಗಳು ನಾವಾವಶೇಷಗೊಂಡಿವೆ. ಇರುವಂಥಹವು ರೈತರ ಜೊತೆ ವೈರುಧ್ಯಕ್ಕೆ ಒಳಗಾಗಿವೆ. ರೈತರ ಭೂಮಿಯ ಫಲವತ್ತತೆ ಕಡಿಮೆಯಾಗಿ ಇಳುವರಿ ಕುಂಟಿತವಾಗಿದೆ. ಕೀಟಗಳಬಾಧೆಯಿಂದ ಬೆಳೆಹಾನಿಗೊಳ್ಳುತ್ತಿದೆ. ಕೀಟಗಳನ್ನು ನಿಯಂತ್ರಿಸುತ್ತಿದ್ದ ಇದ್ದಬಿದ್ದ ಪಕ್ಷಿಗಳೂ ಕೀಟನಾಶಕಗಳಬಳಕೆಯಿಂದ ಕಣ್ಮರೆಯಾಗುತ್ತಿವೆ. ಹೀಗೇ ಬರೆಯುತ್ತಿದ್ದರೆ ಮಲೆನಾಡಿನ ಪರಿಸರನಾಶದಿಂದ ಉಂಟಾದ ಪರಿಣಾಮಗಳ ದೊಡ್ಡ ಪಟ್ಟಿಯನ್ನೇ ಮಾಡಬೇಕಾಗುತ್ತದೆ. ನಿಜವಾಗಿ ನಮ್ಮ ಬದುಕನ್ನೂ ಮೀರಿದ ಪರಿಸರ ರಚನೆ ಈ ಪಶ್ಚಿಮಘಟ್ಟದ ಮಲೆನಾಡಿನದು ಎಂಬುದನ್ನು ನಾವು ಅರಿಯಬೇಕು. ಐದುನೂರುಕೋಟಿ ವರ್ಷಗಳ ಇತಿಹಾಸವಿರುವ ಇಲ್ಲಿನ ಅರಣ್ಯ-ಗುಡ್ಡ-ಗಿಡ-ಗಂಟಿಗಳ ಅಮೂಲ್ಯ ಜೀವಲೋಕವನ್ನು ನಾಶಪಡಿಸುವ ಅಧಿಕಾರವನ್ನು ನಮಗೆ ಯಾರೂಕೊಟ್ಟಿಲ್ಲ. ಇದನ್ನು ಕಾಪಾಡುವ ಹೊಣೆಮಾತ್ರ ನಮ್ಮದಾಗಿದೆ. ಮುಂದಿನ ತಲೆಮಾರುಗಳು ಬದುಕಿ ಬಾಳಬೇಕೆಂದರೆ ಇಲ್ಲಿನ ಪರಿಸರ ಉಳಿಯಬೇಕು. ಆಗ ಮಾತ್ರ ಇಲ್ಲಿ ನದಿಗಳು ಜೀವಂತವಾಗಿ ಉಳಿಯಬಲ್ಲವು. ಬೋಳಾದ ಗುಡ್ಡಗಳನ್ನು ಪುನಃ ವೈವಿಧ್ಯತೆಯ ಅರಣ್ಯವನ್ನಾಗಿ ರೂಪಿಸುವ ಮಹತ್ಕಾರಕ್ಕೆ ನಮ್ಮನ್ನು ಅರ್ಪಿಸಿಕೊಳ್ಳಬೇಕಾಗಿದೆ.

ಮಲೆನಾಡಿನ ಜನಸಂಸ್ಕೃತಿ, ರೈತಾಪಿ  ಸೇರಿದಂತೆ ಎಲ್ಲರ ಬದುಕು  ಇಲ್ಲಿನ ಪರಿಸರಕ್ಕೆ ಪೂರಕವಾಗಿ ಹೇಗೆ ಅರಳಬೇಕು ಎಂದು ಆಲೋಚಿಸುವುದೇ ಇಲ್ಲಿನ ಮುಂದಿನ ರಾಜಕಾರಣ ಎಂದು ನಾನು ನಂಬುತ್ತೇನೆ.


ಕೆ.ಜಿ.ಶ್ರೀಧರ್
ತೀರ್ಥಹಳ್ಳಿ
೧೩/೦೨/೨೦೧೧