ಮಲೆನಾಡಿನ ರೋಚಕ ಕತೆಗಳು
ಗಿರಿಮನೆ ಶ್ಯಾಮರಾವ್ ಮಲೆನಾಡಿನಲ್ಲೇ ಹುಟ್ಟಿ ಬೆಳೆದವರು. ಅಲ್ಲಿಯ ರೋಚಕತೆಯನ್ನು ಇಂಚು ಇಂಚಾಗಿ ಅನುಭವಿಸಿದವರು. ಅವರ ಅನುಭವದ ರೋಚಕ ಘಟನೆಗಳಿಗೇ ಕೃತಿರೂಪ ನೀಡಿ ‘ಕಾಫಿ ನಾಡಿನ ಕಿತ್ತಳೆ’ ಎಂಬ ಹೆಸರಿನಲ್ಲಿ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾಯಿತು. ಅದರಲ್ಲಿನ ಚಿಂಟಿಯ ಪಾತ್ರದ ಚಿತ್ರಣದ ಭಾಗ ಮಕ್ಕಳ ಸಾಹಿತ್ಯಕ್ಕೆ ಸ್ವೀಕೃತವಾಯಿತು. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಮಲೆನಾಡಿಗೆ ಸಂಬಂಧಪಟ್ಟ ಬರಹಗಳ ಪ್ರಭಾವವೂ ಈ ಕೃತಿ ರಚನೆಗೆ ಪ್ರಮುಖ ಕಾರಣ ಎನ್ನುತ್ತಾರೆ ಲೇಖಕರು. ‘ಕಾಫಿ ನಾಡಿನ ಕಿತ್ತಳೆ' ಮುಂದೆ ಮುದ್ರಣವಾಗಿ, ನಂತರ ಪರಿಷ್ಕೃತ ಮುದ್ರಣವಾಗುವ ಸಮಯದಲ್ಲಿ ಮಲೆನಾಡಿನ ರೋಚಕ ಕತೆಗಳು ಎಂದಾಯಿತು.
ಬೆನ್ನುಡಿಯಲ್ಲಿ ಗಿರಿಮನೆ ಶ್ಯಾಮರಾಯರೇ ಬರೆದುಕೊಂಡಂತೆ ‘ ಬಟ್ಟ ಬಯಲಿನಂತಲ್ಲ ಮಲೆನಾಡು, ಇಲ್ಲಿನ ಜಡಿಗುಟ್ಟಿ ಸುರಿಯುವ ಮಳೆಯ ರುದ್ರ ನರ್ತನ, ಮೊಗೆವ ಹಸಿರಿನ ಮೇಲೆ ಹಾಸುವ ಮಂಜು, ಬೆಟ್ಟ ಗುಡ್ಡಗಳ ಮೇಲಿನ ಎಳೆಬಿಸಿಲ ಚೇತೋಹಾರಿ ನೋಟ, ಹನ್ನೆರಡು ತಿಂಗಳ ವೈವಿಧ್ಯಮಯವಾದ ಪ್ರಕೃತಿ ಸೌಂದರ್ಯ ಇನ್ನೆಲ್ಲೂ ಸಿಗದು. ಭತ್ತ, ಏಲಕ್ಕಿ, ಕಾಫಿ, ಕಿತ್ತಳೆ, ಕಾಳುಮೆಣಸಿನ ಪರಿಮಳದ ಇಲ್ಲಿನ ಸಂಘರ್ಷದ ಬದುಕಿನ ಜೊತೆಗೆ ತಳಕು ಹಾಕಿಕೊಂಡ ಪ್ರಾಣಿ-ಪಕ್ಷಿಗಳ ಚಿತ್ರ ವಿಚಿತ್ರ ಘಟನೆಗಳು ಕೂಡಾ ಬೆರಗು ಹುಟ್ಟಿಸುವಂಥದ್ದೇ. ಹಾವು, ಮುಂಗುಸಿ, ವೈರ, ದೈತ್ಯ ಆನೆಯ ಶಕ್ತಿ ಪ್ರದರ್ಶನ, ಹೆಜ್ಜೇನುಗಳ ಮಾರಕ ದಾಳಿ, ಮೊಸಳೆ ಭಯ, ಕಳ್ಳಭಟ್ಟಿಯ ದುರಂತ, ಕೃಷಿಕನ ಕಷ್ಟ ನಷ್ಟಗಳು, ಹಾದರದ ವ್ಯಥೆ ಎಲ್ಲದರಲ್ಲಿಯೂ ಅವುಗಳದ್ದೇ ಆದ ರೋಚಕತೆ ಇದೆ. ಮಲೆನಾಡಿಗೆ ಸಾಟಿ ಮಲೆನಾಡು ಮಾತ್ರ! ಅನುಭವವಿಲ್ಲದವರು ಅದನ್ನು ಓದಿಯೂ ಅನುಭವಿಸಬಹುದು.
ಸುಮಾರು ೧೮೦ ಪುಟಗಳಿರುವ ಈ ಪುಸ್ತಕವನ್ನು ಓದುವುದರ ಮಜಾವೇ ಬೇರೆ. ಓದುತ್ತಾ ಓದುತ್ತಾ ನೀವು ಕಾಡಿನಲ್ಲಿ, ಮಳೆಯಲ್ಲಿ ನುಸುಳಿದ ಅನುಭವವಾಗುತ್ತದೆ. ಪುಸ್ತಕಕ್ಕೆ ಮುನ್ನುಡಿಯನ್ನು ನಾಗೇಶ್ ಹೆಗಡೆ ಬರೆದಿದ್ದಾರೆ. ಅವರ ಪ್ರಕಾರ ಕನ್ನಡ ಸಾಹಿತ್ಯದಲ್ಲಿ ಇದೊಂದು ಗಮನಾರ್ಹ ಪ್ರಯೋಗ. ಹಿಂದೆ ಕಾರಂತರು, ಗೊರೂರು, ಕುವೆಂಪು, ತೇಜಸ್ವಿ, ಕುಂ.ವೀ. ಮೊದಲಾದವರು ಗ್ರಾಮೀಣ ಬದುಕಿನ ಸ್ವಾರಸ್ಯಕರ ಚಿತ್ರಣ ನೀಡಿದ್ದು ಇದೆ. ಮಲೆನಾಡಿನ ದಟ್ಟ ಮಳೆ, ದಟ್ಟ ಮಂಜು, ದಟ್ಟ ಏಕಾಂತ, ದಟ್ಟ ಏಕತಾನತೆ ಹೀಗೆ ಎಲ್ಲವೂ ದಟ್ಟ ದಟ್ಟ. ಪ್ರಕೃತಿಯ ನಡುವೆ ತೇಲಾಡುವ ಸಹಜ ಅನುಭವ ಅಲ್ಲದೇ ಹೋದರೂ ಬರಹಗಳನ್ನು ಓದುತ್ತಾ ಓದುತ್ತಾ ನೀವು ದಟ್ಟ ಕಾಡಿನಲ್ಲಿ ಕಳೆದುಹೋಗುವ ಸಂಭವವಿದೆ,
ಶಂಭುರಿತ್ತಿಯವರ ಸೊಗಸಾದ ಮುಖಪುಟ ಹೊಂದಿರುವ ಈ ಪುಸ್ತಕವನ್ನು ಗಿರಿಮನೆ ಶ್ಯಾಮರಾವ್ ಅವರು ಬಾಲ್ಯದಲ್ಲಿ ಕೈಹಿಡಿದು ನಡೆಸಿದ ಹೆತ್ತವರಿಗೆ ಅರ್ಪಿಸಿದ್ದಾರೆ. ಪುಸ್ತಕದ ಒಳಗಡೆ ೧೪ ಅಧ್ಯಾಯಗಳಿವೆ.