ಮಲ್ಲಿಗೆ ಹೂವಿನ ಸಖ
“ಮಲ್ಲಿಗೆ ಹೂವಿನ ಸಖ" ಕಥಾ ಸಂಕಲನವನ್ನು ಬರೆದವರು ಕಥೆಗಾರರಾದ ಟಿ ಎಸ್ ಗೊರವರ ಇವರು. ೬೩ ಪುಟಗಳ ಈ ಪುಟ್ಟ ಕಥಾ ಸಂಕಲನಕ್ಕೆ ಮೊದಲ ಮಾತು, ಟಿಪ್ಪಣಿ ಬರೆದಿದ್ದಾರೆ ಮತ್ತೊರ್ವ ಕಥೆಗಾರ ಜಯರಾಮಾಚಾರಿ. ಇವರು ತಮ್ಮ ಟಿಪ್ಪಣಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ...
“ಟಿ.ಎಸ್. ಗೊರವರ ಅವರ ಕತೆಗಳನ್ನ ಅಲ್ಲಲ್ಲಿ ಪೇಪರ್ ಮತ್ತು ಮ್ಯಾಗಜೀನುಗಲ್ಲಿ ಬಿಡಿಬಿಡಿಯಾಗಿ ಓದಿದ್ದೆ. ಒಟ್ಟಿಗೆ ಅವರ ಕತೆಗಳನ್ನು ಪುಸ್ತಕ ರೂಪದಲ್ಲಿ ಓದಿದ್ದು 'ಮಲ್ಲಿಗೆ ಹೂವಿನ ಸಖ' ಪುಸ್ತಕದಿಂದ, ತರಿಸಿಕೊಂಡು ಇನ್ನೂ ಓದದಿರುವ ಅವರ 'ಕುದರಿ ಮಾಸ್ತರ' ಕೂಡ ಇದೆ. ಆರು ಕತೆಯುಳ್ಳ ಚಿಕ್ಕ ಪುಸ್ತಕ ಇದು, ಪುಸ್ತಕದ ಅಂತ್ಯದಲ್ಲಿ ಸ್ಮಿತಾ ಅಮೃತರಾಜ್, ಅನುಪಮಾ ಪ್ರಸಾದ್, ವಿವೇಕ್ ಶಾನಭಾಗರ ಮಾತುಗಳಿವೆ, ಅದನ್ನು ಓದೋದೇ ಚೆಂದ. ಗೊರವರ ಕಥೆ ಕಟ್ಟುವ ಶಕ್ತಿಯನ್ನ ಚೆನ್ನಾಗಿ ವಿವರಿಸಿದ್ದಾರೆ.
ಆರು ಕತೆಗಳಲ್ಲಿ ಕದ್ದು ನೋಡುವ ಚಂದಿರ ನನಗೆ ಹಿಡಿಸಲಿಲ್ಲ, ಅದಕ್ಕೆ ಕಾರಣ ಮಿಕ್ಕ ಐದು ಕತೆಗಳು, ಮಿಕ್ಕ ಐದು ಕತೆಗಳ ವಿಷಯ ವಸ್ತು ಕಟ್ಟುವಿಕೆ ಬಳಸಿರುವ ರೂಪಕಗಳು ಅಲ್ಲಿನ ಭಾಷೆ ಎಲ್ಲವೂ ಚೆಂದ ಚೆಂದ, ಹಾಗಾಗಿ ಕದ್ದು ನೋಡುವ ಚಂದಿರ ಸಪ್ಪೆ ಅನಿಸಿತು.
ಮನೋವ್ಯಾಪಾರ ನಾನು ತುಂಬಾ ಇಷ್ಟ ಪಡುವ ಜಾನರಿನ ಕತೆ, ಕತೆಯ ಅಂತ್ಯ ಕನಕದಾಸರ 'ನೀ ಮಾಯೆಯೊಳಗೋ ಮಾಯೆ ನಿನ್ನೊಳಗೋ' ಸಾಲನ್ನು ನೆನಪಿಸುತ್ತವೆ, ಕತ್ತಲಿನಾಚೆಯ ಕತೆಯಲ್ಲಿ ಮೂಲ ಧರ್ಮದ ಬಗ್ಗೆ ಪ್ರಶ್ನೆ ಎದುರಾಗುತ್ತದೆ, ಇದೆ ಕತೆ ವಸ್ತು ಇಟ್ಟುಕೊಂಡು ದೊಡ್ಡ ದೊಡ್ಡ ಕಾದಂಬರಿಗಳೇ ಬಂದಿವೆ, 'ದೇವರಾಟ' ನಿರೀಕ್ಷಿತ ರೀತಿಯಲ್ಲಿ ಕತೆ ಸಾಗಿ ಕೊನೆಗೆ ನಿರೀಕ್ಷಿತ ರೀತಿಯಲ್ಲೇ ಕತೆ ಮುಗಿಯುತ್ತದೆ, 'ಮಲ್ಲಿಗೆ ಹೂವಿನ ಸಖ' ವಿಶಿಷ್ಟವಾದ ವಿಶೇಷವಾದ ಕತೆ, ಕಳೆದುಹೋಗುವವನ ಕತೆ, ಅವನು ಯಾವುದರಲ್ಲಿ ಕಳೆದುಹೋಗುತ್ತಿದ್ದಾನೆ ಎನ್ನೋದು ಕತೆ ಓದಿದಾಗಲೇ ಗೊತ್ತಾಗೋದು.
ಈ ಪುಸ್ತಕದಲ್ಲಿ ನನಗೆ ತುಂಬಾ ಹಿಡಿಸಿದ ಕತೆ ಪೆಪ್ಪರ್ಮೆಂಟ ಕತೆ, ನನ್ನ ಬಾಲ್ಯದ ಕೆಲವು ನೆನಪುಗಳನ್ನು ನೆನಪಿಸಿದ ಕತೆ, ಒಂದೊಳ್ಳೆ ಕಿರುಚಿತ್ರಕ್ಕೆ ಬೇಕಾದ ಎಲಿಮೆಂಟ್ಸ್ ಇರುವ ಕತೆ, ಮಕ್ಕಳ ಮೂಲಕ ಕತೆ ಕಟ್ಟಿದರೆ ಅದಕ್ಕೆ ಮಕ್ಕಳಿಗಿರುವಂತ ಒಂದು ಮುಗ್ಧತೆ ಬಂದುಬಿಡುತ್ತೆ, ಈ ಕತೆಗೆ ಆ ಮುಗ್ಧತೆ ಇದೆ.
ಇಲ್ಲಿನ ಎಲ್ಲ ಕತೆಗಳಲ್ಲೂ ಕತೆ ಶುರುವಾದಾಗ ಒಂದು ವಿವರ ಇರುತ್ತೆ, ಆ ವಿವರದ ಮೂಲಕ ಕತೆಯ ನಾಯಕ ಯಾರು, ಕತೆ ಎಲ್ಲಿ ನಡೆಯುತ್ತಿದೆ, ನಾಯಕನ ಒಳಗಿನ ಮತ್ತು ಹೊರಗಿನ ಪರಿಸರ ಗೊತ್ತು ಮಾಡುತ್ತದೆ, ಎಲ್ಲ ಕತೆಗಳ ಅಂತ್ಯವೂ ಕತಯನ್ನು ನೆನಪಿಟ್ಟುಕೊಳ್ಳುವಂತೆ ಮಾಡುತ್ತೆ ಇಲ್ಲಿನ ಕತೆಗಳ ದೊಡ್ಡ ಶಕ್ತಿ ಅದು ಅಂತ ನನ್ನ ಅಭಿಪ್ರಾಯ ಬಿಸಿ ಚಹಾವನ್ನು ಗಟ ಗಟ ಎತ್ತಿ ಕುಡಿಯುವುದು, ಪದ್ಮಳ ಗಂಡ ಅವನನ್ನು ಓದಿಸಿಕೊಂಡು ಹೋಗಿ ಕತ್ತಲಲ್ಲಿ ಕರಗಿಹೋಗುವುದು,ಚಿಮಣಿ ದೀಪ ಕೆಳಗೆ ಬಿದ್ದು ಇಡೀ ಅಂಗಡಿಗೆ ಬೆಂಕಿ ಹರಡುವುದು.
ಕತೆ ಕಟ್ಟುವವರಿಗೆ ಇದೊಂದು ಒಳ್ಳೆ ಪುಸ್ತಕ, ಕತೆ ಓದುವವರಿಗೆ ತುಂಬಾ ಹಿಡಿಸುವ ಪುಸ್ತಕ, ಈ ಪುಸ್ತಕದ ಕತೆಗಳು ತುಂಬಾ ದಿನ ಕಾಡುವಂತ ಕತೆಗಳು. ಓದಿ, ಕಳೆದುಹೋಗಿ” ಎಂದಿದ್ದಾರೆ. ನಿಜಕ್ಕೂ ಪುಟ್ಟ ಪುಸ್ತಕದ ಕಥೆಗಳು ಓದಲು ಬಹಳ ಸೊಗಸಾಗಿದೆ.