ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)

ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)

ಬರಹ

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ಕರ್ನಾಟಕದಲ್ಲಿ ಹಿಮ ಬೀಳುವುದಿಲ್ಲ ಹಾಗೂ ಮರುಭೂಮಿ ಇಲ್ಲ ಎಂಬುದನ್ನು ಬಿಟ್ಟರೆ ಎಲ್ಲ ರೀತಿಯ ಹವಾಮಾನ, ಮಣ್ಣು, ಜೀವವೈವಿಧ್ಯ ಇಲ್ಲಿವೆ. ವಾರ್ಷಿಕ ಸಾವಿರ ಸೆಂಟಿಮೀಟರ್ ಮಳೆಯಿಂದ ಹಿಡಿದು ೨೦-೨೫ ಸೆಂಟಿಮೀಟರ್ ಮಳೆ ಬರುವ ಪ್ರದೇಶಗಳೂ ಇಲ್ಲುಂಟು. ಜಗತ್ತಿನಲ್ಲಿಯೇ ಅತ್ಯಂತ ದಟ್ಟ ಎನಿಸಿದ ಕಾಡಿನ ಜತೆಗೆ ಜಾಲಿಮುಳ್ಳು ಬಿಟ್ಟು ಬೇರೆ ಏನೂ ಬೆಳೆಯದಂತಹ ಪ್ರದೇಶಗಳು ನಮ್ಮಲ್ಲಿವೆ. ಚಿನ್ನದಿಂದ ಹಿಡಿದು ಬಹುತೇಕ ಲೋಹದ ಅದಿರುಗಳ ನಿಕ್ಷೇಪಗಳು, ಎಲ್ಲ ರೀತಿಯ ಬೆಳೆಗಳನ್ನು ಬೆಳೆಯುವಂತಹ ವೈವಿಧ್ಯಮಯ ಮಣ್ಣು ಮತ್ತು ಹವಾಮಾನ ಈ ನೆಲದ ವಿಶೇಷ.

ಆದರೂ ಕರ್ನಾಟಕದ ಅರ್ಧ ಭಾಗ ಬಡವಾಗಿದೆ, ಏಕೆ?

ಜಗತ್ತಿನ ಯಾವ ಬೆಳೆಯನ್ನಾದರೂ ಬೆಳೆಯುವ ಸಾಮರ್ಥ್ಯವುಳ್ಳ ಮಣ್ಣು ಮತ್ತು ಹವಾಮಾನ ನಮ್ಮಲ್ಲಿವೆ. ವರ್ಷಪೂರ್ತಿ ಯಥೇಚ್ಛವಾಗಿ ಬೀಳುವ ಬಿಸಿಲು ನಮ್ಮ ನಿಜವಾದ ಸಂಪತ್ತು. ಆದರೆ ಅದನ್ನು ಸರಿಯಾಗಿ ಬಳಸುವ ಇಚ್ಛಾಶಕ್ತಿಯನ್ನು ನಾವು ಯಾವತ್ತೂ ತೋರಿಸಿಲ್ಲ. ’ಅಯ್ಯೋ ಕೆಟ್ಟ ಬಿಸಿಲು’ ಎಂದು ಗೊಣಗುವ ಮೂಲಕ ಬಿಸಿಲೆಂದರೆ ಶತ್ರು ಎಂಬ ಭಾವನೆ ಬೆಳೆಸಿಕೊಂಡಿದ್ದೇವೆ.

ಆದರೆ ಬಿಸಿಲು ಎಂಬುದು ಎಂತಹ ಸಂಜೀವಿನಿ ಗೊತ್ತೆ?

ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯೂ ತಾನು ಬದುಕಲು ಸೂರ್ಯನ ಬೆಳಕನ್ನೇ ಅವಲಂಬಿಸಿದೆ ಎಂಬುದು ನಿಮಗೆ ತಿಳಿದಿದೆಯೆ? ಬಿಸಿಲು ನಮ್ಮ ಶಕ್ತಿಯ ಒಂದು ಮುಖ್ಯ ಮೂಲ. ಬಿಸಿಲಿನಿಂದಲೇ ಪ್ರತಿಯೊಂದು ಸಸ್ಯ, ಗಿಡ, ಮರಗಳು ಬೆಳೆಯುತ್ತವೆ. ಭೂಮಿಯ ಮೇಲಿನ ನೀರು ಆವಿಯಾಗಿ, ಮೇಲಕ್ಕೇರಿ ಮೋಡಗಳಾಗಿ, ಮಳೆಯಾಗಿ ಸುರಿದು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯನ್ನು ಪೋಷಿಸುತ್ತದೆ. ನೀರು, ಗಾಳಿ, ಮಣ್ಣು ಹಾಗೂ ಸೂರ್ಯನ ಶಕ್ತಿಯ ಮೇಲೆಯೇ ನಮ್ಮೆಲ್ಲರ ಬದುಕು ನಿಂತಿದೆ.

ಆದರೂ ಬಿಸಿಲಿನ ಮಹತ್ವವನ್ನು ನಾವು ಅರಿತುಕೊಂಡಿಲ್ಲ.

ಇವತ್ತು ಯಾವ ರೈತನನ್ನು ಕೇಳಿದರೂ ಮಳೆ ಸರಿಯಾಗಿ ಬರುವುದಿಲ್ಲ ಎಂದೇ ಹೇಳುತ್ತಾನೆ. ಆದರೆ ಪ್ರತಿ ವರ್ಷ ಸುರಿಯುತ್ತಿರುವ ಪ್ರಮಾಣದಲ್ಲಿ ಮಳೆ ಬರುತ್ತಲೇ ಇರುತ್ತದೆ. ಬಹುಶಃ ಕೆಲವೆಡೆ ಸಾಧಾರಣವಾಗಿ ಬರುವುದಕ್ಕಿಂತ ಹೆಚ್ಚು, ಇನ್ನು ಕೆಲ ಕಡೆ ಕಡಿಮೆ ಬೀಳಬಹುದು. ಒಟ್ಟಿನಲ್ಲಿ ಮಳೆಯ ಪ್ರಮಾಣ ಬಹುತೇಕ ಒಂದೇ ರೀತಿ ಇರುತ್ತದೆ.

ಯಾವುದೋ ಒಂದು ಪ್ರದೇಶದಲ್ಲಿ ವಾರ್ಷಿಕ ಮಳೆಯ ಪ್ರಮಾಣ ಕಡಿಮೆಯಾಗಿದೆ ಎಂದೇ ಇಟ್ಟುಕೊಳ್ಳೋಣ. ಎಷ್ಟೇ ಕಡಿಮೆ ಬಂದಿದೆ ಎಂದರೂ ರಾಜಸ್ತಾನ ರಾಜ್ಯದ ಸರಾಸರಿ ಮಳೆಯ ಪ್ರಮಾಣಕ್ಕಿಂತ ನಮ್ಮ ರಾಜ್ಯದ್ದು ಹೆಚ್ಚೇ ಇದೆ. ಆದರೂ ಮಳೆಗಾಲದ ಒಂದೆರಡು ತಿಂಗಳು ಜೀವಂತಾಗಿದ್ದು ನಂತರ ಬತ್ತಿ ಹೋಗುತ್ತಿದ್ದ ಆ ರಾಜ್ಯದ ನದಿಗಳು ಈಗ ವರ್ಷದ ಏಳೆಂಟು ತಿಂಗಳುಗಳ ಕಾಲ ಹರಿಯುತ್ತಿರುವ ಪವಾಡ ಸಂಭವಿಸಿದ್ದು ಹೇಗೆ? (ಈ ಕುರಿತು ನಂತರದ ಅಧ್ಯಾಯದಲ್ಲಿ ವಿವರವಾದ ಮಾಹಿತಿ ಇದೆ).

ಇದರರ್ಥ: ನಮ್ಮಲ್ಲಿ ಬೀಳುತ್ತಿರುವ ಮಳೆ ನೀರು ಭೂಮಿಯಲ್ಲಿ ಇಂಗದೇ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಅದನ್ನು ಹಿಡಿದಿಡಲು ನಾವು ಸರಿಯಾಗಿ ಪ್ರಯತ್ನಿಸುತ್ತಿಲ್ಲ.

ಇದಕ್ಕೊಂದು ಸರಳ ಉದಾಹರಣೆ ಕೊಡುತ್ತೇನೆ. ಒಂದು ಸಾಧಾರಣ ಮಳೆ ಬಂತು ಎಂದಿಟ್ಟುಕೊಳ್ಳೋಣ. ಎಷ್ಟು ಸಣ್ಣ ಮಳೆ ಎಂದರೆ ಡಾಂಬರು ರಸ್ತೆ ತೋಯುವಷ್ಟು. ಉಟ್ಟ ಬಟ್ಟೆ ಅರ್ಧ ನೆನೆಯುವಷ್ಟು.

ಇಷ್ಟು ಸಣ್ಣ ಮಳೆ ಬಂದು ನಿಂತ ಐದು ನಿಮಿಷದಲ್ಲಿ ಡಾಂಬರು ರಸ್ತೆ ಒಣಗಿ ಮೊದಲಿನಂತಾಗುತ್ತದೆ. ಅಲ್ಲಿ ಮಳೆ ಬಂದಿತ್ತು ಎಂಬ ಕುರುಹೇ ಇರುವುದಿಲ್ಲ. ಅದೇ ರೀತಿ ಉಟ್ಟ ಬಟ್ಟೆ ಕೂಡ ಹತ್ತು ನಿಮಿಷದಲ್ಲಿ ಆರಿಹೋಗುತ್ತದೆ.

ಆದರೆ ರಸ್ತೆ ಪಕ್ಕದ ಮಣ್ಣು ಪರೀಕ್ಷಿಸಿ ನೋಡಿ. ಮೇಲ್ಭಾಗದಲ್ಲಿ ಇನ್ನೂ ಒಂದಿಷ್ಟು ಹಸಿ ಉಳಿದಿರುತ್ತದೆ. ಇನ್ನು ರಸ್ತೆಯ ಪಕ್ಕದಲ್ಲಿರುವ ಹುಲ್ಲಿನಲ್ಲಿ ಮಳೆ ಹನಿಗಳು ಹಾಗೇ ನಿಂತಿರುತ್ತವೆ. ಅಲ್ಲಿ ಹಸಿ ಇನ್ನೂ ಜಾಸ್ತಿ. ಅದೇ ರೀತಿ ಒಣಗಿದ ಹುಲ್ಲು, ಅಥವಾ ತರಗೆಲೆಗಳು ಕೂಡ ಇನ್ನೂ ಹಸಿಯಾಗಿಯೇ ಇರುತ್ತವೆ. ಏಕೆ?

ಉತ್ತರ ತುಂಬ ಸರಳ. ರಸ್ತೆಯ ಮೇಲೆ ಬಿದ್ದ ನೀರಿಗೆ ಇಂಗಲು ಅವಕಾಶವೇ ಇದ್ದಿಲ್ಲ. ರಸ್ತೆಯ ಬಿಸಿ ಹಾಗೂ ಗಾಳಿಗೆ ನೀರು ಕ್ಷಣಮಾತ್ರದಲ್ಲಿ ಆವಿಯಾಗಿ ಹೋಯಿತು. ಅದೇ ರೀತಿ ರಸ್ತೆ ಪಕ್ಕದ ಮಣ್ಣಿನಲ್ಲಿ ಬಿದ್ದ ನೀರನ್ನು ಮಣ್ಣು ಹೀರುವ ಪ್ರಮಾಣದಲ್ಲಿ ಮಳೆ ಬಂದಿದ್ದಿಲ್ಲ. ಹೀಗಾಗಿ ಅದು ಕೊಂಚ ತಡವಾಗಿ ಆವಿಯಾಗುತ್ತದೆ.

ಆದರೆ ತಮ್ಮ ಮೇಲೆ ಬಿದ್ದ ಮಳೆ ಹನಿಯನ್ನು ಹುಲ್ಲು ಮತ್ತು ಒಣ ತರಗಲೆ ಹಿಡಿದಿಡುವುದರಿಂದ ಅವು ಆವಿಯಾಗುವುದು ತಡವಾಗುತ್ತದೆ. ಅಲ್ಲದೇ ಸೂರ್ಯನ ಕಿರಣಗಳ ಬಹುಭಾಗವನ್ನು ಹುಲ್ಲು ಹೀರಿಕೊಳ್ಳುವುದರಿಂದ ನೀರಿನ ಮೇಲೆ ಬಿಸಿಲಿನ ಪ್ರಭಾವ ಕಡಿಮೆಯಾಗಿ ಅದು ಬೇಗ ಆವಿಯಾಗುವುದಿಲ್ಲ. ಹುಲ್ಲಿನ ಪತ್ರಹರಿತ್ತು (ಸೂರ್ಯನ ಬೆಳಕನ್ನು ಶಕ್ತಿಯಾಗಿ ಬದಲಿಸುವ ವಿಶಿಷ್ಠತೆ) ನೀರನ್ನು ಬಳಸಿಕೊಂಡು ಆಹಾರವನ್ನು ತಯಾರಿಸುವುದರಿಂದ ಆವಿಯಾಗುವ ಮುನ್ನವೇ ಮಳೆ ನೀರು ಬಳಕೆಯಾಗುತ್ತದೆ.

ಇದರರ್ಥ: ಹಸಿರು ಮತ್ತು ತ್ಯಾಜ್ಯವಸ್ತುಗಳು ನೀರನ್ನು ಹೀರಿಕೊಳ್ಳುವ ಹಾಗೂ ಹಿಡಿದಿಡುವ ಪ್ರಮಾಣ ಒಣ ಮಣ್ಣಿಗಿಂತ ಹೆಚ್ಚು. ಎಲ್ಲಿ ಭೂಮಿಯ ಮೇಲ್ಭಾಗದಲ್ಲಿ ಹಸಿರು ಇರುತ್ತದೋ, ಮಣ್ಣಿನಲ್ಲಿ ಕೃಷಿ ತ್ಯಾಜ್ಯವಾದ ಹುಲ್ಲು, ಎಲೆ, ದಂಟು, ಕಡ್ಡಿ ಮುಂತಾದವುಗಳ ಪ್ರಮಾಣ ಹೆಚ್ಚಾಗಿರುತ್ತದೋ ಅಲ್ಲಿ ಬೀಳುವ ಮಳೆ ನೀರು ಬೇಗ ಆವಿಯಾಗದೇ ಸಸ್ಯಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ದುರಂತವೆಂದರೆ ಉಳುಮೆ ಮೋಹಕ್ಕೆ ಸಿಲುಕಿರುವ ರೈತರು ಹೊಲದಲ್ಲಿರುವ ಒಣ ಹುಲ್ಲು, ಸಣ್ಣಪುಟ್ಟ ಗಿಡಗಳನ್ನು ಸಂಗ್ರಹಿಸಿ ಸುಡುತ್ತಾರೆ. ಹುಲ್ಲನ್ನು ಕಿತ್ತು ಸಾಗಿಸುತ್ತಾರೆ. ಮಳೆಗಾಲಕ್ಕೂ ಮುಂಚೆ ಹೊಲಗಳು ಬೋಳಾಗಿರುವುದರಿಂದ ಅಲ್ಪ ಮಳೆ ಬೀಳುವ ಕಡೆ ನೀರು ಬೇಗ ಆವಿಯಾಗಿ ಸಸ್ಯಗಳ ಬೆಳವಣಿಗೆಗೆ ಉಪಯೋಗವಾಗುವುದಿಲ್ಲ. ಇನ್ನು ಸಾಧಾರಣ ಮಳೆ ಬೀಳುವಲ್ಲಿ ನೀರು ಬೇಗ ಆವಿಯಾಗಿ ಸಸ್ಯಗಳ ಬೆಳವಣಿಗೆಗೆ ಮಳೆ ನೀರು ಉಳಿಯುವುದಿಲ್ಲ. ಆದ್ದರಿಂದ ಹೊಲದಲ್ಲಿ ಕೃಷಿ ತ್ಯಾಜ್ಯ ಸಾಕಷ್ಟು ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಒಣ ಹುಲ್ಲು, ತರಗಲೆಗಳು, ಕಡ್ಡಿ, ದಂಟು, ಸೊಪ್ಪುಸೆದೆಯನ್ನು ಹರಡಿರಬೇಕು. ಇದನ್ನೇ ’ಮುಚ್ಚಿಗೆ’ ಎಂದು ಕರೆಯುವುದು.

ಈ ರೀತಿ ಕೃಷಿ ಭೂಮಿಯನ್ನು ಸಾವಯವ ತ್ಯಾಜ್ಯದಿಂದ ಹೊದಿಸಿದರೆ, ಅದು ನೀರನ್ನು ಹೀರಿಕೊಳ್ಳುವ ಸ್ಪಂಜಿನಂತೆ ಕೆಲಸ ಮಾಡುತ್ತದೆ. ಬಿದ್ದ ಮಳೆಯನ್ನು ಇಂಗಿಸಿಕೊಳ್ಳುತ್ತದೆ. ಅದು ಬೇಗ ಆವಿಯಾಗಲು ಬಿಡುವುದಿಲ್ಲ. ತಾಯ ಗರ್ಭದಂತೆ, ಮೊಳೆಯುವ ವಾತಾವರಣ ಸೃಷ್ಟಿಸುತ್ತದೆ. ಇಂಥ ನೆಲದಲ್ಲಿ ಬಿದ್ದ ಬೀಜ, ಫಲಿಸದೇ ಇದ್ದೀತೆ?

(ಮುಂದುವರಿಯುವುದು)

- ಚಾಮರಾಜ ಸವಡಿ