ಮಹತ್ವದ ಸಂದೇಶಗಳ ರವಾನೆ

ಮಹತ್ವದ ಸಂದೇಶಗಳ ರವಾನೆ

ಕೆನಡಾದಲ್ಲಿ ನಡೆದ ಜಿ-7 ರಾಷ್ಟ್ರಗಳ ಶೃಂಗ ಸಮ್ಮೇಳನದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿಯವರು ಅಲ್ಲಿಂದ ಮಹತ್ವದ ಎರಡು ಸಂದೇಶಗಳನ್ನು ರವಾನಿಸಿದ್ದಾರೆ. ಒಂದನೆಯದಾಗಿ, ಹದಗೆಟ್ಟಿದ್ದ ಭಾರತ ಕೆನಡಾ ಸಂಬಂಧವು ಮತ್ತೆ ಹಳಿಗೆ ಬಂದಿರುವುದನ್ನು ಅವರ ಭೇಟಿಯು ಸಂಕೇತಿಸಿದ್ದರೆ, ಎರಡನೆಯದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ 'ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ವ್ಯವಹಾರದಲ್ಲಿ ಭಾರತವು ಎಂದಿಗೂ ಮೂರನೇ ರಾಷ್ಟ್ರದ ಮಧ್ಯಸ್ಥಿಕೆಯನ್ನು ಒಪ್ಪದು' ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.

ಕೆನಡಾದ ಹಿಂದಿನ ಅಧ್ಯಕ್ಷ ಜಸ್ಟಿನ್ ಟ್ರುಡೋ ಖಲಿಸ್ಥಾನಿ ಮುಖಂಡ ಹರ್ದೀಪ್ ನಿಜ್ಜರ್‌ನ ಹತ್ಯೆಯಲ್ಲಿ ಭಾರತ ಸರಕಾರದ ಕೈವಾಡವಿದೆಯೆಂದು ಆರೋಪಿಸುವುದರೊಂದಿಗೆ ಹಾಗೂ ಭಾರತ ವಿರೋಧಿ ಚಟುವಟಿಕೆಗಳಿಗೆ ಕೆನಡಾದಲ್ಲಿ ಅವಕಾಶ ನೀಡುವುದರೊಂದಿಗೆ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧವು ತೀರಾ ಹದಗೆಟ್ಟಿತ್ತು. ಇದು ಉಭಯದೇಶಗಳ ನಡುವಿನ ಇನ್ನಿತರ ವ್ಯವಹಾರ ಮತ್ತು ವ್ಯಾಪಾರಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಿತ್ತು. ಆದರೆ ಕೆನಡಾದಲ್ಲಿ ನಡೆದ ಚುನಾವಣೆಯಲ್ಲಿ ಹಾಗೂ ಅವರು ಹೆಚ್ಚು ಪ್ರಬುದ್ಧತೆಯನ್ನು ಪ್ರದರ್ಶಿಸುವುದರೊಂದಿಗೆ ಲಭಿಸಿವೆ. ಕಾರ್ನಿ ಅವರ ಆಹ್ವಾನವನ್ನು ಮನ್ನಿಸಿ ಕೆನಡಾಕ್ಕೆ ತೆರಳಿದ ಪರಿಸ್ಥಿತಿಯನ್ನು ತಿಳಿಯಾಗಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಆ ಮೂಲಕ ಉಭಯದೇಶಗಳ ಸಂಬಂಧಗಳು, ವ್ಯವಹಾರಗಳು ಮತ್ತೆ ಹಳಿಗೇರುವ ಸಾಧ್ಯತೆಯನ್ನು ಮೂಡಿಸಿದ್ದಾರೆ.

ಇದೇ ವೇಳೆ, ಅಮೆರಿಕದ ಅಧ್ಯಕ್ಷ ಟ್ರಂಪ್‌ ರವರಿಗೆ ಕೂಡಾ ಭಾರತವು ತನ್ನ ದ್ವಿಪಕ್ಷೀಯ ವ್ಯವಹಾರದಲ್ಲಿ ಯಾರದೇ ಮಧ್ಯಸ್ಥಿಕೆಯನ್ನು ಬಯಸುವುದಿಲ್ಲ ಎಂಬುದನ್ನು ಸ್ಪಷ್ಟ ಮಾತುಗಳಲ್ಲಿ ಮೋದಿಯವರು ನುಡಿದಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ಕದನವಿರಾಮ ಏರ್ಪಡುವಲ್ಲಿ ತನ್ನ ಪಾತ್ರವಿತ್ತು ಎಂಬುದಾಗಿ ಟ್ರಂಪ್ ಬಾರಿ ಬಾರಿ ನುಡಿಯುತ್ತಿರುವುದರ ಹಿಂದಿನ ಪೊಳ್ಳುತನವನ್ನು ಮೋದಿ ಬಯಲಿಗೆಳೆದಿದ್ದಾರೆ. ಆ ಮೂಲಕ ದೇಶವಾಸಿಗಳಲ್ಲಿ ಮೂಡಿದ್ದ ಅನುಮಾನವನ್ನು ನಿವಾರಿಸಿದ್ದಾರೆ. ದೇಶಹಿತದ ವಿಷಯ ಬಂದಾಗ ಅಮೆರಿಕದ ಒತ್ತಡಕ್ಕೆ ಭಾರತವು ಮಣಿಯುವುದಿಲ್ಲವೆಂಬ ಸ್ಪಷ್ಟ ಸಂದೇಶವನ್ನು ಸಾರಿದ್ದಾರೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೯-೦೬-೨೦೨೫

ಚಿತ್ರ ಕೃಪೆ: ಇಂಟರ್ನೆಟ್ ತಾಣ