ಮಹಾತ್ಮಾ ಗಾಂಧಿ ಅಂತರ್ಜಾಲವನ್ನು ಹೇಗೆ ಬಳಸುತ್ತಿದ್ದರು?

ಮಹಾತ್ಮಾ ಗಾಂಧಿ ಅಂತರ್ಜಾಲವನ್ನು ಹೇಗೆ ಬಳಸುತ್ತಿದ್ದರು?

ಬರಹ

(ಸೂಚನೆ:ಗಾಂಧೀಜಿಯವರ ಬಗೆಗಿನ ಊಹಾತ್ಮಕ ಬರಹವಿದು. ಇದಕ್ಕೆ ತಪ್ಪು ಅರ್ಥ ಕಲ್ಪಿಸದಿರಿ)
gandhi

ಮಹಾತ್ಮಾ ಗಾಂಧಿಯವರಿಗೆ ಅಂತರ್ಜಾಲ ಲಭ್ಯವಿದ್ದರೆ ಅವರದನ್ನು ಹೇಗೆ ಬಳಸುತ್ತಿದ್ದ್ರು? ಈ ವಿಚಾರ ನನಗೆ ಹೊಳೆದಾಗ,ಗಾಂಧಿಯವರು ತಂತ್ರಜ್ಞಾನದ ಬಳಕೆಯನ್ನು ಯಾವ ರೀತಿ ಮಾಡುತ್ತಿದ್ದರು ಎನ್ನುವ ಪ್ರಶ್ನೆ ನನ್ನ ಮನಸ್ಸಿನಲ್ಲಿ ಬಂತು. ಅವರು ಮೈಕ್ ಬಳಸಿ ಭಾಷಣ ಮಾಡುತ್ತಿದ್ದರೆನ್ನುವುದನ್ನು ಚಿತ್ರಗಳು ಹೇಳುತ್ತವೆ. ಬಹುಶ: ರೇಡಿಯೋವನ್ನೂ ಅವರು ಕೇಳುತ್ತಿದ್ದರು. ಮೀರಾ ಭಜನ್‌ಗಳನ್ನು ಅವರು ಮೆಚ್ಚುತ್ತಿದ್ದರಂತೆ. ಅವನ್ನು ಭಜನೆಯಲ್ಲಿ ಪಾಲ್ಗೊಳ್ಳುವ ಮೂಲಕ ಸವಿಯುತ್ತಿದ್ದರೇ. ಅಲ್ಲ ರೇಡಿಯೋದಲ್ಲಿ ಅಥವ ಗ್ರಾಮಾಫೋನ್ ರೆಕಾರ್ಡಿನಲ್ಲಿ ಆಲಿಸುತ್ತಿದ್ದರೇ? ಈ ಸಂಗತಿಯ ಕಡೆಗೆ ನಾನೆಂದೂ ತಲೆ ಗಾಂಧಿಕೆಡಿಸಿಕೊಂಡಿರಲಿಲ್ಲ.ಪತ್ರಿಕೆಗಳನ್ನು ಓದುವುದು,ಅವುಗಳಲ್ಲಿ ಲೇಖನಗಳನ್ನು ಬರೆಯುವುದು, ಅಷ್ಟೇಕೆ ಪತ್ರಿಕೆಗಳನ್ನು ನಡೆಸಿದ ಗಾಂಧಿ ತಂತ್ರಜ್ಞಾನದ ಮಿತ ಬಳಕೆಯನ್ನು ಮಾಡುತ್ತಿದ್ದರು ಎಂದು ಕಲ್ಪಿಸುವುದರಲ್ಲಿ ತಪ್ಪಿಲ್ಲ. ಇನ್ನು ಸಂಚಾರಕ್ಕೆ ಅವರು ರೈಲಿನಲ್ಲಿ ಓಡಾಡುತ್ತಿದ್ದರು. ತಂತ್ರಜ್ಞಾನದ ಪೂರ್ಣ ವಿರೋಧಿ ಅವರಾಗಿದ್ದರೆ, ನಡಿಗೆಯನ್ನೋ, ಎತ್ತಿನ ಗಾಡಿಯನ್ನೋ ಪ್ರಯಾಣಕ್ಕೆ ಬಳಸ ಬೇಕಿತ್ತು!

ಅಹಿಂಸೆಯೇ ತನ್ನ ತಂತ್ರಜ್ಞಾನ ಎಂಬರ್ಥದ ಹೇಳಿಕೆಗಳನ್ನು ಅವರು ನೀಡಿದ್ದರು ಎನ್ನುವುದನ್ನು ಎಲ್ಲಿಯೋ ಓದಿದ ನೆನಪು. ಆದರೂ ಅಂತರ್ಜಾಲದಂತಹ ಮಾಧ್ಯಮವನ್ನು ಗಾಂಧೀಜಿಯವರು ಖಂಡಿತಕ್ಕೂ ತಿರಸ್ಕರಿಸುತ್ತಿರಲಿಲ್ಲವೆನ್ನಿಸುತ್ತದೆ. ಜನರ ಜತೆಗೆ ಸಂಪರ್ಕ ಬೆಳೆಸಲು ಅಂತರ್ಜಾಲ ಒದಗಿಸುವ ಅವಕಾಶವನ್ನು ಮಹಾತ್ಮಾ ಗಾಂಧಿಯವರು ತಮ್ಮ ಕಾರ್ಯಸಾಧನೆಗೆ ಬಳಸುತ್ತಿದ್ದರು ಎನ್ನುವುದರಲ್ಲಿ ಸಂಶಯವಿಲ್ಲ. ಬಹುಶ: ಅವರು ವಿಡಿಯೋ ಕಾನ್ಫರೆನ್ಸ್ ಅಂತಹ ಅವಕಾಶವನ್ನು ಬಳಸಿಕೊಂಡು ಜನರನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದರು. ಸತ್ಯಾಗ್ರಹ ಮಾಡುತ್ತಾ, ತಮ್ಮ ಗುರಿ ಸಾಧನೆಗಾಗಿ ಚಳುವಳಿ ನಡೆಸಲು ಜನರನ್ನು ಹುರಿದುಂಬಿಸಲು ಅಂತರ್ಜಾಲ ನೀಡುತ್ತಿದ್ದ ಅವಕಾಶವನ್ನು ಗಾಂಧೀಜಿ ಬಳಸದೆ ಬಿಡುತ್ತಿರಲಿಲ್ಲ. 

ಪತ್ರಿಕೆಗಳಿಗೆ ಬರಹಗಳನ್ನು ಬಳಸಲು ಮಿಂಚಂಚೆಯಂತಹ ವಿಧಾನವನ್ನು ಬಳಸಲು ಗಾಂಧೀಜಿಯವರಿಗೆ ಅಡ್ಡಿಯಾಗಬಹುದಾದ ಕಾರಣವೇನೂ ಇರಲಿಲ್ಲ. ಪತ್ರಿಕೆಗಳನ್ನು ಓದುವ ಅಭ್ಯಾಸ ಇದ್ದ ಗಾಂಧೀಜಿಯವರು ಅಂತರ್ಜಾಲದಲ್ಲಿ ಲಭ್ಯವಿರುವ ಇ-ಪತ್ರಿಕೆಗಳನ್ನು ಓದದೆ ಬಿಡುತ್ತಿದ್ದರೇ?ಬಹುಶ: ಚರಕದ ಜತೆ ಗಾಂಧೀಜಿಯವರು ಲ್ಯಾಪ್‌ಟಾಪನ್ನೂ ಇರಿಸಿಕೊಳ್ಳುತ್ತಿದ್ದರೇನೋ!ಬಂದವರ ಜತೆ ಮಾತನಾಡುತ್ತಾ,ಚರಕದಿಂದ ನೂಲುತ್ತಿದ್ದ ಗಾಂಧೀಜಿಯವರು ,ಲ್ಯಾಪ್‌ಟಾಪನ್ನೂ ಬಳಸಿ, ಮಿಂಚಂಚೆಗಳಿಗೆ ಉತ್ತರಿಸಲು ಇಂತಹ ಸಮಯವನ್ನೇ ಬಳಸಿಕೊಂಡು ಸಮಯದ ಉಳಿತಾಯ ಮಾಡುತ್ತಿದ್ದರೇನೋ. ತಮ್ಮ ಪ್ರಿಯ ಭಜನೆಗಳನ್ನು ಕೇಳಲು,ಲ್ಯಾಪ್‌ಟಾಪಿನ ಪ್ಲೇಯರನ್ನು ಬಳಸದಿರುತ್ತಿದ್ದರೇ ಮಹಾತ್ಮಾ ಗಾಂಧಿಯವರು?

ಇನ್ನು ಭಾಷಣಗಳನ್ನು ಮಾಡುವಾಗ ಪವರ್ ಪಾಯಿಂಟ್ ಸ್ಲೈಡುಗಳನ್ನು ಬಳಸಿ,ಜನರ ಮನಸ್ಸಿಗೆ ನಾಟುವಂತಹ ಭಾಷಣ ಮಾಡುವುದೂ ಸಾಧ್ಯವಿತ್ತೇನೋ?ಆದರೆ ಒಂದು ವಿಷಯದಲ್ಲಿ ಅನುಮಾನವಿಲ್ಲ- ಅದೆಂದರೆ ಗಾಂಧೀಜಿಯವರು ಇವನ್ನೆಲ್ಲಾ ಬಳಸುವಾಗ ಎಷ್ಟು ಅವಶ್ಯವೋ ಅಷ್ಟೇ ಬಳಕೆ ಮಾಡುತ್ತಿದ್ದರೇ ವಿನ: ದುರ್ಬಳಕೆಯನ್ನಂತೂ ಖಂಡಿತ ಮಾಡುತ್ತಿರಲಿಲ್ಲ.ಬರವಣಿಗೆಗೂ ಲ್ಯಾಪ್‌ಟಾಪ್ ಅವರಿಗೆ ಉಪಯುಕ್ತವಾಗುತ್ತಿತ್ತು.ಜೈಲಿನಲ್ಲಿ ಇದ್ದಾಗ ಲ್ಯಾಪ್‌ಟಾಪ್ ಲಭ್ಯವಿದ್ದರೆ,ಅವರು ಎಷ್ಟು ಇಷ್ಟ ಪಡುತ್ತಿದ್ದರೋ!

ಬಹುಶ: ಮುಕ್ತ ತಂತ್ರಾಂಶವನ್ನೇ ಬಳಸಲು ಅವರು ಇಷ್ಟ ಪಡುತ್ತಿದ್ದರು. ಲಿನಕ್ಸ್ ಅವರ ಮೆಚ್ಚಿನ ತಂತ್ರಾಂಶ ಆಗಿರುತಿತ್ತು ಎನ್ನುವುದರಲ್ಲಿ ನನಗಂತೂ ಸಂಶಯವಿಲ್ಲ.ತಮ್ಮ ದಿನಚರಿಯನ್ನು ಬ್ಲಾಗಿಸುತ್ತಿದ್ದರು. ಚರಕವನ್ನು ತಿರುಗಿಸಿ, ಅದರಿಂದ ಲ್ಯಾಪ್‍ಟಾಪಿನ ಬ್ಯಾಟರಿಯನ್ನು ಚಾರ್ಜ್ ಮಾಡುವುದಕ್ಕೆ ಮುಂದಾಗುತ್ತಿದ್ದರೋ  ಅಲ್ಲ ಸೌರವಿದ್ಯುತ್ ಬಳಸುತ್ತಿದ್ದರೋ ಹೇಳುವುದು ಕಷ್ಟ.

(ಈ ಬರಹ ಬರೆಯುವ ಮೊದಲು ಅಂತರ್ಜಾಲ ಮತ್ತು ಗಾಂಧೀಜಿ ಎಂದು ಗೂಗಲಿಸಿದೆ.ಆಗ ಒಂದು ಬರಹ ಸಿಕ್ಕಿತು.ಮೊಬೈಲ್ ಬಳಕೆ ಮತ್ತು ಗಾಂಧೀಜಿ ಬಗ್ಗೆ ಮುಂದೆ ಬರೆಯಲಿದ್ದೇನೆ.)