ಮಹಾನ್ ಸಂಗೀತ ಮಾಂತ್ರಿಕ - ಮಧುರೈ ಪುಷ್ಪವನಮ್ ಅಯ್ಯರ್

ಮಹಾನ್ ಸಂಗೀತ ಮಾಂತ್ರಿಕ - ಮಧುರೈ ಪುಷ್ಪವನಮ್ ಅಯ್ಯರ್

ಭಾರತೀಯ ಸಂಗೀತ ಇತಿಹಾಸದಲ್ಲಿ ಸಾವಿರಾರು ಮಂದಿ ಸಂಗೀತಕಾರರು ತಮ್ಮ ಮರೆಲಾಗದ ಛಾಪನ್ನು ಮೂಡಿಸಿದ್ದಾರೆ. ಆದರೆ ತಾವು ಬದುಕಿದ್ದ ೨೮ ಚಿಲ್ಲರೆ ವರ್ಷಗಳಲ್ಲಿ ಸಂಗೀತ ಹಾಗೂ ಹಾಡುಗಾರಿಕೆಯ ದಂತಕಥೆಯೇ ಆಗಿ ಹೋಗಿದ್ದ ಕಂಚಿನ ಕಂಠದ ಮಧುರೈ ಪುಷ್ಪವನಮ್ ಅಯ್ಯರ್ ಎಂಬವರ ಬಗ್ಗೆ ತಿಳಿದಿರುವವರ ಸಂಖ್ಯೆ ಕಡಿಮೆ ಮತ್ತು ಇವರ ಬಗ್ಗೆ ನಮಗೆ ಇಂದು ದೊರಕುವ ಮಾಹಿತಿಗಳೂ ಅತ್ಯಲ್ಪ.

೧೮೮೫ರಲ್ಲಿ ಹುಟ್ಟಿದ ಪುಷ್ಪವನಮ್ ಅಯ್ಯರ್ ಅವರ ತಾಯಿ ಆಂಜನೇಯ ಸ್ವಾಮಿಯ ಭಕ್ತರಾಗಿದ್ದರು. ಇವರು ಚಿಕ್ಕವರಿರುವಾಗ ಮನೆಯ ಹತ್ತಿರವಿದ್ದ ಆಂಜನೇಯ ದೇವಸ್ಥಾನಕ್ಕೆ ಪ್ರತೀ ದಿನ ಕರೆದುಕೊಂಡು ಹೋಗಿ ಪ್ರಾರ್ಥನೆ ಮಾಡಿಕೊಂಡು ಬರುತ್ತಿದ್ದರಂತೆ. ಆಂಜನೇಯನಿಗೆ ಸಲ್ಲಿಸಿದ ಸೇವೆಗಾಗಿ ಅವರಿಗೆ ಉತ್ತಮ ಸಂಗೀತಗಾರನಾಗುವ ಯೋಗ ಲಭಿಸಿತು ಎಂದು ಹೇಳುತ್ತಾರೆ. ಪುಷ್ಪವನಮ್ ಅವರು ನೋಡಲು ಬಹಳ ಸುಂದರರಾಗಿದ್ದರು. ಇವರ ಕಂಠ ಅವರ ಬಾಹ್ಯ ರೂಪಕ್ಕಿಂತಲೂ ಸುಂದರವಾಗಿತ್ತು. ಇವರು ಎರಡು ಮತ್ತು ನಾಲ್ಕರ ಶೃತಿಯಲ್ಲಿ ಬಹಳ ಸುಂದರವಾಗಿ ಹಾಡುತ್ತಿದ್ದರು. ಇವರ ಮೋಹಕ ಸಂಗೀತ ಯಾರನ್ನೂ ಮಂತ್ರಮುಗ್ಧರನ್ನಾಗಿಸುತ್ತಿತ್ತು. ಇವರ ಸಂಗೀತ ಕಚೇರಿಗಳಿಗೆ ಬಹಳ ಬೇಡಿಕೆ ಇತ್ತು.

ಪುಷ್ಪವನಮ್ ಅವರ ಸಮಯದಲ್ಲೇ ಬಹುಷಃ ಸಂಗೀತ ಕಲಾವಿದರಿಗೆ ಒಂದು ಘನತೆ ದೊರೆಯಿತು. ಅಲ್ಲಿಯವರೆಗೆ ಸಂಗೀತ ಕಚೇರಿಯ ಸಂಘಟಕರು ನೀಡುತ್ತಿದ್ದ ಅಲ್ಪ ಸಂಭಾವನೆಯನ್ನೇ ಮಹಾ ಪ್ರಸಾದ ಎಂಬಂತೆ ಪಡೆದುಕೊಳ್ಳುತ್ತಿದ್ದ ಬಡಪಾಯಿ ಸಂಗೀತಗಾರರಿಗೆ ಸ್ವಲ್ಪ ಮಟ್ಟಿನ ಉತ್ತಮ ಸಂಭಾವನೆ ಲಭಿಸಲು ಪ್ರಾರಂಭವಾಯಿತು. ಇದರ ಹಿಂದೆ ಒಂದು ಪುಟ್ಟ ಕಥೆಯಿದೆ. ಒಮ್ಮೆ ಪುಷ್ಪವನಮ್ ಅಯ್ಯರ್ ಅವರ ಸಂಗೀತ ಕಚೇರಿ ಏರ್ಪಾಡಾಗಿತ್ತು. ಇವರ ಜೊತೆ ಹಾಡಲು ಬಂದಿದ್ದ ಸಹ ಕಲಾವಿದರೆಲ್ಲಾ ಮುಂಚಿತವಾಗಿಯೇ ಆಗಮಿಸಿದ್ದರೂ ಪುಷ್ಪವನಮ್ ಅವರು ಬಂದಿರಲಿಲ್ಲ. ಕಾರಣವೇನೆಂದು ಸಂಘಟಕರು ತಲೆ ಕೆಡಿಸಿಕೊಂಡಾಗ ತಿಳಿದು ಬಂದ ಸಂಗತಿ ಎಂದರೆ ಕಾರ್ಯಕ್ರಮ ನಿಗದಿ ಮಾಡುವಾಗ ಪುಷ್ಪವನಮ್ ಅವರ ಸಂಭಾವನೆಯನ್ನು ಕೇಳಿರಲಿಲ್ಲ. ತಮ್ಮ ತಪ್ಪನ್ನು ತಿಳಿದುಕೊಂಡ ಸಂಘಟಕರು ಕೂಡಲೇ ಪುಷ್ಪವನಮ್ ಅವರಿಗೆ ಸಂಭಾವನೆ ಬಗ್ಗೆ ಟೆಲಿಗ್ರಾಂ ಕಳುಹಿಸಿದರು. ತಕ್ಷಣ ಬಂದ ಪುಷ್ಪವನಮ್ ಅದ್ಭುತವಾದ ಸಂಗೀತ ಗಾನಸುಧೆಯನ್ನು ಸುರಿಸಿ ಕೇಳುಗರನ್ನು ಗಾನಕಡಲಿನಲ್ಲಿ ತೇಲಾಡಿಸಿದರು. ಇದರಿಂದ ಇನ್ನಷ್ಟು ಸಂತುಷ್ಟರಾದ ಸಂಘಟಕರು ತಾವು ಹೇಳಿದುದಕ್ಕಿಂತ ಹೆಚ್ಚಿನ ಸಂಭಾವನೆ ನೀಡಿ ಗೌರವಿಸಿದರು. 

ಪುಷ್ಪವನಮ್ ಅವರಿಗೆ ತಿಳಿದಿದ್ದ ಕೃತಿಗಳು ಸುಮಾರು ೨೦ ಮಾತ್ರ. ಆದರೆ ಅವರು ತಮಗೆ ಗೊತ್ತಿದ್ದ ಕೃತಿಗಳನ್ನು ಪ್ರಸ್ತುತ ಪಡಿಸುತ್ತಿದ್ದ ರೀತಿ ಮಾತ್ರ ಅದ್ಭುತವಾಗಿತ್ತು. ಈ ಕಾರಣದಿಂದಲೇ ಇವರಿಗೆ ಅಪಾರ ಬೇಡಿಕೆ ಇತ್ತು. ಇವರ ಸಹವರ್ತಿಗಳಿಗೆ ೬೦ ಕ್ಕೂ ಅಧಿಕ ಕೃತಿಗಳ ಪರಿಚಯವಿದ್ದರೂ ಪುಷ್ಪವನಮ್ ಅವರ ಕಂಠಸಿರಿ ಅವನ್ನೆಲ್ಲಾ ಮಂಕಾಗಿಸಿತ್ತು. 

ಒಮ್ಮೆ ಏನಾಯಿತೆಂದರೆ ಪುಷ್ಪವನಮ್ ಅವರ ಸಮಕಾಲೀನರಾಗಿದ್ದ ಅದ್ಭುತ ಸಂಗೀತಗಾರ ಕೊಣೆರಿರಾಜಪುರಮ್ ವೈದ್ಯನಾಥ ಅಯ್ಯರ್ ಅವರು ಸಂಗೀತ ಕಚೇರಿಯಲ್ಲಿ ಪಾಲ್ಗೊಳ್ಳಬೇಕಾಗಿತ್ತು. ವೈದ್ಯನಾಥ ಅಯ್ಯರ್ ಅವರ ಕಾರ್ಯಕ್ರಮಕ್ಕಿಂತ ಮೊದಲು ಪುಷ್ಪವನಮ್ ಅವರು ಹಾಡುಗಳನ್ನು ಹಾಡಿ ಮುಗಿಸಿದ್ದರು. ಇವರ ಸಂಗೀತ ಕಚೇರಿಯ ಬಳಿಕ ವೈದ್ಯನಾಥ ಅಯ್ಯರ್ ಅವರು ತಮ್ಮ ಗಾಯನವನ್ನು ಹಾಡಲು ನಿರಾಕರಿಸಿದರು. ಕಾರ್ಯಕ್ರಮವನ್ನೇ ರದ್ದು ಮಾಡಿದರು, ಇದಕ್ಕೆ ಅವರು ಕೊಟ್ಟ ಕಾರಣವೇನು ಗೊತ್ತೇ? “ಪುಷ್ಪವನಮ್ ಅವರು ಸಂಗೀತದ ರಸಧಾರೆಯನ್ನು ಸುರಿಸಿದ ಬಳಿಕ ನಾನು ಹಾಡುವುದು ವ್ಯರ್ಥ, ನಾನು ಇನ್ನು ಹಾಡುವುದರಿಂದ ಕೇಳುಗರಿಗೆ ಏನೂ ಸಮಾಧಾನ ಸಿಗಲಾರದು. ಅವರೊಬ್ಬ ಅದ್ಭುತ ಕಲಾವಿದರು" ಎಂದಿದ್ದರು.

ಪುಷ್ಪವನಮ್ ಅವರ ಕಚೇರಿಯ ದಿನಾಂಕ ಸಿಗದ ಕಾರಣ ಹಲವಾರು ಮದುವೆಗಳು ಮುಂದೂಡಿಕೆಯಾಗುತ್ತಿದ್ದವು. ಅಂದಿನ ಸಮಯದಲ್ಲಿ ಮದುವೆಗಳಲ್ಲಿ ಪುಷ್ಪವನಮ್ ಅವರ ಗಾಯನ ಇರಲೇ ಬೇಕಿತ್ತು. ಆದರೆ ತಮ್ಮ ಹಾಡುಗಳ ರೆಕಾರ್ಡಿಂಗ್ ಮಾಡಿಸಿಕೊಳ್ಳಲು ಪುಷ್ಪವನಮ್ ಅವರು ನಿರಾಕರಿಸುತ್ತಿದ್ದರು, ಏಕೆಂದರೆ ರೆಕಾರ್ಡ್ ಮಾಡಿದ ಹಾಡುಗಳು ಕ್ಷೌರದ ಅಂಗಡಿ, ಚಹಾ ಅಂಗಡಿಗಳಲ್ಲಿ ಹಾಕಿ ಕೇಳಿಸುವುದು ಅವರಿಗೆ ಸುತಾರಾಂ ಇಷ್ಟವಿರಲಿಲ್ಲ. ತಮ್ಮ ಸಂಗೀತ ಕಚೇರಿ ಮುಗಿದ ಕೆಲವೇ ಕ್ಷಣಗಳಲ್ಲಿ ಪುಷ್ಪವನಮ್ ಅವರು ‘ಕಾಣದಂತೆ ಮಾಯ’ವಾಗಿ ಬಿಡುತ್ತಿದ್ದರು. ಕಚೇರಿಯ ಬಳಿಕ ಇವರನ್ನು ಭೇಟಿಯಾಗಲು ಬಯಸಿದ್ದವರಿಗೆ ಇದರಿಂದ ತೀವ್ರ ನಿರಾಸೆಯಾಗುತ್ತಿತ್ತು, ಆದರೆ ಪುಷ್ಪವನಮ್ ಅವರು ಇದ್ದದ್ದೇ ಹಾಗೆ. 

ಇವರ ಸಮಕಾಲೀನರಾಗಿದ್ದ ಕಾರಣ ವೈದ್ಯನಾಥ್ ಅಯ್ಯರ್ ಅವರ ಜೊತೆ ಹಾಡುಗಾರಿಕೆಗೆ ಪೈಪೋಟಿ ಇತ್ತು. ಆದರೆ ಇವರಿಬ್ಬರೂ ಹಾಡುಗಾರಿಕೆಯಲ್ಲಿ ಮಾತ್ರ ಪೈಪೋಟಿ ತೋರಿಸುತ್ತಿದ್ದರು. ವೈಯಕ್ತಿಕವಾಗಿ ಪುಷ್ಪವನಮ್ ಹಾಗೂ ವೈದ್ಯನಾಥ್ ಇಬ್ಬರಲ್ಲೂ ಉತ್ತಮ ಸ್ನೇಹ ಮತ್ತು ಗೌರವ ಇತ್ತು. ಆದರೆ ಇವರ ಅಭಿಮಾನಿಗಳು ಮಾತ್ರ ಗಲಾಟೆ ಮಾಡಿಕೊಳ್ಳುತ್ತಿದ್ದರು. ಈ ಪೈಪೋಟಿಗಳ ಕಾರಣದಿಂದ ಅದ್ಭುತವಾದ ಸಂಗೀತಲೋಕವೊಂದು ಇಬ್ಬರ ಅಭಿಮಾನಿ ಸಂಘಗಳ ನಡುವೆ ಹಂಚಿಹೋಗಿತ್ತು. 

ಖ್ಯಾತ ಸಂಗೀತಗಾರರಾದ ಮಧುರೈ ಮಣಿ ಅಯ್ಯರ್ ಅವರು ಪುಷ್ಪವನಮ್ ಅವರ ಸೋದರಳಿಯರಾಗಿದ್ದರು. ಪುಷ್ಪವನಮ್ ಅವರ ಖ್ಯಾತಿಯ ಕಾರಣದಿಂದ ಅವರ ನಿಧನದ ಬಳಿಕವೂ ಅವರ ಸೋದರಳಿಯ ಎಂಬ ಕಾರಣದಿಂದ ಸಂಘಟಕರು ಮಣಿ ಅಯ್ಯರ್ ಅವರಿಗೆ ಕಚೇರಿ ನಡೆಸಲು ಅನುಕೂಲ ಮಾಡಿಕೊಡುತ್ತಿದ್ದರಂತೆ. ಮಧುರೈ ಮಣಿ ಅಯ್ಯರ್ ಅವರು ತಮ್ಮ ಜೀವನದಲ್ಲಿ ನಡೆದ ಎರಡು ಘಟನೆಗಳನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. 

ಒಂದು, ಅವರು ಸಣ್ಣವರಿರುವಾಗ ಬಿಲ್ಲು ಬಾಣ ಆಟ ಆಡುವಾಗ ಬಾಣವೊಂದು ಅವರ ಕಣ್ಣನ್ನು ಕುಕ್ಕಿ ನಾಶ ಮಾಡಿದ್ದು, ಮತ್ತೊಂದು ಪುಷ್ಪವನಮ್ ಅವರ ಮರಣ. ಕೇವಲ ೨೮ನೇ ಅಲ್ಪ ವಯಸ್ಸಿಗೆ ನಿಧನ ಹೊಂದಿದ ಮೇರು ಕಲಾವಿದನ ಸಾವನ್ನು ಮಣಿ ಅಯ್ಯರ್ ತಮ್ಮ ಜೀವನ ಪರ್ಯಂತ ಮರೆಯಲಿಲ್ಲ. ಪುಷ್ಪವನಮ್ ಅವರು ತಮ್ಮ ಕೊನೆಯ ದಿನಗಳನ್ನು  ತಾಂಜಾವೂರಿನ ಖ್ಯಾತ ವಕೀಲರೊಬ್ಬರ ಮನೆಯಲ್ಲಿ ಕಳೆದರು. ಇವರೇ ಪುಷ್ಪವನಮ್ ಅವರ ಆರೋಗ್ಯ ಹದಗೆಟ್ಟಾಗ ವೈದ್ಯಕೀಯ ನೆರವು ಒದಗಿಸುತ್ತಿದ್ದರು. ಆದರೆ ೧೯೧೭ರಲ್ಲಿ ಅವರು ನಿಧನ ಹೊಂದಿ ಅಪಾರ ಸಂಗೀತ ಪ್ರಿಯರನ್ನು ದುಃಖದ ಕಡಲಲ್ಲಿ ಮುಳುಗಿಸಿಬಿಟ್ಟರು. ಅವರು ನಿಧನ ಹೊಂದಿದಾಗ ಅವರ ಮಗಳಾದ ರಾಜಮ್ ಪುಷ್ಪವನಮ್ ಗೆ ಕೇವಲ ಎರಡು ವರ್ಷ. ಮಣಿ ಅಯ್ಯರ್ ಅವರಿಗೆ ಐದು ವರ್ಷ.

ರಾಜಮ್ ತನ್ನ ತಂದೆಯಂತೆಯೇ ರೂಪವತಿಯಾಗಿದ್ದು, ಅವರಂತೆಯೇ ಅದ್ಭುತವಾದ ಕಂಠವನ್ನು ಹೊಂದಿದ್ದಳು. ಸಂಗೀತಾಭ್ಯಾಸವನ್ನು ಕೈಗೊಂಡು ಅದ್ಭುತವಾದ ಸಂಗೀತಗಾರ್ತಿಯಾಗಿ ರೂಪುಗೊಂಡ ರಾಜಮ್ ತಮ್ಮ ಹಾಡುಗಳನ್ನು ರೆಕಾರ್ಡಿಂಗ್ ಮಾಡಿಸಿಕೊಂಡು ಬಹುಬೇಗನೇ ಜನಪ್ರಿಯಳಾದಳು. ಈ ವಿಷಯದಲ್ಲಿ ರಾಜಮ್ ತನ್ನ ತಂದೆಯವರ ಅಭಿಪ್ರಾಯಗಳಿಗೆ ವಿರುದ್ಧವಾಗಿ ನಡೆದುಕೊಂಡರು. ಜನಪ್ರಿಯತೆಯ ಜತೆಗೆ ಶ್ರೀಮಂತಿಕೆಯೂ ಬಂತು. ೧೯೩೦ರ ಸಮಯದಲ್ಲಿ ಫೋರ್ಡ್ ಮುಂತಾದ ಐಷಾರಾಮಿ ಕಾರುಗಳನ್ನು ಚಲಾಯಿಸುತ್ತಿದ್ದ ಬೆರಳೆಣಿಕೆಯಷ್ಟು ಮಹಿಳೆಯರಲ್ಲಿ ರಾಜಮ್ ಸಹಾ ಒಬ್ಬರಾಗಿದ್ದರು. ಆದರೆ ಮದುವೆಯ ಬಳಿಕ ರಾಜಮ್ ತಮ್ಮ ಸಾಂಸಾರಿಕ ಜೀವನದಲ್ಲಿ ವ್ಯಸ್ಥರಾಗಿ ಹಾಡುವುದನ್ನೇ ಮರೆತು ಬಿಟ್ಟರು. ಹೀಗೆ ವಿಭಿನ್ನ ಕಾರಣಗಳಿಂದ ಅಪ್ಪ ಮಗಳ ಸಂಗೀತ ಅಲ್ಪಾಯುವಾಗಿ ಹೋಯಿತು.

ಮಧುರೈ ಪುಷ್ಪವನಮ್ ಅಯ್ಯರ್ ಅವರ ಬಗ್ಗೆ ಖ್ಯಾತ ಲೇಖಕಿ ಇಂದಿರಾ ಮೆನನ್ ಅವರು ತಮ್ಮ ಕೃತಿ ‘ಗ್ರೇಟ್ ಮಾಸ್ಟರ್ಸ್ ಆಫ್ ಕರ್ನಾಟಿಕ್ ಮ್ಯೂಜಿಕ್' ನಲ್ಲಿ ಹೀಗೆ ಬರೆಯುತ್ತಾರೆ “ ೨೦ನೇ ಶತಮಾನದ ಪ್ರಾರಂಭಿಕ ವರ್ಷಗಳಲ್ಲಿ ಸಂಗೀತದ ಆಕಾಶದಲ್ಲಿ ಒಂದು ದೊಡ್ದ ಉಲ್ಕಾಪಾತವಾಗಿ ಕೆಲವೇ ಸಮಯದಲ್ಲಿ ಉರಿದು ಭಸ್ಮವಾಯಿತು. ಅವರೇ ಮಧುರೈ ಪುಷ್ಪವನಮ್ ಅಯ್ಯರ್."

(ವಿವಿಧ ಮೂಲಗಳಿಂದ ಆಧಾರ ಮಾಹಿತಿ)

ಚಿತ್ರ ಕೃಪೆ: ಅಂತರ್ಜಾಲ ತಾಣ