ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೨)- ವಿಕರ್ಣ ಹಾಗೂ ಯುಯುತ್ಸು
ಮಹಾಭಾರತ ಮಹಾ ಗ್ರಂಥದಲ್ಲಿ ಕಳೆದುಹೋದ ದುರ್ಯೋಧನನ ಪತ್ನಿ ‘ಭಾನುಮತಿ' ಎಂಬ ಪಾತ್ರದ ಬಗ್ಗೆ ಹಿಂದಿನ ಲೇಖನದಲ್ಲಿ ಬರೆದಿದ್ದೆನಲ್ಲಾ. ಅದೇ ರೀತಿಯ ಇನ್ನೆರಡು ಪಾತ್ರಗಳ ಬಗ್ಗೆ ನಾನಿಂದು ಬರೆಯಲಿರುವೆ. ನಿಮಗೆ ಕೌರವರು ನೂರು ಮಂದಿ ಎಂದು ಗೊತ್ತು. ಅವರ ಹೆಸರುಗಳು ಗೊತ್ತಾ? ಎಲ್ಲರಿಗೂ ಹೆಸರುಗಳು ಇವೆ. ನಮಗೆ ಗೊತ್ತಿರುವ ಹೆಸರು ದುರ್ಯೋಧನ ಹಾಗೂ ದುಶ್ಯಾಸನ ಮಾತ್ರ. ನೂರು ಮಂದಿ ಕೌರವರಲ್ಲಿ ಓರ್ವನನ್ನು ಬಿಟ್ಟು ಎಲ್ಲರೂ ಅಧರ್ಮಿಗಳಾಗಿದ್ದರು ಎಂದು ಮಹಾಭಾರತ ಕಥೆ ಹೇಳುತ್ತದೆ. ಆ ಓರ್ವನೇ ವಿಕರ್ಣ. ಕುಂತಿಗೆ ಮೊದಲ ಮಗುವಾದಾಗ ಧೃತರಾಷ್ಟ್ರನ ಪತ್ನಿ ಗಾಂಧಾರಿ ಗರ್ಭವತಿಯಾಗಿದ್ದಳು. ಕುಂತಿಗೆ ಮಗು ಜನಿಸಿತು ಎಂದಾಗ ಗಾಂಧಾರಿ ತನಗೆ ಕುಂತಿಗಿಂತ ಮೊದಲು ಮಗುವಾಗಬಾರದಿತ್ತಾ ಎಂದು ಪರಿತಪಿಸಿದಳು. ಆ ಅಸೂಯೆಯಿಂದ ಹೊಟ್ಟೆಯನ್ನು ಹಿಚುಕಿದರ ಪರಿಣಾಮ ಹೊಟ್ಟೆಯಿಂದ ಮಾಂಸದ ಮುದ್ದೆಯೊಂದು ಹೊರ ಬಂತು. ಇದಕ್ಕೆ ವೇದವ್ಯಾಸರು ಜೀವ ನೀಡುತ್ತಾರೆ. ಅದನ್ನು ನೂರು ಗಂಡು ತುಂಡುಗಳನ್ನಾಗಿ ಮಾಡಿದಾಗ ಗಾಂಧಾರಿಗೆ ಹೆಣ್ಣು ಮಗುವೊಂದರ ಆಶೆಯಾಗುತ್ತದೆ. ಹಾಗೆ ನೂರು ಮಂದಿ ಗಂಡು ಮಕ್ಕಳೂ, ದುಶ್ಯಲಾ ಎಂಬ ಹೆಣ್ಣು ಮಗುವೂ ಜೀವ ಪಡೆದುಕೊಳ್ಳುತ್ತಾರೆ.
ವಿಕರ್ಣ: ಬಾಲ್ಯದಿಂದಲೂ ದುರ್ಯೋಧನ ಪಾಂಡವರ ಮೇಲೆ ದ್ವೇಷವನ್ನು ಕಾರುತ್ತಲೇ ಇರುತ್ತಾನೆ. ತನ್ನ ಎಲ್ಲಾ ತಮ್ಮಂದಿರೂ ಇದಕ್ಕೆ ಬದ್ಧರಾಗಬೇಕೆಂದೂ ಬಯಸುತ್ತಾನೆ. ಮತ್ತೆ ಎಲ್ಲಾ ೯೯ ಮಂದಿ ಸಹೋದರರಿಗೆ ಪಾಂಡವರ ಮೇಲೆ ದ್ವೇಷ ಬರುವಂತೆ ಮಾಡುತ್ತಾನೆ. ಆದರೆ ಅವರಲ್ಲಿ ಒಬ್ಬನಾದ ವಿಕರ್ಣ ಮಾತ್ರ ಧರ್ಮದ ಪರವಾಗಿದ್ದ. ಪಗಡೆಯಾಟದಲ್ಲಿ ಧರ್ಮರಾಯ ಸೋತಾಗ ದ್ರೌಪದಿಯ ಸೀರೆಯನ್ನು ಎಳೆದು ವಿವಸ್ತ್ರರನ್ನಾಗಿಸಬೇಕೆಂದು ದುಶ್ಯಾಸನನಿಗೆ ದುರ್ಯೋಧನ ಅಪ್ಪಣೆ ನೀಡಿದಾಗ ಅದನ್ನು ವಿರೋಧಿಸಿದ್ದು ಕೌರವರಲ್ಲಿ ಈ ವಿಕರ್ಣ ಮಾತ್ರ. ಓರ್ವ ಸ್ತ್ರೀಗೆ ಅಂತಹ ಶಿಕ್ಷೆ ನೀಡುವುದು ಧರ್ಮ ಸಮ್ಮತವಲ್ಲ ಎಂದು ದುರ್ಯೋಧನನಿಗೆ ತಿಳಿಹೇಳುತ್ತಾನೆ. ಆದರೆ ಅಧರ್ಮದ ಅಮಲು ಏರಿದ್ದ ದುರ್ಯೋಧನನಿಗೆ ವಿಕರ್ಣನ ಮಾತು ಸಹ್ಯವಾಗುವುದಿಲ್ಲ.
ಕುರುಕ್ಷೇತ್ರ ಯುದ್ಧವಾದಾಗ ವಿಕರ್ಣ ತನ್ನ ಅಣ್ಣನ ಪರವಾಗಿಯೇ ಯುದ್ಧಕ್ಕೆ ನಿಲ್ಲುತ್ತಾನೆ. ಸುಮಾರು ೧೪ ದಿನಗಳ ಕಾಲ ಪಾಂಡವರ ವಿರುದ್ಧ ವೀರೋಚಿತವಾಗಿ ಯುದ್ಧ ಮಾಡುತ್ತಾನೆ. ಅವನ ಯುಧ್ಧ ಸಾಮರ್ಥ್ಯವನ್ನು ಭೀಷ್ಮ, ದ್ರೋಣರು ತುಂಬಾ ಮೆಚ್ಚುತ್ತಾರೆ. ಹದಿನಾಲ್ಕನೇ ದಿನ ಭೀಮ ವಿಕರ್ಣನಿಗೆ ಎದುರಾಗುತ್ತಾನೆ. ವಿಕರ್ಣನಲ್ಲಿ ಧರ್ಮವಿದೆ ಎಂದು ತಿಳಿದಿದ್ದ ಭೀಮ ಅವನಿಗೆ ಯುದ್ಧ ಬಿಟ್ಟು ಹೋಗು, ನಿನಗೆ ಜೀವದಾನ ನೀಡುತ್ತೇನೆ ಎಂದು ತಿಳಿಸುತ್ತಾನೆ. ಆದರೆ ನಾನು ನನ್ನ ಅಣ್ಣನಾದ ದುರ್ಯೋಧನನನ್ನು ಬಿಡಲು ತಯಾರಿಲ್ಲ ಎನ್ನುತ್ತಾನೆ. ಆಗ ಭೀಮ ನೀನು ಧರ್ಮದ ಪರವಾಗಿದ್ದಿ ಅವನು ಅಧರ್ಮಿ ಆದರೂ ನೀನು ಯಾಕೆ ಅವನನ್ನು ಬೆಂಬಲಿಸುತ್ತಿ? ಎಂದಾಗ ವಿಕರ್ಣ ಹೇಳುತ್ತಾನೆ ಅವನು ನನ್ನ ಅಣ್ಣ. ಅಣ್ಣ ಎಂಥವನೇ ಆಗಲಿ ಧರ್ಮ ನನಗೆ ನನ್ನ ಅಣ್ಣನಿಗೆ ಸಹಾಯ ಮಾಡಲು ಹೇಳುತ್ತದೆ. ಆದುದರಿಂದ ನನ್ನ ಕೊನೆಯುಸಿರು ಇರುವವರೆಗೆ ನಾನು ನಿನ್ನ ಎದುರು ಕಾದಾಡುವೆ. ಯಾವಾಗ ಶ್ರೀಕೃಷ್ಣ ನಿಮ್ಮ ಪಕ್ಷದಲ್ಲಿದ್ದಾರೆಯೋ ಆಗ ನಿಮಗೆ ಜಯ ಶತಸಿದ್ಧ. ಆದರೂ ನಿನ್ನನ್ನು ಎದುರಿಸುತ್ತೇನೆ ಭೀಮ, ಎಂದು ಭೀಮನ ಮೇಲೆ ಗಧಾಪ್ರಹಾರ ಮಾಡುತ್ತಾನೆ. ವಿಕರ್ಣ ಹಾಗೂ ಭೀಮನ ನಡುವೆ ಗಧಾ ಯುದ್ಧ ನಡೆದು ಭೀಮ ವಿಕರ್ಣನನ್ನು ಕೊಲ್ಲುತ್ತಾನೆ. ವಿಕರ್ಣನ ಸಾವು ಭೀಮನಲ್ಲೂ ತುಂಬಾ ವೇದನೆ ತರುತ್ತದೆ. ಅಧರ್ಮದ ಪಕ್ಷದಲ್ಲಿ ಧರ್ಮ ಇದ್ದರೂ ಅದು ಪರಾಜಯವೇ ಕಾಣುತ್ತದೆ ಎಂದು ತಿಳಿದುಕೊಳ್ಳುತ್ತಾನೆ ಭೀಮ.
ಯುಯುತ್ಸು: ಯುಯುತ್ಸು ಯಾರು ಎಂದು ಯೋಚಿಸುವಿರಾ? ಪಾಂಡವರ ಪರವಾಗಿ ಯುದ್ಧ ಮಾಡಿದ ಏಕೈಕ ಕೌರವ ಇವನು. ಧೃತರಾಷ್ಟ್ರನ ಹಿರಿಯ ಮಗ, ದುರ್ಯೋಧನನ ಅಣ್ಣ. ಆದರೆ ಮಹಾರಾಣಿ ಗಾಂಧಾರಿಯ ಮಗನಲ್ಲ. ಯಾರಿವನು? ಗಾಂಧಾರಿ ಗರ್ಭ ಧರಿಸಿ ಹಲವು ಸಮಯವಾದರೂ ಅವಳಿಗೆ ಹೆರಿಗೆಯಾಗಿರಲಿಲ್ಲ. ಇದರಿಂದ ಮಹಾರಾಜ ಧೃತರಾಷ್ಟ್ರನ ಮನಸ್ಸು ವ್ಯಾಕುಲವಾಗಿತ್ತು. ಹೀಗೆ ಹಲವಾರು ಸಮಯ ಕಾದು ಬೇಸತ್ತ ಧೃತರಾಷ್ಟ್ರ ಗಾಂಧಾರಿಯ ದಾಸಿಯಾದ ಸುಗಧಳೊಂದಿಗೆ ಸಂಬಂಧ ಬೆಳೆಸುತ್ತಾನೆ. ಇದರಿಂದ ಸುಗಧಳಿಗೆ ಓರ್ವ ಪುತ್ರನ ಜನನವಾಗುತ್ತದೆ. ಆ ಮಗುವೇ ಯುಯುತ್ಸು. ಮಹಾರಾಜ ಧೃತರಾಷ್ಟ್ರನ ಮಗನಾಗಿದ್ದರೂ ದಾಸೀ ಪುತ್ರನೆಂಬ ಹಣೆಪಟ್ಟಿ ಹೊತ್ತ ಇವನು ಇಡೀ ಮಹಾಭಾರತದಲ್ಲಿ ತೀರಾ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾನೆ. ಮಹಾಭಾರತ ಬರೆದ ವೇದವ್ಯಾಸರೂ ಯುಯುತ್ಸುವನ್ನು ಮರೆತೇ ಬಿಡುತ್ತಾರೆ. ಯುಯುತ್ಸುವಿಗೆ ಹಸ್ತಿನಾಪುರದಲ್ಲಿ ಸಿಗಬೇಕಾದ ಮರ್ಯಾದೆ ಸಿಗುವುದೇ ಇಲ್ಲ. ಆದರೂ ಧಾರ್ಮಿಕ ಮನಸ್ಥಿತಿಯುಳ್ಳವನಾಗಿದ್ದ ಯುಯುತ್ಸು ಬಾಲ್ಯದಿಂದಲೂ ಪಾಂಡವರ ಕಡೆಗೆ ಒಲವುಳ್ಳವನಾಗಿದ್ದ. ಎಲ್ಲಿ ಧರ್ಮವಿರುವುದೋ ಅಲ್ಲಿ ಜಯವಿದೆ ಎಂಬುದೇ ಅವನ ನಿಲುವಾಗಿತ್ತು.
ಬಾಲ್ಯದಲ್ಲಿ ದುರ್ಯೋಧನ ಭೀಮನನ್ನು ಕೊಲ್ಲಲು ಮಾಡುತ್ತಿದ್ದ ಷಡ್ಯಂತ್ರಗಳನ್ನು ಪಾಂಡವರಿಗೆ ತಿಳಿಸುತ್ತಿದ್ದುದೇ ಯುಯುತ್ಸು. ದ್ರೌಪದಿಯ ಸೀರೆಯನ್ನು ಎಳೆಯುವಾಗ ವಿಕರ್ಣನ ಜೊತೆ ವಿರೋಧ ಮಾಡಿದ ಇನ್ನೊರ್ವ ವ್ಯಕ್ತಿಯೆಂದರೆ ಯುಯುತ್ಸು. ಮಹಾಭಾರತ ಯುದ್ಧದಲ್ಲಿ ಇವನು ಪಾಂಡವರ ಜೊತೆಗೂಡಿ ಯುದ್ಧ ಮಾಡುತ್ತಾನೆ. ಹದಿನೆಂಟು ದಿನಗಳ ಯುದ್ಧದ ನಂತರ ಉಳಿದ ಕೆಲವೇ ಕೆಲವು ಮಹಾರಥಿಗಳ ಪೈಕೆ ಯುಯುತ್ಸು ಓರ್ವ. ಮುಂದಿನ ದಿನಗಳಲ್ಲಿ ಪಾಂಡವರು ತಮ್ಮ ರಾಜ್ಯವನ್ನು ಪರೀಕ್ಷಿತನಿಗೆ ಒಪ್ಪಿಸಿ ಸ್ವರ್ಗಾರೋಹಣ ಮಾಡುವಾಗ ತಮ್ಮ ರಾಜ್ಯದ ನಿರ್ವಹಣೆಯ ಜವಾಬ್ದಾರಿಯನ್ನು ಯುಯುತ್ಸುಗೆ ಒಪ್ಪಿಸುತ್ತಾರೆ. ಹೀಗಿದೆ ಮರೆತು ಹೋದ ಪಾತ್ರಗಳಾದ ವಿಕರ್ಣ ಹಾಗೂ ಯುಯುತ್ಸುವಿನ ಕಥೆ.
ಓದುಗರಿಗೆ ಸೂಚನೆ: ಮಹಾಭಾರತವನ್ನು ಮಹಾಮುನಿ ವೇದವ್ಯಾಸನಿಂದ ಪ್ರಾರಂಭಿಸಿ ಇಂದಿನವರೆಗೆ ಹಲವಾರು ಲೇಖಕರು ತಮ್ಮ ತಮ್ಮ ದೃಷ್ಟಿಕೋನದಲ್ಲಿ ಚಿತ್ರಿಸಿರುತ್ತಾರೆ. ಆದುದರಿಂದ ನಾನು ಬರೆದ ವಿಷಯದಲ್ಲಿ ಕೆಲವೊಂದು ಬದಲಾವಣೆಗಳೂ ಇರಬಹುದು. ಓದುಗರಾದ ನೀವು ನಿಮ್ಮಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ದಯವಿಟ್ಟು ಹಂಚಿಕೊಳ್ಳಿರಿ.
Comments
ಧನ್ಯವಾದಗಳು
ಮಾನ್ಯ ಶ್ರೀ ಶ್ರೀಕಾಂತ್ ಅವರೇ,
ವಂದನೆಗಳು. ನಿಮ್ಮ ಪ್ರತಿಕ್ರಿಯೆಗೆ ಕೃತಜ್ಞತೆಗಳು. ನಿಮ್ಮ ಬರಹಗಳನ್ನೂ ಹಲವಾರು ಸಮಯದಿಂದ ಗಮನಿಸುತ್ತಾ ಬಂದಿರುವೆ. ನೀವು ಬರೆದ ಪುಸ್ತಕಗಳ ಬಗ್ಗೆ ಮಾಹಿತಿ, ಚಲನಚಿತ್ರಗಳ ಹಾಡುಗಳ ಬಗ್ಗೆ, ಹಿಂದಿ ಹಾಡುಗಳ ಕನ್ನಡ ಅನುವಾದಗಳು, ನಗೆಹನಿಗಳು ಎಲ್ಲವನ್ನೂ ಓದಿ ಆನಂದಿಸಿರುವೆ. ಬರಹಗಳ ಪ್ರಯಾಣ ಹೀಗೇ ಮುಂದುವರೆಯಲಿ. ಸಂಪದದ ಪುಟಗಳು ಇನ್ನಷ್ಟೂ ಶ್ರೀಮಂತವಾಗಲಿ ಎಂದು ಹಾರೈಸುವೆ.