ಮಹಾ ಕುಂಭಮೇಳ ಎಂಬ ಆಧ್ಯಾತ್ಮಿಕ ಬೆರಗು !

ಮಹಾ ಕುಂಭಮೇಳ ಎಂಬ ಆಧ್ಯಾತ್ಮಿಕ ಬೆರಗು !

ಭಾರತದ ಆಧ್ಯಾತ್ಮಿಕ ಪರಂಪರೆಯ ಮುಕುಟಪ್ರಾಯವಾಗಿರುವ ಮಹಾ ಕುಂಭಮೇಳಕ್ಕೆ ಜನವರಿ ೧೩, ೨೦೨೫ರಂದು ಚಾಲನೆ ಸಿಕ್ಕಿದೆ. ಪುಷ್ಯ ಪೂರ್ಣಿಮೆಯಂದು ಪ್ರಾರಂಭವಾದ ಈ ‘ಮಹಾಭಕುತಿಯ ಮಜ್ಜನ’ ಸಮಾರಂಭವು ಇನ್ನೂ ೪೫ ದಿನಗಳ ಕಾಲ ನಡೆಯಲಿದೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ಗಂಗಾ, ಯಮುನಾ, ಸರಸ್ವತಿ ಎಂಬ ಮೂರು ನದಿಗಳ ಸಂಗಮ ಸ್ಥಳದಲ್ಲಿ ಆಯೋಜಿತವಾಗಿದೆ. ದೇಶ ಮಾತ್ರವಲ್ಲ, ವಿದೇಶಗಳಿಂದಲೂ ಕೋಟ್ಯಾಂತರ ಭಕ್ತಾದಿಗಳು ಈ ಕುಂಭಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಉತ್ತರ ಪ್ರದೇಶ ಸರಕಾರ ೨೦೨೨ರಿಂದಲೂ ತಯಾರಿಯನ್ನು ಮಾಡಿಕೊಳ್ಳುತ್ತಾ ಬಂದಿದೆ. ಇಡೀ ದೇಶವೇ ಈ ಮಹಾಕುಂಭ ಮೇಳದಲ್ಲಿ ಮಿಂದೇಳಲಿದೆ ಎಂದರೆ ತಪ್ಪಾಗಲಾರದು. 

ಪ್ರತೀ ೧೨ ವರ್ಷಕ್ಕೆ ಒಮ್ಮೆ ಪೂರ್ಣ ಕುಂಭಮೇಳದ ೧೨ ಆವರ್ತನಗಳು ಪೂರ್ಣಗೊಂಡಿರುವುದರಿಂದ ಅಂದರೆ ೧೪೪ ವರ್ಷಗಳ ಬಳಿಕ ಈ ಮಹಾ ಕುಂಭಮೇಳವು ನಡೆಯುತ್ತಿದೆ. ಇದೇ ಈ ವರ್ಷದ ಕುಂಭಮೇಳದ ವಿಶೇಷತೆ. ಕುಂಭಮೇಳಕ್ಕೆ ಸುಮಾರು ೭೦೦ ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತಿದೆ. ೧೨ ವರ್ಷಕ್ಕೊಮ್ಮೆ ಪೂರ್ಣ ಕುಂಭಮೇಳ, ೬ ವರ್ಷಕ್ಕೊಮ್ಮೆ ಅರ್ಧ ಕುಂಭ ಮೇಳ ಮತ್ತು ೧೪೪ ವರ್ಷಗಳಿಗೊಮ್ಮೆ ಮಹಾ ಕುಂಭ ಮೇಳ ಆಯೋಜಿಸಲಾಗುತ್ತದೆ. ಇದೊಂದು ವ್ಯಕ್ತಿಯೊಬ್ಬನ ಜೀವಮಾನದಲ್ಲಿ ಒಮ್ಮೆ ಮಾತ್ರ ಸಿಗುವ ಪುಣ್ಯ ಸ್ನಾನದ ಯೋಗ. ಕುಂಭ ಮೇಳದಲ್ಲಿ ಸ್ನಾನ ಮಾಡಿದರೆ ಪಾಪಗಳಿಗೆ ಮುಕ್ತಿ, ಆತ್ಮ ಮತ್ತು ದೇಹ ಶುದ್ಧೀಕರಣಕ್ಕಿರುವ ರಾಜ ಮಾರ್ಗ ಎಂದು ನಂಬಲಾಗಿದೆ. ಈ ಕುಂಭಮೇಳದಲ್ಲಿ ಪಾಲ್ಗೊಳ್ಳಲು ದೇಶ -ವಿದೇಶಗಳಿಂದ ಭಕ್ತಾದಿಗಳು ಬರುತ್ತಾರೆ. ಇವರ ಜೊತೆಗೆ ಸಂತರು, ನಾಗಾ ಸಾಧುಗಳು, ಹಠ ಯೋಗಿಗಳು, ಅಘೋರಿಗಳು ಬರುತ್ತಾರೆ. ಈ ಪುಣ್ಯಸ್ನಾನದಲ್ಲಿ ಪಾಲ್ಗೊಂಡ ಬಳಿಕ ಭಕ್ತಾದಿಗಳು ಪವಿತ್ರ ನದಿಗಳ ದಡದಲ್ಲಿ ಪೂಜೆ ಮಾಡಿ ಸಾಧು, ಸಂತರ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಧಾರ್ಮಿಕ ಚಿಂತನಾ ಸಭೆಗಳಲ್ಲಿ ಭಾಗವಹಿಸುತ್ತಾರೆ. 

‘ಸನಾತನ ಗರ್ವ, ಮಹಾ ಕುಂಭ ಪರ್ವ’ ಎನ್ನುವುದು ಈ ವರ್ಷದ ಮಹಾ ಕುಂಭಮೇಳದ ಘೋಷ ವಾಕ್ಯ. ಈ ಪುಣ್ಯ ಸ್ನಾನ ಫೆಬ್ರವರಿ ೨೬ರ ತನಕ ನಡೆಯಲಿದ್ದು ಈ ಸಮಯದಲ್ಲಿ ಬರುವ ಆರು ದಿನಗಳನ್ನು ಬಹಳ ಪವಿತ್ರ ದಿನಗಳೆಂದು ಗುರುತಿಸಲಾಗಿದೆ. ಜನವರಿ ೧೩ ಪುಷ್ಯ ಪೂರ್ಣಿಮೆ, ಜನವರಿ ೧೪ ಮಕರ ಸಂಕ್ರಾಂತಿ, ಜನವರಿ ೨೯ ಮೌನಿ ಅಮವಾಸ್ಯೆ, ಫೆಬ್ರವರಿ ೩ ವಸಂತ ಪಂಚಮಿ, ಫೆಬ್ರವರಿ ೧೨ ಮಾಘ ಹುಣ್ಣಿಮೆ, ಫೆಬ್ರವರಿ ೨೬ ಮಹಾ ಶಿವರಾತ್ರಿ. ಈ ಕುಂಭ ಮೇಳಕ್ಕೆ ಬರುವ ಯಾತ್ರಾರ್ಥಿಗಳಿಗಾಗಿ ಉತ್ತರ ಪ್ರದೇಶ ಸರಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. 

ಕುಂಭಮೇಳ ಎಂದರೇನು?: ಕುಂಭ ಎಂದರೆ ಮಡಿಕೆ ಹಾಗೂ ಮೇಳ ಎಂದರೆ ಒಗ್ಗೂಡುವುದು ಎಂದರ್ಥ. ಹಿಂದೂ ಪುರಾಣಗಳ ಪ್ರಕಾರ, ಅಮೃತ ಕಲಶದ ಬಿಂದು ಬಿದ್ದು ಸೃಷ್ಟಿಯಾದ ೪ ಜಾಗಗಳಲ್ಲಿ ಅಮೃತ ರೂಪದ ನದಿಗಳು ಹುಟ್ಟಿದವಂತೆ. ಆ ಜಾಗದಲ್ಲಿ ಹಿಂದೂ ಪಂಚಾಂಗದಂತೆ ರಾಶಿ - ನಕ್ಷತ್ರಗಳು ಕೂಡಿ ಬಂದ ದಿನದಂದು ದೈವಿಶಕ್ತಿಯ ಚಲನೆಯಾಗುತ್ತದೆ. ಹೀಗಾಗಿ ಆ ದಿನಗಳಂದು ಸಾಧುಗಳು, ಸಂತರು ಮತ್ತು ಭಕ್ತರು ಒಟ್ಟಾಗಿ ಪುಣ್ಯಸ್ನಾನ ಮಾಡಿ, ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳುತ್ತಾರೆ. ಹೀಗೆ ಎಲ್ಲರೂ ಒಗ್ಗೂಡಿ ನಡೆಸುವ ಮಹಾ ಮೇಳವೇ ಕುಂಭಮೇಳ. ಮತ್ತೊಂದು ಮೂಲದ ಪ್ರಕಾರ ಭಾರತೀಯ ಉಪಖಂಡದಾದ್ಯಂತ ಹಿಂದೂ ಮಠಗಳು, ಸಾಧುಗಳು, ಸಂತರನ್ನು ಒಗ್ಗೂಡಿಸಿ ತಾತ್ವಿಕ ಚರ್ಚೆಗಳನ್ನು ನಡೆಸಲೆಂದು ೮ ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರಿಂದ ಈ ಆಚರಣೆ ಶುರುವಾಯಿತು ಎನ್ನಲಾಗಿದೆ.

ಪುರಾಣದ ಕಥೆಯೊಂದರ ಪ್ರಕಾರ ಇಂದ್ರನ ಮಗ ಜಯಂತನು ಅಮೃತವನ್ನು ಎಲ್ಲರ ಕಣ್ತಪ್ಪಿಸಿ ತೆಗೆದುಕೊಂಡು ಹೋಗುತ್ತಿದ್ದಾಗ ಆತ ೪ ಕಡೆ ಕುಂಭವನ್ನು ಕೆಳಗಿಟ್ಟಿದ್ದನಂತೆ. ಅಲ್ಲೇ ವಿವಿಧ ಕುಂಭಮೇಳಗಳು ನಡೆಯುತ್ತವೆ. ಕುಂಭ ಮೇಳಗಳು ಪ್ರಯಾಗ್ ರಾಜ್, ಹರಿದ್ವಾರ, ನಾಸಿಕ್, ಉಜ್ಜಯಿಸಿ ಎನ್ನುವ ನಾಲ್ಕು ಸ್ಥಳಗಳಲ್ಲಿ ನಡೆಯುತ್ತವೆ. ಈ ವರ್ಷದ ಮಹಾ ಕುಂಭಮೇಳ ತ್ರಿವೇಣಿ ಸಂಗಮವಾದ ಪ್ರಯಾಗ್ ರಾಜ್ ನಲ್ಲಿ ಆಯೋಜಿಸಲಾಗಿದೆ. ಈ ಕುಂಭ ಮೇಳವನ್ನು ವಿವಿಧ ಅಖಾಡಗಳು ನಿರ್ವಹಿಸುತ್ತವೆ. ಸಾಧುಗಳು, ಸಂತರು, ವಿಧ್ವಾಂಸರು, ಹಠಯೋಗಿಗಳು, ಅಘೋರಿಗಳು, ನಾಗಾ ಸಾಧುಗಳು, ಕಪಾಲಿಕರು ಮೊದಲಾದ ಸಾಧು ಪರಂಪರೆಯಲ್ಲಿ ವಿಶಿಷ್ಟ ಸಾಧನೆಗೆ ಮುಂದಾಗಿರುವ ಸಂತರ ಗುಂಪುಗಳನ್ನೇ ಅಖಾಡ ಎನ್ನಲಾಗುತ್ತದೆ. ಬಹಳಷ್ಟು ಮಂದಿ ಸಾಧು ಸಂತರು ಈ ಕುಂಭಮೇಳದ ಸಮಯದಲ್ಲಿ ಮಾತ್ರ ಜನರಿಗೆ ಕಾಣಸಿಗುತ್ತಾರೆ. ಅವರನ್ನು ಈ ಸಮಯದಲ್ಲಿ ಕಾಣುವುದೇ ಒಂದು ಯೋಗ ಎಂದು ಭಕ್ತರು ನಂಬುತ್ತಾರೆ.

ಈ ಮಹಾ ಕುಂಭಮೇಳಕ್ಕಾಗಿ ಉತ್ತರ ಪ್ರದೇಶ ಸರಕಾರವು ಸುಮಾರು ಏಳು ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದೆ. ಮೂಲ ಸೌಕರ್ಯಗಳ ನಿರ್ಮಾಣಕ್ಕಾಗಿ ಅದು ಕೇಂದ್ರ ಸರಕಾರ ಜೊತೆ ಕೈಜೋಡಿಸಿದೆ. ‘ಪ್ರಯಾಗ್ ರಾಜ್ ಮೇಳ ಪ್ರಾಧಿಕಾರ’ ಎನ್ನುವ ಹೆಸರಿನಲ್ಲಿ ಕುಂಭಮೇಳದ ಯಶಸ್ಸಿಗೆ ಅದ್ಭುತವಾದ ಯೋಜನೆ, ಯೋಚನೆಗಳನ್ನು ಹಮ್ಮಿಕೊಂಡಿದ್ದಾರೆ. ಸುಮಾರು ಐದು ಲಕ್ಷ ಕಾರುಗಳನ್ನು ನಿಲ್ಲಿಸಬಹುದಾದ ಪಾರ್ಕಿಂಗ್ ಜಾಗ, ನದಿ ಪ್ರದೇಶದಲ್ಲಿ ಏಳು ಸುಸಜ್ಜಿತ ರಸ್ತೆ, ೧.೫ ಲಕ್ಷ ಶೌಚಾಲಯಗಳು, ಹತ್ತು ಸಾವಿರ ನೈರ್ಮಲ್ಯ ಕರ್ಮಚಾರಿಗಳು, ೧.೬ ಲಕ್ಷ ಟೆಂಟ್ ಗಳು, ಅರವತ್ತು ಸಾವಿರಕ್ಕೂ ಅಧಿಕ ಬೀದಿ ದೀಪಗಳು, ೨ ವಿದ್ಯುತ್ ಸಬ್ ಸ್ಟೇಷನ್, ೬೦ ಕ್ಕೂ ಅಧಿಕ ಟ್ರಾನ್ಸ್ ಫಾರ್ಮರ್ ಗಳು, ಹತ್ತು ಸಾವಿರ ವಿದ್ಯುತ್ ಕಂಬಗಳು, ಸಾವಿರ ಕಿಲೋ ಮೀಟರ್ ಗೂ ಅಧಿಕ ಉದ್ದದ ಕುಡಿಯುವ ನೀರಿನ ಪೈಪ್ ಲೈನ್, ಪ್ರಯಾಣಿಕರನ್ನು ಕುಂಭಮೇಳದ ಸ್ಥಳಕ್ಕೆ ಕರೆದುಕೊಂಡು ಹೋಗಲು ಐದು ಸಾವಿರಕ್ಕೂ ಅಧಿಕ ಬಸ್ ಗಳು, ೧೪ ಮೇಲುಸೇತುವೆಗಳು, ೧೪ ಅಂಡರ್ ಪಾಸ್ ಹೀಗೆ ಸುಮಾರು ೧,೮೫೦ ಎಕರೆ ಪ್ರದೇಶದಲ್ಲಿ ಆಯೋಜನೆ ಮಾಡಲಾಗಿದೆ.

ಈ ಮಹಾ ಕುಂಭಮೇಳದಲ್ಲಿ ಭಾಗವಹಿಸುವವರ ಸಂಖ್ಯೆ ಅಂದಾಜು ೪೦ ಕೋಟಿ ದಾಟಬಹುದು ಎಂದು ಅಂದಾಜಿಸಲಾಗಿದೆ. ಈ ಮೂಲಕ ಕೋಟಿಗಟ್ಟಲೆ ವಹಿವಾಟು ನಿರೀಕ್ಷಿಸಲಾಗಿದೆ. ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯು ಮಹಾ ಕುಂಭ ಮೇಳ ಯಶಸ್ಸಿಗೆ ಬಹಳಷ್ಟು ಶ್ರಮ ವಹಿಸುತ್ತಿದೆ. ಸುಮಾರು ಮೂವತ್ತು ಸಾವಿರ ಪೋಲೀಸರನ್ನು ಸುರಕ್ಷತೆಗಾಗಿ ನಿಯೋಜಿಸಲಾಗಿದೆ. ಪ್ರಮುಖವಾಗಿ ಸರಕಾರ ಗಮನಿಸಬೇಕಾದ ಅಂಶವೆಂದರೆ ಎಲ್ಲೂ ಕಾಲ್ತುಳಿತಗಳಂತಹ ಅವಘಡಗಳು ಸಂಭವಿಸದಂತೆ ನೋಡಿಕೊಳ್ಳಬೇಕು, ಕಳ್ಳತನ, ಅತ್ಯಾಚಾರ, ಅಪಹರಣ, ಸ್ಪೋಟಗಳು, ಬೆಂಕಿ ಅವಘಡಗಳು ಮುಂತಾದುವುಗಳು ನಡೆಯದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕಾಗಿದೆ. ಈ ಕುಂಭಮೇಳಕ್ಕೆ ಬರುತ್ತಿರುವ ಜನರ ಸಂಖ್ಯೆ (ಅಂದಾಜು ೪೦ ಕೋಟಿ) ಪಾಕಿಸ್ತಾನ (೨೪ ಕೋಟಿ) ಮತ್ತು ಅಮೇರಿಕಾ (೩೫ ಕೋಟಿ) ದೇಶಕ್ಕಿಂತ ಅಧಿಕ ಎನ್ನುವುದು ಅಚ್ಚರಿಯ ವಿಷಯವಾದರೂ ನಂಬಲೇ ಬೇಕು ! ಬನ್ನಿ, ಅವಕಾಶ ಸಿಕ್ಕರೆ ಈ ಪುಣ್ಯ ಶಾಹಿ ಸ್ನಾನದ ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳುವ ಮೂಲಕ ಭಾರತದ ಪುರಾತನ ಆಧ್ಯಾತ್ಮಿಕ ಪರಂಪರೆಯನ್ನು ಎತ್ತಿ ಹಿಡಿಯಿರಿ

ಚಿತ್ರ ಕೃಪೆ: ಅಂತರ್ಜಾಲ ತಾಣ