ಮಹಾ ಯೋಗಿನಿ

ಮಹಾ ಯೋಗಿನಿ

ಪುಸ್ತಕದ ಲೇಖಕ/ಕವಿಯ ಹೆಸರು
ಹಿಂದಿ ಮೂಲ: ಸುರೇಶ್ ಸೋಮಪುರ, ಕನ್ನಡಕ್ಕೆ: ಡಾ. ಎಂ ವಿ ನಾಗರಾಜರಾವ್
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ, ೧೮೦.೦೦, ಮುದ್ರಣ: ೨೦೨೪

“ಇದೊಂದು ರೋಚಕ ಕತೆ. ಕೇವಲ ರೋಚಕ ಕತೆ ಮಾತ್ರವಲ್ಲ ಸತ್ಯ ಕತೆ. ಲೇಖಕ ಸುರೇಶ ಸೋಮಪುರ ಸ್ವತಃ ಕರ್ಣ-ಪಿಶಾಚಿನಿಯನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಮನೆ-ಮಠ, ಹೆಂಡತಿ-ಮಕ್ಕಳು, ಬಂಧುಗಳು ಎಲ್ಲರನ್ನೂ ಬಿಟ್ಟು ದೀದಿ ಅಂಬಿಕಾದೇವಿಯ ಸಹಾಯದಿಂದ ಶ್ರೀ ಚೈತನ್ಯಾನಂದರನ್ನು ಭೇಟಿಯಾಗುತ್ತಾರೆ. ಅವರ ಮಾರ್ಗದರ್ಶನದಲ್ಲಿ ತಂತ್ರ-ಮಂತ್ರ, ಶವಸಾಧನೆ ಇತ್ಯಾದಿ ನಡೆಸುತ್ತಾರೆ. ಅಂತಿಮವಾಗಿ 'ಕರ್ಣ-ಪಿಶಾಚಿನಿ' ಅವರ ವಶವಾಗುತ್ತದೆ.

ಯಾವುದೇ ಚಮತ್ಕಾರಕ್ಕೆ ಪಂಥಾಹ್ವಾನ ನೀಡುವುದು ಸುಲಭದ ಮಾತಲ್ಲ. ಈ ಕಾಲದಲ್ಲಿ ಅನೇಕ ಚಮತ್ಕಾರಿಗಳು ತಮ್ಮ ಚಮತ್ಕಾರದ ಮೂಲಕ ಮುಗ್ಧ ಜನರನ್ನು ಶೋಷಿಸಿ ಹಣ ಗಳಿಸುವ ಉದ್ದೇಶದಿಂದ ಚಮತ್ಕಾರದ ಅಂಗಡಿಗಳನ್ನು ತೆರೆದಿದ್ದಾರೆ. ಅಮಾಯಕ ಜನರನ್ನು ಮರುಳು ಮಾಡಿ ತಮ್ಮ ಸ್ವಾರ್ಥವನ್ನು ಸಾಧಿಸಿಕೊಳ್ಳುತ್ತಿದ್ದಾರೆ. ಅವರು ವಾಸ್ತವವಾಗಿ ಆಧ್ಯಾತ್ಮಿಕ ಶಕ್ತಿಯಿಂದ ಚಮತ್ಕಾರಗಳನ್ನು ತೋರಿಸಬಲ್ಲರೇನು?

ಸುರೇಶ್ ಸೋಮಪುರ ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಚಮತ್ಕಾರಗಳನ್ನು ಮಾನವ ಕಲ್ಯಾಣಕ್ಕಾಗಿ ಪ್ರಯೋಗಿಸಲು ನಿರ್ಧರಿಸುತ್ತಾರೆ. ಮನುಷ್ಯ ಜೀವನವನ್ನು ಹೇಗೆ ಕಳೆಯ ಬೇಕೆಂದು ಪ್ರತಿಪಾದಿಸುತ್ತಾರೆ. ಆತ್ಮ-ಪರಮಾತ್ಮ, ಭೂತ-ಪ್ರೇತ, ಧರ್ಮ-ಅಧರ್ಮಗಳಿಗೆ ಹೆದರಿ ಬದುಕುವುದು ಸರಿಯಲ್ಲ ಎನ್ನುತ್ತಾರೆ. ಅಂಧಶ್ರದ್ಧೆಯಿಂದ ಮನುಷ್ಯ ಹೊರಬರಬೇಕಿದೆ. ಬದುಕಲು ಹೊಸ ಮಾರ್ಗವನ್ನು ಕಂಡುಕೊಳ್ಳಲು ಇಲ್ಲಿಯ ಸತ್ಯಕತೆ ಪ್ರೇರಣೆ ನೀಡುತ್ತದೆ.

"ಕರ್ಣ-ಪಿಶಾಚಿನಿ" ವಶವಾದ ನಂತರ ಲೇಖಕರು ಮಾನಸಿಕ ಹಿಂಸೆಗೆ ಒಳಗಾಗುತ್ತಾರೆ. ಎದುರಿಗಿರುವವರ ಆಂತರ್ಯವನ್ನು ತಿಳಿದ ನಂತರ ಅವರಿಗೆ ಅಸಹ್ಯ ಉಂಟಾಗುತ್ತದೆ. ಇದರಿಂದ ಬೇಸತ್ತು “ಕರ್ಣ-ಪಿಶಾಚಿನಿ"ಯನ್ನು "ಕಲ್ಪನಾಯೋಗ'ದ ಮೂಲಕ ದೂರ ಮಾಡುತ್ತಾರೆ, ಅದರಿಂದ ಬಿಡುಗಡೆ ಹೊಂದುತ್ತಾರೆ.

"ಅಘೋರಿಗಳ ನಡುವೆ”, “ಕಂಪನ", "ನಾಲ್ಕನೆಯ ಆಯಾಮ" – ಕೃತಿಗಳ ಮೂಲಕ ಕನ್ನಡಿಗರಿಗೆ ಚಿರಪರಿಚಿತವಾಗಿರುವ ದಿ॥ ಸುರೇಶ್ ಸೋಮಪುರರ ಮತ್ತೊಂದು ರೋಚಕ ನೈಜ ಕತೆ ನಮ್ಮ ಮುಂದಿದೆ. ಅವರು ಬದುಕಿದ್ದಾಗ, ಈ ಕತೆಯನ್ನು ಜನರಿಗೆ ತಿಳಿಸಬೇಕು, ಅವರನ್ನು ಮೂಢನಂಬಿಕೆಯಿಂದ ಬಳಲುವುದನ್ನು ತಪ್ಪಿಸಬೇಕೆಂದು ಹೇಳಿ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಲು ಒಪ್ಪಿ ಆಶೀರ್ವದಿಸಿದ್ದು ನನ್ನ ಭಾಗ್ಯವೇ ಹೌದು.” ಎಂದು ‘ಎರಡು ಮಾತು’ ಬರೆದಿದ್ದಾರೆ ಈ ಕೃತಿಯ ಅನುವಾದಕರಾದ ಡಾ. ಎಂ.ವಿ. ನಾಗರಾಜರಾವ್. 

ಕೃತಿಯ ಮೂಲ ಲೇಖಕರಾದ ಸುರೇಶ್ ಸೋಮಪುರ ಅವರು ತಂತ್ರ, ಮಂತ್ರ ಕುರಿತು ಬರೆದ ರೋಚಕ ಕಾದಂಬರಿ ಇದು. ಕಾದಂಬರಿಯ ಆರಂಭದ ಕೆಲವು ಸಾಲುಗಳನ್ನು ಓದಿದರೆ ನಿಮಗೆ ಅದರ ರೋಚಕತೆಯ ಅರಿವಾಗುತ್ತದೆ…

“ಒಂದು ವೇಳೆ ಆ ಘಟನೆ ನಡೆಯದಿದ್ದರೆ ನಾನು ಸಹ ಬೇರೆ ಮನುಷ್ಯರಂತೆ ಜೀವನ ನಡೆಸುತ್ತಿದ್ದೆ. ಆದರೆ ನಾನು ಜೀವನ ಮತ್ತು ಮೃತ್ಯುವಿನ ರಹಸ್ಯಗಳನ್ನು ತಿಳಿಯಲು ತುಂಬ ವ್ಯಗ್ರನಾಗಿದ್ದೆ. ಇದು ನನ್ನ ತೀವ್ರ ಇಚ್ಛೆಯೂ ಆಗಿತ್ತು. ಈ ಕಾರಣದಿಂದ ನಾನು ಮಹಾಯೋಗಿನಿ ಅಂಬಿಕಾದೇವಿಯ ಪರಿಚಯ ಮಾಡಿಕೊಂಡೆನು. ಆಗ ೧೯೬೫ನೇ ವರ್ಷ ನಡೆಯುತ್ತಿತ್ತು. ಜೀವನದ ಜಂಜಾಟದಿಂದ ಹೊರಬರಲು ಯಾವುದಾದರೂ ಮಾರ್ಗದ ಅಗತ್ಯವಿತ್ತು.

ಆ ದಿನಗಳಲ್ಲಿ ಬೊಂಬಾಯಿಗೆ ಕೆಲವು ಕಿಲೋಮೀಟ‌ರ್ ದೂರದಲ್ಲಿದ್ದ ಶಹದ್ ನಗರಕ್ಕೆ ನನ್ನನ್ನು ಒಬ್ಬ ಕಂಟ್ರಾಕ್ಟರ್‌ನ ಪರವಾಗಿ ಸೂಪರ್‌ವೈಜರ್ ಆಗಿ ಕೆಲಸ ಮಾಡಲು ಕಳಿಸಲಾಗಿತ್ತು. ಶಹದ್ ನಗರದಲ್ಲಿ ಕೆಮಿಕಲ್ ಕಾರ್ಖಾನೆಯೊಂದರ ನಿರ್ಮಾಣ ಕಾರ್ಯವನ್ನು ನಾನು ನೋಡಿಕೊಳ್ಳಬೇಕಿತ್ತು. ಮೇ ತಿಂಗಳು, ಸುಡು ಬಿಸಿಲಿನ ಧಗೆಯನ್ನು ಸಹಿಸುವುದು ಕಷ್ಟವಾಗುತ್ತಿತ್ತು. ಕಬ್ಬಿಣದ ಬೃಹತ್ ತೊಲೆಗಳ ಮೇಲೆ ವೆಲ್ಡಿಂಗ್ ಕೆಲಸ ನಡೆಯುತ್ತಿತ್ತು. ಅಲ್ಲಯ ಶಾಖ ಮತ್ತು ಕರ್ಕಶ ಧ್ವನಿ ಬಿಸಿಲಿನ ಧಗೆಯನ್ನು ಮತ್ತಷ್ಟು ಅಸಹ್ಯವನ್ನಾಗಿಸಿತ್ತು.

ನಾನು ಒಂದು ದಪ್ಪ ಕಂಬದ ನೆರಳಿಗೆ ಹೋಗಿ ಕುಳಿತೆ. ಕಂಬ ಬಿಸಿಲಿನ ತಾಪದಿಂದ ವಿಪರೀತ ಸುಡುತ್ತಿತ್ತು. ಬರಿಗೈಯಲ್ಲಿ ಅದನ್ನು ಮುಟ್ಟುವುದು ಸಾಧ್ಯವಿರಲಿಲ್ಲ. ಕರವಸ್ತ್ರ ತೆಗೆದು ಮುಖದ ಬೆವರು ಒರೆಸಿಕೊಂಡೆ. ಹತ್ತಿರದಲ್ಲಿ ಬಿದಿರು ಬುಟ್ಟಿಯಲ್ಲಿ ಕಾಂಕ್ರೀಟ್ ತುಂಬುತ್ತಿದ್ದ ಲಕ್ಷ್ಮಿ ಕಡೆ ಕಣ್ಣು ಹಾಯಿಸಿದೆ. ಲಕ್ಷ್ಮಿ ಅಂಥ ಆಕರ್ಷಕ ಯುವತಿಯೇನೂ ಅಲ್ಲ, ಕಪ್ಪು ಮೈಬಣ್ಣ. ವಿಚಿತ್ರವಾದ ಮುಖಾಕೃತಿ, ಆದರೆ ನಿಯಮಿತವಾಗಿ ಕೂಲಿ ಕೆಲಸ ಮಾಡುತ್ತಿದ್ದ ಕಾರಣದಿಂದ ಅವಳ ದೇಹ ದುರ್ಬಲವಾಗಿತ್ತು. ಆದರೆ ಶರೀರದಲ್ಲಿ ಗಟ್ಟಿತನವಿತ್ತು. ಅವಳ ವಯಸ್ಸು ಮೂವತ್ತು ಮತ್ತು ಮೂವತ್ತೈದರ ಆಸುಪಾಸಿನಲ್ಲಿತ್ತು.

ಅವಳನ್ನು ನೋಡುತ್ತಲೇ ನನ್ನ ತಲೆಯಲ್ಲಿ ವಿಚಾರಚಕ್ರ ಸುತ್ತತೊಡಗಿತು. ಜೀವನ ಮತ್ತು ಮೃತ್ಯುವಿನ ಅನಿವಾರ್ಯತೆ, ಹೊಟ್ಟೆಯ ಮೇಲಿನ ಪ್ರೀತಿ ಮತ್ತು ಮರ್ಯಾದೆಯ ವಿಷಯದಲ್ಲಿ ಮಾತನಾಡುವುದು ಸುಲಭ. ಈ ಲಕ್ಷ್ಮಿ…

ಎರಡು ದಿನಗಳ ಹಿಂದೆಯಷ್ಟೇ ಅವಳ ಪತಿ ಮರಣಿಸಿದ್ದ. ಭೀಕರ ಘಟನೆಯಲ್ಲಿ ಅವನ ತಲೆ ಒಡೆದಿತ್ತು. ಲಕ್ಷ್ಮಿ ಹೆಣದ ಮುಂದೆ ಕುಳಿತು ಎದೆ-ಎದೆ ಬಡಿದುಕೊಳ್ಳುತ್ತಾ ಆಳುತ್ತಿದ್ದಳು. ನಾನು ತಲೆಯೆತ್ತಿ ನೋಡಿದೆ. ಲಕ್ಷ್ಮಿಯ ಪತಿ ಎತ್ತರದಿಂದ ಬಿದ್ದು ಪ್ರಾಣಬಿಟ್ಟಿದ್ದ. ಒಮ್ಮೆ ಅದನ್ನು ನೋಡಿದೆ. ಇಂದು ಯಾವ ಜಾಗ ಖಾಲಿಯಿತ್ತೊ, ಅಲ್ಲಿ ಲಕ್ಷ್ಮಿಯ ಪತಿ ಎರಡು ದಿನಗಳ ಹಿಂದೆ ನಿಂತಿದ್ದ. ಒಬ್ಬ ಮನುಷ್ಯ ಬಲವಾದ ಹಗ್ಗವನ್ನು ಎಳೆಯುತ್ತಿದ್ದ. 'ಹೋಯ್!... ಹೋಯ್!...' ಎಂದು ಕೂಗುತ್ತಾ ಒಂದು ಬಲಿಷ್ಠವಾದ ಕಂಬವನ್ನು ಮೇಲೆತ್ತಿ ನಿಲ್ಲಿಸುತ್ತಿದ್ದರು. ಲಕ್ಷ್ಮಿಯ ಪತಿ ಕಂಬದ ತುದಿಯಲ್ಲಿ ನಿಂತು ಹಗ್ಗವನ್ನು ಮುಂದೆ ಮುಂದೆ ನೂಕುತ್ತಿದ್ದ. ಕೆಲಸದ ಮಧ್ಯೆ ಕೆಲವೊಮ್ಮೆ ಅಶ್ಲೀಲ ಹಾಸ್ಯದ ಮಾತುಗಳನ್ನು ಹೇಳುತ್ತಿದ್ದ ಮತ್ತು ಜೋರಾಗಿ ನಗುತ್ತಿದ್ದ. ಅವನು ನಗುತ್ತಿದ್ದ ಭಂಗಿ ಈಗಲೂ ನನ್ನ ಕಣ್ಮುಂದೆ ಇದೆ. ಅಕಸ್ಮಾತ್ ಏನಾಯಿತೆಂದು ತಿಳಿಯದು.

ಅವನು ಕಂಬದ ತುದಿಯಿಂದ ಕೆಳಗೆ ಬಿದ್ದ. ಅವನ ಸೀಳಿದ ತಲೆಯಿಂದ ರಕ್ತಧಾರೆ ಯಾಯಿತು. ಹರಿಯುತ್ತಿದ್ದ ರಕ್ತದ ಕೆಂಪು ಅವನ ತಲೆಯನ್ನು ಪೂರಾ ಮುಚ್ಚಿತ್ತು. ಆ ಭೀಕರ ದೃಶ್ಯವನ್ನು ನೆನಪು ಮಾಡಿಕೊಂಡರೆ ಈಗಲೂ ನನ್ನ ಮೈನಡಗುತ್ತದೆ. ಕೋಲಾಹಲವಾಯಿತು. ಜನರು ಅತ್ತಿಂದಿತ್ತ ಓಡುತ್ತಿದ್ದರು. ಪೊಲೀಸರು ಬಂದರು. ಫ್ಯಾಕ್ಟರಿ ಇನ್‌ಸ್ಪೆಕ್ಟರ್ ಅಲ್ಲಿಗೆ ಧಾವಿಸಿ ಬಂದರು. ಕೂಲಿಕಾರರ ಮುಖಂಡರೂ ಬಂದರು.

ಲಕ್ಷ್ಮಿಗೆ ಅವಳ ಗಂಡನ ಜೀವದ ಬೆಲೆಯನ್ನು ನಗದಾಗಿ ಇನ್ನೂರು ರೂಪಾಯಿ ಕೊಟ್ಟರು. ಘಟನೆ ಹೊರಗೆ ತಿಳಿಯದಂತೆ ಮಾಡಲು ಸಾವಿರಾರು ರೂಪಾಯಿ ಖರ್ಚು ಮಾಡಲಾಯಿತು. ಎಷ್ಟು ಜನರ ಜೇಬುಗಳು ಬಿಸಿಯಾಯಿತೊ ಗೊತ್ತಿಲ್ಲ. ಇನ್ನೂರು ರೂಪಾಯಿ ನಗದು ಸಿಕ್ಕಿದ್ದರಿಂದ ಆ ದಿನ ಲಕ್ಷ್ಮಿಯ ಮಕ್ಕಳು ಬಹುಶಃ ಮಿಠಾಯಿ ತಿಂದಿರಬಹುದು. ಒಂದು ವೇಳೆ ಬೆಲ್ಲ, ಸಕ್ಕರೆ, ಹಣ್ಣು, ಚಾಕಲೇಟು ತಿಂದಿರಬೇಕು. ಅವುಗಳನ್ನೇ ಸಿಹಿಯಾದ ಮಿಠಾಯಿಯೆಂದು ಯೋಚಿಸಿರಬಹುದು.”

ಮುಂದಿನ ಕಥಾನಕವನ್ನು ನೀವು ಕಾದಂಬರಿಯಲ್ಲೇ ಓದಬೇಕು. ಸುಮಾರು ೧೪೦ ಪುಟಗಳ ಈ ನೈಜ ರೋಚಕ ಕಾದಂಬರಿಯನ್ನು ಓದಿದಾಗ ನಿಮ್ಮೆದುರು ಮತ್ತೊಂದು ನಿಗೂಢ ಲೋಕ ತೆರೆಯಲ್ಪಡುತ್ತದೆ.