ಮಾಗಿಯ ಚಳಿಯಲ್ಲಿ - ಚಂಡಮಾರುತದ ಮಳೆಯಲ್ಲಿ - ಅನಾರೋಗ್ಯದ ಆತಂಕದಲ್ಲಿ…!
ಪರಿಸರ ಒಡ್ಡುತ್ತಿರುವ ಸವಾಲುಗಳ ನಡುವೆ ಮನುಷ್ಯ ಸೃಷ್ಟಿಸಿದ ಅವಾಂತರಗಳು ಸೇರಿ ಆಧುನಿಕ ಮಧ್ಯಮ ವರ್ಗದವರ ಒಟ್ಟು ಜೀವನ ಗುಣಮಟ್ಟ ನೆಮ್ಮದಿಯ ದೃಷ್ಟಿಯಿಂದ ಅಷ್ಟೇನು ಸಮಾಧಾನಕರವಾಗಿಲ್ಲ. ಸೌಲಭ್ಯಗಳ ಮತ್ತು ತಂತ್ರಜ್ಞಾನದ ವಿಷಯದಲ್ಲಿ ಉತ್ತಮ ಅಭಿವೃದ್ಧಿ ಸಾಧ್ಯವಾಗಿರುವುದು ನಿಜ. ಶ್ರಮ ಕಡಿಮೆಯಾಗಿ ಸಾಕಷ್ಟು ಅನುಕೂಲಗಳು ಸಹ ಆಗಿವೆ. ಆದರೆ ಅದರ ಪರಿಣಾಮ ಒತ್ತಡಗಳು ಜಾಸ್ತಿಯಾಗಿದೆ. ಅದರಲ್ಲೂ ಆರ್ಥಿಕ ಅನಿವಾರ್ಯತೆ ನೆಮ್ಮದಿಯನ್ನು ಕಸಿಯುತ್ತಿದೆ.
ಹಣ ಮತ್ತು ಸಮಯಕ್ಕೆ ಬಹುತೇಕ ಸಂಪೂರ್ಣ ದಾಸರಾಗಿದ್ದೇವೆ. ಅದಕ್ಕಾಗಿ ಎಲ್ಲಾ ರೀತಿಯ ಅಡ್ಡದಾರಿಗಳಿಗೆ ನುಗ್ಗುತ್ತಿದ್ದೇವೆ. ಅಷ್ಟಾದರು ಯಾವುದೂ ಸಾಕಾಗುತ್ತಿಲ್ಲ. ತೃಪ್ತಿ ಅತೃಪ್ತಿಯಾಗುತ್ತಲೇ ಇದೆ. ನಮ್ಮ ನಡುವೆಯೇ ಹೋಲಿಕೆ ಮತ್ತು ಸ್ಪರ್ಧೆ ನಡೆಯುತ್ತಿದೆ. ಮಾನವೀಯ ಮೌಲ್ಯಗಳ ಪುನರುತ್ಥಾನದ ಹಾದಿಯಲ್ಲಿ ಸಾವಿರಾರು ಜನರ ಬಳಿ ಮಾತನಾಡುತ್ತಾ ಸಾಗುತ್ತಿದ್ದೇನೆ. ಪ್ರತಿ ಹೆಜ್ಜೆಯಲ್ಲಿಯೂ, ಪ್ರತಿ ನೋಟದಲ್ಲಿಯೂ ಎಲ್ಲವನ್ನೂ ಹೊಸದು ಮತ್ತು ಕುತೂಹಲದಿಂದ ಗಮನಿಸಲು ಪ್ರಯತ್ನಿಸುತ್ತಿದ್ದೇನೆ. ಮುಕ್ತ ಮತ್ತು ತೆರದ ಮನಸ್ಸಿನಿಂದ ಗ್ರಹಿಸಲು ಆಸಕ್ತಿ ಹೊಂದಿದ್ದೇನೆ.
ಏನೇ ಮುಗ್ದತೆ ಉಳಿಸಿಕೊಳ್ಳಲು, ಪ್ರದರ್ಶಿಸಲು ಪ್ರಯತ್ನಿಸಿದರು ಬದುಕಿನ ದೀರ್ಘ ಅನುಭವ ನನ್ನ ಮನಸ್ಸಿನ ಕಲ್ಮಶಗಳನ್ನು ನನಗೆ ಸದಾ ನೆನಪಿಸುತ್ತಲೇ ಇರುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿಗೆ ಜನರು ನೀಡುತ್ತಿರುವ ಪ್ರೀತಿ ಮತ್ತು ಅಭಿಮಾನ ಮನಸ್ಸನ್ನು ಭಾರಗೊಳಿಸುತ್ತದೆ. ಒಂದೊಂದು ಸಂವಾದವೂ ನನಗೆ ನಮ್ಮ ಜನಗಳ ಬಗ್ಗೆ ಪ್ರೀತಿ ಹೆಚ್ಚಾಗುವಂತೆ ಮಾಡುತ್ತಿದೆ. ಕಾಳಜಿ ಹೆಚ್ಚಾಗುತ್ತಿದೆ, ಏನಾದರೂ ಮಾಡಬೇಕೆಂಬ ತುಡಿತ ಹೆಚ್ಚಾಗುತ್ತಿದೆ. ಹಾಗೆಯೇ ಶುದ್ಧ ಪ್ರಾಮಾಣಿಕತೆ ಉಳಿಸಿಕೊಳ್ಳಲೇ ಬೇಕು ಎಂಬ ಭಾವನೆ ಮತ್ತಷ್ಟು ಗಟ್ಟಿಯಾಗುತ್ತಿದೆ.
ವಾತಾವರಣ, ಆಹಾರ, ಉಡುಗೆ ತೊಡುಗೆಗಳು, ಜನರ ಭಾವನಾತ್ಮಕ ಮನಸ್ಥಿತಿ, ಬಡತನ, ಮುಗ್ದತೆ, ಆಧುನಿಕತೆಯ ಪ್ರಭಾವ ಎಲ್ಲವನ್ನೂ ನನ್ನ ಗ್ರಹಿಕೆಯ ಆಧಾರದಲ್ಲಿ ಬರೆಯಲು ಇನ್ನೂ ಸಾಕಷ್ಟು ಸಮಯವಿದೆ. ಎಲ್ಲವೂ ಅಷ್ಟು ಸುಲಭವಾಗಿ ದಕ್ಕುವುದಿಲ್ಲ. ಮೇಲ್ನೋಟ, ಒಳನೋಟ, ಸೂಕ್ಷ್ಮವಾಗಿ ಪರಿಶೀಲಿಸಬೇಕು. ಬದಲಾವಣೆಗಳನ್ನು ಗಮನಿಸಬೇಕು.
ಒಂದು ಅಂಶವು ನನ್ನ ಗಮನಕ್ಕೆ ಬರುತ್ತಿದೆ. ಸಾಮಾನ್ಯ ಜನರಲ್ಲಿ ಇನ್ನೂ ಸಾಕಷ್ಟು ಸಾರ್ವಜನಿಕವಾಗಿ ಒಳ್ಳೆಯತನ ಉಳಿದುಕೊಂಡಿದೆ. ಆದರೆ ಅದನ್ನು ವಾಸ್ತವಿಕವಾಗಿ, ಪ್ರಾಯೋಗಿಕವಾಗಿ, ವ್ಯಾವಹಾರಿಕವಾಗಿ, ನಡವಳಿಕೆಯಾಗಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದು ಅವರಿಗೆ ತಿಳಿಯುತ್ತಿಲ್ಲ. ಸಿನಿಕತನ ಬೆಳೆದಿದೆ. ಕಾಲ ಕೆಟ್ಟಿದೆ ಇದನ್ನು ಸರಿ ಮಾಡಲು ಸಾಧ್ಯವಿಲ್ಲ ಎಂಬ ಮನೋಭಾವದೊಂದಿಗೆ ಎಲ್ಲವನ್ನೂ ಸ್ವಾರ್ಥದ ಪರಿಧಿಯೊಳಗೆ ನೋಡುವ ಮನೋಭಾವ ಬೆಳೆದಿದೆ.
ಒಬ್ಬ ಪ್ರತಿಭಾವಂತ ತನ್ನ ಸಾಮರ್ಥ್ಯ ಪ್ರದರ್ಶಿಸಲು ಒಂದು ಉತ್ತಮ ವೇದಿಕೆ ಬೇಕಾಗುತ್ತದೆ. ಆಗ ಮಾತ್ರ ಅವನ ಪ್ರತಿಭೆ ಹೊರಬರಲು ಸಾಧ್ಯ. ಹಾಗೆಯೇ ಜನರಿಗೆ ತಮ್ಮ ಒಳ್ಳೆಯತನ ಒಂದು ನಡವಳಿಕೆಯಾಗಿ ಪರಿವರ್ತನೆ ಹೊಂದಲು ಒಂದು ಸಾಮಾಜಿಕ ವಾತಾವರಣ ಕಲ್ಪಿಸಿಕೊಡಬೇಕಿದೆ. ಒಳ್ಳೆಯತನದ ಮಹತ್ವ ಅರ್ಥಮಾಡಿಸಬೇಕಿದೆ. ಒಳ್ಳೆಯತನದ ನಿಜವಾದ ಅನುಕೂಲಗಳನ್ನು ಮನವರಿಕೆ ಮಾಡಿಕೊಡಬೇಕಿದೆ. ಕೆಟ್ಟದ್ದು ಮತ್ತು ಒಳ್ಳೆಯದರ ನಡುವೆ ಒಂದು ಸ್ಪಷ್ಟ ಕಲ್ಪನೆ ಮೂಡಿಸಬೇಕಿದೆ. ಒಳ್ಳೆಯತನ ಹೇಗೆ ನಮ್ಮ ಮಾನಸಿಕ ದೈಹಿಕ ಮತ್ತು ಒಟ್ಟು ಜನರ ಜೀವನಮಟ್ಟ ಸುಧಾರಿಸಲು ಸಹಕಾರಿಯಾಗಿದೆ ಎಂಬ ಅರಿವು ಬೆಳೆಸಬೇಕಾಗಿದೆ.
ಮಕ್ಕಳೇ ಮುಂದಿನ ಭವಿಷ್ಯ ಎಂಬುದು ಎಲ್ಲರಿಗೂ ತಿಳಿದಿದೆ. ಹಿಂದಿನ ದಿನಗಳಂತೆ ಮಾನವೀಯ ಮೌಲ್ಯಗಳ ಬಗ್ಗೆ ಅವರಿಗೆ ತಿಳಿಸಿಕೊಡುತ್ತಾ, ಆಧುನಿಕ ಕಾಲದ ಸ್ಪರ್ಧೆಯನ್ನು ಜಾಗತಿಕವಾಗಿ ಹೇಗೆ ಎದುರಿಸಬೇಕು ಅದಕ್ಕೆ ಬೇಕಾದ ಮಾನಸಿಕ ಸಿದ್ಧತೆಗಳು ಯಾವುವು ಎಂದು ಎಲ್ಲವನ್ನೂ ಒಂದು ವ್ಯವಸ್ಥೆಯಾಗಿ ಕಲಿಸಲು ಪ್ರಾರಂಭಿಸಬೇಕು.
ಪ್ರಕೃತಿ ಮತ್ತು ಮನುಷ್ಯರ ನಡುವೆ ಅಂತರ ಹೆಚ್ಚಾದಂತೆ, ಮಾತು ಮತ್ತು ನಡವಳಿಕೆಯ ನಡುವೆ ಅಂತರ ಹೆಚ್ಚಾದಂತೆ, ಮಕ್ಕಳು ಮತ್ತು ಪೋಷಕರ ನಡುವೆ ಅಂತರ ಹೆಚ್ಚಾದಂತೆ, ಜನರು ಮತ್ತು ಸರ್ಕಾರಗಳ ನಡುವೆ ಅಂತರ ಹೆಚ್ಚಾದಂತೆ ನಮ್ಮ ವ್ಯವಸ್ಥೆ ತನ್ನ ನಂಬಿಕೆಯನ್ನು ಕಳೆದುಕೊಳ್ಳುತ್ತದೆ. ಮುಂದೆ ಅದನ್ನು ಸರಿ ಮಾಡುವುದು ತುಂಬಾ ಕಷ್ಟ.
ಈಗಲೂ ವ್ಯವಸ್ಥೆ ಸಂಪೂರ್ಣ ಹಾಳಾಗಿಲ್ಲ. ಇದನ್ನು ಸುಧಾರಿಸುವ ಎಲ್ಲಾ ಸಾಧ್ಯತೆಗಳು ಇವೆ. ಜನರ ವಿವೇಚನಾ ಶಕ್ತಿಯನ್ನು, ಅವರ ಚಿಂತನಾ ಶೈಲಿಯನ್ನು, ಅವರ ವಿಶಾಲ ಮನೋಭಾವವನ್ನು ಉತ್ತಮ ರೀತಿಯಲ್ಲಿ ಬೆಳೆಸಿದರೆ ನಾಗರಿಕ ಸಮಾಜ ಹೊಳಪನ್ನು ಪಡೆಯುತ್ತದೆ. ಭ್ರಷ್ಟಾಚಾರದ ಬಗ್ಗೆ, ಮೋಸ ವಂಚನೆ ದುರಾಸೆಯ ಬಗ್ಗೆ, ಹಣದ ಅನವಶ್ಯಕ ಮೋಹದ ಬಗ್ಗೆ ಅವರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿದರೆ ಬದಲಾವಣೆ ಸಾಧ್ಯ.
ಜಾತಿ ವ್ಯವಸ್ಥೆಯ ಬಗ್ಗೆ, ಧಾರ್ಮಿಕ ಮೂಲಭೂತವಾದದ ಬಗ್ಗೆ, ಮೌಡ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಸಾರ್ವತ್ರಿಕ ಸತ್ಯದ ವೈಚಾರಿಕ ಪ್ರಜ್ಞೆ ಅವರಲ್ಲಿ ಬಿತ್ತಿದರೆ ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ ಸುಧಾರಣೆ ಖಂಡಿತ ಆಗುತ್ತದೆ. ಮನಸ್ಸುಗಳ ಅಂತರಂಗದ ಚಳವಳಿ ಸಾಮಾನ್ಯ ಜನರಲ್ಲಿ ಒಳ್ಳೆಯತನದ ಬೀಜ ಬಿತ್ತಲು ಮತ್ತು ಪ್ರಬುದ್ಧ ಮನಸ್ಸಿನ ಪ್ರಬುದ್ಧ ಸಮಾಜ ನಿರ್ಮಿಸಲು ಸದಾ ಪ್ರಯತ್ನಿಸುತ್ತಲೇ ಇರುತ್ತದೆ.
***
ಭ್ರಷ್ಟಾಚಾರದ ಮೂಲಗಳಲ್ಲಿ ಒಂದಾದ ಅದ್ದೂರಿ ಮದುವೆಗಳಿಗೆ ನಿಯಂತ್ರಣ ಹೇರಿ ಸರಳ ಮತ್ತು ಸಹಜ ವಿವಾಹಗಳನ್ನು ಪ್ರೋತ್ಸಾಹಿಸುವ ಅನಿವಾರ್ಯತೆ ಉಂಟಾಗಿದೆ. ಒಂದು ಸಾಧಾರಣ ಮಾಧ್ಯಮ ವರ್ಗದ ಮದುವೆಯ ಕನಿಷ್ಠ ವೆಚ್ಚ 20 ಲಕ್ಷಗಳಿಗೆ ಏರಿಕೆಯಾಗಿ ಗರಿಷ್ಠ ತುಂಬಾ ತುಂಬಾ ದೊಡ್ಡದಾಗುತ್ತಿದೆ. ಅದರ ಪರಿಣಾಮ ಭ್ರಷ್ಟಾಚಾರ 40% ಗಿಂತ ಜಾಸ್ತಿಯಾಗಿ, ಬೆಲೆಗಳು ಏರಿಕೆಯಾಗಿ ಎಲ್ಲಾ ವಸ್ತುಗಳ ಗುಣಮಟ್ಟ ಕಳಪೆಯಾಗಿದೆ. ಆದ್ದರಿಂದ ಮದುವೆಗಳು ಸರಳವಾದಷ್ಟು ಭ್ರಷ್ಟಾಚಾರ ಕಡಿಮೆಯಾಗುತ್ತದೆ.
ನಿನ್ನೆ 12/12/2022 ಸೋಮವಾರ ಮೈಸೂರಿನಲ್ಲಿ ನಡೆದ ಮಂತ್ರ ಮಾಂಗಲ್ಯ ವಿವಾಹ ಈ ನಿಟ್ಟಿನಲ್ಲಿ ಒಂದು ಆಶಾದಾಯಕ ಬೆಳವಣಿಗೆ. ನಾಡಿನ ಹಿರಿಯ ಚೇತನ, ಸಾಕ್ಷಿ ಪ್ರಜ್ಞೆ, ಪ್ರಗತಿಪರ ಚಿಂತಕರು, 50 ವರ್ಷಗಳಷ್ಟು ಹಿಂದೆಯೇ ಮಂತ್ರ ಮಾಂಗಲ್ಯ ವಿವಾಹವಾಗಿ ಗೃಹಸ್ಥಾಶ್ರಮ ಪ್ರವೇಶಿಸಿ ಯುವಕರಿಗೆ ಆದರ್ಶವಾಗಿರುವ ಪ್ರೊಫೆಸರ್ ಕಾಳೇಗೌಡ ನಾಗವಾರ ಮತ್ತು ಇತರ ಆತ್ಮೀಯ ಗೆಳೆಯರ ಉಪಸ್ಥಿತಿಯಲ್ಲಿ ನಡೆದ ಸರಳ ವಿವಾಹ ಮತ್ತು ಆಹಾರ ಉಳಿತಾಯದ ಜಾಗೃತಿ ಕಾರ್ಯಕ್ರಮ ಮತ್ತಷ್ಟು ಜನರಿಗೆ ಪ್ರೇರಣೆಯಾಗಲಿ ಎಂದು ಆಶಿಸುತ್ತಾ...
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ