ಮಾಡೆಲ್ ಲೋಕದ ದಿಗ್ಗಜರ ಜಾಹೀರಾತುಗಳು...

ಮಾಡೆಲ್ ಲೋಕದ ದಿಗ್ಗಜರ ಜಾಹೀರಾತುಗಳು...

ಓ, ಹಾಲು ಬಿಳುಪಿನ ಸುರಸುಂದರಾಂಗಿಣಿಯೇ, ಹಾಯ್,ಚೆಲುವಾಂತ ಚೆನ್ನಿಗ ಮನ್ಮಥನೇ, ಸೌಂದರ್ಯ ಸಾಮಾಗ್ರಿಗಳ ಬ್ಯೂಟಿ ಜಾಹೀರಾತುಗಳ ಸಪ್ತಲೋಕದಲ್ಲೂ ಮಿಂಚುವ ಮಾಡಲ್ ಗಳೇ, ನಿಮ್ಮ ಸೌಂದರ್ಯಕ್ಕೆ - ಅದೃಷ್ಟಕ್ಕೆ ಅಭಿನಂದನೆಗಳು. ಆ ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಆಗಿರುವುಕ್ಕೆ ಸಂತೋಷ. ಆದರೆ,......

ಪಕ್ಕದ ಮನೆಯ ಆ ಕಪ್ಪಗಿನ ಹುಡುಗಿಯೊಬ್ಬಳು, ಈ ನೆಲದಲ್ಲಿ ಹುಟ್ಟಿರುವುದಕ್ಕೆ, ತನ್ನ ನಿಯಂತ್ರಣದಲ್ಲಿಲ್ಲದ ದೇಹದ ಬಣ್ಣದ ಕಾರಣಕ್ಕಾಗಿ ತನ್ನೊಳಗೇ ಕೊರಗುತ್ತಿದ್ದಾಳೆ, ಮೊದಲು ಅವಳಿಗೆ ಹೇಳಿ," ಬಣ್ಣಗಳಲ್ಲಿ ಯಾವುದು ಶ್ರೇಷ್ಠ ಎಂದು ಆಕರ್ಷಕ ದೇಹದ ಮಾಡಲ್ ಲೋಕದ ದೇವಾನು ದೇವತೆಗಳೇ ,ಸೂಟು ಬೂಟಿನ ಮಿರಿಮಿರಿ ಮಿಂಚುವ ಬಟ್ಟೆಗಳ ದಿಗ್ಗಜರೇ..... ರೈಲು ನಿಲ್ದಾಣದ ಆ ಕಲ್ಲು ಬೆಂಚಿನ ಮೇಲೆ ಅರೆ ಬಟ್ಟೆಯಲ್ಲಿ ಮಲಗಿರುವ ನಮ್ಮದೇ ಕಂದಮ್ಮಗಳಿಗೆ ಒಮ್ಮೆ ತಿಳಿ ಹೇಳಿ...

ಅವರ ಬದುಕಿನ ಬ್ರಾಂಡ್ ಅಂಬಾಸಿಡರ್ ಗಳು ಯಾರೆಂದು ? ಶಾಂಪೂ, ಸಾಬೂನು, ಸುಗಂಧ ದ್ರವ್ಯಗಳ ಘಮಲುಗಳಲ್ಲಿ ಮುಳುಗೇಳುವ ರಾಜಕುಮಾರ ರಾಜಕುಮಾರಿಯರೇ, ನಮ್ಮ ಹಳ್ಳಿಯ ಅಜ್ಜಿಯ ಹೇನು ಬಿದ್ದ ತಲೆಯ ಕೆರೆತ ಕಡಿಮೆಯಾಗಲು ಏನು ಮಾಡಬೇಕೆಂದು ಸ್ವಲ್ಪ ಹೇಳಿ‌. ಅದಕ್ಕೂ ಪ್ರಚಾರ ರಾಯಭಾರಿಗಳಾಗುವಿರೇ .?

ಚಿನ್ನ ವಜ್ರ ಮುಂತಾದ ಒಡವೆಗಳ ರಾಯಭಾರಿಗಳೇ, ಅಪ್ಸರೆಯರೇ, ವಿಧವೆಯರಿಗೆ ಮಾಸಾಶನ ಅರ್ಜಿ ಎಲ್ಲಿ ಸಿಗುತ್ತದೆ , ಅದನ್ನು ಭರ್ತಿ ಮಾಡುವುದು ಹೇಗೆ ಸ್ವಲ್ಪ ತಿಳಿಸಿಕೊಡಿ. ಅವರಿಗಾರು ರಾಯಭಾರಿಗಳು?

ಏಕೆಂದರೆ ಅವರೂ ಇದೇ ನೆಲದಲ್ಲಿ ಹುಟ್ಟಿದ್ದಾರೆ. ನಿಮ್ಮಂತೆಯೇ ಗಂಡು ಹೆಣ್ಣಿನ ಮಿಲನದ ಕೂಸುಗಳು . ನಿಮ್ಮ ಹತ್ತುಪಟ್ಟು ಶಕ್ತಿ ಸಾಮರ್ಥ್ಯ ಶ್ರಮ ಪ್ರಾಮಾಣಿಕತೆ ಅವರಿಗಿದೆ. ಆದರೆ....ನಿಮ್ಮಂತಹ ಮುಖವಾಡಗಳಿಲ್ಲ. ಅವರು ಕೇವಲ ಮನುಷ್ಯ ಜೀವಿಗಳು. ಕಪಟ ಅರಿಯದ ಸೃಷ್ಟಿಯ ಕೂಸುಗಳು. ಶ್ರೀಮಂತರ  ಅವಶ್ಯಕತೆಗಳನ್ನು ಪೂರೈಸಲು ಎಲ್ಲಾ ವ್ಯವಸ್ಥೆಗಳು ಇವೆ. ಆದರೆ ಸಂಕಷ್ಟದ ಜನರ ನೋವುಗಳನ್ನು ಆಲಿಸಲು ಇರುವುದಾದರೂ ಯಾರು ?

ಆಧುನಿಕ ಸಮಾಜದ ವಿಕೃತಿಗೆ ಅನೇಕ ಉದಾಹಾರಣೆಗಳಿವೆ.  ಆದರೆ ಸಮ ಸಮಾಜದ ನಿರ್ಮಾಣಕ್ಕೆ ಇರುವ ಮಾರ್ಗಗಳು ತೋಚುತ್ತಿಲ್ಲ. ಜಾಹೀರಾತುಗಳಲ್ಲಿ ಸಹ ಮಾನವೀಯ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸಿದರೆ ಎಷ್ಟೊಂದು ಉಪಯುಕ್ತ ಅಲ್ಲವೇ? ಹುಚ್ಚು ಕನಸೆಂದು ನಗುವ ಸ್ವಾತಂತ್ರ್ಯ ನಿಮಗಿದೆ...

  • ಜ್ಞಾನ ಭಿಕ್ಷಾ ಪಾದಯಾತ್ರೆಯ 257 ನೆಯ ದಿನ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಹೋಬಳಿಯಲ್ಲಿಯೇ ವಾಸ್ತವ್ಯ ಹೂಡಿತು. ಆ ಸಮಯದಲ್ಲಿ ಬರೆದ ಬರಹವಿದು.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ