ಮಾತೃ ಛಾಯ (ಭಾಗ 1)

ಮಾತೃ ಛಾಯ (ಭಾಗ 1)

ಬೆಳಿಗ್ಗೆ ಎಂಟು ಗಂಟೆಗೆ ಕಾಲೇಜಿಗೆ ಬಂದ ಛಾಯಾ ಮನೆಗೆ ಹಿಂದಿರುಗುವಾಗ ರಾತ್ರಿ ಎಂಟು ಗಂಟೆ. ಮನೆಯೊಳಗೆ ಕಾಲಿಡುತ್ತಿದ್ದಂತೆ ಅತ್ತೆಯ ದುರುಗುಟ್ಟುವ ನೋಟ, ಗುರುಗುಟ್ಟುತ್ತಿದ್ದ ಗಂಡ, ತಾಯಿ ಬಂದಳೋ ಬಿಟ್ಟಳೋ ಅರಿವೇ ಇಲ್ಲದಂತೆ ಮೊಬೈಲ್ ಒಳಗೆ ಹೂತು ಹೋಗಿರುವ ಮಗ, ಕೈಯಲ್ಲಿ ಕುರ್ ಕುರೇ ಪ್ಯಾಕೆಟ್ ಹಿಡಿದು ಮುಕ್ಕುತ್ತಾ ಟಿ ವಿ ನೋಡುತ್ತಿದ್ದ ಮಗಳು.. ಯಾಕೋ ಯಾರೂ ತನ್ನವರಲ್ಲ ಎನಿಸಿ ನಿರ್ಲಿಪ್ತವಾಗಿ ಮೂಲೆಯಲ್ಲಿ ಚಪ್ಪಲಿ ಬಿಟ್ಟು ಭಾರವಾದ ಹೆಜ್ಜೆ ಇಡುತ್ತಾ ಒಳ ನಡೆದಳು. ಕೈ ಕಾಲು, ಮುಖ ತೊಳೆದು ದೇವರಿಗೆ ನಮಸ್ಕಾರ ಮಾಡಿ ಮೊಬೈಲ್ ಚಾರ್ಜ್ ಗೆ ಹಾಕಿ ಹಾಗೇ ಮಂಚದ ಮೇಲೆ ಕಾಲು ಚಾಚಿ ಗೋಡೆಗೊರಗಿ ಕಣ್ಣು ಮುಚ್ಚಿ ಕುಳಿತಳು. 

ಖಾಸಗಿ ಕಾಲೇಜೊಂದರಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಳು ಛಾಯ. ಇವಳ ದುಡಿಮೆಯಿಂದೇನು ಸಂಸಾರ ಸಾಗ ಬೇಕಾದ ಅನಿವಾರ್ಯತೆ ಇರಲಿಲ್ಲ. ಆದರೂ ಮದುವೆಯಾದ ಹೊಸದರಲ್ಲಿ ಆದ ಅವಮಾನ, ಅನುಭವಗಳು ಅವಳ ಸ್ವಾಭಿಮಾನವ ಕೆಣಕಿ ಹಟಗಟ್ಟಿಸಿ ಕೆಲಸ ಮಾಡಿಸುತ್ತಿದೆ. ಹಳ್ಳಿಯ ಹುಡುಗಿ ಛಾಯಾ. ಮನೆಯಲ್ಲಿ ತುಂಬಾ ಬಡತನ. ಇವಳ ನಂತರ ಇಬ್ಬರು ತಂಗಿಯರು. ಓದಿನಲ್ಲಿ ಬಹಳ ಚುರುಕಿದ್ದ ಛಾಯಾ, ತಂದೆ ತಾಯಿಗೆ ಹೊರೆಯಾಗದಂತೆ ಬಿಡುವಿನ ಸಮಯದಲ್ಲಿ ಬಟ್ಟೆ ಹೊಲಿದು ಗಳಿಸಿದ ಹಣದಲ್ಲಿ ಡಿಗ್ರಿ ಮುಗಿಸಿದ್ದಳು. ಮುಂದೆ ಓದುವ ಮಹದಾಸೆ ಇದ್ದರೂ, ಮನೆ ಪರಿಸ್ಥಿತಿ, ತಂಗಿಯರ ವಿದ್ಯಾಭ್ಯಾಸ ಇವಳ ಆಸೆಯನ್ನು ಅದುಮಿಟ್ಟುಕೊಳ್ಳುವಂತೆ ಮಾಡಿತು. ಅಷ್ಟರಲ್ಲೇ ಸಂಬಂಧಿಕರ ಮುಖಾಂತರ ಬಂದ ಸಂಬಂಧ ಮದುವೆ ಕುದುರಿಸೇ ಬಿಟ್ಟಿತು. ವೃತ್ತಿಯಲ್ಲಿ ಇಂಜಿನಿಯರ್, ಸಿಟಿ ಯಲ್ಲಿ ಓದಿ ಬೆಳೆದಿದ್ದರೂ ಇವಳ ಅನನ್ಯ ರೂಪಕ್ಕೆ ಮಾರುಹೋದ ಸುದೀಪ್ ಖರ್ಚೆಲ್ಲವನ್ನೂ ತಾನೇ ಹಾಕಿ ಕೊಂಡು ವಿವಾಹವಾಗಿದ್ದ. ಛಾಯಾಳಿಗೂ ಬೇಡವೆಂದು ಹೇಳಲು ಯಾವುದೇ ಕಾರಣ ಇರಲಿಲ್ಲ. ಒಬ್ಬನೇ ಮಗ, ಒಳ್ಳೆಯ ಕೆಲಸ, ಮನೆಯಲ್ಲಿ ಅಡುಗೆ ಇಂದ ಹಿಡಿದು ಎಲ್ಲ ಕೆಲಸಕ್ಕೂ ಆಳು ಕಾಳುಗಳು. ಹುಡುಗನ ತಂದೆ ಹೈ ಕೋರ್ಟ್ ಅಲ್ಲಿ ಪ್ರಸಿದ್ಧ ವಕೀಲರು. ಬೆಂಗಳೂರಲ್ಲಿ ಐಶಾರಾಮಿ ಬಂಗಲೆ, ಒಂದಷ್ಟು ನಿವೇಶನಗಳು. ಹಳ್ಳಿಯಲ್ಲಿ ತೋಟ ಗದ್ದೆ. ತೀರ ಹೈ ಫೈ ಕುಟುಂಬ, ಹೇಗೆ ಹೊಂದಿಕೊಳ್ಳುವುದೋ ಎಂಬ ಆತಂಕ ಬಿಟ್ಟರೆ, ಸಂಬಂಧ ಬೇಡ ಎನ್ನಲು ಯಾವ ಸಬೂಬು ಇರಲಿಲ್ಲ. ಆದರೆ ಮದುವೆಯಾಗಿ ಕೆಲವೇ ದಿನಗಳಲ್ಲಿ ಇವಳಿಗೆ ವಾಸ್ತವದ ಅರಿವಾಯಿತು. ತೀರ ಹೈಫೈ ಲೈಫಿಗೆ ಇವಳು ಹೊಂದಿಕೊಳ್ಳುವುದು ಕಷ್ಟವಾಯಿತು. ಹಳ್ಳಿಯ ಬಡ ಕುಟುಂಬದಿಂದ ಬಂದ ಇವಳಿಗೆ ಸಿಟಿ ಲೈಫ್, ಪಾರ್ಟಿ, ಸೆಲೆಬ್ರೇಶನ್ ಗಳು ಉಸಿರುಗಟ್ಟಿಸತೊಡಗಿತ್ತು. ಇವಳಿಗೆ ತನ್ನ ಬಗ್ಗೆ ಕೀಳರಿಮೆ ಶುರುವಾಯಿತು. ಅತ್ತೆ ಮಾವ ಕೊನೆಗೆ ಗಂಡನೂ ಸಹ ಇವಳನ್ನು ಕಡೆಗಾಣಿಸತೊಡಗಿದಾಗ ಇವಳಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಮಾತು ಮಾತಿಗೂ ಹಳ್ಳಿ ಗುಗ್ಗು, ನಾಲಾಯಕ್ಕು, ದಂಡಪಿಂಡ ಎಂಬ ಮಾತುಗಳು ಕ್ರಮೇಣ ನೇರವಾಗಿಯೇ ಇವಳನ್ನು ಇರಿಯ ತೊಡಗಿದವು. ಅತ್ತೆ  ಅವರಿವರ ಹತ್ತಿರ "ನನ್ನ ಅಣ್ಣನ ಮಗಳನ್ನೇ ತಂದು ಕೊಳ್ಳಬೇಕು ಅಂತ ತುಂಬಾ ಆಸೆ ಇತ್ತು ಕಣ್ರೀ. ಅವಳೂ ಇಂಜಿನಿಯರ್. ನಮ್ಮ ಅಂತಸ್ತಿಗೆ ತಕ್ಕಂತಹ ಸಂಬಂಧ ಅದು. ಇವನೇ ಇವಳ ರೂಪ ನೋಡಿ ಮರುಳಾಗಿ ಅವಳನ್ನೇ ಆಗ್ತೀನಿ ಅಂತ ಕೂತು ಬಿಟ್ಟ." ಅನ್ನುವುದು ಕಿವಿಯಾರೆ ಕೇಳಿ ಛಾಯಾಳಿಗೆ ಗರ ಬಡಿದಂತಾಯಿತು. ಪದೇ ಪದೇ ತನ್ನ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಾಗ ತಿರುಗಿ ಬಿದ್ದ ಛಾಯ ತನ್ನ ಓದು ಮುಂದುವರೆಸುವುದಾಗಿ ಹಟ ತೊಟ್ಟಳು. ಸುದೀಪ್ ಸಹ ಸಹಮತಿ ನೀಡಿ ಬಿಟ್ಟ. ಏಕೆಂದರೆ ಅವನ ಸಹೋದ್ಯೋಗಿಗಳ, ಮಿತ್ರರ ಹೆಂಡತಿಯರೆಲ್ಲರೂ ದುಡಿಯುವವರಾಗಿದ್ದರು. ಸಂಪಾದನೆ ಮುಖ್ಯವಾಗಿ ಇಲ್ಲದಿದ್ದರೂ ತನ್ನ ಹೆಂಡತಿಯನ್ನು ಬೇರೆಯವರಿಗೆ ಪರಿಚಯ ಮಾಡಿಕೊಡುವಾಗ ಅವನಿಗೆ ಬಹಳ ಮುಜುಗರ ಆಗುತ್ತಿತ್ತು. ಯಾವಾಗ ಛಾಯ ಎಂ.ಎ ಓದುವುದಾಗಿ ತೀರ್ಮಾನಿಸಿದಳು, ಸುದೀಪ್ ಅನುಮತಿ ನೀಡದೆ ಇರಲಾಗಲಿಲ್ಲ. ಇಂಗ್ಲಿಷ್ ನಲ್ಲಿ ಎಂ ಎ ಮುಗಿಸಿ ಖಾಸಗಿ ಕಾಲೇಜ್ ಒಂದರಲ್ಲಿ ಉಪನ್ಯಾಸಕಿಯಾಗಿ ಕೆಲಸಕ್ಕೆ ಸೇರಿದ ಛಾಯಾಳಿಗೆ ಮನೆಯ ಉಸಿರು ಗಟ್ಟುವ ವಾತಾವರಣದಿಂದ ಸ್ವಲ್ಪಮಟ್ಟಿಗೆ ಬಿಡುಗಡೆ ಸಿಕ್ಕಂತಾಯಿತು. ಇವಳ ಗಂಡ, ಅತ್ತೆ-ಮಾವಂದಿರಿಗೂ ಇವಳೊಬ್ಬಳು ಉಪನ್ಯಾಸಕಿ ಎಂದು ಎಲ್ಲರ ಮುಂದೆ ಹೇಳಿಕೊಳ್ಳಬಹುದು ಎಂದು ಸಮಾಧಾನವಾಯಿತು. ಆದರೂ ಸಹ ಛಾಯ ಆಧುನಿಕ ಜೀವನಶೈಲಿಗೆ ಹೊಂದಿಕೊಳ್ಳಲೇ ಇಲ್ಲ. ಸ್ಲೀವ್ ಲೆಸ್ ಬ್ಲೌಸ್, ಮೇಕಪ್ ಲಿಪ್ಸ್ಟಿಕ್, ಬಾಬ್ ಕಟ್ ಯಾವುದು ಇವಳಿಗೆ ಹಿಡಿಸಲೇ ಇಲ್ಲ. ಯಾವುದೇ ಪಾರ್ಟಿ, ಸಭೆ ,ಸಮಾರಂಭ, ಫ್ಯಾಮಿಲಿ ಗೆಟ್ ಟುಗೆದರ್ ಎಲ್ಲದರಲ್ಲೂ ಇವಳು ಗುಂಪಿಗೆ ಸೇರದ ಪದವಾಗಿಯೇ ಉಳಿದುಬಿಟ್ಟಳು. ತುಂಬಾ ಮಾಡ್ರನ್ ಆಗಿದ್ದ ಇವಳ ಅತ್ತೆ, ಮಾವ, ಗಂಡ ಇವರಿಗೆ ಛಾಯಾಳ ಸರಳತೆ ಅಸಹನೀಯವಾಗಿಯೇ ಉಳಿದುಬಿಟ್ಟಿತು. ಕ್ರಮೇಣ ತಲೆನೋವು, ಹೊಟ್ಟೆ ನೋವು, ಮೌಲ್ಯಮಾಪನ ಹೀಗೆ ನೆಪಗಳನ್ನು ಹೇಳಿಕೊಂಡು ಛಾಯ ಪಾರ್ಟಿ, ಸಮಾರಂಭಗಳನ್ನು ತಪ್ಪಿಸಿಕೊಳ್ಳತೊಡಗಿದಳು. ನಂತರ ಎರಡು ಮಕ್ಕಳು ಅವರ ಪಾಲನೆ ಪೋಷಣೆ, ಕೆಲಸ ಹೀಗೆ ಬ್ಯುಸಿಯಾದ ಛಾಯ ದಿನಗಳನ್ನು ಕಳೆಯುತ್ತಾ ನಲವತ್ತು ದಶಕಗಳನ್ನು ದಾಟಿಯೇ ಬಿಟ್ಟಿದ್ದಳು. ಟೀನೇಜ್ ಗೆ ಕಾಲಿಟ್ಟ ಮಗ ಹಾಗೂ ಮಗಳಿಗೂ ಛಾಯ ತುಂಬಾ ಔಟ್ ಡೇಟೆಡ್ ಆಗಿ ಕಾಣತೊಡಗಿದಳು. ಸ್ನೇಹಿತರ ತಾಯಂದಿರೆಲ್ಲರೂ ತುಂಬಾ ಮಾಡ್ರನ್ ಆಗಿದ್ದು ತಮ್ಮ ತಾಯಿಯೂ ಅವರಂತೆಯೇ ಇರಬೇಕೆಂದು ಬಯಸಿದರು ಮಕ್ಕಳು. ಅಜ್ಜ-ಅಜ್ಜಿಯ ಮುದ್ದು ತಂದೆಯ ಸಲಿಗೆ, ಬೇಕೆಂದಿದೆಲ್ಲಾ ಕೈಗೆ ಬಹಳ ಸುಲಭವಾಗಿ ಸಿಗುತ್ತಿದ್ದಾಗ ಬುದ್ಧಿ ಹೇಳುತ್ತಿದ್ದ ಛಾಯಾ ಮಕ್ಕಳಿಗೆ ಶತ್ರುವಾಗಿಯೇ ಬಿಟ್ಟಳು. ಕಾಲೇಜು ವಿದ್ಯಾರ್ಥಿಗಳ ಒಡನಾಟದಲ್ಲಿ ಛಾಯಾ ಹೇಗೋ, ತನ್ನ ಮನಸ್ಸಿನ ನೋವನ್ನು ಮರೆಯಲು ಪ್ರಯತ್ನಿಸುತ್ತಿದ್ದಳು. 

ಕಾಲೇಜಿನಲ್ಲಿ ಛಾಯಾ ಮೇಡಂ ಎಂದರೆ ಮಕ್ಕಳಿಗೆ ಬಹಳ ಪ್ರೀತಿ. ಎಷ್ಟೋ ವಿದ್ಯಾರ್ಥಿಗಳು ಇವಳ ಬಳಿ ಬಂದು ತಮ್ಮ ಕಷ್ಟ ನೋವು ಸಮಸ್ಯೆಗಳನ್ನು ಹಂಚಿಕೊಳ್ಳುತ್ತಿದ್ದರು. ವಿದ್ಯಾರ್ಥಿಗಳೆಲ್ಲ ತನ್ನ ಮಕ್ಕಳಂತೆ ಎಂದು ಅವರಿಗೆ ಸಮಾಧಾನ, ಬುದ್ಧಿವಾದ ಹೇಳಿ ಮೋಟಿವೇಟ್ ಮಾಡಿ ಕಳುಹಿಸುತ್ತಿದ್ದಳು ಛಾಯಾ. ಒಮ್ಮೊಮ್ಮೆ ಯೋಚಿಸುತ್ತಿದ್ದಳು ತನ್ನ ಮಕ್ಕಳೇ ತನಗೆ ಹತ್ತಿರವಾಗಲಿಲ್ಲ, ಯಾವುದೋ ತಾಯಿ ಹೆತ್ತ ಮಕ್ಕಳು ತನ್ನನ್ನು ಸ್ವಂತ ತಾಯಿಯಂತೆ ಹಚ್ಚಿಕೊಳ್ಳುತ್ತಾರಲ್ಲ ಎಂದು. ಮೊದಲೆಲ್ಲ ತನ್ನ ಮಕ್ಕಳ ಮೊಬೈಲ್ ಗೀಳು, ದುಂದು ವೆಚ್ಚ, ಅಸಹ್ಯ ಎನಿಸುವ ಉಡುಗೆ- ತೊಡುಗೆ ಇವುಗಳನ್ನು ಸಮಾಧಾನವಾಗಿ ಸರಿಪಡಿಸಲು ಬಹಳ ಯತ್ನಿಸಿದಳು. ಕೋಪ ಮಾಡಿಕೊಂಡು ಬೈದಳು. ಅಗತ್ಯ ಬಿದ್ದಲ್ಲಿ ನಾಲ್ಕು ಪೆಟ್ಟನ್ನು ಕೊಡುತ್ತಿದ್ದಳು. ಆದರೆ ಮನೆಯಲ್ಲಿ ಹಿರಿಯರೆಲ್ಲರೂ ಮಕ್ಕಳನ್ನು ಆಧುನಿಕ ಶೈಲಿಯಲ್ಲಿ ಬೆಳೆಸುವುದು ಸೂಕ್ತ ಎಂದು ಅವರಿಗೆ ಬೆಂಬಲವಾಗಿ ನಿಂತಾಗ ಇವಳು ಸೋಲಲೇ ಬೇಕಾಯಿತು. ಹಲ್ಲು ಕಚ್ಚಿಕೊಂಡು ಸುಮ್ಮನಾದಳು. 40 ದಾಟಿದ ಮೇಲೆ ಮೆನೋಪಾಸ್ ಹತ್ತಿರವಾಗುತ್ತಿದ್ದಂತೆ ದೈಹಿಕ ಮಾನಸಿಕ ಆರೋಗ್ಯದಲ್ಲಾಗುವ ಏರುಪೇರು ಇವಳನ್ನು ಕುಗ್ಗಿಸಿ ಬಿಟ್ಟಿತ್ತು. ಕಾಲೇಜಿನಲ್ಲು ವಾತಾವರಣ ಇತ್ತೀಚೆಗೆ ಅಷ್ಟೊಂದು ಹಿತಕರವಾಗಿ ಇರಲಿಲ್ಲ. ಮ್ಯಾನೇಜ್ ಮೆಂಟಿನ ದಬ್ಬಾಳಿಕೆ, ಹೊಸದಾಗಿ ನೇಮಕಗೊಂಡ ಪ್ರಾಂಶುಪಾಲರ ದರ್ಪ ಛಾಯಾಳಿಗೆ ಹಾಗೂ ಇವಳ ಸಮಾನ ಸಹೋದ್ಯೋಗಿ ಕೆಲವರಿಗೆ ತುಂಬಾ ಹಿಂಸಿಸುತ್ತಿತ್ತು. ಕೆಲಸಕ್ಕೆ ರಾಜೀನಾಮೆ ಕೊಟ್ಟುಬಿಡುವ ಎನ್ನುವಷ್ಟು ಹತಾಶಳಾಗಿ ಬಿಡುತ್ತಿದ್ದಳು ಒಮ್ಮೊಮ್ಮೆ ಛಾಯಾ. ಆದರೆ ಮನೆಯಲ್ಲಿಯ ಧಂ ಗುಟ್ಟುವ ವಾತಾವರಣಕ್ಕಿಂತ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಡನೆ, ಸ್ನೇಹಿತೆಯರೊಡನೆ ಕಾಲ ಕಳೆಯುವುದೇ ಲೇಸು ಎಂದು ಸುಮ್ಮನಿದ್ದಳು. ಮನಸೆಲ್ಲಾ ಮುದುಡಿ ದೇಹ ದಣಿದು ಮನೆಗೆ ಬಂದರೆ ಮನೆಯಲ್ಲಿ ಎಲ್ಲರ ನಿರ್ಲಕ್ಷ್ಯ ಇವಳನ್ನು ಇನ್ನಷ್ಟು ನೋಯಿಸುತ್ತಿತ್ತು. 

(ಇನ್ನೂ ಇದೆ)

ಲೇಖಕರು :ದಿವ್ಯಾ ರಾವ್, ಸಂಗ್ರಹ: ವೀರೇಶ್ ಅರಸೀಕೆರೆ.

ಚಿತ್ರ ಕೃಪೆ: ಇಂಟರ್ನೆಟ್ ತಾಣ