ಮಾದಕ ವಸ್ತು ವ್ಯಸನ ಮತ್ತು ದುಷ್ಪರಿಣಾಮ

ಮಾದಕ ವಸ್ತು ವ್ಯಸನ ಮತ್ತು ದುಷ್ಪರಿಣಾಮ

ಗಾಂಜಾ, ಅಫೀಮು, ಕೊಕೇನ್, ಬ್ರೌನ್ ಶುಗರ್ ಮುಂತಾದವುಗಳನ್ನು ಮಾದಕ ವಸ್ತುಗಳೆಂದು ಪರಿಗಣಿಸಲಾಗುತ್ತದೆ, ಸಿಗರೇಟು ಮಧ್ಯಪಾನ ಮುಂತಾದವುಗಳನ್ನು ದುಶ್ಚಟಗಳು ಎಂದು ಕರೆಯಲಾಗುತ್ತದೆ, ಪೆಪ್ಸಿ, ಕೋಕ್, ಫಾಂಟಾಗಳನ್ನು ಅನಾರೋಗ್ಯಕಾರಿ ಪಾನೀಯಗಳು ಎಂದು ಹೇಳಲಾಗುತ್ತದೆ, ಎಳನೀರು, ಕಬ್ಬಿನ ಹಾಲು, ರಾಗಿ ಗಂಜಿ ಮುಂತಾದವುಗಳನ್ನು ಆರೋಗ್ಯವಂತ ಪಾನೀಯಗಳು ಎಂದು ಪರಿಗಣಿಸಲಾಗುತ್ತದೆ. ಈಗ ಈ ಪಟ್ಟಿಯಲ್ಲಿ ಅತ್ಯಂತ ಎತ್ತರದಲ್ಲಿ, ಮೊದಲನೆಯ ಸ್ಥಾನದಲ್ಲಿರುವುದು ಡ್ರಗ್ಸ್ ಅಥವಾ ಮಾದಕ ವಸ್ತುಗಳು. ಇದು ಅತ್ಯಂತ ಅಪಾಯಕಾರಿ ಮತ್ತು ಅನಾರೋಗ್ಯಕಾರಿ.

ಮಾದಕ ವಸ್ತುಗಳಾದ ಈ ಗಾಂಜಾ, ಅಫೀಮು, ಚರಸ್, ಬ್ರೌನ್‌ ಶುಗರ್, ಕೊಕೇನ್ ಮುಂತಾದವುಗಳ ಮಾದಕ  ಗುಣವೆಂದರೆ ಅದನ್ನು ಸೇವಿಸಿದಾಗ ಆ ಕ್ಷಣದಲ್ಲಿ ನಿಮ್ಮ ಮನಸ್ಸಿನಲ್ಲಿದ್ದ ದುಃಖ, ನೋವು, ಆಕ್ರೋಶ, ಕೋಪ, ಸಂತೋಷ, ಪ್ರೀತಿ, ವಿರಹ, ದ್ವೇಷ, ಅಸೂಯೆ ಅಥವಾ ಇನ್ನಾವುದೇ ಭಾವನೆಯಿರಲಿ ಅದು ಮತ್ತಷ್ಟು ಉದ್ವೇಗಗೊಂಡು ಆ ಮಾದಕತೆಯ ಪರಿಣಾಮ ಇರುವವರೆಗೂ ಸ್ಥಿರವಾಗಿರುತ್ತದೆ ಮತ್ತು ಆ ಮಾದಕ ವಸ್ತುಗಳೇ ಅವನ ದೇಹ ಮತ್ತು ಮನಸ್ಸನ್ನು ನಿಯಂತ್ರಿಸುತ್ತದೆ. ಆಗಲೇ ಅನೇಕ ಅಸಹಜ, ಅಸಹನೀಯ, ಅನೈತಿಕ ಅಪರಾಧಗಳಾಗುವ ಸಾಧ್ಯತೆಯೇ ಹೆಚ್ಚು.

ಒಂದು ವೇಳೆ ನೀವು ಅದಕ್ಕೆ ಸಂಪೂರ್ಣ ದಾಸರಾಗಿದ್ದೇ ಆದರೆ ಅದರ ಪರಿಣಾಮ ಊಹಿಸಲೂ ಅಸಾಧ್ಯ. ಸಮಾಜದ ಕೆಲವೇ ಜನರು ಇದಕ್ಕೆ ದಾಸರಾಗಿದ್ದರೂ ಅದರ ಪರಿಣಾಮ ಮಾತ್ರ ಗಂಭೀರವಾದುದು. ನನ್ನ ಪ್ರಕಾರ ದೇಶದ ಸಂಸತ್ತು ಮತ್ತು ರಾಜ್ಯದ ವಿಧಾನಸಭೆಗಳು ವಿಶೇಷ ಅಧಿವೇಶನ ಕರೆದು ಇದರ  ಬಗ್ಗೆ ಚರ್ಚಿಸಿ, ತಜ್ಞರ ಸಮಿತಿ ರಚಿಸಿ, ಹೊಸ ರೀತಿಯ ಕಾರ್ಯಯೋಜನೆ ರೂಪಿಸಬೇಕಿದೆ. ಬಹುಶಃ ಇದನ್ನು ಮೂಲೋಚ್ಚಾಟನೆ ಮಾಡಲು ಭಯೋತ್ಪಾದನೆ ನಿಗ್ರಹದಂತಹ ಗಂಭೀರ ಇಲಾಖೆಯ ಅವಶ್ಯಕತೆ ಇದೆ. ಬಹುತೇಕ ಕ್ರಿಮಿನಲ್ ಅಪರಾಧಗಳು ಇದರಿಂದಾಗಿಯೇ ನಡೆಯುತ್ತಿದೆ. ಯುವಕರು ತಮ್ಮ ಬದುಕನ್ನೇ ನಾಶಮಾಡಿಕೊಳ್ಳುತ್ತಿದ್ದಾರೆ.

ಪ್ರಾರಂಭದಲ್ಲಿ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಮತ್ತು ಹೆಚ್ಚು ಕೇಂದ್ರೀಕೃತವಾಗಿದ್ದ ಈ ಡ್ರಗ್ಸ್ ಮಾಫಿಯಾ ಇತ್ತೀಚಿನ ವರ್ಷಗಳಲ್ಲಿ ತಾಲ್ಲೂಕು, ಹೋಬಳಿ ಕೇಂದ್ರಗಳಿಗೂ ಹಬ್ಬಿದೆ. ಅನೇಕ ವಿದೇಶಿಯರು ಕೋಟಿ ಕೋಟಿ ಗಟ್ಟಲೆ ಬೆಲೆಬಾಳುವ ಡ್ರಗ್ಸ್ ಗಳನ್ನು ಚಾಕಲೇಟು, ತಂಪು ಪಾನೀಯ, ಸಿಹಿ ಪದಾರ್ಥಗಳು ಮುಂತಾದವುಗಳ ಮೂಲಕ ನಿಧಾನವಾಗಿ ಅದರ ರುಚಿ ಹತ್ತಿಸಿ, ಮುಖ್ಯವಾಗಿ ಯುವಜನರನ್ನು ಅದಕ್ಕೆ ದಾಸರನ್ನಾಗಿ ಮಾಡುತ್ತಿವೆ.

ಮೆಕ್ಸಿಕೋ, ಇಟಲಿ, ಆಫ್ರಿಕಾದ ಕೆಲವು ದೇಶಗಳು, ಏಷ್ಯಾದ ಕೆಲವು ದೇಶಗಳು ಅದರಲ್ಲೂ ಬಡತನದ ದೇಶಗಳಲ್ಲಿ ಈ ಜಾಲ ತುಂಬಾ ವ್ಯಾಪಕವಾಗಿದೆ. ಸಹಜ ಪರಿಸ್ಥಿತಿಯಲ್ಲಿ ವ್ಯಕ್ತಿಯೊಬ್ಬ ಕೊಲೆ, ಅತ್ಯಾಚಾರ, ದರೋಡೆ ಅಥವಾ ಇನ್ಯಾವುದೇ ಅಪರಾಧ ಮಾಡಲು ಸಾವಿರ ಬಾರಿ ಯೋಚಿಸುತ್ತಾನೆ ಮತ್ತು ತನ್ನ ಭವಿಷ್ಯ, ಕಾನೂನಿನ ಶಿಕ್ಷೆ, ಸಮಾಜದ ತಿರಸ್ಕಾರ ಇವುಗಳ ಬಗ್ಗೆ ಯೋಚಿಸಿ ಭಯಪಡುತ್ತಾನೆ. ಆದರೆ ಈ ಡ್ರಗ್ ಸೇವನೆ ಅದಕ್ಕೆಲ್ಲ ಪರಿಹಾರ ರೂಪದಲ್ಲಿ ಆತನ ಯೋಚನೆಯನ್ನು ನಿಯಂತ್ರಿಸುತ್ತದೆ. ತದನಂತರ ತುಂಬಾ ಸಹಜವಾಗಿ ಮತ್ತು ಅತ್ಯಂತ ಕ್ರೌರ್ಯವಾಗಿ ಅಪರಾಧಗಳನ್ನು ಮಾಡಲು ಆತ ಸಿದ್ದನಾಗುತ್ತಾನೆ. ಇದು ಡ್ರಗ್ಸ್ ಬಗ್ಗೆ ಕಳವಳ ವ್ಯಕ್ತಪಡಿಸಲು ಇರುವ ಮುಖ್ಯ ಕಾರಣ.

ಈ ಮಾದಕ ವಸ್ತುಗಳ ಪ್ರಚೋದನೆಗೆ ಮತ್ತೊಂದು ಸಾಧನವೆಂದರೆ ಚಲನಚಿತ್ರವೆಂಬ ವಾಣಿಜ್ಯ - ಮನರಂಜನಾ ಉದ್ಯಮ. ಅಲ್ಲಿನ ಕೆಲವು ಪಾತ್ರಗಳು ಯಾವಾಗಲೂ ಈ ಡ್ರಗ್ಸ್ ಅಮಲಿನಲ್ಲಿಯೇ ತೇಲುತ್ತಿರುತ್ತವೆ. ಆ ಪಾತ್ರಗಳು ವಿಲನ್ ಆಗಿದ್ದರೂ ಸಹ ಅದನ್ನು ಮನರಂಜನೆಯ ದೃಷ್ಟಿಯಿಂದ ಅತಿರಂಜಿಸಿ ಆಕರ್ಷಿಕವಾಗಿ ಚಿತ್ರಿಕರಿಸಲಾಗುತ್ತದೆ. ಅದು 18/20 ವರ್ಷದ ಯುವ ಜನರಲ್ಲಿ ಏನೋ ಒಂದು ರೀತಿಯ ಆಕರ್ಷಣೆ ಉಂಟುಮಾಡಿ ಅವರು ಅದರ ದಾಸ್ಯಕ್ಕೆ ಒಳಗಾಗುವುದನ್ನು ಗಮನಿಸಬಹುದು.

ಹಿಂದೆ ಒಬ್ಬ ಪ್ರಖ್ಯಾತ ನಟ ತುಂಬಾ ವಿಭಿನ್ನ ಶೈಲಿಯಲ್ಲಿ ಸಿಗರೇಟ್ ಸೇದುವುದನ್ನು ನೋಡಿ ಅನೇಕ ಜನ ಸಿಗರೇಟ್ ಅನ್ನು ಕಲಿತು ಅದಕ್ಕೆ ದಾಸರಾಗಿರುವುದನ್ನು ಕಾಣುತ್ತೇವೆ. ಇದು ವೈಯಕ್ತಿಕ ಸಮಸ್ಯೆಯಲ್ಲ. ಭಾರತವನ್ನು ಮಾದಕ ದ್ರವ್ಯ ಮುಕ್ತ ರಾಷ್ಟ್ರ ಮಾಡಲು ಉಪಾಯ ಹುಡುಕಬೇಕಿದೆ. ಇದು ವಿವಿಧ ಹಂತಗಳ ಕಾರ್ಯಕ್ರಮವಾಗಿರಬೇಕು. ಕೇವಲ ಕಾನೂನಿನಿಂದ ಇದನ್ನು ತಡೆಯಲು ಸಾಧ್ಯವಾಗುವುದಿಲ್ಲ. ಸಮಾಜದ ನೈತಿಕ ಮೌಲ್ಯಗಳನ್ನು ಹೆಚ್ಚಿಸುವುದು, ಯುವ ಜನಾಂಗವನ್ನು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಅತ್ಯುತ್ತಮ ಕ್ರೀಡಾ ಸಂಕೀರ್ಣ ಮತ್ತು ಸಾಂಸ್ಕೃತಿಕ ಭವನಗಳನ್ನು ನಿರ್ಮಿಸುವುದು, ಮಾದಕ ವ್ಯವಸನಿಗಳು ಯಾರೇ ಆಗಿದ್ದರು ಯಾರ ಅನುಮತಿಯ ಅವಶ್ಯಕತೆ ಇಲ್ಲದೆ ಕೊರೋನಾ ವೈರಸ್ ಪೀಡಿತರಂತೆ ನೇರವಾಗಿ ಸರ್ಕಾರವೇ ಅವರನ್ನು ಅರೆ ಜೈಲಿನಂತ ಸುಧಾರಣಾ ಕೇಂದಕ್ಕೆ ಸೇರಿಸಿ ಸಂಪೂರ್ಣ ಗುಣಮುಕ್ತ ಎಂದು ವೈದ್ಯರು ಹೇಳಿದ ನಂತರವೇ ಬಿಡುಗಡೆ ಮಾಡಬೇಕು. ಅದಕ್ಕಿಂತ ಮುಖ್ಯವಾಗಿ ಆ ಮಾದಕ ವಸ್ತುಗಳ ಉತ್ಪಾದಕರನ್ನು ಭಯೋತ್ಪಾದಕರೆಂದೇ ಪರಿಗಣಿಸಬೇಕು. ಈ ಇಚ್ಛಾಶಕ್ತಿ ಇಲ್ಲದೆ, ಸುಮ್ಮನೆ ದಾಳಿಗಳು, ತನಿಖೆ, ಬಂಧನ ಎಲ್ಲವೂ ಕೇವಲ ಕಣ್ಣೊರೆಸುವ ತಂತ್ರ ಮಾತ್ರ.

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ