ಮಾಧ್ಯಮ ಮಿತ್ರರ ಗಮನಕ್ಕೆ...

The press is the best instrument for enlightening the mind of man, and improving him as a rational, moral and social being...
( ಮಾಧ್ಯಮ ಎಂಬುದು ಜನರನ್ನು ಜ್ಞಾನೋದಯ ಮಾಡುವ ಒಂದು ಅತ್ಯುತ್ತಮ ಸಾಧನಾ ಮತ್ತು ಅವರಲ್ಲಿ ವೈಚಾರಿಕತೆ - ನೈತಿಕತೆ ಮತ್ತು ಮಾನವೀಯತೆಯನ್ನು ಬೆಳೆಸಬಹುದು )
ಅಮೆರಿಕದ ಮೂರನೇ ಅಧ್ಯಕ್ಷ ಮತ್ತು ಖ್ಯಾತ ಚಿಂತಕ ಥಾಮಸ್ ಜೆಫರ್ಸನ್ ಅವರ ಒಂದು ಹೇಳಿಕೆಯನ್ನು ನೆನಪು ಮಾಡಿಕೊಳ್ಳುತ್ತಾ..
ಒಂದು ಸಮಾಜದ ನಿಜವಾದ ಕಣ್ಣು ಮತ್ತು ಆತ್ಮ ಎಂದು ಪರಿಗಣಿಸಬಹುದಾದ ಮಾಧ್ಯಮ ಕ್ಷೇತ್ರ ತಂತ್ರಜ್ಞಾನದ ಕ್ರಾಂತಿಯಿಂದಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಅದರಲ್ಲೂ ಟೆಲಿವಿಷನ್ ಸುದ್ದಿ ಮಾಧ್ಯಮ ಸುದ್ದಿ ಮೂಡುವ ಮೊದಲೇ ಸುದ್ದಿ ತಲುಪಿಸುವಷ್ಟು ವೇಗವಾಗಿ ಪ್ರಸಾರವಾಗುತ್ತದೆ ಎಂದು ಹಾಸ್ಯ ಮಾಡುವಷ್ಟು ವೇಗವಾಗಿದೆ. ಇದು ಸ್ವಾಗತಾರ್ಹ ಬೆಳವಣಿಗೆ. ಪ್ರಜಾಪ್ರಭುತ್ವದ ಯಶಸ್ಸಿನ ದೃಷ್ಟಿಯಿಂದ - ಎಲ್ಲಾ ರೀತಿಯ ಶೋಷಿತರ ಹಿತರಕ್ಷಣೆಯ ದೃಷ್ಟಿಯಿಂದ ಮತ್ತು ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ಇದು ಅತ್ಯುತ್ತಮ ಬೆಳವಣಿಗೆ.
ಆದರೆ ವೇಗ ಸ್ಪರ್ಧೆ ಆಧುನಿಕತೆ, ಮಾಧ್ಯಮ ಕ್ಷೇತ್ರದ ಅತ್ಯಮೂಲ್ಯ ಅಂಶಗಳಾದ ವಿವೇಚನೆ ಸತ್ಯ ವೈಚಾರಿಕತೆ ಮತ್ತು ಮಾನವಿಯತೆಯನ್ನು ನಿಧಾನವಾಗಿ ನಿರ್ಲಕ್ಷಿಸುತ್ತಾ ವ್ಯಾಪಾರೀಕರಣಗೊಂಡು ಒಂದು ಮೌಲ್ಯ ರಹಿತ ಜವಾಬ್ದಾರಿ ರಹಿತ ಉದ್ಯಮವಾಗಿ ಬೆಳೆಯುತ್ತಿರುವುದು ನಾಗರಿಕ ಸಮಾಜದ ದೃಷ್ಟಿಯಿಂದ ಅಪಾಯಕಾರಿ ಮತ್ತು ಆಘಾತಕಾರಿ ಎಂದು ನಾವು ಭಾವಿಸುತ್ತೇವೆ.
ಕೇವಲ 30-40 ವರ್ಷಗಳ ಹಿಂದಿನ ಮಾಧ್ಯಮ ಲೋಕದಲ್ಲಿ ಒಂದು ಮಾತು ಪ್ರಚಲಿತದಲ್ಲಿತ್ತು."ರವಿ ಕಾಣದ್ದನ್ನ ಕವಿ ಕಂಡ. ಕವಿ ಕಾಣದ್ದನ್ನ ಪತ್ರಕರ್ತ ಕಂಡ" ಅಂದರೆ ಪತ್ರಕರ್ತರು ಅತ್ಯಂತ ಸೂಕ್ಷ್ಮ ವ್ಯಕ್ತಿತ್ವದವರು ಮತ್ತು ದೂರದೃಷ್ಟಿಯುಳ್ಳವರು ಹಾಗೂ ಬಹಳ ಬುದ್ದಿವಂತರು ಎಂಬ ಭಾವನೆ ಮತ್ತು ಮಾನ್ಯತೆ ಸಮಾಜದಲ್ಲಿ ಇತ್ತು. ಆ ಭಾವನೆಗೆ ಈಗ ಧಕ್ಕೆಯಾಗಿದೆ ಎಂದು ನಮಗೆ ಅನಿಸುತ್ತಿದೆ.
ಬಹುಶಃ ಶಾಸಕಾಂಗ ಮತ್ತು ಕಾರ್ಯಾಂಗಕ್ಕಿಂತ ಹೆಚ್ಚಿನ ಆಕ್ರೋಶ ಇತ್ತೀಚಿನ ದಿನಗಳಲ್ಲಿ ಟೆಲಿವಿಷನ್ ಸುದ್ದಿ ಮಾಧ್ಯಮಗಳ ಬಗ್ಗೆ ಜನರಲ್ಲಿ ವ್ಯಕ್ತವಾಗುತ್ತಿದೆ. ಇದು ಇನ್ನೂ ಬಹಿರಂಗವಾಗಿ ಸ್ಪೋಟವಾಗುವಷ್ಟು ತೀವ್ರವಾಗಿಲ್ಲ ಮತ್ತು ಸಂಘಟಿತವಾಗಿಲ್ಲ. ಜೊತೆಗೆ ಎಲ್ಲಾ ರೀತಿಯ ಸಾರ್ವಜನಿಕ ಕ್ಷೇತ್ರದಲ್ಲಿರುವ ಜನಪ್ರಿಯ ವ್ಯಕ್ತಿಗಳು ಬಹುತೇಕ ಹಣ ಅಧಿಕಾರ ಪ್ರಚಾರ ಪ್ರಶಸ್ತಿ ಮುಂತಾದ ವಿಷಯಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಬಹುತೇಕ ಭ್ರಷ್ಟಗೊಂಡಿದ್ದಾರೆ. ( ಅಪರೂಪದ ಕೆಲವು ಉದಾಹರಣೆ ಹೊರತುಪಡಿಸಿ )
ಅವರುಗಳು ಮಾಧ್ಯಮಗಳ ವಿವೇಚನಾ ರಹಿತ ಸುದ್ದಿಯ ಆಯ್ಕೆಯ ವಿಷಯದಲ್ಲಿ ಬಹಿರಂಗವಾಗಿ ಧ್ವನಿ ಮಾಡುತ್ತಿಲ್ಲ. ಆ ಕಾರಣ ಈ ವಿಷಯ ಹೆಚ್ಚು ನಿಮ್ಮ ಗಮನಕ್ಕೆ ಬಂದಿರುವ ಸಾಧ್ಯತೆ ಕಡಿಮೆ ಅಥವಾ ಅದರ ಅರಿವಿದ್ದರೂ ಅದನ್ನು ವೈಯಕ್ತಿಕವಾಗಿ ಆತ್ಮ ವಿಮರ್ಶೆ ಮಾಡಿಕೊಳ್ಳಲು ಅವಕಾಶ ಸಿಗದಿರಬಹುದು ಅಥವಾ ಅದರಿಂದ ಹೆಚ್ಚಿನ ಪ್ರಯೋಜನ ಇಲ್ಲ ಎನಿಸಿರಬಹುದು.
ಅದಕ್ಕಾಗಿ ನಾವು ಕೆಲವು ಜನರು ಕೆಳಗೆ ತಿಳಿಸಿರುವ ದಿನಾಂಕ ಮತ್ತು ಸಮಯದಂದು " ಆತ್ಮಾವಲೋಕನ ಸತ್ಯಾಗ್ರಹ "ಎಂಬ ಅತ್ಯಂತ ಪ್ರೀತಿಯ ಮತ್ತು ಶಾಂತಿಯ ಒಂದು " ಪ್ರೀತ್ಯಾಗ್ರಹ " ಮಾಡಬೇಕೆಂದು ತೀರ್ಮಾನಿಸಿದ್ದೇವೆ. ಇದು ಮಾಧ್ಯಮ ಲೋಕದ ವಿರುದ್ಧ ಖಂಡಿತ ಅಲ್ಲ. ಮಾಧ್ಯಮ ಲೋಕದ ಮೇಲಿನ ಪ್ರೀತಿಯಿಂದ ಅಭಿಮಾನದಿಂದ ಮಾಧ್ಯಮದ ಮಹತ್ವ ಎತ್ತಿಹಿಡಿಯಲು ಮತ್ತು ಆತ್ಮಾವಲೋಕನ ಮಾಡಿಕೊಳ್ಳಲು ಒಂದು ಸಣ್ಣ ಪ್ರಯತ್ನ ಮಾತ್ರ. ಎಲ್ಲಾ ಕ್ಷೇತ್ರಗಳು ಸಹ ಸಾಕಷ್ಟು ಮಲಿನವಾಗುತ್ತಿರುವ ಸಂದರ್ಭದಲ್ಲಿ ಎಲ್ಲರನ್ನೂ ಎಚ್ಚರಿಸಿ ಕಾವಲಾಗಬೇಕಾದ ಮಾಧ್ಯಮ ಲೋಕ ಮಲಿನವಾದರೆ ಸಾಮಾನ್ಯರ ಪರಿಸ್ಥಿತಿ ತುಂಬಾ ಶೋಚನೀಯವಾಗಿತ್ತದೆ. ಆದ್ದರಿಂದ....
ದಿನಾಂಕ : 11/05/2022 - ಬುಧವಾರ.
ಸ್ಥಳ : ಪಬ್ಲಿಕ್ ಟಿವಿ. ಸಮಯ : ಬೆಳಗ್ಗೆ 9.30 ರಿಂದ 11 ಗಂಟೆ
ಸ್ಥಳ : ಸುವರ್ಣ ಟಿವಿ. ಸಮಯ : ಬೆಳಗ್ಗೆ 11.30 ರಿಂದ 1 ಗಂಟೆ
ಸ್ಥಳ : ಬಿಟಿವಿ. ಸಮಯ. : ಮಧ್ಯಾಹ್ನ 2 ರಿಂದ 3.30 ಗಂಟೆ
ಸ್ಥಳ : ಟಿವಿ 9 ಸಮಯ. : ಸಂಜೆ 4 ರಿಂದ 5-30 ಗಂಟೆ
( ಇದು ಸಾಂಕೇತಿಕ. ಇತರ ಕನ್ನಡದ ಎಲ್ಲಾ ಟೆಲಿವಿಷನ್ ಸುದ್ದಿ ಮಾಧ್ಯಮಗಳಿಗು ಏಕ ಪ್ರಕಾರವಾಗಿ ಅನ್ವಯ) ದಿಕ್ಕಾರವಿರುವುದಿಲ್ಲ - ಪ್ರತಿಭಟನೆ ಇರುವುದಿಲ್ಲ - ಆಕ್ರೋಶವಿರುವುದಿಲ್ಲ - ಕೂಗಾಟ ಇರುವುದಿಲ್ಲ.ಕೇವಲ ಪ್ರೀತಿಯ ಮತ್ತು ವಿನಯ ಪೂರ್ವಕ ಸತ್ಯಾಗ್ರಹ ಮಾತ್ರ...ಸತ್ಯಾಗ್ರಹದ ಸಮಯದಲ್ಲಿ ಮಾಧ್ಯಮ ಲೋಕದಿಂದ ನಮ್ಮ ನಿರೀಕ್ಷೆಯ ಭಿತ್ತಿಚಿತ್ರಗಳ ಪ್ರದರ್ಶನ ಮಾಡಲಾಗುವುದು ಮತ್ತು ಒಂದು ಮನವಿ ಪತ್ರ ಸಲ್ಲಿಸಲಾಗುವುದು ಜೊತೆಗೆ ಒಂದು ಪುಸ್ತಕ ಮತ್ತು ಹೂವು ನೀಡಲಾಗುವುದು. ಭಿತ್ತಿ ಚಿತ್ರಗಳ ಕೆಲವು ಘೋಷಣೆಗಳ ಒಂದು ಮಾದರಿ. ರವಿ ಕಾಣದ್ದನ್ನ ಕವಿ ಕಂಡ,
ಕವಿ ಕಾಣದ್ದನ್ನ ಪತ್ರಕರ್ತ ಕಂಡ. ಮಾಧ್ಯಮ ಧರ್ಮ ನಿಮ್ಮಯ ಕರ್ಮ ( ಕಾಯಕ ).ಒಳ್ಳೆಯದನ್ನು ವಿಜೃಂಭಿಸಿ - ಕೆಟ್ಟದ್ದನ್ನು ನಿರ್ಲಕ್ಷ್ಯಿಸಿ. ಮಾಧ್ಯಮ ಮಿತ್ರರ ಆತ್ಮಾವಲೋಕನಕ್ಕೆ ಪ್ರೀತಿಯ ಕರೆ......ಮಾಧ್ಯಮ ಮಿತ್ರರ ಪರವಾಗಿ " ಆತ್ಮಾವಲೋಕನ ಸತ್ಯಾಗ್ರಹ " ಸುದ್ದಿಯನ್ನು ಪ್ರಸಾರ ಮಾಡಿ, ಸುದ್ದಿಯನ್ನು ಸೃಷ್ಟಿಸಿ ಬೇಡಿ..ಮಾಧ್ಯಮಕ್ಕಿಂತ ದೊಡ್ಡ ವಿರೋಧ ಪಕ್ಷ ಯಾವುದೂ ಇಲ್ಲ.....
ಸುದ್ದಿಯ ವೇಗಕ್ಕಿಂತ ಸುದ್ದಿಯ ವಾಸ್ತವ ಮತ್ತು ಪ್ರಾಮಾಣಿಕತೆ ಮುಖ್ಯ.ವಿವೇಚನೆಯೇ ಮಾಧ್ಯಮ ಲೋಕದ ಪ್ರಬಲ ಅಸ್ತ್ರ.ಇದು ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ನಮ್ಮ ಸ್ಪಂದನೆ. ಮಾಧ್ಯಮದ ಅಪರಿಮಿತ ಸ್ವಾತಂತ್ರ್ಯವನ್ನು ಗೌರವಿಸುತ್ತಾ, ಪ್ರೋತ್ಸಾಹಿಸುತ್ತಾ. ಭವಿಷ್ಯದ ಉತ್ತಮ ಸಮಾಜಕ್ಕಾಗಿ ಇದು ನಮ್ಮ ನಿಮ್ಮ ಸಣ್ಣ ಕೊಡುಗೆ...ದಯವಿಟ್ಟು ಸತ್ಯಾಗ್ರಹದಲ್ಲಿ ಭಾಗವಹಿಸಿ. ನಿಮಗೆ ಆತ್ಮೀಯ ಸ್ವಾಗತ ಮತ್ತು ಇದೇ ಮನಸ್ಸುಗಳ ಅಂತರಂಗದ ಚಳವಳಿಯ ಆತ್ಮೀಯ ಆಮಂತ್ರಣ. ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಎಂ. ಯುವರಾಜ್ , +91 80508 02019
-ವಿವೇಕಾನಂದ ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ