ಮಾನವಕುಲದ ಉಳಿವಿಗಾಗಿ ಸುಸ್ಥಿರ ಕೃಷಿ

ಮಾನವಕುಲದ ಉಳಿವಿಗಾಗಿ ಸುಸ್ಥಿರ ಕೃಷಿ

ಅಂತರಾಷ್ಟ್ರೀಯ ಕೃಷಿ ಜ್ನಾನ, ವಿಜ್ನಾನ ಮತ್ತು ತಂತ್ರಜ್ನಾನದ ಮೌಲ್ಯಮಾಪನ ವರದಿಯು ಕೃಷಿಯನ್ನು ಕೇವಲ ಆಹಾರ ಉತ್ಪಾದನಾ ಚಟುವಟಿಕೆ ಎಂದು ಪರಿಗಣಿಸುವುದಿಲ್ಲ. ಅದು ಕೃಷಿಯನ್ನು ಬಹುಮುಖಿ ಚಟುವಟಿಕೆಯೆಂದು ಪರಿಗಣಿಸುತ್ತದೆ. ಪರಿಸರ, ಸಮಾಜ ಮತ್ತು ಆರ್ಥಿಕತೆಯ ಮೇಲೆ ಕೃಷಿಯ ಪರಿಣಾಮಗಳ ಬಗ್ಗೆ ಮಾಹಿತಿ ನೀಡುತ್ತದೆ.

ಆದರೆ ಈ ಉಪಯುಕ್ತ ವರದಿಯನ್ನು ಯುಎಸ್ಎ, ಕೆನಡಾ ಮತ್ತು ಆಸ್ಟ್ರೇಲಿಯಾ – ಈ ಮೂರು ದೇಶಗಳು ಕಡೆಗಣಿಸಿವೆ. ಯಾಕೆಂದರೆ, ಈ ದೇಶಗಳಲ್ಲಿ ಬಹುಪಾಲು ಅಗ್ರಿಬಿಸಿನೆಸ್ ಕಂಪೆನಿಗಳಿದ್ದು, ಅವುಗಳ ಪ್ರಧಾನ ವ್ಯವಹಾರ ಬೀಜ ಮತ್ತು ರಾಸಾಯನಿಕ ಪೀಡೆನಾಶಕಗಳಂತಹ ದುಬಾರಿ ಒಳಸುರಿಗಳನ್ನು ಮಾರುವುದು. ಪಾರಂಪರಿಕ ಕೃಷಿವಿಧಾನಗಳನ್ನು ಬಳಸಿದರೆ, ತಮ್ಮ ವ್ಯವಹಾರಕ್ಕೆ ಧಕ್ಕೆಯಾಗಬಹುದು ಎಂಬುದು ಆ ಕಂಪೆನಿಗಳ ಎಣಿಕೆ.

ಐವತ್ತೆಂಟು ದೇಶಗಳು ಈ ವರದಿಯನ್ನು ಅಂಗೀಕರಿಸಿವೆ. ಅವುಗಳಲ್ಲಿ ಭಾರತವೂ ಒಂದು. ಈ ವರದಿಯ ಸಲಹೆಗಳನ್ನು ಕಾರ್ಯಗತಗೊಳಿಸಲು ಭಾರತ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಪಾರಂಪರಿಕ ಮತ್ತು ಸಾವಯವ ಕೃಷಿಯನ್ನು ಜನಪ್ರಿಯಗೊಳಿಸುವುದು ಈ ಕ್ರಮಗಳ ಉದ್ದೇಶ. ಆಫ್ರಿಕಾದ ದೇಶಗಳ ಯೂನಿಯನ್ ಮುತುವರ್ಜಿ ವಹಿಸಿ, ಈ ವರದಿಯ ಆಧಾರದಿಂದ ಆಫ್ರಿಕಾ ಖಂಡದಲ್ಲೆಲ್ಲ ಇಕಾಲಾಜಿಕಲ್ (ಸುಸ್ಥಿರ) ಕೃಷಿಯನ್ನು ಮುನ್ನಡೆಸಬೇಕೆಂದು ನಿರ್ಧರಿಸಿದೆ.

ಭಾರತದಲ್ಲಿ ಆಹಾರ ಉತ್ಪಾದನೆ ಹೆಚ್ಚಿಸಲು ಹಸುರುಕ್ರಾಂತಿ ಕಾರಣವಾದದ್ದು ನಿಜ. ಆದರೆ, ಹಸುರುಕ್ರಾಂತಿಯು ಸುಸ್ಥಿರವಲ್ಲದ ಮತ್ತು ದುಬಾರಿಯಾದ ಒಳಸುರಿಗಳನ್ನೇ ರೈತರು ಅವಲಂಬಿಸುವಂತೆ ಮಾಡುತ್ತದೆ. ಇವುಗಳ ಬೆಲೆ ಏರುತ್ತಲೇ ಇರುತ್ತದೆ. ಯಾಕೆಂದರೆ, ಅವೆಲ್ಲವೂ ಪೆಟ್ರೋಲಿಯಂ ಆಧಾರಿತ ಒಳಸುರಿಗಳು.

ಜಾಗತಿಕ ಕೃಷಿರಂಗವನ್ನೇ ನಿಯಂತ್ರಿಸಲು ಹವಣಿಸುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳು ಪ್ರಚಾರ ಮಾಡುತ್ತಿರುವ  ಜೈವಿಕವಾಗಿ ಮಾರ್ಪಡಿಸಿದ (ಕುಲಾಂತರಿ) ತಳಿಗಳು ಸುಸ್ಥಿರ ಕೃಷಿಗೆ ಪೂರಕವಲ್ಲ. ಈ ತಂತ್ರಜ್ನಾನ ಯಾಕೆ ಬೇಕು? ಎಂಬುದನ್ನು ನಾವು ಮೊದಲು ನಿರ್ಧರಿಸಬೇಕು. ನಿಮ್ಮ ಕೈಯಲ್ಲಿ ಒಂದು ಸುತ್ತಿಗೆ ಇದ್ದರೆ ನಿಮಗೆ ಎಲ್ಲವೂ ಮೊಳೆಯಂತೆ ಕಾಣಿಸುತ್ತದೆ! ತಳಿಗಳನ್ನು ಜೈವಿಕವಾಗಿ ಮಾರ್ಪಡಿಸುವ ತಂತ್ರಜ್ನಾನವು ದುಬಾರಿ ಮತ್ತು ರೈತರು ಬೃಹತ್ ಅಗ್ರಿಬಿಸಿನೆಸ್ ಕಂಪೆನಿಗಳನ್ನು ಅವಲಂಬಿಸಿಯೇ ಇರುವಂತೆ ಮಾಡುತ್ತದೆ. ಅದಲ್ಲದೆ, ಅವು ಹೆಚ್ಚು ಸಮಸ್ಯೆಗಳನ್ನು ಹುಟ್ಟು ಹಾಕುತ್ತವೆ. ಉದಾಹರಣೆಗೆ, ಕೆಲವು ಕಳೆಗಳು ನಿರ್ದಿಷ್ಟ ಜೀನುಗಳಿಗೆ ಪ್ರತಿರೋಧ ಬೆಳೆಸಿಕೊಂಡಾಗ, ಆ ಕಳೆಗಳನ್ನು ನಿಯಂತ್ರಿಸಲು ರೈತರು ಹೆಚ್ಚೆಚ್ಚು ರಾಸಾಯನಿಕ ಕಳೆನಾಶಕಗಳನ್ನು ಉಪಯೋಗಿಸ ಬೇಕಾಗುತ್ತದೆ.

“ನಾವು ಹೆಚ್ಚೆಚ್ಚು ಆಹಾರ ಉತ್ಪಾದಿಸಬೇಕು” ಎಂದು ಹೇಳೋದನ್ನು ಕೇಳಿಕೇಳಿ ಸಾಕಾಗಿದೆ. ನಾವು ಈಗಾಗಲೇ ಈ ಭೂಮಿಯಲ್ಲಿರುವ ಪ್ರತಿಯೊಬ್ಬ ಮನುಷ್ಯನಿಗೂ ದಿನಕ್ಕೆ 4,600 ಕ್ಯಾಲೋರಿ ಒದಗಿಸಬಲ್ಲಷ್ಟು ಆಹಾರ ಉತ್ಪಾದಿಸುತ್ತಿದ್ದೇವೆ. ಅಂದರೆ, ಪ್ರತಿಯೊಬ್ಬನಿಗೆ ದಿನಕ್ಕೆ ಅಗತ್ಯವಾದ ಆಹಾರದ ಪ್ರಮಾಣದ ಇಮ್ಮಡಿಯಷ್ಟು. ಆದ್ದರಿಂದ ಜಗತ್ತಿನಲ್ಲಿ ಒಂದು ಮಿಲಿಯ ಜನರು ಹಸಿವಿನಿಂದ ನರಳುತ್ತಿರಲು ಕಾರಣ ಆಹಾರ ಉತ್ಪಾದನೆ ಕಡಿಮೆ ಎಂಬುದಲ್ಲ. ಬದಲಾಗಿ, ಆಹಾರ ಬೇಕಾದವರಿಗೆ ಆಹಾರ ಒದಗಿಸಲು ನಾವು ವಿಫಲರಾಗಿದ್ದೇವೆ ಎಂಬುದು.

ನಮ್ಮ ದೇಶ ಸಾಕಷ್ಟು ಆಹಾರ ಉತ್ಪಾದಿಸುತ್ತಿದೆ. ಆದರೂ ಜಗತ್ತಿನಲ್ಲಿ ಅತ್ಯಂತ ಜಾಸ್ತಿ ಹಸಿದ ಜನರು ಇರುವುದು ಭಾರತದಲ್ಲಿ! ಯುಎಸ್ಎ ದೇಶದಲ್ಲಿಯೂ 42 ಮಿಲಿಯ ಹಸಿದ ಜನರಿದ್ದಾರೆ. ಹಾಗಿರುವಾಗ, ನಾವು ಏನನ್ನು ಬದಲಾಯಿಸಬೇಕಾಗಿದೆ? ಪ್ರಧಾನವಾಗಿ ಆಹಾರ ಹಾಳಾಗುವುದನ್ನು ತಡೆಯಬೇಕಾಗಿದೆ. ಯಾಕೆಂದರೆ, ನಾವು ಬೆಳೆದ ಆಹಾರದ ಶೇಕಡಾ 30 - 40 ಭಾಗ ಸೂಕ್ತ ಶೇಖರಣಾ ವ್ಯವಸ್ಥೆಯಿಲ್ಲದೆ ಹಾಳಾಗಿ ಹೋಗುತ್ತಿದೆ.

ಇವೆಲ್ಲ ಸ್ವಿಜರ್ಲ್ಯಾಂಡಿನ ಪ್ರಸಿದ್ಧ ಕೀಟಶಾಸ್ತ್ರಜ್ನ ಹಾನ್ಸ್ ರುಡಾಲ್ಫ್ ಹೆರ್ರೆನ್ ಅವರ ಮುಕ್ತ ಅಭಿಪ್ರಾಯಗಳು. ಈ ಲೇಖನದ ಆರಂಭದಲ್ಲಿ ಹೆಸರಿಸಿದ ಹೊಸಚಿಂತನೆಯ ವರದಿ ರೂಪಿಸಿದ ಇಬ್ಬರು ವಿಜ್ನಾನಿಗಳಲ್ಲಿ ಇವರೊಬ್ಬರು. ಅಂತಿಮವಾಗಿ, ಅವರು ನಮಗೆ ನೀಡುವ ಸಂದೇಶ: “ಮಾನವಕುಲದ ಉಳಿವಿಗಾಗಿ ಭವಿಷ್ಯದ ಕೃಷಿ ಪುನರುಜ್ಜೀವನಶೀಲ ಹಾಗೂ ಸುಸ್ಥಿರ ಆಗಿರಬೇಕು.”
ಫೋಟೋ ಕೃಪೆ: ಟೈಮ್ಸ್ ಆಫ್ ಇಂಡಿಯಾ