ಮಾನವ ಶರೀರ ಎಂಬ ಅದ್ಭುತ ಜೀವಂತ ಯಂತ್ರ (ಭಾಗ 1)

ಮಾನವ ಶರೀರ ಎಂಬ ಅದ್ಭುತ ಜೀವಂತ ಯಂತ್ರ (ಭಾಗ 1)

ಮಾನವ ಶರೀರದ ವಿಸ್ಮಯಗಳನ್ನು ತಿಳಿದರೆ ಇದೊಂದು “ಅದ್ಭುತ ಜೀವಂತ ಯಂತ್ರ” ಎಂದು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಅಂತಹ ಕೆಲವು ವಿಸ್ಮಯಕಾರಿ ಸಂಗತಿಗಳನ್ನು ಈ ಬರಹದಲ್ಲಿ ಪಟ್ಟಿ ಮಾಡಲಾಗಿದೆ.

1)ಪ್ರತಿ ದಿನ ಮನುಷ್ಯನೊಬ್ಬ ಉಸಿರಾಡುವ ಗಾಳಿಯ ಪರಿಮಾಣ 3,300 ಗ್ಯಾಲನ್. (ಒಂದು ಗ್ಯಾಲನ್ = 4.5 ಲೀಟರ್)

2)ಪ್ರತಿಯೊಬ್ಬ ವ್ಯಕ್ತಿಯ ಜೀವಮಾನದಲ್ಲಿ ಆತನ/ ಆಕೆಯ ತಲೆಯ ಚಿಪ್ಪಿನಿಂದ ಬೆಳೆಯುವ ಕೂದಲಿನ ಒಟ್ಟು ಉದ್ದ 25 ಅಡಿಗಳಿಗಿಂತ ಜಾಸ್ತಿ.

3)ಚಳಿಯಿದ್ದಾಗ ಅತ್ತಿತ್ತ ಅಡ್ಡಾಡುವುದು ಶರೀರವನ್ನು ಬೆಚ್ಚಗಿಡಲು ಸಹಕಾರಿ. ಗಡಗಡನೆ ನಡುಗುವುದು ಎಂದರೆ ಸ್ನಾಯುಗಳು ವೇಗವಾಗಿ ಚಲಿಸುವ ಮೂಲಕ ಉಷ್ಣತೆ ಉತ್ಪಾದಿಸಿ, ಶರೀರವನ್ನು ಬೆಚ್ಚಗಿಡಲು ಸಹಕರಿಸುವ ವಿಧಾನ.

4)ಮನುಷ್ಯನ ಕಿವಿ 1,500ರಷ್ಟು ವಿವಿಧ ಶಬ್ದಗಳನ್ನು ಗುರುತಿಸಬಲ್ಲುದು ಮತ್ತು 350 ವಿವಿಧ ಹಂತಗಳ ತೀವ್ರತೆಯ ಶಬ್ದಗಳನ್ನು ಅಳೆಯಬಲ್ಲುದು.

5)ಪ್ರತಿಯೊಂದು ಕೆಂಪು ರಕ್ತಕಣದ ಜೀವಿತಾವಧಿ ಸುಮಾರು ಮೂರು ತಿಂಗಳು. ಈ ಅವಧಿಯಲ್ಲಿ ಅದು ದೇಹದೊಳಗೆ ಸುಮಾರು 1,30,000 ಸುತ್ತು (ಟ್ರಿಪ್) ಬಂದಿರುತ್ತದೆ.

6)ಮನುಷ್ಯ ಶರೀರದಲ್ಲಿ 9,000 ಪೆನ್ಸಿಲುಗಳನ್ನು ಉತ್ಪಾದಿಸಲು ಅಗತ್ಯವಾದಷ್ಟು ಸೀಸ ಇದೆ.

7)ಮಾನವ ಶರೀರದ ಅತ್ಯಂತ ಸಂವೇದನಾಶೀಲ ಅಂಗ ನಾಲಗೆ ಮತ್ತು ಅತ್ಯಂತ ಕಡಿಮೆ ಸಂವೇದನಾಶೀಲ ಅಂಗ ಬೆನ್ನಿನ ನಡು ಭಾಗ.

8)ಮನುಷ್ಯನಿಗೆ ಹಸಿವಾದಾಗ ಜಠರಕೋಶದ ಸ್ನಾಯುಗಳು ಸಂಕೋಚಿಸುತ್ತವೆ. ಹೊಟ್ಟೆಯಲ್ಲಿ ಗಾಳಿಯಿದ್ದರೆ ಈ ಸಂಕೋಚನಗಳು ಗಡಬಡ ಅಥವಾ ಗುರ್ ಗುರ್ ಶಬ್ದ ಉಂಟುಮಾಡುತ್ತವೆ.

9)ಮಾನವ ಶರೀರದ ಅತ್ಯಂತ ದೊಡ್ಡ ಸಂವೇದನಾಶೀಲ ಅಂಗ ಚರ್ಮ. ಇದರಲ್ಲಿರುವ ಲಕ್ಷಗಟ್ಟಲೆ ನರಗಳ ಕೊನೆತಂತುಗಳು ನೋವು, ಒತ್ತಡ ಮತ್ತು ಇತರ ಪ್ರಚೋದನೆಗಳಿಗೆ ಸ್ಪಂದಿಸುತ್ತವೆ.

10)ಮನುಷ್ಯನ ತಲೆಬುರುಡೆಯು 26 ವಿಭಿನ್ನ ಎಲುಬುಗಳಿಂದ ರಚಿಸಲ್ಪಟ್ಟಿದೆ.

ಫೋಟೋ 1 ಮತ್ತು 2: ಮಾನವ ಅಂಗರಚನೆ

(ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿ)