ಮಾರ್ಕಟ್ವೇನ್ನ ‘ಹಕಲ್ಬರಿ ಫಿನ್’
ಮಾರ್ಕಟ್ವೇನ್ನ “ಹಕಲ್ಬರಿ ಫಿನ್” (Huckleberry Finn) ಕಾದಂಬರಿಯ ಕುರಿತಾದ ನನ್ನ ವಿಶ್ಲೇಷಣೆ ಇಲ್ಲಿದೆ...
ಜಗತ್ತು ಒಪ್ಪಿಕೊಂಡ ಬದುಕಿನ ಪರಿಕಲ್ಪನೆಯನ್ನು, ಮಾನವ ಸಂಬಂಧಗಳ ಮೇಲು ಕೀಳು ವೈರುಧ್ಯಗಳನ್ನು ನಿರಾಕರಿಸುವ ಎಳೆಯ ಬಾಲಕನೊಬ್ಬ ಅದರಿಂದ ದೂರವಾಗುವ ಪ್ರಯತ್ನದಲ್ಲಿ ನಿರಂತರ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪಲಾಯನಗೈಯುತ್ತಲೇ ಇರುವ ಚಿತ್ರಣವನ್ನು ಕಟ್ಟಿಕೊಡುತ್ತದೆ ಮಾರ್ಕಟ್ವೇನ್ನ ಹಕಲ್ಬರಿ ಫಿನ್. ಕಾದಂಬರಿ ಒಂದು ಗಾಢ ವಿಷಾದವನ್ನು, ಪ್ರಯತ್ನವಾದಿ ನಿಲುವುಗಳನ್ನು ಏಕಕಾಲಕ್ಕೆ ಪ್ರತಿನಿಧಿಸುತ್ತಲೇ ಪಲಾಯನವಾದ ಮತ್ತು ಆಶಾವಾದದ ಜೋಕಾಲಿಯಲ್ಲಿ ಜೀಕುತ್ತಿರುವ ಅನುಭವ ಕೊಡುತ್ತದೆ. ಹಕ್ನ ಪಲಾಯನ ಸಣ್ಣ ಹುಡುಗನ ಹುಡುಗಾಟದ ಪಲಾಯನ ಎನ್ನಿಸುವುದಿಲ್ಲ. ಬದಲಿಗೆ ಪರತಂತ್ರ ಬದುಕಿನಿಂದ ಆತನ ನಿರಂತರ ಓಟಕ್ಕೆ ಸಾಕ್ಷಿಯಾಗುತ್ತದೆ. ಮನುಷ್ಯನ ಬದುಕಿನ ಅನಿವಾರ್ಯತೆ, ವಿಶ್ರಾಂತಿ ಇಲ್ಲದ ಸ್ಥಿತಿಯೊಂದಿಗೆ ಹಕ್ನ ಸ್ವಾತಂತ್ಯ್ರದ ಸಮಸ್ಯೆಗಳಿಗೆ ಆತ ನೀಡುವ ಸಮರ್ಥನೆಗಳು ನೇರ ಹಾಗೂ ಈ ಲೋಕದ ಪರಿಗೆ ಕೊಂಚ ಭಿನ್ನವಾಗಿ ಕಂಡರೂ ಅಂತಹ ಅನೇಕ ಪಾತ್ರಗಳು ಇಂದಿನ ಭಾರತದಲ್ಲಿ ನಮ್ಮ ಕಣ್ಣ ಮುಂದೆ ಗಾಳಿಯಲ್ಲಿ ಚಲಿಸುವ ಚಿತ್ರಗಳಂತೆ ಸರಿದುಹೋಗುತ್ತವೆ. ಹಕ್ ತನ್ನ ಓಟದ ಬದುಕಿನ ಉದ್ದಕ್ಕೂ ಸತತ ಸಾಹಸಗಳ ದಾರಿಯಲ್ಲೇ ಸಾಗುತ್ತಾನೆ.
ಈ ಕಾದಂಬರಿಗೆ ಅಮೇರಿಕಾದ ಮಿಸ್ಸಿಸಿಪ್ಪಿ ನದಿ ತೀರದ ಮಿಸ್ಸೋರಿಯೇ ಮೂಲ ಸ್ಥಾನ. ಆತ ಹಕ್, ಬಡಬಾಲಕ. ಆತನ ತಂದೆ ಭಯಂಕರ ಕುಡುಕ. ಹಕ್ನ ಸ್ನೇಹಿತ ಟಾಮ್ ಸಾಯರ್ ಸೇರಿ ಡಕಾಯಿತರ ಬಳಿಯಿದ್ದ ಹನ್ನೆರಡು ಸಾವಿರ ಡಾಲರಗಳನ್ನು ಬುದ್ಧಿವಂತಿಕೆಯಿಂದ ಕಂಡುಹಿಡಿಯುತ್ತಾರೆ. ಈ ಸಾಹಸಕ್ಕಾಗಿ ನ್ಯಾಯಾಧೀಶ ಥ್ಯಾಚರ್ ಆ ಹಣವನ್ನು ಈ ಬಾಲಕರ ಹೆಸರಲ್ಲಿ ಬ್ಯಾಂಕಲ್ಲಿ ಇಡುತ್ತಾರೆ. ವಿಧವೆ ಡೋಗ್ಲಾಸ್ ಹಕ್ನನ್ನು ದತ್ತು ತೆಗೆದುಕೊಳ್ಳುತ್ತಾಳೆ. ಸ್ವಚ್ಛತೆ, ಹೊಸ ನಡಾವಳಿಗಳು, ಭಿನ್ನ ಬದುಕಿನ ರೀತಿಗಳು ಇದೆಲ್ಲದ್ದಕ್ಕೆ ಹೊಂದಿಕೊಳ್ಳಲು ಆಗದೇ ಹೋಸ ಜೀವನ ಶೈಲಿಗಳಿಂದ ಆತನಿಗೆ ಬೇಸರವಾಗುತ್ತದೆ. ಇದೇ ಸಮಯದಲ್ಲಿ ಆತನ ತಂದೆ ಭಯಂಕರ ಕುಡುಕ ಪ್ಯಾಪ್ ಮಗನ ಬಳಿಯಿರುವ ಹಣದ ಸಂಗತಿ ತಿಳಿದು ವಿಧವೆ ಡೋಗ್ಲಾಸ್ ಮನೆಯಿಂದ ಮಗನನ್ನು ಅಪಹರಿಸಿ, ತನ್ನ ಲಾಗ್ಕ್ಯಾಬಿನ್ಗೆ ಕರೆತಂದು ಗೃಹ ಬಂಧನಕ್ಕೊಳಪಡಿಸುತ್ತಾನೆ. ಕುಡಿದು ಬಂದು ಹಕ್ನನ್ನು ಮನಬಂದಂತೆ ಥಳಿಸುತ್ತಿರುತ್ತಾನೆ. ಇದನ್ನೆಲ್ಲಾ ಸಹಿಸಲಾಗದೇ ಒಂದು ದಿನ ಹಕ್ ಹಂದಿಯೊಂದನ್ನು ಕೊಂದು ಅದರ ರಕ್ತವನ್ನೆಲ್ಲಾ ಹರಡಿ ಅದು ತನ್ನದೇ ರಕ್ತ ಎಂದು ತಂದೆ ಪ್ಯಾಪ್ ಗೃಹಿಸುವಂತೆ ಮಾಡಿ ಅಲ್ಲಿಂದ ಪಲಾಯನಗೈಯುತ್ತಾನೆ. ಯಾವ ಸಮಾಜ ಮತ್ತು ಸಂಬಂಧಗಳು ಬದುಕನ್ನು ಕಟ್ಟಿಕೊಡಬೇಕಾಗಿದ್ದವೋ ಅವೇ ಎಳೆಯನ ಬದುಕನ್ನು, ವ್ಯಕ್ತಿತ್ವವನ್ನು ಛಿಧ್ರಗೊಳಿಸಲು ಯತ್ನಿಸುವುದು ಬದುಕಿನ ಮಹಾ ದುರಂತ. ಹೀಗೆ ನಿರಂತರ ಬದುಕಿನಿಂದ ಓಡುತ್ತಲೇ ಇರುವ ಹಕ್ನ ಪಾತ್ರದ ಮೂಲಕ ಜಾಗತಿಕ ನೆಲೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿಯ ಯುವ ಪೀಳಿಗೆ ಎತ್ತ ಸಾಗುತ್ತಿದೆ. ಅದಕ್ಕೆ ಕಾರಣವಾಗುವ ಸಂಗತಿಗಳು ಏನು? ಐಶಾರಾಮದ ಸವಲತ್ತುಗಳ ಹೊಂದುವ, ದಿಢೀರ ಶ್ರೀಮಂತಿಕೆ ಗಳಿಸುವ ಲೋಭ, ಹಪಾಹಪಿತನ ಸಂಬಂಧಗಳನ್ನು ಎಲ್ಲಿಗೆ ಕೊಂಡ್ಯೊಯುತ್ತದೆ ಇಂತಹ ಎಲ್ಲ ಪ್ರಶ್ನೆಗಳನ್ನು ಇಲ್ಲಿಯ ಭಿನ್ನ ಪಾತ್ರಗಳು ಎತ್ತಿ ಹಿಡಿಯುತ್ತವೆ.
ಹಕ್ ಹೆತ್ತ ತಂದೆಯಿಂದ ದೂರವಾಗಿ ದೋಣಿಯಲ್ಲಿ ನದಿಗುಂಟ ಸಾಗುತ್ತಾ ಜ್ಯಾಕ್ಸನ್ ನಡುಗಡ್ಡೆಗೆ ಬರುತ್ತಾನೆ. ಅಲ್ಲಿಂದ ಆತನ ಸಾಹಸದ ದಿನಗಳು ಪ್ರಾರಂಭವಾಗುತ್ತವೆ. ಹಕ್ನ ದತ್ತು ತಾಯಿ ವಿಧವೆ ಡೋಗ್ಲಾಸ್ಳ ಸಹೋದರಿ ಮಿಸ್ ವ್ಯಾಟ್ಸ್ನ್ಳ ಸೇವಕ ಜಿಮ್ ಜೊತೆಯಾಗುತ್ತಾನೆ. ನಡುಗಡ್ಡೆಯಲ್ಲಿ ಗವಿಯೊಂದರಲ್ಲಿ ಕೆಲವು ದಿನಗಳು ಕಳೆಯುತ್ತಿದ್ದಂತೆ ಒಂದು ದಿನ ಉಕ್ಕಿದ ಪ್ರವಾಹಕ್ಕೆ ಹೆದರಿ ಪುನಃ ನದಿಗಿಳಿದು ದೋಣಿಯೊಂದರಲ್ಲಿ ಸಾಗುತ್ತಾ ದಾರಿಯಲ್ಲಿ ತುಂಡುತುಂಡಾದ ಎರಡು ಕೋಣೆಗಳುಳ್ಳ ನದಿದೋಣಿಯೊಂದರಲ್ಲಿ ಶವವೊಂದನ್ನು ಕಾಣುತ್ತಾರೆ. ಅದು ಹಕ್ನ ತಂದೆಯ ಶವ. ಆದರೆ ಹಕ್ನಿಗೆ ತಂದೆ ಶವದ ಮುಖ ತೋರಿಸಲು ಜಮ್ ಹಿಂಜರಿಯುತ್ತಾನೆ. ಕಾರಣ ಹಕ್ನ ಮೇಲಿರುವ ಆತನ ಕಾಳಜಿ. ಸಂಬಂಧಗಳಲ್ಲಿ ಹುಟ್ಟದ ಪ್ರೇಮ ವಾತ್ಸಲ್ಯಗಳನ್ನು ಕರಿಯನೊಬ್ಬ ಉಣಬಡಿಸುವ, ಮಾನವೀಯತೆ ಕೇವಲ ಶಿಕ್ಷಣ ಅಥವಾ ಗುಣಮಟ್ಟದ ಜೀವನ ನಡೆಸುವುದರಿಂದ ಬರದು ಎಂಬುದಕ್ಕೆ ಸಾಕ್ಷಿಯಾಗುತ್ತದೆ. ಜನಾಂಗೀಯ ಬೇಧವೂ ಆ ಸಂಬಂದಗಳಲ್ಲಿ ನುಸುಳುವುದಿಲ್ಲ.
ನಗರದಲ್ಲಿ ಏನೇನು ನಡೆಯುತ್ತಿವೆ ಎಂದು ತಿಳಿಯಲು ಹಕ್ ತನ್ನನ್ನು ಸರಾಹ್ ವಿಲಿಯಮ್ಸ್ ಹೆಸರಿನ ಹುಡುಗಿಯ ವೇಷದಲ್ಲಿ ಪಟ್ಟಣದತ್ತ ಹೋಗುತ್ತಾನೆ. ಹೆಂಗಸೊಬ್ಬಳಿಂದ ಆತನಿಗೆ ಪಟ್ಟಣದಲ್ಲೆಲ್ಲಾ ಹಕ್ ಕೊಲೆಗೀಡಾಗಿರುವನೆಂದೂ, ಆತನ ತಂದೆ ಪ್ಯಾಪ್ ಮತ್ತು ಜಿಮ್ ಸೇರಿ ಅವನ ಕೊಲೆಮಾಡಿರುವರೆಂಬ ವದಂತಿ ಇದೆಯೆಂದು, ಜಿಮ್ಜ್ಯಾಕ್ಸನ್ ನಡುಗಡ್ಡೆಯಲ್ಲಿ ಬೀಡು ಬಿಟ್ಟಿರುವ ಸಾಧ್ಯತೆ ಇದ್ದು ತನ್ನ ಗಂಡ ಅದನ್ನು ಹುಡುಕಲು ಅಲ್ಲಿಗೆ ಹೋಗುವುದಾಗಿಯೂ ಹೇಳುತ್ತಾಳೆ. ಆ ವಿಷಯ ತಿಳಿಯುತ್ತಲೇ ಹಕ್ ಮತ್ತು ಜಿಮ್ ನಡುಗಡ್ಡೆಯಿಂದ ಅಲ್ಲಿಂದ ಓಟ ಕೀಳುತ್ತಾರೆ.
ಮಿಸಿಸ್ಸಿಪ್ಪಿ ನದಿಯಲ್ಲಿ ಜಿಮ್ನೊಂದಿಗೆ ಸುದೀರ್ಘವಾದ ಪ್ರಯಾಣದಲ್ಲಿ ಸ್ಟೀಮಬೋಟ್ ಒಂದರಲ್ಲಿ ಇಬ್ಬರು ಕ್ರಿಮಿನಲ್ಗಳು ಸೇರಿ ತಮ್ಮದೇ ಸಂಗಾತಿಯೊಬ್ಬನನ್ನು ಕೊಲೆ ಮಾಡುತ್ತಿರುವ ಸಂದರ್ಭಕ್ಕೆ ಈ ಎಳೆಯ ಸಾಕ್ಷಿಯಾಗುತ್ತಾನೆ. ಅಲ್ಲಿಂದ ತಪ್ಪಿಸಿಕೊಳ್ಳುವ ಹಕ್ ಮತ್ತು ಜಿಮ್ ಆ ಖದೀಮ ಕಳ್ಳರ ಸಣ್ಣದೋಣಿಯನ್ನು ಲಪಟಾಯಿಸಿಕೊಂಡು ಮುಂದುವರೆಯುತ್ತಾರೆ. ಕೈರೋ ನಗರವನ್ನು ತಲುಪುವ ಇಚ್ಛೆಯಿಂದ ಸಾಗುವ ಅವರಿಗೆ ದಾರಿಯಲ್ಲಿ ಜೀತದವರನ್ನು ಬೇಟೆಯಾಡುವ ಗುಂಪು ಎದುರಾಗುತ್ತದೆ. ಜಿಮ್ನನ್ನು ಕಾಪಾಡಲು ಜಿಮ್ನನ್ನು ತನ್ನ ತಂದೆ ಪ್ಯಾಪ್ ಎಂದೂ, ಆತನಿಗೆ ಮೈಮೇಲೆ ಗೋಣಿ ಬಂದಿರುವುದಾಗಿಯೂ ಹೆದರಿಸುತ್ತಾನೆ. ಕೊಲೆ, ಸುಲಿಗೆ ಅನ್ಯಾಯ, ಇಂತಹ ವೈರುಧ್ಯಗಳಿಗೆ ಹಕ್ ಮುಖಾಮುಖಿಯಾಗುತ್ತಲೇ ಹೋಗುತ್ತಾನೆ.
ಮುಂದುವರೆದ ಪ್ರಯಾಣದಲ್ಲಿ ಹಕ್ ಮತ್ತು ಜಿಮ್ ಬೇರೆಯಾಗುತ್ತಾರೆ. ಹಕ್ ಶ್ರೀಮಂತ ಕುಟುಂಬವೊಂದರ ಆಶ್ರಯ ಪಡೆಯುತ್ತಾನೆ. ಆ ಗ್ರೆಂಜ್ ಪೋರ್ಡ ಕುಟುಂಬದ ಸುಂದರತರುಣಿ ವೈರಿಕುಟುಂಬವಾದ ಶೆಪರ್ಡಸನ್ ಕುಟುಂಬದ ತರುಣ ಹಾರ್ನಿ ಶಪರ್ಡಸನ್ನನ್ನು ಪ್ರೀತಿಸುತ್ತಿದ್ದು, ಪ್ರಿಯತಮನೊಂದಿಗೆ ಓಡಿ ಹೋಗುತ್ತಾಳೆ. ಇದರಿಂಧ ಸುಸಂಸ್ಕೃತವಾದ ಕುಟುಂಬಗಳು ಪರಸ್ಪರ ಹೊಡೆದಾಡಿಕೊಳ್ಳುತ್ತಾರೆ. ಹಕ್ ಅಲ್ಲಿಯ ರಕ್ತಪಾತಕ್ಕೆ ಕೊಲೆಗೆ ಮೂಕ ಸಾಕ್ಷಿಯಾಗುತ್ತಾನೆ. ಮಾನವ ಲೋಕದದರ್ಪ, ದೌರ್ಜನ್ಯ, ಎಳೆಯ ಬಾಲನ ಮನಸ್ಸನ್ನುಕಂಗೆಡಿಸುತ್ತದೆ.
ಪುನಃ ಜಿಮ್ ಆತನ ಜೊತೆಯಾಗುತ್ತಾನೆ. ನದಿಯ ದಾರಿಯಲ್ಲಿ ಡ್ಯೂಕ್ ಮತ್ತು ಡೌಫಿನ್ ಎಂದು ಕಪಟ ವಂಚಕರ ಪರಿಚಯವಾಗುತ್ತದೆ. ಸುಮಾರು ಎಪ್ಪತ್ತು ವರ್ಷದ ಡ್ಯೂಕ್ ಎಂದು ಕರೆಯಿಸಿಕೊಳ್ಳುವ ವ್ಯಕ್ತಿ ಸಿಹಿಮಾತುಗಳನ್ನಾಡುತ್ತ ಇವರ ಪೂರ್ವಾಪರಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಉಪಾಯದಿಂದ ಜಿಮ್ನನ್ನು `Forty dirty dollers' ಗಳಿಗೆ ಮಾರಲು ಪ್ರಯತ್ನಿಸುತ್ತಾರೆ. ಅವರ ನಿಜ ವೇಷ ಹೊರ ಬರುತ್ತದೆ. ಗಡಿಭಾಗದ ಜನರ ಜೀವನ ಅಲ್ಲಿಯ ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುತ್ತದೆ ಈ ದೃಶ್ಯ. ಅವರು ನ್ಯಾಯಾಂಗದ ಮುಂದೆ ಹಾಜರಾಗಬೇಕಾಗುತ್ತದೆ.
ಇವೆಲ್ಲವೂ ಆಧುನಿಕ ಜಗತ್ತಿನ ಹತ್ತಾರು ಕರಾಳ ಮುಖಗಳ ದರ್ಶನ ಮಾಡಿಸುತ್ತವೆ. ಕರಿಯರ ಮೇಲಿನ ದೌರ್ಜನ್ಯ, ಪ್ರಾಣಿಗಳಂತೆ ಅವರನ್ನು ಕದ್ದು ಸಾಗಿಸುವ ಕ್ರಿಯೆ, ವ್ಯಕ್ತಿ ಸ್ವಾತಂತ್ಯ್ರ ಹರಣದ ಚಿತ್ರಣವಿದೆ. ಕರಿಯ ಮತ್ತು ಬಿಳಿಯ ಈ ಅಸಮಾನತೆ ಮತ್ತು ತಾರತಮ್ಯ ನೀತಿಗೆ ಪೂರಕ ಪಾತ್ರವಾಗಿ ಜಿಮ್ನ ಮಾರಾಟದ ಪ್ರಯತ್ನಗಳನ್ನು ಇಲ್ಲಿ ಬಳಸಲಾಗಿದೆ.
ಕಾದಂಬರಿಯ ಪ್ರಾರಂಭದ ಭಾಗದಲ್ಲಿ ಹಕ್ನ ನೈತಿಕ ಪ್ರಜ್ಞೆ ಪ್ರತಿಪಾದಿತವಾದರೆ ಮಧ್ಯಭಾಗದಲ್ಲಿ ಆತನ ಪ್ರತಿಭಟನೆ, ಕೊನೆಯಲ್ಲಿ ವಿಕಾರ ಜಗತ್ತಿನ ಅಕರಾಳ ಮಾನವ ಜನಾಂಗವನ್ನು ದೂಷಿಸುವ ಆತ ಎಲ್ಲ ನಾಗರಿಕತೆಯ ಅಭಿವೃದ್ಧಿಯನ್ನು ನಿರಾಕರಿಸುವ ಕೇವಲ ವ್ಯಕ್ತಿಯಾಗಿ ನಿಲ್ಲುತ್ತಾನೆ. ಸ್ವಂತ ತಂದೆಯ ದುಷ್ಟ ನಡತೆ, ಸ್ನೇಹಿತನನ್ನೆ ಮುಗಿಸುವ ಹಣದ ಹಿಂದೆ ಬಿದ್ದ ಕಳ್ಳರ ಕೃತ್ಯ, ಕುಟುಂಬದ ವೈರತ್ವಕ್ಕೆ ಚಿಕ್ಕ ಬಾಲಕರನ್ನು ಬಿಡದೆ ಕೊಲೆಗೈಯುವ ಶ್ರೀಮಂತ ಕುಟುಂಬಗಳು, ಡ್ಯೂಕ್ ಎಂಬ ಗೌರವಾನ್ವಿತ ಹೆಸರಿಗೆ ಮಸಿಬಳಿಯುವ ವಂಚಕ ಜನರು ಹೀಗೆ ಇಂತಹ ಕೃತ್ರಿಮ ಜಗತ್ತಿನ ವ್ಯಾಪಾರಗಳನ್ನು ನೋಡುತ್ತಾ ಹಕ್ ಬದುಕಿಗೆ ಮುಖಾಮುಖಿಯಾಗುವಂತಹ ವಿಶಿಷ್ಟ ಕಥಾನಕ. ಹಕ್ ಸಮಕಾಲೀನ ಸಮಾಜಕ್ಕೆ ಕನ್ನಡಿ. ಆತನ ಮೂಲಕ ಮಾರ್ಕ್ ಟ್ವೇನ್ ಕ್ರೌರ್ಯ, ಬೂಟಾಟಿಕೆ, ಮತ್ತು ಜನರಲ್ಲಿಯ ಅಪರಾಧಿ ಮನೋಭಾವವನ್ನು ಪ್ರತಿನಿಧಿಸುತ್ತಾನೆ.
ಇದು ಮಾರ್ಕ್ ಟ್ವೇನ್ನ ಸ್ವಂತ ಜೀವನಗಾಥೆ ಅನ್ನುವಷ್ಟರ ಮಟ್ಟಿಗೆ ಸರಿಹೊಂದುತ್ತದೆ. ಯಾಕೆಂದರೆ ಮಾರ್ಕಟ್ವೇನ್ ಎಂದು ಹೆಸರಾದ ಸಾಮ್ಯೂಯಲ್ ಲಾಂಗ್ ಹಾರ್ನಕ್ಲೇಮನ್ಸ್ ಹುಟ್ಟಿದ್ದು 1835 ನವೆಂಬರ 30ರಂದು ಅಮೇರಿಕಾದ ಜೀತದ ನಾಡಾದ ಮಿಸ್ಸೋರಿಯ ಫ್ಲೋರಿಡಾ ಎಂಬ ಹಳ್ಳಿಯಲ್ಲಿ. ಹೆಚ್ಚುಕಡಿಮೆ ಇಂತಹದ್ದೇ ಬದುಕನ್ನು ಎದುರಿಸಿರುತ್ತಾನೆ. ವಿಶಾಲವಾದ ನದಿ ದಂಡೆಯ ಭಾಗ ಹೊಂದಿದ ಆ ಹಳ್ಳಿಯಲ್ಲಿ ಸುಂದರವಾಗಿ ಹರಡಿದ ಬದುಕನ್ನು, ನಿರಾಶ್ರಿತರಿಗೆ ಬೆಂಬಲವಾಗಿ ನಿಂತ ದಡವನ್ನು ಅದರ ಬಾಂಧವ್ಯದಲ್ಲಿ ಅರಳಿದ ಬದುಕಿನ ಆಶೆಗಳನ್ನು ನೋಡುತ್ತಾ ಬೆಳೆದ ಹುಡುಗ ಕ್ರಮೇಣವಾಗಿ ಆ ಗಡಿಯ ಭಾಗದ ನದಿ ದಡದ ಆ ಪ್ರದೇಶ ವಿಸ್ತಾರವಾಗತೊಡಗಿದ್ದನ್ನು ಅಷ್ಟೇ ಕುತೂಹಲದಿಂದ ಗಮನಿಸುತ್ತಿದ್ದ. ಹಳ್ಳಿ ನಿಧಾನವಾಗಿ ನಗರವಾಗುತ್ತಾ ಪಶ್ಚಿಮದ ಬಯಲುಗುಂಟ ಬೆಳೆಯತೊಡಗಿತು. ಇವೆಲ್ಲವನ್ನೂ ಕೆಲವೊಮ್ಮೆ ಖುಷಿಯಿಂದ ಮತ್ತೆ ಕೆಲವೊಮ್ಮೆ ಭಯದಿಂದ ನೋಡುತ್ತಾ ಬೆಳೆಯತೊಡಗಿದ ಪುಟ್ಟ ಪೋರ. ನೆಮ್ಮದಿ, ಸುಖ, ಶಾಂತಿಯಿಂದ ಕೂಡಿದ್ದ ಈ ಪ್ರದೇಶ ಕ್ರಮೇಣವಾಗಿ ಕೆಲವು ಸಲ ಗುಂಪು ದೊಂಬಿಗಳಿಂದ ಪ್ರಕ್ಷುಬ್ಧವಾದರೆ ಇನ್ನು ಕೆಲವೊಮ್ಮೆ ಜನರ ಕೊಲೆ, ಇಲ್ಲವೇ ಮಾರಣಾಂತಿಕ ಹೊಡೆದಾಟಗಳಲ್ಲಿ ಕ್ರೌರ್ಯ ಮೆರೆಯತೊಡಗಿತು. ನಿಗ್ರೋಗಳು ಪ್ರಾಣಿಗಳಂತೆ ದಕ್ಷಿಣದ ಜೀತದ ಮಾರ್ಕೆಟ್ಟುಗಳಿಗೆ ಸಾಗಿಸಲ್ಪಡುತ್ತಿದ್ದರು. ಇವೆಲ್ಲಕ್ಕೂ ಸ್ವಯಂ ಸಾಕ್ಷಿಯಾಗಿ ಇದ್ದ ಸಾಮ್ಯೂಯಲ್ ಎಂಬ ಪುಟ್ಟ ಬಾಲಕನಿಗೆ ಈ ಭೀಕರತೆ ದುಃಸ್ವಪ್ನವಾಗಿ ಕಾಡುತೊಡಗಿತು.
ಮಾರ್ಕಟ್ವೇನ್ ಹೇಳುತ್ತಾನೆ. “ಬದುಕಿನ ಪ್ರಾರಂಭ ಬಡತನದಿಂದಲೇ ಆಗಿದ್ದರೂ ಒಳ್ಳೆಯದು. ಹಾಗೇ ಶ್ರೀಮಂತಿಕೆಯಿಂದಲೇ ಜೀವನ ಶುರುವಾದರೂ ಒಳ್ಳೆಯದು. ಆದರೆ ಮುಂದೆ ಶ್ರೀಮಂತನಾಗಬಹುದೆಂಬ ಬರಿಯ ಭರವಸೆಯ ಮೇಲೆ ಬದುಕುವುದು ಕಷ್ಟಕರ”
-ನಾಗರೇಖಾ ಗಾಂವಕರ,
ಉಪನ್ಯಾಸಕಿ, ದಾಂಡೇಲಿ -581325, ಉತ್ತರ ಕನ್ನಡ ಜಿಲ್ಲೆ