ಮಾರ್ಗಾನ್ವೇಷಣೆ
ಲೇಖಕರಾದ ನಿತ್ಯಾನಂದ ಶೆಟ್ಟಿ ಇವರು ‘ಮಾರ್ಗಾನ್ವೇಷಣೆ' ಎಂಬ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಸವಿವರವಾದ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಎನ್ ಎಸ್ ಗುಂಡೂರ ಇವರು. ನಿತ್ಯಾನಂದ ಬಿ. ಶೆಟ್ಟಿ ಅವರ ಸಂಶೋಧನಾತ್ಮಕ ಕೃತಿ ‘ಮಾರ್ಗಾನ್ವೇಷಣೆ’ಗೆ ಬರೆದ ಅರ್ಥಪೂರ್ಣ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ.
ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು ತಂಬೂರಿ
-ಶಿಶುನಾಳ ಶರೀಫಜ್ಜ
ಕಂಡದ್ದರ ಬಲದ ಮೇಲೆ ಕಣ್ಣಿಗೆ ಕಾಣದ್ದನ್ನು
ಹುಡುಕುವುದೆಂದರೇ ಸಂಶೋಧನೆ.
-ಕೀರ್ತಿನಾಥ ಕುರ್ತಕೋಟಿ
ಪ್ರಾರ್ಥನೆ: ನಮಗಿರುವ ಕಾಳಜಿ ಮತ್ತು ಪ್ರಾಮಾಣಿಕತೆ ನಮ್ಮ ಕೆಲಸದ ಗುಣಮಟ್ಟವನ್ನು ನಿರ್ಧರಿಸುತ್ತವೆ ಎಂಬುದು ಅನುಭವದ ಮಾತು. ಒಂದು ಮನೆ ಕಟ್ಟುವುದಿರಲಿ, ಸಸಿ ನೆಟ್ಟು ಪೋಷಿಸುವುದಿರಲಿ, ವಿಶ್ವವಿದ್ಯಾಲಯವೊಂದರ ವಿಭಾಗವನ್ನು ಬೆಳೆಸುವುದಿರಲಿ, ಅಥವಾ ಸಣ್ಣದೊಂದು ಬರವಣಿಗೆ ಮಾಡುವುದೇ ಇರಲಿ, ನಾವು ತೋರಿಸುವ ಕಾಳಜಿ ಅವುಗಳ ಶ್ರೇಯಸ್ಸಿಗೆ ಕಾರಣವಾಗಿರುತ್ತದೆ. ಪ್ರಸ್ತುತ ಪುಸ್ತಕ ಲೇಖಕರಿಗಿರುವ ಕಾಳಜಿ ಮತ್ತು ಪ್ರಾಮಾಣಿಕತೆಗಳಿಂದ ರೂಪುಗೊಂಡಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಹಾಗಾದರೆ ಇಲ್ಲಿರುವ ಕಾಳಜಿಗಳು ಯಾವುವು? ಕನ್ನಡ, ಸಾಹಿತ್ಯ, ಸಂಶೋಧನೆ, ಶೈಕ್ಷಣಿಕ ಲೋಕ ಮತ್ತು ಕಲಿಕೆ ಇಲ್ಲಿ ಕಾಳಜಿಗೊಳಪಟ್ಟ ಅಂಶಗಳು. ಇವೆಲ್ಲವೂ ಒಂದಾಗುವುದು ಸಾಹಿತ್ಯ ಸಂಶೋಧನೆಯನ್ನು ಅನ್ವೇಷಣೆ ಮಾಡುವ ಹಂಬಲದಲ್ಲಿ.
ವಿಶ್ವವಿದ್ಯಾಲಯದಲ್ಲಿ ಪಾಠ-ಪ್ರವಚನ ಮಾಡಿ, ಕನ್ನಡ ಸಾಹಿತ್ಯದ ಅಧ್ಯಯನ ಮಾಡುವುದು ಹೇಗೆ ಎಂಬುದರ ಕುರಿತು ಲೇಖಕರು ಸಾವಧಾನವಾಗಿ ಮಾಡಿದ ಚಿಂತನಾ ಪ್ರಕ್ರಿಯೆಯೇ ಮಾರ್ಗಾನ್ವೇಷಣೆ. ‘ಬರದೇ ಬಾರಿಸದಿರು ತಂಬೂರಿ’ ಎಂದು ಶರೀಫಜ್ಜ ಹೇಳಿದ ಹಾಗೆ, ಲೇಖಕರು ಇಲ್ಲಿ ಕನ್ನಡ ಸಂಶೋಧನಾಸಕ್ತರಿಗೆ ‘ಸಂಶೋಧನೆಯ ಅರ್ಥ ಮನನ ಮಾಡಿಕೊಳ್ಳದೆ ಸಂಶೋಧನೆಗೆ ಇಳಿಯಬೇಡಿ’ ಎಂದು ಹೇಳುವ ಕಾಳಜಿ ತೋರಿಸಿದ್ದಾರೆ. ಇವೆಲ್ಲವುಗಳ ಜೊತೆ ಆಳವಾದ ಆಲೋಚನೆ, ಓದಿನ ಶ್ರಮ, ಬರವಣಿಗೆಯ ನೈಪುಣ್ಯತೆ, ಪರಾಮರ್ಶನದ ಪಾಂಡಿತ್ಯ ಈ ಪುಸ್ತಕದಲ್ಲಿ ನಡೆದಿರುವ ಚರ್ಚೆಗೆ ಹೆಚ್ಚಿನ ಶ್ರೇಯಸ್ಸನ್ನು ಒದಗಿಸಿವೆ. ಸಂಶೋಧನಾಸಕ್ತ ಮತ್ತು ಮಾರ್ಗದರ್ಶಕನ ಮಾತುಕತೆಯಲ್ಲಿ ಉದ್ಭವಿಸುವ ಇಲ್ಲಿಯ ಗಹನವಾದ ಚಿಂತನೆಗೆ ಮುನ್ನುಡಿ ಬರೆಯುವುದು ಸಾಹಸದ ಕೆಲಸ. ಅದಕ್ಕೊಂದು ಅಧಿಕಾರವೂ, ಅರ್ಹತೆಯೂ ಬೇಕಾಗುತ್ತದೆ. ಹಾಗಾಗಿ ಮುನ್ನುಡಿಯ ಬದಲು, ಇಲ್ಲಿ ಮೂಡಿಬಂದಿರುವ ಸಂಶೋಧನೆಯ ವಾಙ್ಮಯಕ್ಕೆ ಒಂದೆರಡು ವಿಚಾರಗಳನ್ನು ಪೋಣಿಸುವ ಕೆಲಸವನ್ನಷ್ಟೇ ನಾನು ಮಾಡುತ್ತೇನೆ. ಆದರೆ ಇಂಗ್ಲಿಶ್ ಅಧ್ಯಯನದ ಜ್ಞಾನಶಿಸ್ತಿನೊಳಗೆ ರೂಪುಗೊಳ್ಳುತ್ತಿರುವ ನನ್ನ ತಿಳಿವಿಗೆ ಹಲವು ಮಿತಿಗಳಿವೆ. ಭಾರತೀಯ ಜ್ಞಾನ ದರ್ಶನಗಳ, ಸ್ಥಳೀಯ ಪರಂಪರೆಗಳ ಪ್ರವೇಶ ನನ್ನ ವೈಚಾರಿಕ ಪ್ರಜ್ಞೆಯಲ್ಲಿ ಇಲ್ಲದಿರುವುದು ಒಂದು ದೊಡ್ಡ ಕೊರತೆ. ಅಂತಹ ತಯಾರಿ ಇರುವ ಓದುಗರು ಈ ಅಂತರವನ್ನು ತುಂಬಬೇಕು. ಮತ್ತೆ, ಸಂಶೊಧನಾ ಸಹೃದಯರಲ್ಲಿ ಒಂದು ಪ್ರಾರ್ಥನೆ. ಈ ಪುಸ್ತಕವನ್ನು ನಿಧಾನವಾಗಿ ಓದಿ, ಲೇಖಕರ ಜೊತೆ ಜಗಳವಾಡಿ, ಅವರು ಹೇಳಿದ್ದೆಲ್ಲವನ್ನು ಒಪ್ಪಿಕೊಳ್ಳಬೇಡಿ. ಈ ಭೂಮಿಕೆ ಓದುವ ಮೊದಲು ಪುಸ್ತಕ ಓದಿದ್ದರೆ, ಅದನ್ನು ಮತ್ತೆ ಓದಿ. ಮುಳಿಯ ತಿಮ್ಮಪ್ಪಯ್ಯನವರ ನಾಡೋಜ ಪಂಪ (1938)ವನ್ನು ಉದ್ಧರಿಸುತ್ತ ಲೇಖಕರ ಪರವಾಗಿ ನಾನು ಕೇಳಿಕೊಳ್ಳುವುದೇನೆಂದರೆ “ಉದಾರಹೃದಯರಾದ ವಾಚಕರು ಸಾವಧಾನ ಚಿತ್ತರಾಗಿ ಪರಿಶೀಲಿಸಬೇಕೆಂದು ಪ್ರಾರ್ಥನೆ” .
ಸಂಶೋಧನೆಯ ಅರ್ಥ : ಒಂದು ನಿರ್ದಿಷ್ಟ ಪರಂಪರೆಯಲ್ಲಿ ಬೆಳೆದು ಬಂದ ಸಂಶೋಧನೆಯ ಪ್ರಕಾರ ಮತ್ತು ಅದನ್ನು ಆಚರಿಸುವ ಸಾಂಸ್ಥಿಕ ತಾಣವಾದ ವಿಶ್ವವಿದ್ಯಾಲಯದ ಅಂತಃಸತ್ವವನ್ನು ಪ್ರಸ್ತುತ ಪುಸ್ತಕ ನಮ್ಮ ಮುಂದೆ ತೆರೆದಿಡುತ್ತದೆ. ಈ ಸಂಶೋಧನಾ ಪ್ರಕಾರ, ಐರೋಪ್ಯ ಸಂಸ್ಕೃತಿಯ ಒಡಲಾಳದಲ್ಲಿ ಹುಟ್ಟಿ, ಈಗ ಜಗತ್ತಿನಾದ್ಯಂತ ವಿಶ್ವವಿದ್ಯಾಲಯಗಳಲ್ಲಿ ಅನುಸರಿಸಲಾಗುತ್ತಿರುವ ಜ್ಞಾನಸೃಷ್ಟಿಯ ಮಾರ್ಗವಾಗಿದೆ. ಸಂಶೋಧನೆ ಮತ್ತು ವಿಶ್ವವಿದ್ಯಾನಿಲಯ ಎಂಬ ಎರಡು ಪರಿಕಲ್ಪನೆಗಳನ್ನು ಈ ಕೃತಿಯಲ್ಲಿ ತೆರೆದಿಟ್ಟಿರುವುದು ಏಕಮುಖಿಯಾಗಿಲ್ಲ. ಪಶ್ಚಿಮದ ವಿಚಾರ ಧಾರೆಯ ಜೊತೆ ಭಾರತೀಯ ಜ್ಞಾನಮೀಮಾಂಸೆಯ ಪರಂಪರೆಗಳನ್ನೂ ಮನಸ್ಸಿನಲ್ಲಿಟ್ಟು ಕೊಂಡು, ಈ ಪುಸ್ತಕ ನಮ್ಮನ್ನು ಉದ್ದೇಶಿಸಿ ಮಾತನಾಡುತ್ತದೆ.
ವಿಶ್ವವಿದ್ಯಾಲಯವೆಂದರೆ ವಿವಿಧ ಜ್ಞಾನಶಿಸ್ತುಗಳ ಸಂಗಮ. ಆಯಾ ಜ್ಞಾನಶಿಸ್ತುಗಳಿಗೆ ತಕ್ಕಂತೆ ಸಂಶೋಧನೆಯ (ರಿಸರ್ಚ್) ಅರ್ಥ ಮತ್ತು ಉದ್ದೇಶಗಳು ಬೇರೆಬೇರೆ ಆಗಿರುತ್ತವೆ. ಆದರೆ ಸ್ಥೂಲವಾಗಿ ಸಂಶೋಧನೆಯ ಕೆಲಸವೆಂದರೆ ಈ ಜಗತ್ತಿನ ಕುರಿತಾದ ನಮ್ಮ ಅರಿವನ್ನು ಹಿಗ್ಗಿಸುವುದು, ನಾವು ಹೊಂದಿರುವ ತಪ್ಪು ಗ್ರಹಿಕೆಗಳನ್ನು ಸರಿಪಡಿಸುತ್ತ ನಮ್ಮ ತಿಳಿವಳಿಕೆಯನ್ನು ಸ್ಪಷ್ಟಪಡಿಸುವುದು, ನಮಗೆ ಎದುರಾಗುವ ಬೌದ್ಧಿಕ ಸಮಸ್ಯೆಗಳನ್ನು ಬಿಡಿಸುವುದು, ಹೊಸಬಗೆಯ ವಾದ-ಸಿದ್ಧಾಂತಗಳನ್ನು ಕಟ್ಟುವುದು, ವಿವೇಕ ಮತ್ತು ವೈಜ್ಞಾನಿಕತೆಗಳ ಮೂಲಕ ಈ ಲೋಕದ ವಿವರಣೆಯನ್ನು ಮಾಡುವುದು, ಪೂರ್ವಗ್ರಹಗಳನ್ನು ಪ್ರಶ್ನಿಸುವುದು, ಬೌದ್ಧಿಕ ಕತೆಗಳನ್ನು ಹೊಸೆಯುವುದು, ಹೊಸ ಚಿಂತನೆಗೆ ತೊಡಗುವುದು, ಒಳನೋಟಗಳನ್ನು ಒದಗಿಸುವುದು ಇತ್ಯಾದಿ ಇತ್ಯಾದಿ. ಸಂಶೋಧನೆಯನ್ನು ಕಲಿಯುವುದೆಂದರೆ ಇವೆಲ್ಲವುಗಳನ್ನು ಮಾಡುವ ಕ್ರಮ-ಉಪಕ್ರಮಗಳನ್ನು ಕಲಿಯುವುದೆಂದೇ ಅರ್ಥ. ಈ ಪುಸ್ತಕ ಸಂಶೋಧನಾಸಕ್ತರಿಗೆ ಅಂತಹ ಕ್ರಿಯಾಚರಣೆಗಳನ್ನು ಕಲಿಸುವ ಪ್ರಯತ್ನ ಮಾಡುತ್ತದೆ.
ಸಂರಚನೋತ್ತರ ಸಿದ್ಧಾಂತಗಳ ಜೊತೆ ಕೆಲಸ ಮಾಡಿದ ಬ್ರಿಟಶ್ ವಿಮರ್ಶಕಿ ಕ್ಯಾಥರಿನ್ ಬೆಲ್ಸಿ ವಿವರಿಸುವ ಹಾಗೆ: ‘ಸಂಶೋಧನೆ (ರಿಸರ್ಚ್) ಮತ್ತು ಇತರ ಅಧ್ಯಯನಗಳ (ಸ್ಟಡೀಸ್) ನಡುವೆ ವ್ಯತ್ಯಾಸಗಳಿವೆ. ಸಂಶೋಧನೆಯು ಹೊಸ ಜ್ಞಾನಸೃಷ್ಟಿ ಮಾಡಬೇಕೆಂದು ನಾವು ಅಪೇಕ್ಷಿಸುತ್ತೇವೆ; ಅದು ಹೊಸ ವಿಚಾರ ಅಥವಾ ತಿಳಿವಳಿಕೆಯನ್ನು ಹೊರಹೊಮ್ಮಿಸಬೇಕು. ಇಂತಹ ಅಧ್ಯಯನಗಳಲ್ಲಿ ಸ್ವಂತಿಕೆ ಇರಬೇಕು. ಅಂದರೆ ಕನಿಷ್ಟ ಪಕ್ಷ ಇಲ್ಲಿ ಉಂಟಾಗುವ ಚಿಕ್ಕ ಕೊಡುಗೆ ಸಂಶೋಧನೆ ಮಾಡುವವರಿಂದಲೇ ಹುಟ್ಟಿಕೊಂಡಿರಬೇಕು. ಹಾಗೆಂದು ಸಂಶೋಧಕರು ಇಲ್ಲಿಯವರೆಗೂ ನಮಗೆ ಗೊತ್ತೇ ಇರದ ಹೊಚ್ಚ ಹೊಸದಾದನ್ನು ಹೇಳಲೇಬೇಕು ಅಂತೇನೂ ಇಲ್ಲ. ನಮಗೆ ಗೊತ್ತಿರುವ ವಿಚಾರಗಳನ್ನೇ ಇಲ್ಲಿಯವರೆಗೆ ನೋಡಿರದ ರೀತಿಯಲ್ಲಿ ಹೊಸದಾಗಿ ಜೋಡಿಸಿದರೆ ಸಾಕು. ಸಂಶೋಧನೆ ಯುಗಪಲ್ಲಟ ಮಾಡುವ ಜ್ಞಾನವನ್ನೇ ಸೃಷ್ಟಿಸಬೇಕೆಂದೇನೂ ಇಲ್ಲ್ಲ; ಪದಬಂಧದಂತೆ ವಿಚಾರಗಳನ್ನು ಜೋಡಿಸುವ ಪುಟ್ಟ ಕೆಲಸವಾದರೂ ಪರವಾಗಿಲ್ಲ. ಆದರೆ ಯಾವ ವಿಷಯದ ಕುರಿತು ಸಂಶೋಧನೆ ಮಾಡಲಾಗುತ್ತಿದೆಯೋ ಆ ವಿಷಯದ ಬಗ್ಗೆ ಇಲ್ಲಿಯವರೆಗೆ ಬಂದಂತಹ ನಿರೂಪಣೆಗಳಿಗೆ ವ್ಯತ್ಯಾಸವನ್ನಂತೂ (ಡಿಫರನ್ಸ್) ಅದು ಉಂಟು ಮಾಡಲೇಬೇಕು .
ಸಂಶೋಧನೆಯನ್ನು ಈ ರೀತಿ ಸಾಮಾನ್ಯವಾಗಿ ಅರ್ಥೈಸಬಹುದಾದರೂ ಕೊನೆಗೆ ಜ್ಞಾನಶಿಸ್ತುಗಳಿಗೆ ಅನುಗುಣವಾಗಿ ಅದರ ಸೂಕ್ಷ್ಮತೆಯನ್ನೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಅಂದರೆ ಸಂಶೋಧನೆಯನ್ನು ನಾವು ನಮ್ಮನಮ್ಮ ಜ್ಞಾನಶಿಸ್ತುಗಳ ದಾರಿಯಲ್ಲಿಯೇ ಕಂಡುಕೊಳ್ಳಬೇಕು. ಜ್ಞಾನಶಿಸ್ತುಗಳ ಆಚೆ ಸಂಶೋಧನೆ ನಡೆಯುವುದಿಲ್ಲ. ಆದ್ದರಿಂದ ಸಂಶೋಧನೆಯ ರೀತಿ-ನೀತಿ ಆಯಾ ಜ್ಞಾನಶಾಖೆಗಳಿಗೆ ಅನುಗುಣವಾಗಿ ಬೇರೆಬೇರೆ ಆಗಿರುತ್ತವೆ. ಉದಾಹರಣೆಗೆ ಸಾಹಿತ್ಯ ಅಧ್ಯಯನದಲ್ಲಿ ವಿಮರ್ಶೆಯೇ ಬೇರೆ, ಸಂಶೋಧನೆಯೇ ಬೇರೆ ಎಂಬ ಚರ್ಚೆ ಒಂದು ಕಾಲದಲ್ಲಿ ಕನ್ನಡ ಅಧ್ಯಯನವೆಂಬ ಜ್ಞಾನಶಾಖೆಯಲ್ಲಿ ಬಿಡಿಸಲಾಗದ ಸಮಸ್ಯೆಯಾಗಿತ್ತು. ಈ ಪುಸ್ತಕ ಅಂತಹ ಗೊಂದಲವನ್ನು ಪರಿಹರಿಸುವ ಪ್ರಯತ್ನವನ್ನು ಮಾಡಿದೆ."