ಮಾರ್ಚ್ 9ರ ಪುರುಷ ಸೂಕ್ತಿ

ಮಾರ್ಚ್ 9ರ ಪುರುಷ ಸೂಕ್ತಿ

ಕವನ

ಅಲ್ಲಾ ಮಾರಾಯ್ತಿ.. 

ಇಷ್ಟೆಲ್ಲಾ  ರಗಳೆ 

ಯಾಕೆ ಮಾಡುತ್ತೀ?

 

ಕೊಟ್ಟಿಲ್ಲವೇ ನಾವು 

ನಿನಗೊಂದು ದಿನ 

ನಿನ್ನ ಹೆಸರಲ್ಲಿ ಒಂದು ಇಡೀ ದಿನ 

ಇಡೀ ಜಗತ್ತಿನ  ಒಂದು ಇಡೀ ದಿನ .. 

ಇನ್ನು ಸುಮ್ಮನೆ ಕೂರು 

 

೧೯೦೭ರಲ್ಲಿ ಅಮೆರಿಕೆಯಲ್ಲಿ 

೧೯೧೭ರಲ್ಲಿ ರಷ್ಯಾದಲ್ಲಿ 

ಕಾರ್ಮಿಕರ ಆಕ್ರೋಶದ  ಜೊತೆ ಸೇರಿ 

ನಡೆಸಿರಬಹುದು ನೀನು ಕ್ರಾಂತಿಗಳನ್ನು .. 

 

ಆದರೇನಂತೆ .. 

ನಾವು ಪುರುಷರು 

ವಿಶ್ವಗುರುವಿನ ದೇಶದವರು

ಸರಿಸಾಟಿ ಇಲ್ಲದವರು  

 

ಜೂಜಿನಲ್ಲಿ ಸೋತರೂ ನಿನ್ನನ್ನು

ಸಂಪತ್ತಿನ ದೇವತೆ ಮಾಡಲಿಲ್ಲವೇನು?

ನಿರಾಕರಿಸಿದರೂ ವಿದ್ಯೆಯನ್ನು 

ವಿದ್ಯಾಧಿದೇವತೆಯನ್ನಾಗಿ ಕೂಡಿಸಿಲ್ಲವೇನು?

 

ಪ್ರತಿನಿತ್ಯ ನಿನ್ನ ಮೇಲೆ ಆಕ್ರಮಣ ಮಾಡಿದರೇನೂ?

ರುದ್ರ ದೇವತೆಯೆಂದು ಆರಾಧಿಸುವುವೆವು ನಿನ್ನನ್ನು ...

ಬುದ್ಧನಿಗೂ ಗೊತ್ತಿತ್ತು 

ಸಾವಿರ ವರುಷ ಬಾಳಬಹುದಾದ ಧಮ್ಮವೂ 

ನಿನ್ನಿಂದ ಐನೂರೆ ವರ್ಷಕ್ಕೆ ಹಾಳಾಗಬಹುದೆಂದು .. 

 

ನೀನು ಆದಾಮನನ್ನು ಅಡ್ಡಹಾದಿ ಹಿಡಿಸಿದ 'ಈವ'ಳು 

ಅಡಿಯಿಂದ ಮುಡಿವರೆಗೆ ಕಪ್ಪನ್ನೇ ಹೊದ್ದ 

ಪ್ರವಾದಿಯ ಅಂತಃಪುರದವಳು  

ಮತ್ತು ಹಿಂದೂಗಳಿಗಂತೂ 

ನೀನು ಕಾಲಡಿಯ ಚಪ್ಪಲಿಗಿಂತ ಹೆಚ್ಚೇನಲ್ಲ 

 

ನಿನ್ನದೂ ಅಂತ ಏನಿದೆ ಹೇಳು? 

ಶಿವಾಜಿ ಇಲ್ಲದಿರೆ ಜೀಜಾಬಾಯಿ ಇರುತ್ತಿದ್ದಳೆ? 

ಜ್ಯೋತಿಬಾ ಇಲ್ಲದಿರೆ ಸಾವಿತ್ರಿಬಾ ಇರುತ್ತಿದ್ದಳೆ ?

ಅಂಬೇಡ್ಕರ್ ಇಲ್ಲದಿರೆ ಇರುತ್ತಿದ್ದರೆ 

ರಾಮಾಯಿ ಅಥವಾ ಶಾರದಾ? 

 

ನೋಡು ಎಷ್ಟು ಸಲೀಸಾಗಿ ನಾವು

ಬದಲಿಸಬಲ್ಲೆವು ಮಾತುಗಳನ್ನು

ಮಣ್ಣುಗೂಡಿಸಬಲ್ಲೆವು

ಸುಲಭವಾಗಿ

ಮುಗಿಲೆತ್ತರದ ನಿನ್ನ ಸಾಧನೆಗಳನ್ನು 

 

ನಮ್ಮ ಪುರುಷಕುಲ ಮಾತ್ರ ಬಲ್ಲ

ಜನ್ಮಜಾತ ಕಲೆಯಿದು 

ಅದಕೆ  ಮತ್ತೆ ಹೇಳುತ್ತೇನೆ 

ಬೇಡ ಬೇಡ ನಮ್ಮಜೊತೆ ಪೈಪೋಟಿ 

 

ಮಹಿಳಾ ದಿನ ಮುಗಿದಿದೆ ..

ಅಡುಗೆ, ಕಸಮುಸರೆ , ಕೊಳೆ  ಬಟ್ಟೆ 

ಮುಗಿಯದಷ್ಟು ಮನೆಗೆಲಸ 

ಬಾಕಿ ಇದೆ 

 

ಕೊಟ್ಟದ್ದನ್ನು ಪಡೆದು 

ಬಾಯಿ ಮುಚ್ಚಿಕೋ 

ಮನೆ ಒಳಗೆ ಹೋಗಿ 

ಬಾಗಿಲು ಮುಚ್ಚಿಕೋ  

ಮರಾಠಿ ಮೂಲ: ಮಿಲಿಂದ್ ಭವರ್

ಇಂಗ್ಲಿಷಿಗೆ: ಆನಂದ್ ತೇಲ್ ತುಂಬ್ಡೇ

ಕನ್ನಡಕ್ಕೆ: ಶಿವಸುಂದರ್
ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್